;Resize=(412,232))
ಮಂಜುನಾಥ ಕೆ
ಬೆಂಗಳೂರು : ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಸಂಚಾರ ಪೊಲೀಸರು ಆರಂಭಿಸಿರುವ ‘ಇ-ಆಕ್ಸಿಡೆಂಟ್ ರಿಪೋರ್ಟ್’ ಎಂಬ ಆನ್‌ಲೈನ್ ಸೇವೆಗೆ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಳೆದ ಒಂದೂವರೆ ತಿಂಗಳಿನಲ್ಲಿ 1,500ಕ್ಕೂ ಹೆಚ್ಚು ವಾಹನ ಸವಾರರು ಇ-ಆಕ್ಸಿಡೆಂಟ್ ರಿಪೋರ್ಟ್ ಉಪಯೋಗವನ್ನು ಪಡೆದುಕೊಂಡಿದ್ದಾರೆ.
ವಿಮಾ ಅಥವಾ ಕಾನೂನು ಉದ್ದೇಶಗಳಿಗಾಗಿ ಅಪಘಾತ ದೃಢೀಕರಣ ರಿಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ನಗರ ಸಂಚಾರ ಪೊಲೀಸರು ನೂತನವಾಗಿ ಆರಂಭಿಸಿದಂತಹ ಇ-ಆಕ್ಸಿಡೆಂಟ್ ಎಂಬ ಡಿಜಿಟಲ್ ಸೇವೆಯು ಜನರ ಮೆಚ್ಚುಗೆ ಪಾತ್ರವಾಗಿದೆ. ಇದರಿಂದ ವಾಹನ ಸವಾರರ ಸಮಯದ ಉಳಿತಾಯ ಮತ್ತು ಶ್ರಮ ಕಡಿಮೆಯಾಗುತ್ತಿದೆ.ಈ ಡಿಜಿಟಲ್ ಸೇವೆಯ ಮೂಲಕ ನಾಗರಿಕರು ಅನುಮೋದಿತ ಅಪಘಾತ ವರದಿಗಳನ್ನು ಯಾವುದೇ ತೊಂದರೆ, ಕಿರಿಕಿರಿ ಇಲ್ಲದೆ ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ. ಇದರಿಂದ ಪ್ರಕ್ರಿಯೆ ತ್ವರಿತವಾಗಿ, ಪಾರದರ್ಶಕವಾಗಿ ಹಾಗೂ ಸಂಪರ್ಕ ರಹಿತವಾಗಿ ನಡೆಯುತ್ತಿದೆ.
ಪ್ರತಿದಿನ ನಗರದ ಪ್ರತಿ ಸಂಚಾರ ಪೊಲೀಸ್ ಠಾಣೆಗಳಿಗೆ ಅಪಘಾತದ ವಿಮೆ ಕ್ಲೈಮ್ ಉದ್ದೇಶಗಳಿಗಾಗಿ 3-4 ವಿನಂತಿಗಳು ಬರುತ್ತಿದ್ದವು. ಇನ್ನು ನಗರದಾದ್ಯಂತ ಇರುವ ಠಾಣೆಗಳಿಗೆ ಸುಮಾರು 150-200 ವಿನಂತಿಗಳು ಬರುತ್ತಿದ್ದವು. ಎಫ್‌ಐಆರ್‌ಗಳ ಅಗತ್ಯವಿಲ್ಲದ ಸಣ್ಣ ಅಪಘಾತಗಳ ಸಂದರ್ಭದಲ್ಲಿ ನಾಗರಿಕರು ಅಪಘಾತಗಳ ವರದಿಯನ್ನು ಸಲ್ಲಿಸಲು ಮತ್ತು ವಿಮೆಯನ್ನು ಕ್ಲೈಮ್ ಮಾಡಲು ಅಂಗೀಕಾರ ಪಡೆಯಲು ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದರು.
ಇದು ಪೊಲೀಸರ ಒತ್ತಡ ಮತ್ತು ಸಮಯ ನಷ್ಟವನ್ನು ಉಂಟು ಮಾಡುತ್ತಿತ್ತು. ಇದನ್ನು ಮನಗಂಡ ಸಂಚಾರ ಪೊಲೀಸರು, ಸಾರ್ವಜನಿಕರ ಅನುಕೂಲಕ್ಕಾಗಿ ಇ-ಆಕ್ಸಿಡೆಂಟ್ ಸೇವೆಯನ್ನು ಆರಂಭಿಸಿದ್ದರು. ಈ ಸೌಲಭ್ಯ ಬಳಸುವುದರಿಂದ ನಾಗರಿಕರ ಮತ್ತು ಪೊಲೀಸರ ಸಮಯ ಉಳಿತಾಯವಾಗುತ್ತದೆ. ಜತೆಗೆ ಪೊಲೀಸರ ಮೇಲಿನ ಒತ್ತಡವು ಕಡಿಮೆಯಾಗುತ್ತಿದೆ.
ಅ.18 ರಂದು ವಿಧಾನಸೌಧ ಮೆಟ್ಟಿಲುಗಳ ಮುಂಭಾಗ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಿಟಿಪಿ ಮೊಬೈಲ್ ಆ್ಯಪ್ ಮೂಲಕ ಇ-ಆಕ್ಸಿಡೆಂಟ್ ರಿಪೋರ್ಟ್ ಸೇವೆಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಚಾಲನೆ ನೀಡಿದ್ದರು.
ರಿಪೋರ್ಟ್ ಮಾಡುವುದು ಹೇಗೆ?:
ನಿಮ್ಮ ಮೊಬೈಲ್‌ನಲ್ಲಿ ಪ್ಲೆ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ಗೆ ಹೋಗಿ, ಬಿಟಿಪಿ ಅಸ್ತ್ರಂ ಎಂಬ ಆ್ಯಪ್ ಡೋನ್‌ಲೋಡ್ ಮಾಡಿಕೊಳ್ಳಬೇಕು. ಅಲ್ಲಿ ರಿಪೋರ್ಟ್ ಮೈ ಆಕ್ಸಿಡೆಂಟ್ ಎಂದು ಆಯ್ಕೆ ಮಾಡಿಕೊಳ್ಳಬೇಕು. ಅಪಘಾತವಾದ ವಾಹನದ ಸಂಖ್ಯೆ ನಮೂದಿಸಬೇಕು, ಆಪೋಸಿಟ್ ಪಾರ್ಟಿಯ ವಾಹನದ ಸಂಖ್ಯೆ, ಫೋಟೋ ಅಪ್‌ಲೋಡ್ ಮಾಡಬೇಕು, ಆಕ್ಸಿಡೆಂಟ್ ಡೀಟೈಲ್, ಆಕ್ಸಿಡೆಂಟ್ ಲೋಕೆಷನ್ ಸೇರಿದಂತೆ ಇನ್ನಿತರ ಮಾಹಿತಿಯನ್ನು ಭರ್ತಿ ಮಾಡಿದರೆ ಸಾಕು. ಇದನ್ನು ಪೊಲೀಸ್ ಸಿಬ್ಬಂದಿ ಪರಿಶೀಲಿಸಿ ತಕ್ಷಣ ಅಂಗೀಕಾರ ನೀಡುತ್ತಾರೆ. ಇದನ್ನು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಅಪ್‌ಲೋಡ್ ಮಾಡಬಹುದು. ಅಪಘಾತದ ವರದಿಯನ್ನು ಸರಳಗೊಳಿಸಲು ಪೊಲೀಸರು ಆರಂಭಿಸಿರುವ ಈ ನೂತನ ಸೇವೆಗೆ ವಾಹನ ಸವಾರರು ಪೊಲೀಸ್ ಇಲಾಖೆಗೆ ಸಲಾಂ ಹೇಳುತ್ತಿದ್ದಾರೆ. ಪಾಯಿಂಟ್ಸ್)))
ಪ್ರಯೋಜನಗಳು ಏನು?
* ದೈಹಿಕವಾಗಿ ಯಾವುದೇ ಭೇಟಿ ಇಲ್ಲ * ಯಾವುದೇ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ* ಯಾವುದೇ ಅನುಸರಣೆ ಇಲ್ಲ.* ಫಸ್ಟ್ ಪಾರ್ಟಿ ವಿಮಾ ಕ್ಲೈಮ್‌ಗಳಿಗೆ ತಕ್ಷಣ ಅಂಗೀಕಾರ* ಬಿಟಿಪಿ ಅಸ್ತ್ರಂನಲ್ಲಿ ಸುಲಭ, ಒತ್ತಡ ಮುಕ್ತ ಡಿಜಿಟಲ್ ಪ್ರಕ್ರಿಯೆ
ಜಸ್ಟ್ ಹೀಗೆ ಮಾಡಿ ಸಾಕು:* ಅಪಘಾತದ ವರದಿ ಮಾಡಿ* ಫೋಟೋಗಳನ್ನು ಅಪ್‌ಲೋಡ್ ಮಾಡಿ* ಅಂಗೀಕಾರ ಪಡೆಯಿರಿ* ವಿಮೆಗೆ ಸಲ್ಲಿಸಿ
ಅಪಘಾತದ ವರದಿಯನ್ನು ಸರಳಗೊಳಿಸಲು ನಗರ ಸಂಚಾರ ಪೊಲೀಸ್ ಇಲಾಖೆಯ ವತಿಯಿಂದ ಆರಂಭಿಸಿರುವ ಇ-ಆಕ್ಸಿಡೆಂಟ್‌ಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಒಂದೂವರೆ ತಿಂಗಳಿನಲ್ಲಿ 1,463 ಕ್ಕೂ ಹೆಚ್ಚು ವಾಹನ ಸವಾರರು ಇ-ಆಕ್ಸಿಡೆಂಟ್ ರಿಪೋರ್ಟ್ ಉಪಯೋಗವನ್ನು ಪಡೆದುಕೊಂಡಿದ್ದಾರೆ -ಕಾರ್ತಿಕ್ ರೆಡ್ಡಿ, ಜಂಟಿ ಪೊಲೀಸ್ ಆಯುಕ್ತ, ಬೆಂಗಳೂರು ನಗರ ಸಂಚಾರ ವಿಭಾಗ