ಹೆಸರು ರುಕುಮಾಬಾಯಿ ರಾವತ್. 11ರ ಅಬೋಧ ವಯಸ್ಸಿನಲ್ಲಿ ಮದುವೆ ಮಾಡಲಾಯಿತು. ಯಾರದೋ ಆಯ್ಕೆಯನ್ನು ತಲೆಬಾಗಿಸಿ ಒಪ್ಪಿ ಬಂದ ಬದುಕನ್ನು ಜೀವಿಸಬೇಕಾದ ಅನಿವಾರ್ಯತೆ. ಅದು 1878ನೇ ಇಸವಿ. ಆಗ ಜನಜೀವನ ಇದ್ದದ್ದೇ ಹಾಗೆ.
ಆದರೆ ಈ ರುಕುಮಾಬಾಯಿ ದಿಟ್ಟ ಹುಡುಗಿ. ಯಾರದೋ ತೀರ್ಮಾನದಂತೆ ತನ್ನ ಬದುಕು ಸಾಗಿಸಬೇಕು ಎಂಬುದನ್ನು ಸುತಾರಾಂ ಒಪ್ಪಲಿಲ್ಲ. ಗಂಡ ಇದನ್ನು ಕೋರ್ಟಿಗೆಳೆಯುತ್ತಾನೆ.
ಆಗ ಭಾರತದಲ್ಲಿದ್ದದ್ದು ಬ್ರಿಟಿಷರ ಆಳ್ವಿಕೆ. ಇಂಥಾದ್ದೊಂದು ಸನ್ನಿವೇಶ ಅವರಿಗೂ ಹೊಸತು.
ಆ ಕಾಲದ ಪಿತೃಪ್ರಧಾನ ಸಮಾಜದ ಕಟ್ಟಳೆಗೆ ಅನುಗುಣವಾಗಿಯೇ ಕೋರ್ಟ್ ತೀರ್ಪು ಬರುತ್ತದೆ. ಒಂದೋ ಗಂಡನ ಜೊತೆ ಜೀವಿಸಬೇಕು, ಇಲ್ಲವೇ ಸೆರೆಮನೆ ವಾಸ ಅನುಭವಿಸಬೇಕು ಎನ್ನುತ್ತದೆ. ಹದಿನಾಲ್ಕರ ಪೋರಿ ಸೆರೆಮನೆ ವಾಸ ಬೇಕಾದರೂ ಅನುಭವಿಸುತ್ತೇನೆ, ಇಷ್ಟ ಇಲ್ಲದ ವ್ಯಕ್ತಿಯ ಜೊತೆಗೆ ಯಾವ ಕಾರಣಕ್ಕೂ ಬಾಳುವೆ ಮಾಡೋದಿಲ್ಲ ಎಂದು ಧೈರ್ಯದಿಂದ ನುಡಿಯುತ್ತಾಳೆ.
ಮುಂದೆ 2000 ರು. ಜುಲ್ಮಾನೆ ನೀಡಿ ಸೆರೆಮನೆ ವಾಸದಿಂದ ತಪ್ಪಿಸಿಕೊಳ್ಳುತ್ತಾಳೆ. ಮುಂದೆ ಇದೇ ದಿಟ್ಟತನದಲ್ಲಿ ಬ್ರಿಟನ್‌ಗೆ ಹೋಗಿ ಮೆಡಿಕಲ್ ಡಿಗ್ರಿ ಪಡೆಯುತ್ತಾಳೆ. ಬಳಿಕ ದೇಶಕ್ಕೆ ವಾಪಾಸಾಗಿ ಸೂರತ್‌ನ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಗುರುತಿಸಿಕೊಳ್ಳುತ್ತಾಳೆ.
ದೇಶದ ಮೊದ ಮೊದಲ ಮಹಿಳಾ ವೈದ್ಯರ ಪಟ್ಟಿಯಲ್ಲಿ ರುಕುಮಾಬಾಯಿ ಹೆಸರೂ ಇದೆ. ಈ ತಿಂಗಳ ಅಂದರೆ ಸೆಪ್ಟೆಂಬರ್ ತಿಂಗಳ 25ನೆ ತಾರೀಕು ಈ ದಿಟ್ಟ ಮಹಿಳೆಯ ಪುಣ್ಯತಿಥಿ.