;Resize=(412,232))
ಹಣ ಉಳಿಸುವುದನ್ನು ಮುಚ್ಚಿಡುವ ಕಾಲ ಹೋಯಿತು, ಆರ್ಥಿಕ ಪರಿಸ್ಥಿತಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದೇ ಈಗ ಹೊಸ ಟ್ರೆಂಡ್.
ಸಹೋದ್ಯೋಗಿಗಳ ಗುಂಪೊಂದು ವಾರಾಂತ್ಯದ ಪಾರ್ಟಿಗೆ ಪ್ಲಾನ್ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಹೆಚ್ಚಿನವರು ಜೇಬಿನಲ್ಲಿ ಬಿಡಿಗಾಸಿಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುತ್ತಾರೆ. ಹಣವಿಲ್ಲ ಎಂದು ಹೇಳಲು ಎಲ್ಲಿ ಮರ್ಯಾದೆ ಹೋಗಿಬಿಡುತ್ತದೆಯೋ ಎನ್ನುವ ಆತಂಕ.
ಆದರೆ, ನೀವೀಗ ಮೆಟ್ರೋ ನಗರಗಳ ಇಂದಿನ ಜೆನ್-ಜೀ ಮತ್ತು ಯುವ ಉದ್ಯೋಗಿಗಳ ವಲಯವನ್ನು ಗಮನಿಸಿದರೆ ಅಚ್ಚರಿಯಾಗಬಹುದು. ಯಾರಾದರೂ ದುಬಾರಿ ಪಾರ್ಟಿ, ಔಟಿಂಗ್ ಅಥವಾ ಐಷಾರಾಮಿ ಟ್ರಿಪ್‌ಗೆ ಕರೆದರೆ, ಅವರು ಕಿಂಚಿತ್ತೂ ಮುಜುಗರವಿಲ್ಲದೆ, ‘ಸಾರಿ ಬಾಸ್, ಈ ತಿಂಗಳು ನನ್ನ ಬಜೆಟ್ ಮೀರಿದೆ. ನಾನಂತೂ ದುಡ್ಡು ವೇಸ್ಟ್ ಮಾಡಲ್ಲ, ನಾನು ಬರಲ್ಲ’ ಎಂದು ಯಾವುದೇ ಸಂಕೋಚವಿಲ್ಲದೆ ಹೇಳುತ್ತಾರೆ. ಆರ್ಥಿಕ ಮಿತಿಯನ್ನು ಹೆಮ್ಮೆಯಿಂದ ಸಾರ್ವಜನಿಕವಾಗಿ ಘೋಷಿಸಿಕೊಳ್ಳುವ ಈ ಹೊಸ ಜೀವನಶೈಲಿಯೇ ಈಗ ಜಾಗತಿಕವಾಗಿ ಸದ್ದು ಮಾಡುತ್ತಿರುವ ಲೌಡ್ ಬಜೆಟಿಂಗ್ ಟ್ರೆಂಡ್.
‘ನನ್ನ ಬಳಿ ದುಡ್ಡೇ ಇಲ್ಲ’ ಎಂದು ಹೇಳಿ ಬಡತನ ಪ್ರದರ್ಶಿಸುವುದಲ್ಲ, ಬದಲಿಗೆ ‘ನನ್ನ ದುಡ್ಡನ್ನು ಎಲ್ಲಿ, ಹೇಗೆ ಖರ್ಚು ಮಾಡಬೇಕೆಂಬ ನಿಯಂತ್ರಣ ನನ್ನ ಕೈಯಲ್ಲಿದೆ’ ಎಂದು ಜಗತ್ತಿಗೆ ಸಾರುವುದು ಈ ಟ್ರೆಂಡ್‌ನ ಉದ್ದೇಶ. ಬೇರೆಯವರ ಮೆಚ್ಚುಗೆಗಾಗಿ ಅಥವಾ ಫೋಮೋ ಕಾರಣಕ್ಕೆ ಅನಗತ್ಯವಾಗಿ ಖರ್ಚು ಮಾಡುವುದನ್ನು ತಡೆಯುವುದೇ ಇದರ ಸಾರ.
1. ಸಾಮಾಜಿಕ ಒತ್ತಡಕ್ಕೆ ಪೂರ್ಣವಿರಾಮ: ಸ್ನೇಹಿತರು ಬ್ರಾಂಡೆಡ್ ಶೂ ಕೊಂಡರು ಎಂದೋ, ನೆರೆಹೊರೆಯವರು ದುಬಾರಿ ಕಾರು ಅಥವಾ ಐಫೋನ್ ಖರೀದಿಸಿದರು ಎಂದೋ ಸಾಲ ಮಾಡಿ ತಾವೂ ಅದನ್ನೇ ಕೊಳ್ಳುವ ಪ್ರವೃತ್ತಿ ಹಿಂದಿತ್ತು. ಲೌಡ್ ಬಜೆಟಿಂಗ್ ಇದಕ್ಕೆ ಬ್ರೇಕ್ ಹಾಕಿದೆ.
2. ಕ್ರೆಡಿಟ್ ಕಾರ್ಡ್ ಸಾಲದ ಸುಳಿಯಿಂದ ಮುಕ್ತಿ: ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾದರೂ ಸ್ಟೇಟಸ್‌ಗಾಗಿ ಕ್ರೆಡಿಟ್ ಕಾರ್ಡ್ ಉಜ್ಜುವ ಚಾಳಿಗೆ ಇದು ಕಡಿವಾಣ ಹಾಕುತ್ತದೆ.
3. ದೀರ್ಘಾವಧಿಯ ಆರ್ಥಿಕ ಗುರಿಗಳಿಗೆ ಆದ್ಯತೆ: ಒಂದು ವಾರಾಂತ್ಯದ ಪಾರ್ಟಿಗೆ ₹3,000–₹5,000 ಖರ್ಚು ಮಾಡುವ ಬದಲು, ಆ ಹಣವನ್ನು ಎಸ್‌ಐಪಿ ಮೂಲಕ ಹೂಡಿಕೆ ಮಾಡುವುದು ಅಥವಾ ತುರ್ತು ನಿಧಿಗೆ ಜಮೆ ಮಾಡುವುದು ಆದ್ಯತೆಯಾಗುತ್ತಿದೆ.
ನಿಮ್ಮ ಜೀವನದಲ್ಲೂ ಲೌಡ್ ಬಜೆಟಿಂಗ್ ಅಳವಡಿಸಿಕೊಳ್ಳುವುದು ಹೇಗೆ?
1. ಪ್ರತಿ ತಿಂಗಳ ಸಂಬಳ ಬಂದ ತಕ್ಷಣ ಉಳಿತಾಯ, ಬಾಡಿಗೆ ಮತ್ತು ತಿಂಗಳ ದಿನಸಿ ಖರ್ಚುಗಳನ್ನು ಪ್ರತ್ಯೇಕಿಸಿ. ಹೊರಗಿನ ತಿಂಡಿ, ಮನರಂಜನೆಗೆ ನಿರ್ದಿಷ್ಟ ಮಿತಿ ಇರಲಿ.
2. ಸ್ನೇಹಿತರು ಬಜೆಟ್‌ಗೆ ಮೀರಿದ ದುಬಾರಿ ಹೋಟೆಲ್ ಅಥವಾ ಕೆಫೆಗೆ ಆಹ್ವಾನಿಸಿದಾಗ, ‘ಈ ತಿಂಗಳು ನನ್ನ ಔಟಿಂಗ್ ಬಜೆಟ್ ಮುಗಿದಿದೆ, ಮನೆಯಲ್ಲೇ ಭೇಟಿಯಾಗೋಣ’ ಎಂದು ಧೈರ್ಯವಾಗಿ ಹೇಳಿ.
3. ಪಾರ್ಟಿ ಬೇಡ ಎನ್ನುವುದರ ಜತೆಗೆ, ಕಡಿಮೆ ಖರ್ಚಿನ ಪರ್ಯಾಯಗಳನ್ನು ನೀಡಿ. ಉದಾಹರಣೆಗೆ, ಪಾರ್ಕ್ ವಾಕ್, ಮನೆಯಲ್ಲೇ ಊಟ ಅಥವಾ ಬೋರ್ಡ್ ಗೇಮ್ಸ್.