ಬೆಂಗಳೂರು : ಈವರೆಗೆ ರಾಜಕಾರಣಕ್ಕಾಗಿಯೇ ಗುರುತಿಸಲಾಗುತ್ತಿದ್ದ ಬಿಹಾರವನ್ನು ಆರ್ಥಿಕತೆ ಸೇರಿದಂತೆ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಯಿಂದ ಗುರುತಿಸುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ಅದರ ಭಾಗವಾಗಿ ಬಿಹಾರದ ಪ್ರಮುಖ ಬೆಳೆಯಾದ ಮಖಾನಾ ಕೃಷಿ ಮತ್ತು ಆಹಾರ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲು ಬೆಂಗಳೂರಿನಲ್ಲಿ ಮಖಾನಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಿಳಿಸಿದರು.
ಬಿಹಾರ ಸರ್ಕಾರದಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಮಖಾನಾ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಸಾಮ್ರಾಟ್ ಚೌಧರಿ, ಬಿಹಾರವು ಶುದ್ಧ ರಾಜಕೀಯದ ರಾಜ್ಯ ಎಂದೇ ಗುರುತಿಸಲಾಗುತ್ತದೆ. ಅದನ್ನು ಅಭಿವೃದ್ಧಿ ಹೊಂದಿದ ರಾಜ್ಯ ಎಂದು ಗುರುತಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ಬಿಹಾರದ ಪ್ರಮುಖ ಬೆಳೆಯಾದ ಮಖಾನಾವನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ಪರಿಚಯಿಸಲು ಮತ್ತು ಇಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಮಖಾನಾ ಮಹೋತ್ಸವ ಆಯೋಜಿಸಲಾಗಿದೆ ಎಂದರು.
ಉತ್ತರ ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಮಖಾನಾ ಮತ್ತು ಅದರ ಆಹಾರ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲೂ ಬೇಡಿಕೆ ಸೃಷ್ಟಿಸಲು ಬೆಂಗಳೂರು ಉತ್ತಮ ನಗರವಾಗಿದ್ದು, ಇಲ್ಲಿ ಕಾರ್ಯಕ್ರಮ ಮಾಡಿದರೆ ತಮಿಳುನಾಡು, ಕೇರಳ ಸೇರಿದಂತೆ ಮತ್ತಿತರ ರಾಜ್ಯಗಳಿಗೂ ಅದು ತಲುಪಲಿದೆ ಎಂಬುದು ನಮ್ಮ ಉದ್ದೇಶವಾಗಿತ್ತು. ಅದಕ್ಕೆ ಪೂರಕವಾಗಿ ಬೆಳವಣಿಗೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಖಾನಾ ಮಹೋತ್ಸವ ಮಾಡಲು ಪ್ರೇರಣೆ ನೀಡಿದೆ ಎಂದು ಹೇಳಿದರು.
ಬಿಹಾರ ಕೃಷಿ ಮತ್ತು ಆರೋಗ್ಯ ಇಲಾಖೆಗಳ ಸಚಿವ ಮಂಗಲ್ ಪಾಂಡೆ, ಬಿಹಾರದ ಒಂದು ಉತ್ಪನ್ನವನ್ನು ಹೊರ ರಾಜ್ಯಗಳಿಗೆ ಪರಿಚಯಿಸುವ ಉದ್ದೇಶದೊಂದಿಗೆ ಮಖಾನಾ ಮಹೋತ್ಸವ ಮಾಡಲಾಗಿದೆ ಎಂದರು.
ಬಿಹಾರ ಕೃಷಿ ಇಲಾಖೆ ಕಾರ್ಯದರ್ಶಿ ಸಂಜಯ್ ಕುಮಾರ್ ಅಗರ್‌ವಾಲ್ ಇದ್ದರು.