7 ಸೀಟರ್ ಎಲೆಕ್ಟ್ರಿಕ್‌ ಮಹೀಂದ್ರಾ ಬಿಡುಗಡೆ

Published : Nov 28, 2025, 08:33 AM IST
mahindra xev 9s

ಸಾರಾಂಶ

ಕಾರು ಮಾರುಕಟ್ಟೆಯಲ್ಲಿ ಹೊಸತನ ಮತ್ತು ವಿನ್ಯಾಸದಲ್ಲಿ ವಿದೇಶಿ ಕಾರುಗಳಿಗೂ ಸೆಡ್ಡು ಹೊಡೆದಿರುವ ಮಹೀಂದ್ರಾ ಇದೀಗ ತನ್ನ ಮೊದಲ ಏಳು ಸೀಟುಗಳ ಎಕ್ಸ್ಇವಿ 9 ಎಸ್ ದೊಡ್ಡ ಗಾತ್ರದ ಸ್ಪೋರ್ಟ್ಸ್‌ ಯುಟಿಲಿಟಿ ಎಲೆಕ್ಟ್ರಿಕ್ ಕಾರನ್ನು ಗುರುವಾರ ಬೆಂಗಳೂರಿನಲ್ಲಿ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ರುದ್ರಗೌಡ ಮುದಿಗೌಡರ್‌

 ದೇವನಹಳ್ಳಿ :  ಕಾರು ಮಾರುಕಟ್ಟೆಯಲ್ಲಿ ಹೊಸತನ ಮತ್ತು ವಿನ್ಯಾಸದಲ್ಲಿ ವಿದೇಶಿ ಕಾರುಗಳಿಗೂ ಸೆಡ್ಡು ಹೊಡೆದಿರುವ ಮಹೀಂದ್ರಾ ಇದೀಗ ತನ್ನ ಮೊದಲ ಏಳು ಸೀಟುಗಳ ಎಕ್ಸ್ಇವಿ 9 ಎಸ್ ದೊಡ್ಡ ಗಾತ್ರದ ಸ್ಪೋರ್ಟ್ಸ್‌ ಯುಟಿಲಿಟಿ ಎಲೆಕ್ಟ್ರಿಕ್ ಕಾರನ್ನು ಗುರುವಾರ ಬೆಂಗಳೂರಿನಲ್ಲಿ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಮಹೀಂದ್ರಾ ಎಕ್ಸ್ಇವಿ 9ಎಸ್ ಎಕ್ಸ್ ಶೋರೂಂ ಆರಂಭಿಕ ಬೆಲೆ ₹19.95 ಲಕ್ಷವಾಗಿದ್ದು, ಸಂಪೂರ್ಣ ಸುಸಜ್ಜಿತ ಒಟ್ಟು 6 ಮಾದರಿಗಳಿವೆ. ವೇರಿಯಂಟ್‌ಗಳಿಗೆ ಅನುಗುಣವಾಗಿ ಅತಿ ಹೆಚ್ಚಿನ ಬೆಲೆ ₹29.45 ಲಕ್ಷವಾಗಿದೆ. ಟೆಸ್ಟ್ ಡ್ರೈವ್ ಡಿಸೆಂಬರ್ 5ರಿಂದ ಆರಂಭವಾಗಲಿದೆ. ಕಾರು ಬುಕಿಂಗ್ ಬರುವ 2026ರ ಜನವರಿ 14ರಿಂದ ಆರಂಭವಾಗಲಿದ್ದು, ಜನವರಿ 23ರಿಂದ ಗ್ರಾಹಕರಿಗೆ ವಿತರಣೆ ಶುರುವಾಗಲಿದೆ.

ಮಹೀಂದ್ರಾ ಎಕ್ಸ್ಇವಿ 9ಎಸ್ ಮೂರು ವಿಧವಾದ ಬ್ಯಾಟರಿಗಳನ್ನು ಹೊಂದಿದೆ. 59 ಕೆಡಬ್ಲ್ಯುಎಚ್, 70 ಕೆಡಬ್ಲ್ಯುಎಚ್ ಮತ್ತು 79 ಕೆಡಬ್ಲ್ಯುಎಚ್. ಈ ಕಾರು ಕೇವಲ ಏಳು ಸೆಕೆಂಡುಗಳಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಇದರ ಅತಿ ಹೆಚ್ಚು ವೇಗ 202 ಕಿ.ಮೀ. ಆಗಿದೆ. ಇದು ಒಂದು ಚಾರ್ಜಿಂಗ್ ಗೆ 542ರಿಂದ 656 ಕಿ.ಮೀ. ಚಲಿಸಲಿದೆ. ಪ್ರತಿ ಕಿ.ಮೀ. ಚಲಿಸಲು ₹1.2 ವೆಚ್ಚವಾಗಲಿದೆ. ಇದರ ನಿರ್ವಹಣಾ ವೆಚ್ಚ ಪ್ರತಿ ಕಿ.ಮೀ. ಕೇವಲ 40 ಪೈಸೆಯಾಗಿದೆ ಎಂದು ಸಂಸ್ಥೆ ಹೇಳಿದೆ.

ಎಕ್ಸ್ಇವಿ 9ಎಸ್ ನ ಹೊಳಪಿನ ನೋಟ, ತನ್ಮಯಗೊಳಿಸುವ ತಂತ್ರಜ್ಞಾನ

ಎಕ್ಸ್ಇವಿ 9ಎಸ್ ನ ಹೊಳಪಿನ ನೋಟ, ತನ್ಮಯಗೊಳಿಸುವ ತಂತ್ರಜ್ಞಾನ, ಸಮೃದ್ಧ ಒಳಾಂಗಣ ವಿನ್ಯಾಸ ಕಾರು ಪ್ರಿಯರ ಕಣ್ಮನ ಸೆಳೆಯುತ್ತದೆ. ಎಲ್ ಶೇಪ್ ಎಲ್‌ಇಡಿ ಡಿಆರ್‌ಎಲ್ಎಸ್, ಆಕರ್ಷಕವಾದ ಪ್ರೊಜೆಕ್ಟರ್ ಲ್ಯಾಂಪ್‌ಗಳು, ಫುಲ್ ಎಲ್‌ಇಡಿ ಲೈಟ್ ಬಾರ್, ಪ್ಲಷ್ ಫಿಟ್ಟೆಡ್ ಡೋರ್ ಹ್ಯಾಂಡಲ್‌ಗಳು, ನಾಲ್ಕೂ ಚಕ್ರಗಳ ವಿನ್ಯಾಸ, ಆಕರ್ಷಕ ವಿನ್ಯಾಸದ ಸ್ಟೇರಿಂಗ್, ಮೂರು ಸ್ಕ್ರೀನ್ ಗಳುಳ್ಳ ಡ್ಯಾಷ್ ಬೋರ್ಡ್, ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಹೆಚ್ಚುವರಿ ಸ್ಕ್ರೀನ್, ದೊಡ್ಡದಾದ ಸನ್ ರೂಫ್, ಅತ್ಯುತ್ತಮ ಆಡಿಯೋ ಸಿಸ್ಟಂನಿಂದಾಗಿ ಕಾರು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ.

ಎಕ್ಸಇವಿ 9ಎಸ್ ಭಾರತದ ದೊಡ್ಡಗಾತ್ರದ ಹೊಸ ವಿದ್ಯುತ್‌ ಚಾಲಿತ ಎಸ್‌ಯುವಿ

ಎಕ್ಸಇವಿ 9ಎಸ್ ಭಾರತದ ದೊಡ್ಡಗಾತ್ರದ ಹೊಸ ವಿದ್ಯುತ್‌ ಚಾಲಿತ ಎಸ್‌ಯುವಿ ಆಗಿದೆ. ಬದುಕು, ಕನಸುಗಳು ಮತ್ತು ದೈನಂದಿನ ಪ್ರಯಾಣಗಳು ದೊಡ್ಡದಾಗುತ್ತಿರುವ ಸದ್ಯದ ಸಂದರ್ಭ ಗಮನದಲ್ಲಿಟ್ಟುಕೊಂಡು ವಿಶಾಲವಾದ ಎಸ್‌ಯುವಿ ತಯಾರಿಸಲಾಗಿದೆ ಎಂದು ನಂದಿ ಹಿಲ್ಸ್ ರಸ್ತೆಯಲ್ಲಿರುವ ಜೆಡಬ್ಲ್ಯು ಮ್ಯಾರಿಯಾಟ್ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿ ನಡೆದ ಕಾರುಬಿಡುಗಡೆ ಸಮಾರಂಭದಲ್ಲಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ ಆಟೋ ಆ್ಯಂಡ್‌ ಫಾರ್ಮ್ ಸೆಕ್ಟರ್ಸ್‌ನ ಚೀಫ್‌ ಡಿಸೈನ್‌ ಆ್ಯಂಡ್‌ ಕ್ರಿಯೆಟಿವ್‌ ಅಧಿಕಾರಿ ಪ್ರತಾಪ್ ಬೋಸ್ ಘೋಷಿಸಿದರು.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ಬಿಸಿನೆಸ್‌ ಅಧ್ಯಕ್ಷ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಆಟೊಮೊಬೈಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆರ್.ವೇಲುಸಾಮಿ, ಕಾರ್ಯನಿರ್ವಾಹಕ ನಿರ್ದೇಶಕ ನಳಿನಿಕಾಂತ್ ಗೊಲ್ಲಗುಂಟಾ ಇದ್ದರು.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ನ ಆಟೊಮೋಟಿವ್ ಬಿಸಿನೆಸ್‌ ಅಧ್ಯಕ್ಷ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಆಟೊಮೊಬೈಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆರ್. ವೇಲುಸಾಮಿ ಮಾತನಾಡಿ, ಐಎನ್ ಜಿಎಲ್ಒ ಎಲೆಕ್ಟ್ರಿಕ್ ಒರಿಜಿನ್‌ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಿರುವ ಎಕ್ಸ್ಇವಿ 9ಎಸ್ ಹೆಚ್ಚಿನ ಸ್ಥಳಾವಕಾಶವನ್ನು ಬೇರೆಯವರಿಗಿಂತ ಹೆಚ್ಚು ನಿಖರವಾಗಿ ಒದಗಿಸುತ್ತದೆ. ಸುಲಲಿತ ಮತ್ತು ಸದ್ದು ಮುಕ್ತ ಸವಾರಿ ಅನುಭವ ನೀಡುತ್ತದೆ. ಇದು ಅದರ ಬೆಲೆಗೆ ಹೋಲಿಸಿದರೆ ಹೆಚ್ಚುವರಿ ಕೊಡುಗೆಯಾಗಿದೆ ಎಂದು ಹೇಳಿದರು.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ ನ ಆಟೊಮೋಟಿವ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಆಟೊಮೊಬೈಲ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ನಳಿನಿಕಾಂತ್ ಗೊಲ್ಲಗುಂಟಾ ಪ್ರತಿಕ್ರಿಯಿಸಿ, ಎಕ್ಸ್ಇವಿ 9ಎಸ್ ಮೂಲಕ ನಾವು ವಿದ್ಯುತ್‌ ಚಾಲಿತ ವಾಹನಗಳ (ಇವಿ) ವಿಭಾಗದಲ್ಲಿ ದೊಡ್ಡದಾಗಿ ವಿಸ್ತರಿಸುತ್ತಿದ್ದೇವೆ. ಈ ಎಸ್‌ಯುವಿಯು ಮಹೀಂದ್ರಾದ ಪಾಲಿಗೆ ಹೊಸ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಯುಗದ ಆರಂಭ ಸೂಚಿಸುತ್ತದೆ. ಪ್ರಮಾಣ , ಉದ್ದೇಶ ಮತ್ತು ಭಾರತದಲ್ಲಿ ವಾಹನಗಳ ಸಂಚಾರದ ಭವಿಷ್ಯ ಹೇಗೆ ಇರಲಿದೆ ಎಂಬುದರ ಆಳವಾದ ತಿಳಿವಳಿಕೆ ಮೇಲೆ ಇದನ್ನು ತಯಾರಿಸಲಾಗಿದೆ ಎಂದು ಹೇಳಿದರು.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ ನ ಆಟೊ ಆ್ಯಂಡ್‌ ಫಾರ್ಮ್ ಸೆಕ್ಟರ್ಸ್‌ನ ಚೀಫ್‌ ಡಿಸೈನ್‌ ಆ್ಯಂಡ್‌ ಕ್ರಿಯೆಟಿವ್‌ ಅಧಿಕಾರಿ ಪ್ರತಾಪ್ ಬೋಸ್ ಮಾತನಾಡಿ, ಎಕ್ಸ್ಇವಿ 9ಎಸ್ ಕಾರು ಕೇವಲ ತೋರಿಕೆಯದ್ದಾಗಿರದೆ ಭಾವನೆಗಳನ್ನು ರೂಪಿಸುವುದಾಗಿದೆ. ವೈಯಕ್ತಿಕ ಪವಿತ್ರ ಸ್ಥಳಕ್ಕೆ ಕಾಲಿಡುವಂತಹ ಅನುಭವ ನೀಡಬೇಕು ಮತ್ತು ಜೊತೆಗೆ ಆಧುನಿಕ ಭಾರತದ ನಾಡಿಮಿಡಿತಕ್ಕೂ ಸೂಕ್ತವಾಗಿ ಸ್ಪಂದಿಸುವಂತಿರಬೇಕು ಎನ್ನುವುದು ನಮ್ಮ ಆಶಯವಾಗಿದೆ. ದೊಡ್ಡ ಗಾತ್ರದ ಸೊಬಗಿನ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಈ ಎಸ್‌ಯುವಿ ಇದಾಗಿದೆ ಎಂದರು.

 

PREV
Read more Articles on

Recommended Stories

ವಿಶ್ವ ದಂತ ಬಳ್ಳಿ ಬಳಕೆ ದಿನ - ಬಾಯಿಯ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ನಮ್ಮ ದೇಹದ ಆರೋಗ್ಯ
‘ಆರ್‌ಟಿಐ ವ್ಯಾಪ್ತಿಗೆ ವಿಧಾನಮಂಡಲ ಸಮ್ಮತಿಸುವೆ’