ನೇಮಕಾತಿಗೆ ನೆರವಾಗಲು ಎಐ ಅಳವಡಿಕೆ ಹೆಚ್ಚಿಸುತ್ತಿರುವ ಉದ್ಯಮ ಮಂದಿ : ಲಿಂಕ್ಡ್‌ ಇನ್ ವರದಿ

KannadaprabhaNewsNetwork | Updated : Feb 28 2025, 06:31 AM IST

ಸಾರಾಂಶ

ಭಾರತದ ಪ್ರಸ್ತುತ ಇರುವ ನೇಮಕಾತಿ ಟ್ರೆಂಡ್‌ಗಳ ಕುರಿತು ಲಿಂಕ್ಡ್‌ಇನ್‌ನ ಹೊಸ ವರದಿ ಬಹಿರಂಗ ಪಡಿಸಿದೆ. ಆ ಮಾಹಿತಿ ಇಲ್ಲಿದೆ.

  ಬೆಂಗಳೂರು : ಉದ್ಯಮ ನಾಯಕರು ನೇಮಕಾತಿ ಪ್ರಕ್ರಿಯೆ ಸುಲಭವಾಗಲು ಎಐ ಅಳವಡಿಕೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಲಿಂಕ್ಡ್ ಇನ್ ವರದಿ ಮಾಡಿದೆ. ಭಾರತದ ಉದ್ಯಮ ನಾಯಕರು ಎಐಯ ಸಾಮರ್ಥ್ಯವನ್ನು ಅರಿತುಕೊಂಡಿದ್ದಾರೆ ಮತ್ತು ಎಐ ಅನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಲಿಂಕ್ಡ್‌ ಇನ್‌ನ ಹೊಸ ಸಂಶೋಧನೆಯ ಪ್ರಕಾರ, ಭಾರತದ ಶೇ.98ರಷ್ಟು ಉದ್ಯಮ ನಾಯಕರು 2025ರಲ್ಲಿ ತಮ್ಮ ಸಂಸ್ಥೆಗಳಲ್ಲಿ ಎಐ ಅಳವಡಿಕೆಯನ್ನು ತೀವ್ರಗೊಳಿಸುವುದು ತಮ್ಮ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ. ಆದರೆ ವಿಶೇಷ ಎಂದರೆ ಎಐ ಎಷ್ಟೇ ಬೆಳೆದರೂ ಸರಿಯಾದ ಕೌಶಲ್ಯ ಹೊಂದಿರುವ ಪ್ರತಿಭೆಗಳನ್ನು ಕಂಡುಹಿಡಿಯುವುದು ಮಾತ್ರ ಇನ್ನೂ ಸವಾಲಾಗಿಯೇ ಉಳಿದಿದೆ.

ಲಿಂಕ್ಡ್‌ ಇನ್ ಸಂಶೋಧನೆಯ ಪ್ರಕಾರ ಭಾರತದಲ್ಲಿ ಶೇ.54ರಷ್ಟು ಹೆಚ್ಆರ್ ತಜ್ಞರು ತಮಗೆ ಬರುವ ಜಾಬ್ ಅಪ್ಲಿಕೇಷನ್‌ಗಳಲ್ಲಿ ಅರ್ಧದಷ್ಟು ಅಥವಾ ಅದಕ್ಕಿಂತ ಕಡಿಮೆ ಅರ್ಜಿಗಳು ಮಾತ್ರ ಅಗತ್ಯ ಇರುವ ಅರ್ಹತೆಗಳನ್ನು ಹೊಂದಿರುತ್ತವೆ ಎಂದು ತಿಳಿಸಿದ್ದಾರೆ. ಸೂಕ್ತ ಟೆಕ್ನಿಕಲ್ (ಶೇ.61) ಮತ್ತು ಸಾಫ್ಟ್ ಸ್ಕಿಲ್ ಗಳನ್ನು (ಶೇ.57) ಹೊಂದಿರುವ ಅಭ್ಯರ್ಥಿಗಳನ್ನು ಕಂಡುಹಿಡಿಯುವುದು ಅವರಿಗೆ ಬಹು ದೊಡ್ಡ ಸವಾಲಾಗಿದೆ.

ಈ ಕುರಿತು ಭಾರತದ ಲಿಂಕ್ಡ್‌ ಇನ್ ಟ್ಯಾಲೆಂಟ್ ಆಂಡ್ ಲರ್ನಿಂಗ್ ಸೊಲ್ಯೂಷನ್ಸ್ ಮುಖ್ಯಸ್ಥೆ ರುಚೀ ಆನಂದ್ ಅವರು, ‘ನಿಜವಾದ ಯಶಸ್ಸು ಇರುವುದು ಎಐ ಅಳವಡಿಸುವುದರಲ್ಲಿ ಮಾತ್ರವೇ ಅಲ್ಲ, ಅದನ್ನು ಉದ್ಯಮಕ್ಕೆ ಸರಿಯಾಗಿ ಹೊಂದಿಸಿಕೊಳ್ಳುವುದರಲ್ಲಿ. ಹಲವು ಕಂಪನಿಗಳು ಎಐ ಟೂಲ್‌ಗಳಿಗೆ ಹಣ ಖರ್ಚು ಮಾಡುತ್ತವೆ, ಆದರೆ ಸರಿಯಾದ ಪ್ರತಿಭೆಗಳೇ ಇಲ್ಲದಿದ್ದರೆ ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

ಭಾರತದಲ್ಲಿ ಶೇ.84ರಷ್ಟು ಹೆಚ್ಆರ್ ಮಂದಿ 2025ರಲ್ಲಿ ಉದ್ಯೋಗಿಗಳಿಗೆ ಹೊಸ ಕೌಶಲ್ಯಗಳನ್ನು ಕಲಿಸುವುದನ್ನು ಆದ್ಯತೆಯನ್ನಾಗಿ ಇಟ್ಟುಕೊಂಡಿದ್ದಾರೆ. ಶೇ.48ರಷ್ಟು ಭಾರತೀಯ ಉದ್ಯಮ ನಾಯಕರು ಎಐ ತರಬೇತಿ ನೀಡಲು ಹೂಡಿಕೆ ಮಾಡುವುದರಿಂದ ಎಐ ಅಳವಡಿಕೆ ತೀವ್ರವಾಗಲಿದೆ ಎಂದು ಹೇಳಿದ್ದಾರೆ.ಪ್ರಸ್ತುತ ಲಿಂಕ್ಡ್‌ ಇನ್ ಹೊಸ ಎಐ-ಆಧರಿತ ಟೂಲ್ ಗಳನ್ನು ಅನಾವರಣಗೊಳಿಸುತ್ತಿದ್ದು, ಇದು ನೇಮಕಾತಿದಾರರಿಗೆ ನೆರವಾಗಲಿದೆ.

● ಭಾರತದಲ್ಲಿ ಶೇ.37ರಷ್ಟು ಹೆಚ್ಆರ್ ಗಳು ಅಂದ್ರೆ 5 ರಲ್ಲಿ 2 ಮಂದಿ ಪ್ರತಿದಿನ 1-3 ಗಂಟೆಗಳ ಕಾಲ ಉದ್ಯೋಗ ಅರ್ಜಿಗಳನ್ನು ಪರಿಶೀಲಿಸುತ್ತಾರೆ. ಮತ್ತು ಶೇ.64ರಷ್ಟು ಅಂದ್ರೆ 5ರಲ್ಲಿ 3 ಮಂದಿ ಎಐ ಟೂಲ್ ಗಳು ನೇಮಕಾತಿಯನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದು ಎಂದು ಭಾವಿಸಿದ್ದಾರೆ. ಲಿಂಕ್ಡ್‌ ಇನ್‌ನ ಹೊಸ ‘ಹೈರಿಂಗ್ ಅಸಿಸ್ಟಂಟ್’ ಟೂಲ್ ಪುನರಾವರ್ತಿತ ಕೆಲಸಗಳನ್ನು ಮಾಡಲು ನೆರವಾಗುತ್ತದೆ ಮತ್ತು ಆ ಮೂಲಕ ನೇಮಕಾತಿದಾರರು ಪ್ರಮುಖ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.

● ಲಿಂಕ್ಡ್‌ ಇನ್ ಲರ್ನಿಂಗ್‌ನ ಹೊಸ ಎಐ- ಚಾಲಿತ ತರಬೇತಿ ಫೀಚರ್ ಗಳು, ಸಾಫ್ಟ್ ಸ್ಕಿಲ್ ಗಳನ್ನು ಸಂವಹನಾತ್ಮಕ ಪ್ರಕ್ರಿಯೆ ಮತ್ತು ಇತರ ಪ್ರಕ್ರಿಯೆಗಳ ಮೂಲಕ ಅಭಿವೃದ್ಧಿ ಮಾಡಲು ಸಹಾಯ ಮಾಡುತ್ತದೆ. ಈ ಮೂಲಕ ಉದ್ಯೋಗಿಗಳು ಪರ್ಫಾರ್ಮೆನ್ಸ್ ರಿವ್ಯೂ, ಫೀಡ್ ಬ್ಯಾಕ್ ಡಿಸ್ಕಷನ್ ಗಳಂತಹ ಕಚೇರಿ ಸಂಭಾಷಣೆ ಸಂದರ್ಭಗಳಲ್ಲಿ ಮಾತನಾಡುವ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಮತ್ತು ಉದ್ಯೋಗಿಗಳಿಗೆ ಹಲವಾರು ವೈಯಕ್ತಿಕ ಸಲಹೆಗಳನ್ನು ನೀಡುತ್ತದೆ.

Share this article