ಬೆಂಗಳೂರು : ವರ್ಷದ ಕೊನೆಯ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ಗವಿಗಂಗಾಧರೇಶ್ವರ, ದೊಡ್ಡಗಣಪತಿ ಸೇರಿ ಪ್ರಮುಖ ದೇವಾಲಯಗಳು ಬಂದ್ ಬಂದಾಗಿದ್ದವು. ಕೆಲ ದೇವಸ್ಥಾನಗಳು ಬೆಳಗ್ಗೆಯಿಂದ, ಮತ್ತೆ ಕೆಲವು ದೇಗುಲಗಳನ್ನು ಸಂಜೆ ನಂತರ ಬಂದ್ ಮಾಡಲಾಗಿತ್ತು.
ನಗರದ ಗವಿಗಂಗಾಧರೇಶ್ವರ ದೇವಸ್ಥಾನವನ್ನು ಬೆಳಗ್ಗೆ 11 ಗಂಟೆಗೆ ಬಂದ್ ಮಾಡಲಾಯಿತು. ದರ್ಬಾಬಂಧನವನ್ನು ಮಾಡಿ ಗ್ರಹಣದ ಛಾಯೆ ದೇವರನ್ನು ತಲುಪದಂತೆ ಮಾಡಲಾಯಿತು. ಬನಶಂಕರಿ ದೇವಸ್ಥಾನದಲ್ಲಿ ಎಂದಿನಂತೆ ದಿನನಿತ್ಯದ ಪೂಜೆ, ಅನ್ನಸಂತರ್ಪಣೆ ನಡೆದು ಸಂಜೆ 6 ಗಂಟೆಗೆ ದೇವಸ್ಥಾನವನ್ನು ಬಂದ್ ಮಾಡಲಾಯಿತು. ಕಾಡು ಮಲ್ಲೇಶ್ವರ ದೇವಸ್ಥಾನ ಸಂಜೆ 7 ಗಂಟೆಗೆ ಬಂದ್ ಮಾಡಲಾಗಿತ್ತು. ಸೋಮವಾರ 9 ಗಂಟೆಗೆ ಶಾಂತಿ ಹೋಮ ಇಲ್ಲಿ ನಡೆಯಲಿದೆ. ಗ್ರಹಣ ಬಂದಿರುವ ಕುಂಭರಾಶಿಯವರು ಅಕ್ಕಿ, ಉದ್ದು ದಾನ ಮಾಡುವಂತೆ ದೇವಸ್ಥಾನದಲ್ಲಿ ಫಲಕ ಹಾಕಲಾಗಿತ್ತು. ಮಲ್ಲೇಶ್ವರದ ಪ್ರಸಿದ್ಧ ಗಂಗಮ್ಮ ದೇವಾಲಯ ಸಂಜೆ 7 ಗಂಟೆಗೆ, ಮೆಜೆಸ್ಟಿಕ್ನಲ್ಲಿನ ಅಣ್ಣಮ್ಮ ದೇವಾಲಯ ರಾತ್ರಿ 8ಕ್ಕೆ ಬಂದ್ ಆದವು. ಬಸವನಗುಡಿ ದೊಡ್ಡಗಣಪತಿ ದೇವಸ್ಥಾನವನ್ನು ಮಧ್ಯಾಹ್ನ 1.30ಕ್ಕೆ ಬಂದ್ ಮಾಡಲಾಗಿತ್ತು.
ಇಂದು ವಿಶೇಷ ಪೂಜೆ:
ಎಲ್ಲ ದೇವಸ್ಥಾನಗಳನ್ನು ಗ್ರಹಣದ ಬಳಿಕ ತೆರೆದು ಶುದ್ಧೀಕರಣ ಮಾಡಿ ಸ್ವಾಮಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಮಾಡಲಾಗುವುದು. ಸೋಮವಾರ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅನುವುಮಾಡಿಕೊಡಲಾಗುತ್ತಿದೆ.
ಜಲಕಂಟಕ:
ಗವಿಗಂಗಾಧರೇಶ್ವರ ದೇವಸ್ಥಾನದ ಸೋಮಸುಂದರ ದೀಕ್ಷಿತ್ ಮಾತನಾಡಿ, ಈ ದೀರ್ಘಾವಧಿ ಖಗ್ರಾಸ ಚಂದ್ರಗ್ರಹಣದಿಂದ ಜಲಕಂಟಕ ಅಂದರೆ ನೀರಿನ ಹೆಚ್ಚಳದಿಂದ ಆಗುವ ತೊಂದರೆ ಹೆಚ್ಚುವ ಸಾಧ್ಯತೆ ಇದೆ. ಜತೆಗೆ ಯುದ್ಧ ಇನ್ನೂ ಹೆಚ್ಚಾಗಬಹುದು ಎಂದಿದ್ದಾರೆ.
ಇದು 50 ವರ್ಷದ ಬಳಿಕ ಬಂದಿರುವ ದೀರ್ಘಾವಧಿ ಮೂರೂವರೆ ಗಂಟೆ ಸಂಭವಿಸುವ ಗ್ರಹಣ. ಭಾದ್ರಪದ ಮಾಸದ ಪೌರ್ಣಮಿಯ ದಿನ ಈ ಗ್ರಹಣ ಬಂದಿರುವುದು ವಿಶೇಷ. ಇದೇ ತಿಂಗಳಲ್ಲಿ ಸೂರ್ಯಗ್ರಹಣವೂ ಇದ್ದು, ಎರಡು ಗ್ರಹಣ ಸಂಭವಿಸಲಿದೆ.
ಸೋಮವಾರ ಬೆಳಗ್ಗೆ 7ಗಂಟೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಹಾನೈವೇದ್ಯ ನೆರವೇರಿಸಲಾಗುವುದು.. ಕುಂಭ ರಾಶಿಯ ಮೇಲೆ ಗ್ರಹಣ ಬಂದಿರುವುದರಿಂದ ಆ ರಾಶಿಯಲ್ಲಿ ಜನಿಸಿದ ಜನ ದೇವರಲ್ಲಿ ಪ್ರಾರ್ಥಿಸಬೇಕಿದೆ ಎಂದರು.
ಟೌನ್ ಹಾಲ್ ಎದುರು ಆಹಾರ ಸೇವನೆ:
ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ಗ್ರಹಣದ ಕುರಿತ ಮೂಢನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ರಾತ್ರಿ 10.30 ಗಂಟೆಗೆ ಟೌನ್ ಹಾಲ್ ಬಳಿ ಹಲವರು ಸೇರಿ ಆಹಾರ ಸೇವನೆ ಮಾಡಿದರು. ವಿಜ್ಞಾನದೆಡೆಗೆ ನಮ್ಮ ನಡಿಗೆ ಘೋಷಣೆ ಅಡಿ ಗ್ರಹಣದ ಕುರಿತು ವೈಜ್ಞಾನಿಕ ಉಪನ್ಯಾಸ ನಡೆಸಿದರು. ಬಳಿಕ ಸಮೋಸಾ, ಹಣ್ಣುಹಂಪಲು ತಿಂಡಿ ತಿನಿಸು ಸೇವನೆ ಮಾಡಿದರು.