ಬೆಳೆದದ್ದೆಲ್ಲವನ್ನೂ ಬಳಸಿ ಆಹಾರ ಉದ್ಯಮ ಕಟ್ಟಿದ ಕೇರಳ ಕುಟುಂಬ ಕೃಷಿ ಲಾಭವಲ್ಲ. ರೈತನ ಮಗ ರೈತನಾಗಲು ಇಷ್ಟ ಪಡುವುದಿಲ್ಲ ಎಂಬ ಮಾತುಗಳನ್ನು ಮೈಸೂರು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಹುರ ಎಂಬ ಗ್ರಾಮದಲ್ಲಿ ಕೇರಳದ ಕುಟುಂಬವೊಂದು ಸುಳ್ಳು ಮಾಡಿದೆ. ಕೃಷಿಯ ಖುಷಿಗಾಗಿ ಕಾರ್ಪೋರೇಟ್ ಕೆಲಸ ತೊರೆದ ತಂಕಚ್ಚನ್ ಚೆಂಪೊಟ್ಟಿ ಅವರಿಗೆ ಶಿಕ್ಷಕಿಯಾಗಿದ್ದ ಪತ್ನಿ ಜೆಸ್ಸಿ ಕೂಡ ಕೆಲಸ ಬಿಟ್ಟು ಹೆಗಲಾಗಿದ್ದಾರೆ.
ಬಿಬಿಎಂ ಪದವಿ ಪಡೆದ ಮಗ ಜಾರ್ಜ್ ಚೆಂಪೊಟ್ಟಿ ಕೂಡ ತಂದೆಯ ಕೃಷಿ ಜೊತೆಗೇ ಕೈ ಜೋಡಿಸಿರೋದು ವಿಶೇಷವೇ ಸರಿ. ಇವರ ಜಮೀನಿರುವ ಗ್ರಾಮ ಹುರ ಹೆಸರು ಬಳಸಿ ಹುರಾಕೋ ಎಂಬ ಚಾಕ್ಲೇಟ್ ರೂಪಿಸಿದ್ದಾರೆ. ಅದೀಗ ಜನಪ್ರಿಯವಾಗತೊಡಗಿದೆ. ಕೇರಳದ ಕೋಳಿಕೋಡಿನವರಾದ ತಂಕಚ್ಚನ್ ಅವರು ತಮ್ಮ ರಾಜ್ಯ ತೊರೆದು 40 ವರ್ಷವಾಗಿದೆ. ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾರ್ಪೋರೇಟ್ ಕಂಪನಿಗಳ ಮಾರ್ಕೆಂಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. 2005ರಲ್ಲಿ ಮೈಸೂರು ಜಿಲ್ಲೆಯ ನುಗು ಜಲಾಶಯ ಮತ್ತು ಕಬಿನಿ ನದಿಯ ಮಾರ್ಗದಲ್ಲಿರುವ ಹುರಾ ಎಂಬ ಪುಟ್ಟ ಗ್ರಾಮದಲ್ಲಿ 20 ಎಕರೆ ಜಮೀನು ಖರೀದಿಸಿದ್ದಾರೆ. ಬೆಂಗಳೂರಲ್ಲಿ ವಾರವಿಡೀ ಕೆಲಸ ಮಾಡಿ ವಾರಾಂತ್ಯಗಳಲ್ಲಿ ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ತಂಕಚ್ಚನ್.
ಇಡೀ ತೋಟವನ್ನ ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಸಂಪೂರ್ಣ ರಸಾಯನಿಕ ಮುಕ್ತ ಭೂಮಿಯಾಗಿಸಲು ಐದಾರು ವರ್ಷ ಕಷ್ಟ ಪಟ್ಟರು. ತೆಂಗು, ಅಡಕೆ, ಕೊಕೊ ಸೇರಿದಂತೆ ಹಲವು ಬಗೆಯ ಹಣ್ಣುಗಳ ಗಿಡ ನೆಟ್ಟು ಮರವಾಗಿಸಿದ್ದಾರೆ. 2020ರಲ್ಲಿ ಇನ್ನು ಬೆಂಗಳೂರು ಸಾಕು ಎಂದು ತೀರ್ಮಾನಿಸಿ ಪೂರ್ಣಪ್ರಮಾಣದ ಕೃಷಿಕರಾಗಲು ಮೈಸೂರಿಗೆ ಬಂದು ನೆಲೆಸಿದ್ದಾರೆ.
ಕಳೆದ ಐದು ವರ್ಷದಿಂದ ಹುರಾ ಗ್ರಾಮದ ಜಮೀನಿನಲ್ಲಿ ಹಲವು ಪ್ರಯೋಗಗಳನ್ನು ನಡೆಸಿದ್ದಾರೆ. ಸಂಪೂರ್ಣ ನೈಸರ್ಗಿಕ ಹಾಗೂ ಸಾವಯವ ಕೃಷಿ ಮಾಡಲು ತಮ್ಮ ಸುತ್ತಮುತ್ತಲ ರೈತರನ್ನು ಪ್ರೇರೇಪಿಸುತ್ತಿರುವ ತಂಕಚ್ಚನ್ ಕುಟುಂಬವು ರೈತರು ತಾವು ಬೆಳೆದ ಬೆಳೆ ಮೌಲ್ಯವರ್ಧಿಸಿ ಮಾರಾಟ ಮಾಡಿ ಎಂದೂ ಅರಿವು ಮೂಡಿಸುತ್ತಿದ್ದಾರೆ.
ವಿಶೇಷವಾಗಿ ಚಾಕ್ಲೇಟ್ ತಯಾರಿಕೆಯ ಮೂಲ ವಸ್ತುವಾದ ಕೊಕೊ ಬೆಳೆಯಲು ರೈತರಿಗೆ ತರಬೇತಿಯನ್ನೂ ನೀಡುತ್ತಿದೆ ತಂಕಚ್ಚನ್ ಕುಟುಂಬ. ಕೊಕೊ ಬೆಳೆಯುವವರ ಕೊಕೊ ಖರೀದಿಸುವ ಭರವಸೆ ನೀಡಿದ ಮೇಲೆ ಕೆಲವು ರೈತರು ಕೊಕೊ ಬೆಳೆಯಲು ಮುಂದಾಗಿದ್ದಾರೆ. ಈ ನಡುವೆ 2022ರಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ಅಭಿವೃದ್ಧಿ ನಿಗಮದ ಮೂಲಕ ಪಿಎಂಎಫ್ಎಂಇ ಲೋನ್ ಪಡೆದು ತಾವು ಬೆಳೆಯುವ ಎಲ್ಲಾ ಬೆಳೆಗಳ ಉತ್ಪನ್ನಗಳನ್ನು ತಯಾರಿಸಿ ಆನ್ಲೈನ್ ಮಾರ್ಕೆಟಿಂಗ್ ಮಾಡುತ್ತಿದ್ದಾರೆ.
ಇದಕ್ಕೆ 15 ಲಕ್ಷ ಸಬ್ಸಿಡಿ ಕೂಡ ಮಂಜೂರಾಗಿದೆ. ಚಂಪೊಟ್ಟಿ ಅನ್ನೋದು ತಂಕಚ್ಚನ್ ಅವರ ಕುಟುಂಬದ ಹೆಸರು. ಚಂಪೊಟ್ಟಿ ಎಸ್ಟೇಟ್ ಎಂದು ತಮ್ಮ ತೋಟಕ್ಕೆ ಹೆಸರಿಸಿದ್ದಾರೆ. www.chempottyestate.com ವೆಬ್ಸೈಟ್ ಮೂಲಕ ಎಲ್ಲ ಉತ್ಪನ್ನಗಳನ್ನು ಮಾರ್ಕೇಟ್ ಮಾಡುತ್ತಿದ್ದಾರೆ. ಹುರಾಕೋ ಎಂಬ ಬಗೆಬಗೆಯ ಚಾಕ್ಲೇಟ್ಗಳು, ಹರ್ಬಲ್ ಟೀ, ಉಪ್ಪಿನಕಾಯಿ, ಕೊಕೊ ಫ್ರೂಟ್ ಸಾಸ್, ಕೊಕೊ ಪೌಡರ್, ಕೊಕೊ ಬಟರ್, ಬಿಳಿ ಅರಿಶಿಣ, ಕಪ್ಪು ಅರಿಶಿಣ, ಜೇನುತುಪ್ಪ, ಫ್ರೂಟ್ ಜಾಮ್ ಸೇರಿದಂತೆ 40 ಬಗೆಯ ಆಹಾರ ಉತ್ಪನ್ನಗಳನ್ನ ಈಗ ಚೆಂಪೊಟ್ಟಿ ಎಸ್ಟೇಟ್ ತಯಾರಿಸುತ್ತಿದೆ. ಈ ಆಹಾರಗಳ ಸಂಸ್ಕರಣೆ ಮತ್ತು ಉತ್ಪಾದನೆಗೆ 8 ಜನರಿಗೆ ಉದ್ಯೋಗ ನೀಡಲಾಗಿದೆ. ತಮ್ಮ ತೋಟದಲ್ಲಿ ಬೆಳೆಯುವುದರಿಂದ ಮಾತ್ರ ಈ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.
ಪ್ರತಿ ರೈತನು ತಾನು ಬೆಳೆದ ಬೆಳೆಗೆ ಬಲ ತುಂಬಿದರೆ ಅದರ ಸಂಪೂರ್ಣ ಲಾಭ ರೈತನೇ ಪಡೆಯಬಹುದು ಆ ಲಾಭ ನಾವು ಪಡೆಯುತ್ತಿದ್ದೇವೆ. ಈಗ ನಮಗೆ ಈ ಉದ್ಯಮದಿಂದ 35 ಲಕ್ಷ ವಾರ್ಷಿಕ ವಹಿವಾಟು ನಡೆಸಿದ್ದೇವೆ. ಅಮೆಜಾನ್ನಲ್ಲಿ ನಮ್ಮ ಉತ್ಪನ್ನಗಳು ಬೇಡಿಕೆ ಪಡೆದುಕೊಂಡಿವೆ. ಅದಲ್ಲದೇ ಬೆಂಗಳೂರು ಮತ್ತು ಮೈಸೂರಿನ ಅನೇಕ ರಿಟೇಲ್ ಅಂಗಡಿಗಳಲ್ಲು ನಮ್ಮ ಉತ್ಪನ್ನಗಳು ಮಾರಾಟ ಆಗುತ್ತಿವೆ. ವಿಶೇಷವಾಗಿ ಬೆಂಗಳೂರಿನ ಆರ್ಗ್ಯಾನಿಕ್ ವಸ್ತುಗಳ ಅಂಗಡಿಗಳಲ್ಲಿ ನಮ್ಮಲ್ಲಿನ ಉತ್ಪನ್ನಗಳಿಗೆ ಭಾರೀ ಬೇಡಿಕೆ ಶುರುವಾಗಿದೆ. ಎಂದು ತಮ್ಮ ಕೃಷಿ, ಕೃಷಿ ಉತ್ಪನ್ನಗಳ ಸಂಸ್ಕರಣೆಯ ಲಾಭವನ್ನ ಕನ್ನಡಪ್ರಭಕ್ಕೆ ವಿವರಿಸಿದರು ತಂಕಚ್ಚನ್ ಚಂಪೊಟ್ಟಿ.
ಕೊಕೊ ಕೊಯ್ಲು ಸಂದರ್ಭದಲ್ಲಿ ಕೊಕೊ ಸುಗ್ಗಿ ಹಬ್ಬ ಆಯೋಜಿಸಿ ರೈತರಿಗೆ ಕೊಕೊ ಬೆಳೆಯ ಲಾಭವನ್ನು ತಿಳಿಸುವ ಕೆಲಸ ಮಾಡುತ್ತಿದ್ದೇವೆ. ನಾನು ಹುಟ್ಟಿದ್ದು ಕೃಷಿ ಕುಟುಂಬದಲ್ಲಿ. ಊರು ಬಿಟ್ಟರೂ ಮಣ್ಣಿನ ಸೆಳೆತವಿತ್ತು. ಕೃಷಿ ಮೇಲಿದ್ದ ಪ್ರೀತಿ ನನ್ನನ್ನು ಈ ಕೆಲಸಕ್ಕೆ ತೊಡಗಿಸಿತು. ನನ್ನ ಪತ್ನಿ ಜೆಸ್ಸಿ ಶಿಕ್ಷಕಿಯಾಗಿದ್ದರೂ ನನ್ನಂತೆಯೇ ಕೃಷಿಯಲ್ಲಿ ಆಸಕ್ತಳು. ನನ್ನ ಮಗ ಜಾರ್ಜ್ ಕೂಡ ನನ್ನಂತೆಯೇ ಕೃಷಿಯಲ್ಲೇ ಖುಷಿ ಕಾಣುತ್ತಿದ್ದಾನೆ. ಕೃಷಿಯ ಜೊತೆಗೆ ಆಹಾರ ಉತ್ಪನ್ನಗಳ ಆನ್ಲೈನ್ ಮಾರ್ಕೆಟಿಂಗ್ ಸಂಪೂರ್ಣ ಜವಾಬ್ದಾರಿ ಅವನೇ ನೋಡಿಕೊಳ್ಳುತ್ತಿದ್ದಾನೆ. ಇನ್ನಷ್ಟು ದೊಡ್ಡಮಟ್ಟಕ್ಕೆ ವ್ಯವಹಾರ ವಿಸ್ತರಿಸುವ ಗುರಿ ಇದೆ. ಇದಕ್ಕಾಗಿ ರೈತರನ್ನು ಒಟ್ಟುಗೂಡಿಸುವ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ರೈತರು ಲಾಭ ಮಾಡಬಹುದು ಎಂದು ತಿಳಿಸಿ, ಕಲಿಸುವುದೇ ನಮ್ಮ ಉದ್ದೇಶ ಎಂದರು ತಂಕಚ್ಚನ್. ಚಂಪೊಟ್ಟಿ ಎಸ್ಟೇಟ್ ಉತ್ಪನ್ನಗಳಿಗಾಗಿ ಸಂಪರ್ಕಿಸಿ – 9845190577 ಅಥವಾ 9606973773 ಅಥವಾ www.chempottyestate.com ವೆಬ್ಸೈಟ್ಗೆ ಲಾಗಿನ್ ಆಗಿ.
15 ಲಕ್ಷ ರೂ. ಸಬ್ಸಿಡಿ ಪಡೆಯಿರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.