ತೋಟಗಾರಿಕಾ ಮೇಳಕ್ಕೆ ಜನ ಸಾಗರ

KannadaprabhaNewsNetwork | Published : Mar 1, 2025 2:03 AM

ಸಾರಾಂಶ

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ(ಐಐಎಚ್‌ಆರ್‌) ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದ 2ನೇ ದಿನವಾದ ಶುಕ್ರವಾರ ರೈತರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ(ಐಐಎಚ್‌ಆರ್‌) ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದ 2ನೇ ದಿನವಾದ ಶುಕ್ರವಾರ ರೈತರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು.

ಬಿಸಿಲನ್ನೂ ಲೆಕ್ಕಿಸದೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು, ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು, ಉದ್ಯಮಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಬೆಂಗಳೂರು ನಗರ ವಿವಿಧ ಬಡಾವಣೆಗಳ ಜನರು ತಂಡೋಪತಂಡವಾಗಿ ಮೇಳಕ್ಕೆ ಆಗಮಿಸಿದ್ದರು.

ರೈತರು ಮಾತ್ರವಲ್ಲ, ಕೃಷಿಯ ಬಗ್ಗೆ ಆಸಕ್ತಿ ಹೊಂದಿದ್ದ ಸಾರ್ವಜನಿಕರು, ವಿದ್ಯಾರ್ಥಿಗಳು ಅರ್ಕಾ ಸರಣಿಯ ಹೊಸ ಹೊಸ ತಳಿಗಳನ್ನು ವೀಕ್ಷಿಸಿ ಇಳುವರಿ, ರೋಗನಿರೋಧಕ ಶಕ್ತಿ, ಬಿತ್ತನೆ ಸೇರಿದಂತೆ ಮತ್ತಿತರ ವಿವರಗಳನ್ನು ಪಡೆದುಕೊಂಡರು. ವಿಜ್ಞಾನಿಗಳು ಕೂಡ ಸ್ಥಳದಲ್ಲೇ ಇದ್ದು ಮಾಹಿತಿ ಕೇಳಿದವರಿಗೆ ತಕ್ಕ ಉತ್ತರ ನೀಡುತ್ತಿದ್ದ ದೃಶ್ಯ ಕಂಡುಬಂತು.

ಮೇಳದಲ್ಲಿ ಹೆಚ್ಚು ಗಮನ ಸೆಳೆದಿದ್ದು ಡ್ರೋನ್‌ ಮೂಲಕ ತಾಕುಗಳಲ್ಲಿ ಬೆಳೆದ ಬೆಳೆಗಳಿಗೆ ಔಷಧಿ ಸಿಂಪಡೆಣೆ ಮಾಡಿದ್ದು. ಐಐಎಚ್‌ಆರ್‌ ವಿಜ್ಞಾನಿಗಳು, ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ ಡ್ರೋನ್‌ಗಳಲ್ಲಿ ಔಷಧಿ ತುಂಬಿಸಿ ಹೂವು, ವಿವಿಧ ತರಕಾರಿಗಳ ತಾಕಿಗೆ ಔಷಧಿ ಸಿಂಪಡಣೆ ಮಾಡಿದ್ದನ್ನು ಆನಂದ ಗುರೂಜಿ ಸೇರಿದಂತೆ ನೂರಾರು ರೈತರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಸೂತ್ರದ ಗೊಂಬೆಯಾಟಕ್ಕೆ ಮೆಚ್ಚುಗೆ

ಐಐಎಚ್‌ಆರ್‌ನಲ್ಲಿ ಶುಕ್ರವಾರ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ‘ಅರ್ಕಾ ಕ್ರಾಂತಿ’ ಹೆಸರಿನಲ್ಲಿ ಸೂತ್ರದ ಗೊಂಬೆಯಾಟದ ಮೂಲಕ ರೈತರಿಗೆ ಆಧುನಿಕ ಕೃಷಿಯ ಬಗ್ಗೆ ಮತ್ತು ಐಐಎಚ್‌ಆರ್‌ನ ತಂತ್ರಜ್ಞಾನದ ಕುರಿತು ಪ್ರದರ್ಶನಗೊಂಡ ವಿಶೇಷ ಪ್ರಯೋಗ ಯಶಸ್ವಿಯಾಗಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ರೈತರ ಬದುಕು ಮತ್ತು ಕೃಷಿಯನ್ನು ಗಮನದಲ್ಲಿಟ್ಟುಕೊಂಡು, ರೈತರು ಮತ್ತು ಐಐಎಚ್‌ಆರ್ ಸಂಸ್ಥೆಯ ಸುತ್ತ ಕಥೆ ಹೆಣೆದಿರುವ ಡಾ.ಎಚ್‌.ಆರ್‌ ರಮ್ಯಾ ಅವರು ಸ್ವತಃ ಕೃಷಿ ವಿಜ್ಞಾನಿಯಾಗಿದ್ದು, ಐಐಎಚ್‌ಆರ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷಿಯ ಜತೆ ರಂಗಭೂಮಿಯ ಹಿನ್ನೆಲೆಯನ್ನು ಹೊಂದಿರುವ ರಮ್ಯಾ ಅವರು ಥಿಯೇಟರ್ ಥೆರಪಿ ತಂಡದ ನವೀನ್ ಅವರ ಜತೆಗೂಡಿ ತಾವೇ ನಿರ್ದೇಶಿಸಿದ್ದಾರೆ. ಅಪ್ಪಟ ಗ್ರಾಮೀಣ ಭಾಷೆಯಲ್ಲಿ ರೈತ ಮತ್ತು ರೈತ ಮಹಿಳೆಯರ ಸಂಭಾಷೆಯನ್ನು ಸೂತ್ರದ ಗೊಂಬೆಗಳ ಮೂಲಕ ಅದ್ಭುತವಾಗಿ ಪ್ರದರ್ಶಿಸಲಾಯಿತು.

ರೈತರಿಗೆ ಸುಲಭವಾಗಿ ಅತ್ಯುತ್ತಮ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಕಣ್ಮರೆ ಆಗುತ್ತಿರುವ ನಮ್ಮ ದೇಸಿ ಕಲೆ ಮತ್ತು ಕಲಾವಿದರನ್ನು ಉಳಿಸುವ ಹೊಸ ಹೆಜ್ಜೆ ಇದಾಗಿದೆ. ಇದು ನಮ್ಮ ಸಾಮಾಜಿಕ ಹೊಣೆ ಮತ್ತು ಜವಾಬ್ದಾರಿ ಎಂದು ರಮ್ಯಾ ಅವರು ತಿಳಿಸಿದರು.

Share this article