ಪಹಲ್ಗಾಂಗೆ ಮೋದಿ ಯಾಕೆ ಹೋಗಲಿಲ್ಲ? : ಸಂತೋಷ್ ಲಾಡ್‌

ಸಾರಾಂಶ

  ಸಚಿವ ಲಾಡ್ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿ ಪಹಲ್ಗಾಂನ ಒಟ್ಟಾರೆ ಬೆಳವಣಿಗೆ ಬಗ್ಗೆ ಮಾತನಾಡಿದ್ದು ಹೀಗೆ.

ಮಂಜುನಾಥ್ ನಾಗಲೀಕರ್‌

  ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ದಾಳಿ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದಲ್ಲಿ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಇಬ್ಬರು ಕರ್ನಾಟಕದ ಪ್ರವಾಸಿಗರು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಇಬ್ಬರ ಮೃತದೇಹ, ಕುಟುಂಬಸ್ಥರು ಹಾಗೂ ರಾಜ್ಯದ ಇತರ ಪ್ರವಾಸಿಗರನ್ನು ಕರೆತರಲು ರಾಜ್ಯ ಸರ್ಕಾರ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ನಿಯೋಜಿಸಿತ್ತು. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಲಾಡ್ ಅವರು ತಮ್ಮದೇ ಸ್ವಂತ ಹಣದಲ್ಲಿ ಮೃತ ದೇಹಗಳ ಜತೆಗೆ ಇತರ ಪ್ರವಾಸಿಗರನ್ನು ಕರೆತಂದಿದ್ದಾರೆ. ಇದರ ಬೆನ್ನಲ್ಲೇ ಲಾಡ್ ಅವರು ಕೇಂದ್ರದ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಲಾಡ್ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿ ಒಟ್ಟಾರೆ ಬೆಳವಣಿಗೆ ಬಗ್ಗೆ ಮಾತನಾಡಿದ್ದು ಹೀಗೆ.

ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತರಾದವರ ಪಾರ್ಥಿವ ಶರೀರಗಳನ್ನು ರಾಜ್ಯಕ್ಕೆ ತರಲು ಮತ್ತು ಕನ್ನಡಿಗರರನ್ನು ಸುರಕ್ಷಿತವಾಗಿ ಕರೆತರಲು ಕಾಶ್ಮೀರಕ್ಕೆ ತೆರಳಿದ್ದೀರಲ್ಲ?

ಘಟನೆ ನಡೆದ ಮರುದಿನ ಬೆಳಗ್ಗೆ ಕಾಶ್ಮೀರಕ್ಕೆ ತೆರಳಿದ್ದೆ. ದಾಳಿಯಲ್ಲಿ ಮೃತಪಟ್ಟವರ ಮೃತದೇಹಗಳು ಮತ್ತು ಕುಟುಂಬದವರು ಇದ್ದ ಆಸ್ಪತ್ರೆಗೆ ನೇರವಾಗಿ ನಾವು ತೆರಳಿದೆವು. ಅಲ್ಲಿ ಅತ್ಯಂತ ದುಃಖಕರ, ಆತಂಕ, ಭಯದ ವಾತಾವರಣ ಇತ್ತು. ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಅದನ್ನು ನೋಡಿ ನನಗೂ ಅತೀವ ನೋವು, ದುಃಖದ ಜೊತೆಗೆ ಭಯವಾಯಿತು. ಬೇರೆ ಬೇರೆ ರಾಜ್ಯಗಳ ಜನರೂ ಇದ್ದರು. ನಮ್ಮವರಿಗಾಗಿ ಹುಡುಕಾಡಿದೆವು. ಪಾರ್ಥಿವ ಶರೀರಗಳನ್ನು ಅವರವರ ಊರಿಗೆ ಕಳುಹಿಸಿಕೊಡುವುದು ನಮ್ಮ ಮೊದಲ ಆದ್ಯತೆಯಾಗಿತ್ತು.

ದಾಳಿಯಲ್ಲಿ ಮೃತಪಟ್ಟವರ ಕುಟುಂಬದವರೊಂದಿಗೆ ಕಾಶ್ಮೀರದಲ್ಲಿ ಮಾತನಾಡಿದಾಗ ಅವರು ಏನೆಲ್ಲ ಹಂಚಿಕೊಂಡರು?

ಅನೇಕರೊಂದಿಗೆ ಮಾತನಾಡಿದ್ದೇನೆ. ಅದೇ ವಿಚಾರ (ಹಿಂದೂಗಳನ್ನು ಗುರಿಯಾಗಿಸಿ ದಾಳಿ) ಹಂಚಿಕೊಂಡರು. ಪಹಲ್ಗಾಂನಲ್ಲಿ ನಡೆದ ದಾಳಿ ನಮ್ಮ ದೇಶದ ಮೇಲೆ ನಡೆದ ದಾಳಿ. ಇದೊಂದು ಅತ್ಯಂತ ಘೋರ ದುರ್ಘಟನೆ. ಅಲ್ಲಿ ಸುಮಾರು 2 ಸಾವಿರ ಪ್ರವಾಸಿಗರಿದ್ದರು. ಅಷ್ಟೂ ಜನರನ್ನು ಸ್ಥಳೀಯರೇ ರಕ್ಷಣೆ ಮಾಡಿದ್ದಾರೆ. ಪುಟ್ಟ ಮಕ್ಕಳನ್ನು ಅಪ್ಪಿಕೊಂಡು ಸುರಕ್ಷಿತವಾಗಿ ಕೆಳ ಕರೆತಂದಿದ್ದಾರೆ. ಹಲವರನ್ನು ಹೆಗಲ ಮೇಲೆ, ಕುದುರೆ ಮೇಲೆ ಕೂರಿಸಿಕೊಂಡು ಕರೆ ತಂದಿದ್ದಾರೆ. ಮಿಲಿಟರಿಯವರಾಗಲಿ, ಯಾವುದೇ ಪಡೆಗಳಾಗಲಿ ಬೈಸರನ್‌ ತಲುಪಲು 2 ತಾಸು ಬೇಕಾಗುತ್ತದೆ ಎಂದು ಅಲ್ಲಿನವರು ಹೇಳಿದರು. ಘಟನೆ ನಂತರ ಚೈನ್, ಪರ್ಸ್‌ಗಳು ಕಳ್ಳತನವಾಗಿಲ್ಲ. ಪ್ರವಾಸಿಗರು ಸುರಕ್ಷಿತವಾಗಿ ತೆರಳಲು ಸ್ಥಳೀಯರೇ ಉಚಿತವಾಗಿ ಟ್ಯಾಕ್ಸಿ ಮಾಡಿಕೊಟ್ಟಿದ್ದಾರೆ. ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟು ಊಟ ನೀಡಿದ್ದಾರೆ. ಈ ವಿಚಾರಗಳನ್ನು ಅನೇಕರು ನಮ್ಮೊಂದಿಗೆ ಹಂಚಿಕೊಂಡರು. ಈ ವಿಚಾರಗಳು ಜನರಿಗೆ ಗೊತ್ತಾಗಬೇಕು.

ಉಗ್ರರ ದಾಳಿಗೆ ಭದ್ರತಾ ವೈಫಲ್ಯ ಕಾರಣ ಎಂದಿದ್ದೀರಲ್ಲ ಯಾಕೆ?

ಅಲ್ಲಿ ಭದ್ರತಾ ವೈಫಲ್ಯವಾಗಿದೆ. ಏಕೆಂದರೆ, ಬೈಸರನ್‌ನಲ್ಲಿ ನೀಲಿ ಡ್ರೆಸ್ ಹಾಕಿರುವ ಒಬ್ಬನೇ ಒಬ್ಬ ಗಾರ್ಡ್ ಆಗಲಿ, ವಾಚ್‌ಮ್ಯಾನ್ ಆಗಲಿ ಇರಲಿಲ್ಲ. ತಪಾಸಣೆ ಇರಲಿಲ್ಲ ಎನ್ನುವ ಅಂಶಗಳನ್ನು ಪ್ರವಾಸಿಗರು, ಜನರು ನನ್ನೊಂದಿಗೆ ಹಂಚಿಕೊಂಡರು. ಶ್ರೀನಗರ ಸೇರಿ ಕಾಶ್ಮೀರದೆಲ್ಲೆಡೆ ಭದ್ರತಾ ಪಡೆಗಳಿಂದ ವ್ಯಾಪಕ ತಪಾಸಣೆ ಮಾಡಲಾಗುತ್ತದೆ. ಇಂದಿನ ಕಾಲದಲ್ಲಿ ಡ್ರೋನ್ ಕ್ಯಾಮೆರಾ, ವ್ಯಕ್ತಿಗಳ ಗುರುತು ಪತ್ತೆ ಮಾಡಲು ಆಧಾರ್ ಕಾರ್ಡ್ ಇವೆ. ಫೇಸ್‌ ರೆಕಗ್ನಿಷನ್‌ ಕ್ಯಾಮೆರಾ, ಸಿಸಿ ಕ್ಯಾಮೆರಾ ಸೇರಿ ಎಲ್ಲಾ ರೀತಿಯ ತಂತ್ರಜ್ಞಾನ ಇದೆ. ಇಷ್ಟೆಲ್ಲಾ ತಂತ್ರಜ್ಞಾನ, ವ್ಯವಸ್ಥೆ ಇದ್ದರೂ ಅವರು (ಉಗ್ರರು) ಅಲ್ಲಿಗೆ ಹೇಗೆ ಹೋದರು? ಎನ್ನುವುದೇ ಪ್ರಶ್ನೆ. ಇದು ಭದ್ರತಾ ವೈಫಲ್ಯವಲ್ಲದೆ ಮತ್ತೇನು?

ಉಗ್ರರ ದಾಳಿ ವಿಚಾರದಲ್ಲೂ ನಿಮ್ಮ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆಯಂತೆ?

ನಮ್ಮ ಮನೆಯ ಕಾಂಪೌಂಡ್ ಒಳಗೆ ಯಾರಾದರೂ ಅತಿಕ್ರಮ ಪ್ರವೇಶ ಮಾಡಿದರೆ ಮನೆಯ ಭದ್ರತೆಗೆ ಇರುವ ಸೆಕ್ಯುರಿಟಿ ಗಾರ್ಡ್ ಬಳಿ ಕೇಳುತ್ತೇವೆ. ಅದೇ ರೀತಿ ಉಗ್ರರ ದಾಳಿಯಾದಾಗ ಭದ್ರತೆಯ ಹೊಣೆ ಹೊತ್ತವರನ್ನು ಕೇಳದೆ ಮತ್ತ್ಯಾರನ್ನು ಕೇಳಬೇಕು? ಭದ್ರತೆ ಯಾರ ಜವಾಬ್ದಾರಿ? ಈ ಪ್ರಶ್ನೆ ಬಿಟ್ಟು ಬೇರೇನು ಮಾತಾನಾಡಬೇಕು? ಇದರಲ್ಲಿ ನಾವೇನು ರಾಜಕೀಯ ಮಾಡುತ್ತಿದ್ದೇವೆ? ಉಗ್ರರು ಅಲ್ಲಿಗೆ ಹೇಗೆ ಬಂದರು? ಹೇಗೆ ಹೊಡೆದರು? ಅಲ್ಲಿಂದ ಹೇಗೆ ಹೋದರು? ಎಂಬುದನ್ನು ಕೇಳಬಾರದೇ? ಎರಡು ತಾಸುವರೆಗೆ ಭದ್ರತಾ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಲು ಆಗಲಿಲ್ಲ ಏಕೆ ಎಂಬುದನ್ನು ಕೇಳಬಾರದೇ? ನಿಮಗೆ (ಗೃಹ ಸಚಿವರು) ಹತ್ತಾರು ಭದ್ರತಾ ಸಿಬ್ಬಂದಿ ಇದ್ದಾರೆ. ಪ್ರವಾಸಿ ಸ್ಥಳದಲ್ಲಿ 2000 ಜನರಿದ್ದಾಗ ಒಬ್ಬ ವಾಚ್‌ಮ್ಯಾನ್ ಕೂಡ ನೇಮಿಸಲು ಆಗಲಿಲ್ಲವೇ? ಎಂದು ಮಹಿಳೆಯೊಬ್ಬರು ಗೃಹ ಸಚಿವರನ್ನೇ ಪ್ರಶ್ನಿಸಿದ್ದಾರೆ. ನಮ್ಮ ಪ್ರಶ್ನೆ ಕೂಡ ಅದೇ ಆಗಿದೆ. ಆದರೆ, ಈ ವಿಚಾರವನ್ನು ಯಾರೂ ಚರ್ಚೆ ಮಾಡುತ್ತಿಲ್ಲ. ಮೂಲ ಪ್ರಶ್ನೆ ಬಿಟ್ಟು ಅದನ್ನು ಮುಚ್ಚಿ ಹಾಕಲು ಬೇರೆ ಮಾತನಾಡಿದರೆ ನಾವು ತಾನೇ ಏನು ಮಾಡಲು ಸಾಧ್ಯ? ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ದೇಶದ ಸ್ಟುಡಿಯೋಗಳು ನೆರೇಷನ್‌ ಸೆಟ್ ಮಾಡುತ್ತಿವೆ. ಬಿಜೆಪಿಯವರು ಅದನ್ನೇ ಮಾತನಾಡುತ್ತಿದ್ದಾರೆ.

ಅಂದರೆ, ಭಯೋತ್ಪಾದಕ ದಾಳಿಗೆ ಕಾರಣರಾದವರ ಕುರಿತು ಬಿಜೆಪಿ ರಾಜಕೀಯ ಮಾಡುತ್ತಿದೆ?

ಘಟನೆ ವೇಳೆ ವಿದೇಶದಲ್ಲಿದ್ದ ಪ್ರಧಾನಿಯವರು ಭಾರತಕ್ಕೆ ಮರಳಿದರೂ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿಲ್ಲ. ಸರ್ವ ಪಕ್ಷಗಳ ಸಭೆಯಲ್ಲಿ ಭಾಗವಹಿಸಲಿಲ್ಲ. ನೇರವಾಗಿ ಬಿಹಾರಕ್ಕೆ ತೆರಳಿ ಭಾಷಣ ಮಾಡಿದರು. ಸಂತಾಪ ಸೂಚಿಸಿದ್ದೂ ಕಾಣಿಸಿಲ್ಲ. ಶೋಕಾಚರಣೆ ಆಚರಿಸಲಿಲ್ಲ. ಐಪಿಎಲ್ ಮ್ಯಾಚ್‌ಗಳು, ನೃತ್ಯಗಳು ಎಂದಿನಂತೆ ನಡೆದವು. ಇದನ್ನು ಪ್ರಶ್ನಿಸುವವರ ವೈಯಕ್ತಿಕ ಜೀವನದ ವಿಚಾರಗಳನ್ನು ಎಳೆದು ತರಲಾಗುತ್ತದೆ. ಫೋಟೋಗಳನ್ನು ತಿರುಚಿ, ಜೋಡಿಸಿ ತೇಜೋವಧೆ ಮಾಡಲಾಗುತ್ತದೆ.

ಉಗ್ರ ದಾಳಿ ಹಿಂದಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಲು ಕೇಂದ್ರ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆಯಲ್ಲ?

ದೇಶದ ಭದ್ರತೆ, ಉಗ್ರರ ವಿರುದ್ಧದ ಕಾರ್ಯಾಚರಣೆ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಪರವಾಗಿ ಇರುತ್ತೇವೆ. ಗಟ್ಟಿಯಾಗಿ ಬೆಂಬಲಿಸುತ್ತೇವೆ.

ಭಯೋತ್ಪಾದನೆಯನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವೇ?

ಸಾಕಷ್ಟು ಭದ್ರತೆ ಹೊಂದಿರುವ ಅಮೆರಿಕದ ಅವಳಿ ಕಟ್ಟಡದ ಮೇಲೂ ಉಗ್ರರ ದಾಳಿ ನಡೆದಿದೆ. ಭಯೋತ್ಪಾದನೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಎಂದರೆ ಸರ್ಕಾರಗಳು, ಮಿಲಿಟರಿ, ಪೊಲೀಸರು ಪರಸ್ಪರ ಸಂಯೋಜನೆಯಲ್ಲಿ ಕೆಲಸ ಮಾಡಬೇಕು. ಇಂತಹ ಘಟನೆಗಳು ಎಲ್ಲಾ ಸರ್ಕಾರಗಳಲ್ಲೂ ಸಂಭವಿಸಿವೆ. ಸಂಸತ್ ಭವನದ ಮೇಲೆ ದಾಳಿ ನಡೆದಾಗ ಅಂದಿನ ಪ್ರಧಾನಿ ಮಾತನಾಡಿದ್ದರು. ಆದರೆ, ಪಹಲ್ಗಾಂನಲ್ಲಿ ದಾಳಿ ಬಳಿಕ ಪ್ರಧಾನಿ ಮೋದಿ ಮಾತನಾಡಿಲ್ಲ. ಸತ್ಯ ಮಾತನಾಡಲು ಹಿಂಜರಿಕೆ ಏಕೆ?

ಎಲ್ಲೇ ದುರ್ಘಟನೆಗಳು, ಅನಾಹುತಗಳು ಸಂಭವಿಸಿದಾಗ ಕನ್ನಡಿಗರನ್ನು ರಾಜ್ಯಕ್ಕೆ ಕರೆತರಲು, ಸಮನ್ವಯ ಸಾಧಿಸಲು ನಿಮ್ಮನ್ನೇ ಯಾಕೆ ಕಳುಹಿಸಲಾಗುತ್ತದೆ?

ಈ ವಿಚಾರದಲ್ಲಿ ನಾನು ಅದೃಷ್ಟವಂತ. ಬೇರೆಯವರಿಗೆ ಆ ಕೆಲಸ ವಹಿಸಿದ್ದರೆ ಅವರು ಕೂಡ ನನ್ನಂತೆಯೇ ಅಥವಾ ನನಗಿಂತ ಉತ್ತಮವಾಗಿ ನಿಭಾಯಿಸುತ್ತಿದ್ದರು ಎನಿಸುತ್ತದೆ. ಮುಖ್ಯಮಂತ್ರಿಯವರು ನನಗೆ ಜವಾಬ್ದಾರಿ ವಹಿಸಿದಾಗ ಮಾನವೀಯತೆ, ಜವಾಬ್ದಾರಿಯೊಂದಿಗೆ ಕೆಲಸ ಮಾಡಿದ್ದೇನೆ. ಸರ್ಕಾರಕ್ಕೆ, ಮುಖ್ಯಮಂತ್ರಿಯವರಿಗೆ ಹಾಗೂ ರಾಜ್ಯದ ಜನತೆಯ ಪ್ರೀತಿ, ವಿಶ್ವಾಸಕ್ಕೆ ಅಭಾರಿಯಾಗಿರುತ್ತೇನೆ.

ಪಾರ್ಥಿವ ಶರೀರ ಸಾಗಣೆ, ಜನರನ್ನು ಅಲ್ಲಿಂದ ಕರೆತರಲು ಸ್ವಂತ ಹಣ ಖರ್ಚು ಮಾಡಿದ್ದೀರಿ. ಸರ್ಕಾರದಲ್ಲಿ ಹಣವಿಲ್ಲವೇ?

ತ್ವರಿತವಾಗಿ ಕೆಲಸ ಮುಗಿಸಬೇಕಾಗಿತ್ತು. ರಾತ್ರಿ 3 ಗಂಟೆ ವೇಳೆ ಯಾರಲ್ಲಿ ಹಣ ಕೇಳಬೇಕು? ಹೀಗಾಗಿ, ನಾನೇ ಹಣ ಖರ್ಚು ಮಾಡಿದೆ. ಆ ಹಣವನ್ನು ಸರ್ಕಾರದಿಂದ ಕೇಳುವುದಿಲ್ಲ. ಪಡೆಯುವುದೂ ಇಲ್ಲ. ಮಾನವೀಯತೆ ಮೇಲೆ ಕೆಲಸ ಮಾಡಿದ್ದೇನೆ.

ಉಗ್ರರು ಪ್ರವಾಸಿಗರ ಧರ್ಮ ಕೇಳಿ ಗುಂಡು ಹಾರಿಸಿಲ್ಲ ಎಂದು ಪಕ್ಷದ ಕೆಲವು ನಾಯಕರು ವಾದ ಮಾಡುತ್ತಿದ್ದಾರಲ್ವಾ?

ಅವರು ಯಾವ ಸಂದರ್ಭ, ಸನ್ನಿವೇಶದಲ್ಲಿ ಅಂತಹ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆ ವಿಚಾರವಾಗಿ ನಾನು ಮಾತನಾಡುವುದಿಲ್ಲ.

ಪ್ರಧಾನಿ ಮೋದಿಯವರು ಮೌನಿಯಾಗಿದ್ದಾರೆ ಎಂದಿದ್ದು ಯಾಕೆ?

ಅಧಿಕಾರಕ್ಕೆ ಬರುವ ಮೊದಲು ಮೋದಿಯವರು ಆರ್ಥಿಕತೆ, ಇಂಧನ ಬೆಲೆ ಏರಿಕೆ, ಕರೆನ್ಸಿ, ಜಿಡಿಪಿ, ಭ್ರಷ್ಟಾಚಾರ, ಅಂತಾರಾಷ್ಟ್ರೀಯ ಸಂಬಂಧಗಳು, ಭಯೋತ್ಪಾದನೆ ನಿರ್ಮೂಲನೆ, ಉದ್ಯೋಗ, ಕೈಗಾರಿಕೆ, ಆಂತರಿಕ ಭದ್ರತೆ, ಜಗತ್ತಿನ ಆಗು-ಹೋಗುಗಳು ಸೇರಿ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದರು. ಆ ಎಲ್ಲಾ ವಿಚಾರಗಳು ಈಗ ಏನಾದವು? ಅದನ್ನೆಲ್ಲ ಮರೆತು ಹೋದರೇ? ಅಧಿಕಾರಕ್ಕೆ ಬರುವ ಮೊದಲು ಆಡಿದ ಮಾತುಗಳಂತೆ ಈಗ ನಡೆದುಕೊಳ್ಳುತ್ತಿಲ್ಲವೇಕೇ? ಹೋಗಲಿ ಅಧಿಕಾರದಲ್ಲಿರುವ 11 ವರ್ಷಗಳ ಅವಧಿಯಲ್ಲಿ ಆಡಿರುವ ಮಾತುಗಳ ಬಗ್ಗೆ ಬದ್ಧತೆ ಇದೆಯೇ?

ಪುಲ್ವಾಮಾ ದಾಳಿ ಸೇರಿ ಕಾಶ್ಮೀರದಲ್ಲಿ ಹಿಂದೆ ನಡೆದ ಘಟನೆಗಳಿಂದ ಕೇಂದ್ರ ಎಚ್ಚೆತ್ತುಕೊಂಡಿರಲಿಲ್ಲವೇ?

ಪುಲ್ವಾಮಾ ಘಟನೆ ಬಳಿಕ ಏನೆಲ್ಲಾ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಯಾರೂ ಹೇಳುತ್ತಲೂ ಇಲ್ಲ, ಚರ್ಚಿಸುತ್ತಲೂ ಇಲ್ಲ. ಆಗಲೂ ದೊಡ್ಡ ಭದ್ರತಾ ಲೋಪವಾಗಿತ್ತು. ಆ ಘಟನೆಯಿಂದ ಎಚ್ಚೆತ್ತು ನಾಗರಿಕರು ಮತ್ತು ಸೈನಿಕರ ಸುರಕ್ಷತೆಗಾಗಿ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿತ್ತು. ಪಹಲ್ಗಾಂನಲ್ಲಿ ಎಡವಿರುವ ಕಾರಣ 26 ಅಮಾಯಕ ಜೀವಗಳು ಬಲಿಯಾಗಿವೆ.

ದಾಳಿ ಬಳಿಕ ಜನರ ಗಮನ ಸೆಳೆಯಲು ಬಿಜೆಪಿಗರು ಯತ್ನಿಸುತ್ತಿದ್ದಾರೆಂಬ ಆರೋಪ ಕಾಂಗ್ರೆಸ್‌ ಪಾಳೆಯದಿಂದ ಬಂದಿದೆ?

2014ರ ನಂತರ ದೇಶದಲ್ಲಿ 14 ಭಯೋತ್ಪಾದಕ ದಾಳಿಗಳು ನಡೆದಿವೆ. ಈ ಘಟನೆ ಜಾಗತಿಕ ಭಯೋತ್ಪಾದನೆಯ ಭಾಗ. ಆದರೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದವರು ಬೇರೆ ಬೇರೆ ವಿಷಯಗಳನ್ನು ತರುತ್ತಿದ್ದಾರೆ. ದಾಳಿ ಘಟನೆಯನ್ನು ಜನರ ಮನಸ್ಸಿನಿಂದ ಮರೆಸಲು ರಾಹುಲ್ ಗಾಂಧಿ ಮತ್ತು ಹಿಂಡನ್‌ಬರ್ಗ್ ವರದಿ ವಿಚಾರ ಸೃಷ್ಟಿಸಿದರು. ಜನರ ಆಕ್ರೋಶದಿಂದ ಬಚಾವಾಗಲು ಏನೆಲ್ಲಾ ತಂತ್ರಗಾರಿಕೆ ಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ.

Share this article