ಬೆಂಗಳೂರು ಮೆಟ್ರೋ ರೈಲು ನಿಗಮ ದರ ‘ಅಧ್ಯಯನ’ಕ್ಕೆ ₹26 ಲಕ್ಷ ವೆಚ್ಚ ಮಾಡಿರುವುದು ಬೆಳಕಿಗೆ

KannadaprabhaNewsNetwork | Updated : Apr 05 2025, 08:44 AM IST

ಸಾರಾಂಶ

ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಯಾಣಿಕ ದರ ಪರಿಷ್ಕೃತಗೊಳಿಸಲು ಬಿಎಂಆರ್‌ಸಿಎಲ್‌ ರಚಿಸಿದ್ದ ಸಮಿತಿ ವಿದೇಶ ಅಧ್ಯಯನ ಪ್ರವಾಸಕ್ಕೆ ₹26 ಲಕ್ಷ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.

 ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಯಾಣಿಕ ದರ ಪರಿಷ್ಕೃತಗೊಳಿಸಲು ಬಿಎಂಆರ್‌ಸಿಎಲ್‌ ರಚಿಸಿದ್ದ ಸಮಿತಿ ವಿದೇಶ ಅಧ್ಯಯನ ಪ್ರವಾಸಕ್ಕೆ ₹26 ಲಕ್ಷ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.

ಆರ್‌ಟಿಐ ಅರ್ಜಿಗೆ ಬಿಎಂಆರ್‌ಸಿಎಲ್‌ ನೀಡಿರುವ ಉತ್ತರದಲ್ಲಿ ಖರ್ಚಿನ ವಿವರ ನೀಡಿದೆ. ಮದ್ರಾಸ್ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರಾದ ಆರ್‌.ಥರಣಿ, ಕೇಂದ್ರ ಗೃಹ ಮತ್ತು ನಗರ ವ್ಯವಹಾರ ಸಚಿವಾಲಯದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸತೇಂದರ್‌ ಪಾಲ್‌ ಸಿಂಗ್‌ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಇ.ವಿ.ರಮಣರೆಡ್ಡಿ ಅವರು ದರ ಪರಿಷ್ಕರಣ ಸಮಿತಿಯಲ್ಲಿದ್ದರು. ಇವರ ಜತೆಗೆ ಬಿಎಂಆರ್‌ಸಿಎಲ್‌ ಸಿಬ್ಬಂದಿ ಇದ್ದರು.

ಈ ಸಮಿತಿ ದರ ಪರಿಷ್ಕರಣೆ ಸಂಬಂಧ ದೆಹಲಿ ಹಾಗೂ ಚೆನ್ನೈ ಮೆಟ್ರೋಗೆ ಭೇಟಿ ನೀಡಿದ್ದರು. ಜತೆಗೆ ಹಾಂಗ್‌ಕಾಂಗ್‌ ಮತ್ತು ಸಿಂಗಾಪುರ್‌ಗೆ ತೆರಳಿ ಅಲ್ಲಿನ ಮೆಟ್ರೋವನ್ನು ಅಧ್ಯಯನ ಮಾಡಿದ್ದರು. ಸಮಿತಿಯ ಮೂವರ ವಿದೇಶ ಪ್ರಯಾಣದ ಖರ್ಚುವೆಚ್ಚ ₹12.97 ಲಕ್ಷ ಹಾಗೂ ಬಿಎಂಆರ್‌ಸಿಎಲ್‌ ಸಿಬ್ಬಂದಿಯ ವೆಚ್ಚ ₹12.88 ಲಕ್ಷ ಖರ್ಚಾಗಿದೆ ಎಂದು ಆರ್‌ಟಿಐನಲ್ಲಿ ಬಿಎಂಆರ್‌ಸಿಎಲ್‌ ಉತ್ತರಿಸಿದೆ.

7.5 ವರ್ಷದ ಬಳಿಕ ದರ ಪರಿಷ್ಕರಣೆ ಮಾಡಲು ಮುಂದಾಗಿದ್ದ ಬಿಎಂಆರ್‌ಸಿಎಲ್‌ ವಾರ್ಷಿಕ 14.02ರಷ್ಟಂತೆ ಶೇ.105 .15 ರಷ್ಟು ದರ ಹೆಚ್ಚಿಸಲು ಪ್ರಸ್ತಾಪ ಇಟ್ಟಿತ್ತು. ದರ ಪರಿಷ್ಕರಣ ಸಮಿತಿ ವಾರ್ಷಿಕ ಶೇ.6.87 ರಂತೆ ಶೇ.55.55ರಷ್ಟು ದರ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದ್ದು ಅದನ್ನು ಅನುಷ್ಠಾನ ಮಾಡಿರುವುದಾಗಿ ಆರ್‌ಟಿಐನಲ್ಲಿ ಉತ್ತರಿಸಿದೆ.

ಮೆಟ್ರೋ ನಿಯಮ ಉಲ್ಲಂಘನೆ:6ತಿಂಗಳಲ್ಲಿ 27ಸಾವಿರ ಪ್ರಕರಣ

ಕಳೆದ ಆರು ತಿಂಗಳಲ್ಲಿ ನಮ್ಮ ಮೆಟ್ರೋದಲ್ಲಿ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ ಹಾಗೂ ಮೆಟ್ರೋ ನಿಯಮ ಉಲ್ಲಂಘನೆ ಮಾಡಿದ 27 ಸಾವಿರ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 2024 ರಿಂದ 2025ರ ಮಾರ್ಚ್ ನಡುವೆ ಕಳೆದ ಆರು ತಿಂಗಳ ಅವಧಿಯಲ್ಲಿ ಮೆಟ್ರೋದ ಭದ್ರತಾ ದಳವು ನಡೆಸಿದ ಭದ್ರತಾ ತಪಾಸಣೆಯ ವೇಳೆ ಈ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಮೊಬೈಲ್‌ನಲ್ಲಿ ಜೋರಾಗಿ ಮ್ಯೂಸಿಕ್‌ ಹಾಕಿದ 11,922 ಪ್ರಕರಣ, ಅಂಗವಿಕಲರು, ಗರ್ಭಿಣಿಯರು, ಹಿರಿಯ ನಾಗರಿಕರಿಗೆ ಆಸನ ನೀಡದಿದ್ದಕ್ಕಾಗಿ 14,162 ಪ್ರಕರಣ, ಮೆಟ್ರೋದಲ್ಲಿ ಆಹಾರ ಸೇವಿಸಿದ್ದಕ್ಕಾಗಿ 554 ಹಾಗೂ ದೊಡ್ಡ ಗಾತ್ರದ ಲಗೇಜ್ ಸಾಗಿಸಿದ್ದಕ್ಕೆ 474 ಪ್ರಕರಣಗಳು ದಾಖಲಾಗಿವೆ.

ಈ ಉಲ್ಲಂಘನೆಗೆ ಯಾವುದೇ ದಂಡವನ್ನು ವಿಧಿಸಲಾಗಿಲ್ಲ. ಆದರೆ, ದುರ್ವರ್ತನೆ ತೋರಿದ ಪ್ರಯಾಣಿಕರಿಗೆ ಭದ್ರತಾ ದಳ ಕಠಿಣ ಎಚ್ಚರಿಕೆ ನೀಡಿದೆ. ಸುಗಮ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಮಾರ್ಗಸೂಚಿ ಪಾಲಿಸಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸುವುದಾಗಿ ಬಿಎಂಆರ್‌ಸಿಎಲ್‌ ಎಚ್ಚರಿಕೆ ನೀಡಿದೆ.

Share this article