ಆರೋಪಿ ಆಧುನಿಕ ಗಬ್ಬರ್‌ ಸಿಂಗ್‌ನಿಂದ ಜಡ್ಜ್‌ಗೆ ಎಸ್ಕಾರ್ಟ್‌!

Published : Oct 19, 2026, 01:00 PM IST
Dairy

ಸಾರಾಂಶ

ನಾನು ಆಶ್ಚರ್ಯದಿಂದ ನಾನು ನಿನಗೆ ಗೊತ್ತಾ ಅಂತ ಕೇಳಿದೆ. ಆಗ ಅವನು.‌ ಹುಂ ಸಾರ್, ನೀವು ಜಡ್ಜ್ ಅಲ್ವಾ? ನಾನು ತುಕಾರಾಂ, ಆಧುನಿಕ ಗಬ್ಬರ್ ಸಿಂಗ್. ನಾನು ಮುಂದೆ ಬಂದು‌ ನಿಲ್ತಿದ್ನಲ್ಲಾ ಅಂದ. ನಂತರ ಬನ್ನಿ ನಾನೇ ದಾರಿ ತೋರಿಸ್ತೀನಿ. ನನ್ನ ಹಿಂದೆ ಬನ್ನಿ ಅಂದ.

ನ್ಯಾಯಾಧೀಶರಿಗೆ ಪೊಲೀಸರು ಎಸ್ಕಾರ್ಟ್ ನೀಡುವುದು ಮೂಮೂಲು. ಆದರೆ, ಒಂಬತ್ತು ಜನರನ್ನು ಗುಂಡಿಕ್ಕಿ ಕೊಲೆ ಮಾಡಿದ ‘ಆಧುನಿಕ’ ಗಬ್ಬರ್ ಸಿಂಗ್ ನ್ಯಾಯಾಧೀಶರಿಗೆ ಐದು ಕಿಲೋ‌ಮೀಟರ್ ಎಸ್ಕಾರ್ಟ್ ನೀಡಿದ ಪ್ರಸಂಗ ಬಹುಶಃ ಯಾರೂ ಕೇಳಿರಲಾರರು.

ಆದರೆ ಈ ರೀತಿ ಎಸ್ಕಾರ್ಟ್‌ ಪಡೆದ ಪ್ರಸಂಗವನ್ನು ಖುದ್ದು ನ್ಯಾಯಾಧೀಶರೇ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದ್ದು ಮಾತ್ರ ನಿಜ. ವಿಚಾರಣೆ ವೇಳೆ ನ್ಯಾಯಾಧೀಶರು ಘಟನೆಯನ್ನು ಸ್ವಾರಸ್ಯಕರವಾಗಿ ವಿವರಿಸಿದ್ದು ಹೀಗೆ...

ವ್ಯಕ್ತಿಯೊಬ್ಬ ಚುನಾವಣೆಗೆ ನಿಲ್ಲುವುದನ್ನು ತಡೆಯಲು ಉತ್ತರ ಕರ್ನಾಟಕದ ಗ್ರಾಮವೊಂದರಲ್ಲಿ ತುಕಾರಾಂ ಎಂಬಾತ ಹಲವು ಜನರನ್ನು ಬುಲೆಟ್ ವಾಹನದ ಮೇಲೆ ಹಳ್ಳಿಯೊಂದಕ್ಕೆ ಕರೆದೊಯ್ದು, ಬಂದೂಕು ನೀಡಿ ಅಲ್ಲಿನ ಜನರ‌ ಮೇಲೆ ಗುಂಡು‌‌ ಹಾರಿಸಿದ ಪರಿಣಾಮ ಒಂಬತ್ತು ಜನ ಸಾವಿಗೀಡಾಗಿದ್ದರು. ‌ಇಂತಹ ಕೃತ್ಯ ಎಸಗಿದ ನಂತರ ತುಕಾರಾಂ ಹೆಸರು ‘ಆಧುನಿಕ ಗಬ್ಬರ್ ಸಿಂಗ್’ ಅಂತ ಕರೆಯಲು ಶುರು ಮಾಡಿದರು.

ಈ ಕೇಸಿನ ಸಂಬಂಧ ಆರೋಪಿಗಳು ಪ್ರತಿ ವಿಚಾರಣೆಗೂ ನನ್ನ ಮುಂದೆ ಬರುತ್ತಿದ್ದರು. ಕೆಲ ಕಾಲ ವಿಚಾರಣೆ ನಡೆಸಿದ ನಂತರ ನಾನು ಬೇರೆ ಕೋರ್ಟ್ ಗೆ ವರ್ಗಾವಣೆಯಾದೆ. ಅದಾದ ಸ್ವಲ್ಪ ವರ್ಷಗಳ ಬಳಿಕ ನಾನು ಕಾನ್ಫರೆನ್ಸ್‌ವೊಂದಕ್ಕೆ ನನ್ನ ಪ್ರಾಧ್ಯಾಪಕರೊಂದಿಗೆ ಊರೊಂದಕ್ಕೆ ಹೋಗಬೇಕಿತ್ತು. ಕಾರ್ಯಕ್ರಮ ಆಯೋಜಕರು ತಾವೇ ಎಸ್ಕಾರ್ಟ್ (ಬೆಂಗಾವಲು ಪಡೆ) ಕೊಡುತ್ತೇವೆ ಎಂದು ಹೇಳಿದ್ದರು. ಅವರು ಬರುವುದು ತಡವಾಗಿದ್ದರಿಂದ ನಾನೇ ಪ್ರಾಧ್ಯಾಪಕರನ್ನು ಕೂರಿಸಿಕೊಂಡು ಕಾರಿನಲ್ಲಿ ತೆರಳಿದೆ.‌ ಸ್ವಲ್ಪ ದೂರ ಪ್ರಯಾಣಿಸಿದ ರಸ್ತೆ ದುರಸ್ತಿ ಕಾಮಗಾರಿ ನಡೆದಿತ್ತು. ಹಾಗಾಗಿ ಪಕ್ಕದ ದಾರಿಯಲ್ಲಿ ಕಾರು ತಿರುಗಿಸಿದೆ. ಆದರೆ ಆ ದಾರಿ ಹೊಲ ಗದ್ದೆಗೆ ಹೋಗುವ ಮಾರ್ಗವಾಗಿತ್ತು.

ದಾರಿ ತಪ್ಪಿದೆ ಅಂತ ಅನುಮಾನ ಉಂಟಾಗಿ ಅಲ್ಲೇ ಬೈಕಲ್ಲಿ ಹೋಗ್ತಿದ್ದವನಲ್ಲಿ ದಾರಿ ಕೇಳಿದೆ. ನನ್ನ ಕಂಡ ಆತ ಏನ್ ಸಾರ್ ಈ ಕಡೆ ಅಂದ... ನಾನು ಹೋಗಬೇಕಾದ ಊರಿಗೆ ದಾರಿ ಕೇಳಿದಾಗ, ಏಕೆ ಸಾರ್ ಒಬ್ಬರೇ ಬಂದಿದೀರಿ. ಎಸ್ಕಾರ್ಟ್ ಬರಲಿಲ್ಲವೇ? ಒಬ್ಬರೇ ಬರಬಾರದಾಗಿತ್ತು. ಪೊಲೀಸಿನವ್ರು ಬರಬೇಕಿತ್ತು. ಏಕೆಂದರೆ ಈ ಜಾಗದಲ್ಲಿ ಒಬ್ಬರೇ ಪ್ರಯಾಣಿಸುವುದು ತುಂಬಾ ಡೇಂಜರ್ ಅಂತ ಪದೇ ಪದೆ ಹೇಳಿದ.‌

ನಾನು ಆಶ್ಚರ್ಯದಿಂದ ನಾನು ನಿನಗೆ ಗೊತ್ತಾ ಅಂತ ಕೇಳಿದೆ. ಆಗ ಅವನು.‌ ಹುಂ ಸಾರ್, ನೀವು ಜಡ್ಜ್ ಅಲ್ವಾ? ನಾನು ತುಕಾರಾಂ, ಆಧುನಿಕ ಗಬ್ಬರ್ ಸಿಂಗ್. ನಾನು ಮುಂದೆ ಬಂದು‌ ನಿಲ್ತಿದ್ನಲ್ಲಾ ಅಂದ. ನಂತರ ಬನ್ನಿ ನಾನೇ ದಾರಿ ತೋರಿಸ್ತೀನಿ. ನನ್ನ ಹಿಂದೆ ಬನ್ನಿ ಅಂದ.

ಆದರೆ, ಪಕ್ಕದಲ್ಲಿ ಕೂತಿದ್ದ ನನ್ನ ಪ್ರಾಧ್ಯಾಪಕರು ಮಾತ್ರ ನನಗೆ ಭಯವಾಗ್ತಿದೆ. ಅವನ ಹಿಂದೆ ಹೋಗೋದು ಬೇಡ ಅಂದ್ರು. ನಾನು, ಭಯಪಡಬೇಡಿ. ಅವನು ಏನೂ ಮಾಡಲ್ಲ. ಅವನು‌ ಮುಂದೆ ಹೋಗ್ತಿದ್ರೆ ನಮಗೆ ಯಾರೂ ಏನೂ ಅಪಾಯ ಮಾಡಲ್ಲ ಅಂತ ಧೈರ್ಯ ಹೇಳಿದೆ.‌ ತುಕಾರಂ ಮುಂದೆ ಬೈಕಲ್ಲಿ ಐದು ಕಿ.ಮೀ‌. ದೂರ ನಮಗೆ ಎಸ್ಕಾರ್ಟ್ ನೀಡಿದ. ಆರೋಪಿಯಿಂದ ಜಡ್ಜ್‌ಗೇ ಎಸ್ಕಾರ್ಟ್ ಸಿಕ್ತು ‌ಅಂತ ಜೋರಾಗಿ ನಕ್ಕರು

ನನ್ನ ಪುಸ್ತಕ ಕಡ್ಲೇ ಪುರಿ ಅಲ್ಲ ಸ್ವಾಮೀಜಿ!!

‘ನನ್ನ ಪುಸ್ತಕ ಹಾದಿಬೀದಿಯಲ್ಲಿ ಹೋಗುವವರಿಗೆಲ್ಲ ಹಂಚುವ ಕಡ್ಲೇಪುರಿ ಅಲ್ಲ ಸ್ವಾಮೀಜಿ.! ಓದುವವರಿಗೆ ಮಾತ್ರ ಪುಸ್ತಕ ಕೊಡಿ. ಓದುವವರು ಮಾತ್ರ ಪುಸ್ತಕ ಇಸ್ಕೊಂಡು ಹೋಗಿ...ಯಾರ್‍ಯಾರು ಪುಸ್ತಕ ಇಸ್ಕೊಂಡು ಹೋಗ್ತೀರಾ ಓದಿದ್ಮೇಲೆ ಹೇಳಬೇಕು ಎಂದು ಸಾಹಿತಿಯೊಬ್ಬರು ಹೇಳಿದಾಗ ಸಭಿಕರು ಗಲಿಬಿಲಿಗೊಂಡ ಪ್ರಸಂಗ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು!

ಇಷ್ಟಕ್ಕೂ ಈ ರೀತಿ ಸಾಹಿತಿಗೆ ಈ ರೀತಿ ತಾಕೀತು ಮಾಡಲು ಬಲವಾದ ಒಂದೆರಡು ಪ್ಲ್ಯಾಶ್‌ಬ್ಯಾಕ್ ಇತ್ತು. ಅದೇನಪಾ ಅಂದ್ರೆ.. ರದ್ದಿ ಅಂಗಡಿಯಲ್ಲಿ ತಾವೇ ಬರೆದಿದ್ದ ಪುಸ್ತಕ ಕಂಡು ಅವರು ಕಸಿವಿಸಿಗೊಂಡಿದ್ದರಂತೆ. ಕೊನೆಗೆ ರದ್ದಿ ಅಂಗಡಿಯಿಂದ ತಾವೇ ದುಡ್ಡು ಕೊಟ್ಟು ಆ ಪುಸ್ತಕ ತಂದು ಮನೆಯಲ್ಲಿಟ್ಟಿದ್ದರಂತೆ. ಇನ್ನೊಂದು ಸಲ ಸ್ನೇಹಿತರೊಬ್ಬರು ಸಿಕ್ಕಿ ಬೆಂಗಳೂರಿನ ಮಠದ ಸ್ವಾಮೀಜಿ ನಿಮ್ಮ ಪುಸ್ತಕ ಕೊಟ್ಟರು. ಏನ್ ಬರೀತೀರಿ ನೀವು ಅಬ್ಬಬ್ಬ... ಎಂದು ಬಾಯ್ತುಂಬ ಹೊಗಳಿದರಂತೆ. ಈ ಮಾತುಗಳಿಗೆ ಹಿಗ್ಗಿ ಹಿರೇಕಾಯಿ ಆಗಿದ್ದ ಸಾಹಿತಿ, ನನ್ನ ಪುಸಕ್ತದಲ್ಲಿ ಯಾವ ವಿಚಾರ ನಿಮಗೆ ಪ್ರಭಾವ ಬೀರಿತು ಎಂದು ಪ್ರಶ್ನಿಸಿದ್ದರಂತೆ. ಆಗ ಆಯ್ಯೋ ಪುಸ್ತಕ ಓದೋದಕ್ಕೆ ಆಗಿಲ್ಲ ಎಂದಾಗ ಸಾಹಿತಿಗೆ ಸಿಟ್ಟು ಬಂದರೂ ಕಂಟ್ರೋಲ್‌ ಮಾಡಿಕೊಂಡರಂತೆ.

ಅಂದಿನಿಂದ ಯಾರಿಗೂ ಪುಕ್ಕಟ್ಟೆ ಪುಸ್ತಕ ಕೊಡಲ್ಲ ಅಂತ ಸಾಹಿತಿ ಶಪಥಗೈದಿದ್ದರಂತೆ. ಆ ಸಾಹಿತಿ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಪುಸ್ತಕ ಪ್ರಕಟಿಸಿ ಭಕ್ತರಿಗೆ ಉಚಿತವಾಗಿ ವಿತರಿಸುತ್ತಿದ್ದರು. ಆಗ ಸಾಹಿತಿ ಮಾತು ಕೇಳಿದ ಸಭಿಕರಿಗೆ ತಾವು ಈಗ ಸ್ವಾಮೀಜಿ ಅವರಿಂದ ಪುಸ್ತಕ ಪಡೆಯಬೇಕೋ, ಬೇಡವೋ ಎಂಬ ಆತಂಕ ಶುರುವಾಗಿತ್ತು. ಸಾಹಿತಿ ಮಾತು ಕೇಳಿದ ಸ್ವಾಮೀಜಿ ಸಹ. ರೈತ ಭತ್ತ ಬೆಳೆದು ಹಸಿವು ನೀಗಿಸುವಂತೆ ಸಾಹಿತಿಗಳು ಸಹ ಪುಸ್ತಕ ಬರೆದು ಜ್ಞಾನದ ಹಸಿವು ನೀಗಿಸುತ್ತಾರೆ. ಅವರಿಗೆ ಬೇಸರ ಮಾಡಬೇಡಿ ಪುಸ್ತಕ ಓದಿ ಎಂದು ಹೇಳಿ ಅಸಮಾಧಾನಗೊಂಡಿದ್ದ ಆ ಸಾಹಿತಿ ತಣ್ಣಾಗಿಸಲು ಯತ್ನಿಸಿದರು!!

ಬಳ್ಳಾರಿಗೆ ಬಂದ್ರೆ ಕೋಟಿ ಕೋಟಿ ರೊಕ್ಕ ಬೇಕಪ್ಪೋ...!

ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಸ್ಪರ್ಧಿಸಿರುವ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿ ಪ್ರಚಾರ ನಿಮಿತ್ತ ಬಳ್ಳಾರಿಗೆ ಇತ್ತೀಚೆಗೆ ಬಂದಿದ್ದರು. ಕೆಲ ಶಿಕ್ಷಕರು ತಮ್ಮದೇ ಆದ ಬೇಡಿಕೆಗಳ ಪಟ್ಟಿ ನೋಡಿ ಅಭ್ಯರ್ಥಿ ಮಾತ್ರ ಸಿಕ್ಕಾಪಟ್ಟೆ ಬೆವರಿಳಿಸಿಕೊಂಡ ಪ್ರಸಂಗ ನಡೆಯಿತು.

''ಸಾರ್... ನಮ್ಮವರು ಗುಂಡು-ತುಂಡಿನ ಪಾರ್ಟಿ ಕೇಳುತ್ತಿದ್ದಾರೆ. ಚುನಾವಣೆ ಮುಗಿಯುವವರೆಗೆ ಒಂದಷ್ಟು ಪ್ರಮುಖರಿಗೆ ನಿತ್ಯ ಪಾರ್ಟಿ ಆಯೋಜಿಸಿದರೆ ಮತಗಳನ್ನು ಕ್ರೋಡೀಕರಿಸುವ ಕೆಲಸ ಮಾಡುತ್ತಾರೆ ಸರ್...'' ಎಂದು ಮನವಿ ಸಲ್ಲಿಸಿದರಂತೆ. ಅದಕ್ಕೆ ''ಸರಿ... ಚುನಾವಣೆ ಮುಗಿಯುವವರೆಗೆ ಎಷ್ಟು ಬಾರಿ ಸೇರುತ್ತೀರಿ? ಎಷ್ಟು ಹಣ ಬೇಕು? ಲೆಕ್ಕ ಹಾಕಿ ಹೇಳಿ, ವ್ಯವಸ್ಥೆ ಮಾಡೋಣ'' ಎಂದರಂತೆ.

ಇಷ್ಟೇ ಸಾಕಾಗಿತ್ತು, ಸ್ವಲ್ಪ ಹೊತ್ತಿನ ಬಳಿಕ ಅಭ್ಯರ್ಥಿ ಬಳಿ ಬಂದ ಶಿಕ್ಷಕ ಮಹಾಶಯರು ಬರೋಬ್ಬರಿ 16 ಲಕ್ಷ ರು. ಖರ್ಚಿನ ಪಟ್ಟಿ ಮುಂದಿಟ್ಟರಂತೆ!

ಪಟ್ಟಿ ನೋಡಿದ ಅಭ್ಯರ್ಥಿ, ''ಏನ್ರೀ... ಇಷ್ಟೊಂದು ದುಡ್ಡಾ? ಸ್ವಲ್ಪ ದುಬಾರಿಯಾಯ್ತಲ್ಲ?'' ಎಂದು ಅಭ್ಯರ್ಥಿ ಪ್ರಶ್ನಿಸಿದರೆ, ಅದಕ್ಕೆ ಶಿಕ್ಷಕ ಮಹಾಶಯರು ಮಾತ್ರ ''ಸರ್... ನಾನೇ ತುಂಬಾ ಕಡಿಮೆ ಮಾಡಿದ್ದೇನೆ. ನಮ್ಮವರು ಪೋಲಾ, ಬಾಲಾ, ನಕ್ಷತ್ರ, ಪವನ್ ಹೋಟೆಲ್‌ಗಳಲ್ಲೇ ಪಾರ್ಟಿ ಬೇಕು ಅಂತ ಹಠ ಹಿಡಿದಿದ್ದರು. ನಾನೇ ಅವರಿಗೆ ಬುದ್ಧಿ ಹೇಳಿದೆ. ಅಷ್ಟು ದುಬಾರಿ ಹೋಟೆಲ್‌ಗಳು ಬೇಡ. ಊರ ಹೊರಗೆ ಇರುವ ಫಾರ್ಮ್‌ಹೌಸ್‌ನಲ್ಲಿ ಮಾಡೋಣ. ಅದೂ ನಮ್ಮವರದೇ ಫಾರ್ಮ್‌ಹೌಸ್ ಅಂತ ಹೇಳಿ ಒಪ್ಪಿಸಿದ್ದೇನೆ ಸರ್...'' ಎಂದರು. ಇದನ್ನು ಕೇಳಿದ ಅಭ್ಯರ್ಥಿ ಕೆಲ ಹೊತ್ತು ಮೌನಕ್ಕೆ ಶರಣಾದರಂತೆ.

ಅಭ್ಯರ್ಥಿ ಮುಖದಲ್ಲಿನ ಆತಂಕ ಗಮನಿಸಿದ ಶಿಕ್ಷಕ ಮಹಾಶಯರು ''ಚುನಾವಣೆ ಅಂದ್ಮೇಲೆ ಇಷ್ಟೆಲ್ಲ ಖರ್ಚು ಮಾಡಲೇಬೇಕು. ಇಲ್ಲದಿದ್ದರೆ ಮತಗಳು ಹೇಗೆ ಬರುತ್ತವೆ?'','' ಸಾರ್...? ಇನ್ನೊಂದು ಮುಖ್ಯವಾದ ವಿಷಯ ಹೇಳಬೇಕು. ಬರೀ ಗುಂಡು-ತುಂಡಿನ ಪಾರ್ಟಿ ಕೊಟ್ಟರೆ ಕೆಲಸ ಆಗಲ್ಲ. ನಮ್ಮವರಿಗೆ ಕವರ್ ಕೂಡ ಬೇಕು. ಕವರ್‌ನಲ್ಲಿ ಒಂದಷ್ಟು ಹಣ ಇಟ್ಟರೆ ಮಾತ್ರ ಮತ ಹಾಕುತ್ತಾರೆ. ಇಲ್ಲದಿದ್ದರೆ ಕಷ್ಟ ಸರ್...'' ಎಲ್ಲ ಸೇರಿ ನಮ್ಮ ಬಳ್ಳಾರಿಯಲ್ಲೇ 60ರಿಂದ 70 ಲಕ್ಷ ಖರ್ಚಾಗಬಹುದು ಸರ್...'' ಎಂಬ ಅಂತಿಮ ಅಂದಾಜು ಕೇಳಿದಾಗ ಅಭ್ಯರ್ಥಿಯ ಮುಖದಲ್ಲಿದ್ದ ಗೆಲುವಿನ ಉತ್ಸಾಹವೇ ಕ್ಷಣಕಾಲ ಮಾಯವಾಯಿತಂತೆ!

ಬಳ್ಳಾರಿ ಎಂದರೆ ಲಕ್ಷಗಟ್ಟಲೆ ಮಾತಾಡಂಗಿಲ್ಲ... ಕೋಟಿ ಕೋಟಿ ರೊಕ್ಕ ಬೇಕಪ್ಪೋ... ರೊಕ್ಕ ಇದ್ರೆ ಮಾತ್ರ ಬಳ್ಳಾರಿ ಕಡೆ ಬರಬೇಕಪ್ಪೋ... ಎಂದು ಹುಬ್ಬೇರಿಸಿದರಂತೆ.

PREV
Read more Articles on

Recommended Stories

ಹವಾಮಾನ ವೈಪರೀತ್ಯ ಎದುರಿಸಲು ಅರಣ್ಯ ಇಲಾಖೆ ನಾನಾ ಯೋಜನೆ
29 ಕಿಮೀ ಮೈಲೇಜ್‌ನ ಡಸ್ಟರ್‌ ಹೈಬ್ರಿಡ್‌ ಕಾರು ಬಿಡುಗಡೆ