ಕೆಡಿ ಚಿತ್ರದ ಸರ್‌ಸೇ ಸೆರಗ ಹಾಡಿಗೆ ವ್ಯಾಪಕ ವಿರೋಧ

Published : Mar 18, 2026, 01:39 PM IST
KD Prem

ಸಾರಾಂಶ

ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ‘ಕೆಡಿ’ ಚಿತ್ರದ ‘ಸರ್ಸೆ ಸೆರಗ’ ಹಾಡಿನ ಸಾಹಿತ್ಯಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪ್ರೇಮ್ ಬರೆದ ಸಾಹಿತ್ಯವನ್ನು ವ್ಯಾಪಕವಾಗಿ ಜನರು ಖಂಡಿಸಿದ್ದು, ಹಿಂದಿ ಆವೃತ್ತಿಯ ಹಾಡು ಯೂಟ್ಯೂಬ್‌ನಿಂದ ಡಿಲೀಟ್‌ ಆಗಿದೆ.

  ಸಿನಿವಾರ್ತೆ

ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ‘ಕೆಡಿ’ ಚಿತ್ರದ ‘ಸರ್ಸೆ ಸೆರಗ’ ಹಾಡಿನ ಸಾಹಿತ್ಯಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪ್ರೇಮ್ ಬರೆದ ಸಾಹಿತ್ಯವನ್ನು ವ್ಯಾಪಕವಾಗಿ ಜನರು ಖಂಡಿಸಿದ್ದು, ಹಿಂದಿ ಆವೃತ್ತಿಯ ಹಾಡು ಯೂಟ್ಯೂಬ್‌ನಿಂದ ಡಿಲೀಟ್‌ ಆಗಿದೆ.

ಬಾಲಿವುಡ್‌ ನಟಿ ನೋರಾ ಫತೇಹಿ ಹಾಗೂ ಸಂಜಯ್‌ ದತ್‌ ಅವರು ಅಭಿನಯ

ಬಾಲಿವುಡ್‌ ನಟಿ ನೋರಾ ಫತೇಹಿ ಹಾಗೂ ಸಂಜಯ್‌ ದತ್‌ ಅವರು ಅಭಿನಯಿಸಿರುವ ‘ಸರ್ಸೆ ಸೆರಗ’ ಹಾಡು ಬಿಡುಗಡೆಯಾದ ಸಂದರ್ಭದಿಂದಲೇ ಈ ಹಾಡಿನ ಸಾಹಿತ್ಯಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಟ್ರೆಂಡಿಂಗ್‌ ಹಾಡಿಗೆ ಮಕ್ಕಳು ಹೆಜ್ಜೆ ಹಾಕುವ ಪರಿಪಾಠ ಹೆಚ್ಚಾಗಿರುವುರಿಂದ ಬಹಳಷ್ಟು ಮಂದಿ ಸಾಹಿತ್ಯವನ್ನು ಖಂಡಿಸಿದ್ದಾರೆ.

ಹಿಂದಿ ಭಾಷೆಯ ಹಾಡಿಗೂ ವಿರೋಧ

ಕನ್ನಡದ ಹೊರತಾಗಿ ಹಿಂದಿ ಭಾಷೆಯ ಹಾಡಿಗೂ ವಿರೋಧ ವ್ಯಕ್ತವಾಗಿದ್ದು, ವಿರೋಧ ಕಾಣಿಸಿಕೊಂಡ ಬೆನ್ನಲ್ಲೇ ಹಿಂದಿ ಹಾಡು ಯೂಟ್ಯೂಬ್‌ನಿಂದ ಡಿಲೀಟ್‌ ಆಗಿದೆ. ಈ ಬಗ್ಗೆ ವಿಚಾರಿಸಿದಾಗ ‘ಹಾಡಿನ ಒಂದು ಸಾಲು ಕರೆಕ್ಷನ್‌ ಮಾಡಬೇಕಿದೆ. ಹಾಡಿನ ಒಂದು ಸಾಲು ಕರೆಕ್ಷನ್‌ ಆದ ಮೇಲೆ ಮತ್ತೆ ಹಾಡನ್ನು ಅಪ್‌ಲೋಡ್‌ ಮಾಡಲಾಗುವುದು’ ಎಂದು ಹಾಡಿನ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿರುವ ಆನಂದ್‌ ಆಡಿಯೋ ಸಂಸ್ಥೆಯ ಮೂಲಗಳು ತಿಳಿಸಿವೆ. ಅಂದಹಾಗೆ ಹಿಂದಿಯಲ್ಲಿ ಈ ಹಾಡಿಗೆ ಸಾಹಿತ್ಯ ಬರೆದಿರುವುದು ರಕೀಬ್ ಆಲಂ.

ಆದರೆ ಹಾಡು ವಿವಾದ ಸ್ವರೂಪ ಪಡೆದುಕೊಂಡಿದ್ದು, ರಾಜ್ಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯ ಪ್ರಿಯಾಂಕ್‌ ಕನೂಂಗೋ ಕೂಡ ಈ ಹಾಡಿನ ವಿಷಯವನ್ನು ಖಂಡಿಸಿ, ‘ಕುಟುಂಬದೊಂದಿಗೆ ಕುಳಿತು ನೋಡಲು ಯೋಗ್ಯವೇ?’ ಎಂದು ಪ್ರಶ್ನಿಸಿದ್ದಾರೆ. ಚಿತ್ರದ ನಿರ್ಮಾಪಕರಿಗೆ ನೋಟೀಸ್‌ ಕೂಡ ನೀಡಲಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಖಚಿತ ಮಾಹಿತಿ ಇನ್ನಷ್ಟೇ ದೊರೆಯಬೇಕಾಗಿದೆ. ಈ ಕುರಿತು ಜೋಗಿ ಪ್ರೇಮ್‌ ಪ್ರತಿಕ್ರಿಯೆ ಪಡೆಯಲು ಕನ್ನಡಪ್ರಭ ಯತ್ನಿಸಿತಾದರೂ ಅವರು ಫೋನ್‌ ಸ್ವೀಕರಿಸಲಿಲ್ಲ.

ಕೆವಿಎನ್‌ ಸಂಸ್ಥೆ ಈ ಸಿನಿಮಾ ನಿರ್ಮಿಸಿದ್ದು, ಪ್ರಸ್ತುತ ಅವರ ನಿರ್ಮಾಣದ ಎಲ್ಲಾ ಸಿನಿಮಾಗಳು ಒಂದಲ್ಲ ಒಂದು ಸವಾಲನ್ನು ಎದುರಿಸುತ್ತಿದೆ. ಈಗ ‘ಕೆಡಿ’ ಚಿತ್ರ ಹಾಡಿನಿಂದಲೇ ರಾಷ್ಟ್ರವ್ಯಾಪಿ ಖಂಡನೆಗೆ ಒಳಗಾಗುತ್ತಿದೆ.

ಚೋಲಿ ಕೆ ಪೀಚೆ ಚೆನ್ನಾಗಿತ್ತಾ: ರಕ್ಷಿತಾ ಪ್ರೇಮ್‌

ಪ್ರೇಮ್‌ ವಿರುದ್ಧ ಎಲ್ಲರೂ ಕಿಡಿ ಕಾರುತ್ತಿದ್ದಂತೆಯೇ, ರಕ್ಷಿತಾ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೇಮ್ ಪರ ನಿಂತಿದ್ದಾರೆ.

‘ಚೋಲಿ ಕೆ ಪೀಚೆ ಕ್ಯಾಹೈ, ಡ್ರೀಮಮ್ ವೇಕಪಂ, ಪೀಲಿಂಗ್ಸ್ ಹಾಡುಗಳು ಚೆನ್ನಾಗಿದ್ದುವೇ. ಈಗ ರಕ್ತಪಾತದ ಸಿನಿಮಾಗಳು, ಲೈಂಗಿಕ ಅಂಶಗಳಿರುವ ಸಿನಿಮಾಗಳು, ಪ್ರಚೋದಕ ಹಾಡುಗಳು ಎಲ್ಲಾ ಬರುತ್ತವೆ. ಹಾಗಂತ ಪ್ರೇಮ್‌ರನ್ನು ಪ್ರಶ್ನಿಸಬೇಡಿ ಅಂತ ನಾನು ಹೇಳುತ್ತಿಲ್ಲ. ಪ್ರಶ್ನೆ ಮಾಡುವ ಹಕ್ಕು ನಿಮಗಿದೆ. ಆದರೆ ಅವರನ್ನು ಕೆಟ್ಟ ಭಾಷೆಯಲ್ಲಿ ನಿಂದಿಸುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ಹಾಡಿಗೆ ಕಿಡಿಕಾರಿದ ಕಂಗನಾ ರಾಣಾವತ್

ಈ ಹಾಡನ್ನು ನಟಿ, ಸಂಸದೆ ಕಂಗನಾ ರಾಣಾವತ್ ಕೂಡ ವಿರೋಧಿಸಿದ್ದಾರೆ. ‘ಬಾಲಿವುಡ್ ಇಂದು ಅಶ್ಲೀಲತೆ, ಅಗ್ಗದ ತಂತ್ರಗಳು ಮತ್ತು ಜನರ ಗಮನ ಸೆಳೆಯುವ ಹಪಾಹಪಿತನದಲ್ಲಿ ಎಲ್ಲಾ ಗಡಿಯನ್ನು ದಾಟಿಬಿಟ್ಟಿದೆ. ಇಡೀ ದೇಶವೇ ಇವರ ಇಂತಹ ವರ್ತನೆಯನ್ನು ಖಂಡಿಸುತ್ತಿದೆ ಮತ್ತು ತರಾಟೆಗೆ ತೆಗೆದುಕೊಳ್ಳುತ್ತಿದೆ. ಆದರೂ ಇವರಿಗೆ ಸ್ವಲ್ಪವೂ ನಾಚಿಕೆಯಿಲ್ಲದಂತಾಗಿದೆ. ಇಂತಹ ಪ್ರವೃತ್ತಿಗೆ ಬ್ರೇಕ್ ಹಾಕಲು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಅಥವಾ ನಿಯಂತ್ರಣವನ್ನು ಹೇರಲೇಬೇಕು’ ಎಂದು ಹೇಳಿದ್ದಾರೆ. ಅವರು ‘ಕೆಡಿ’ ಚಿತ್ರವನ್ನು ಬಾಲಿವುಡ್‌ ಚಿತ್ರ ಎಂದೇ ಭಾವಿಸಿದ್ದಾರೆ ಎನ್ನಲಾಗಿದೆ.

PREV
Read more Articles on

Recommended Stories

ಅಮೆರಿಕ ತೈಲ ಘಟಕಕ್ಕೆ ಅಂಬಾನಿ ಹೂಡಿಕೆಯ ರಹಸ್ಯ
ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು!