ಮೋದಿಯಿಂದ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿ : ಶಾ

Published : Jun 21, 2025, 09:21 AM IST
Union Home Minister Amit Shah (Photo/ANI)

ಸಾರಾಂಶ

ಪ್ರಧಾನಿ ಮೋದಿ ಅವ ರ ಮಹತ್ವಾಕಾಂಕ್ಷೆಯಂತೆ ದೇಶದ ಆರೋಗ್ಯ ಮತ್ತು ವೈದ್ಯಕೀಯ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಪರಿವರ್ತನೆ ಮಾಡಿದೆ.

  ಬೆಂಗಳೂರು :  ಪ್ರಧಾನಿ ಮೋದಿ ಅವ ರ ಮಹತ್ವಾಕಾಂಕ್ಷೆಯಂತೆ ದೇಶದ ಆರೋಗ್ಯ ಮತ್ತು ವೈದ್ಯಕೀಯ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಪರಿವರ್ತನೆ ಮಾಡಿದೆ. ಕಳೆದೊಂದು ದಶಕದಲ್ಲಿ ವೈದ್ಯಕೀಯ ಕಾಲೇಜುಗಳು, ಪದವಿ ಮತ್ತು ಸ್ನಾತಕೋತ್ತರ ಪದವಿ ವೈದ್ಯಕೀಯ ಸೀಟುಗಳ ಸಂಖ್ಯೆ ದುಪ್ಪಟ್ಟಾಗಿದೆ. 60 ಕೋಟಿ ಜನರಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ 5 ಲಕ್ಷ ರು. ವರೆಗೆ ಉಚಿತ ಆರೋಗ್ಯ ಸೌಲಭ್ಯ ಸಿಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನವು ಬೆಂಗಳೂರಿನ ನಗರೂರಿನ ಬಿಜಿಎಸ್ ಎಂಸಿಎಚ್ ಕ್ಯಾಂಪಸ್‌ನಲ್ಲಿ ಆರಂಭಿಸಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯ, ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಶುಕ್ರವಾರ ಡಾ.ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಉದ್ಘಾಟಿಸಿ ಮಾತನಾಡಿದರು.

ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ನಮ್ಮ ದೇಶದ ದೊಡ್ಡ ಸಮಸ್ಯೆ ಜನಸಾಮಾನ್ಯರು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಗಳು, ಅದಕ್ಕಿಂತ ದೊಡ್ಡ ಸಮಸ್ಯೆ ಅವರಿಂದ ಸೂಕ್ತ ಚಿಕಿತ್ಸಾ ವೆಚ್ಚ ಭರಿಸಲಾಗದೆ ಇರುವುದು ಎಂಬುದನ್ನು ಮನಗಂಡಿದ್ದರು. ಹಾಗಾಗಿ ತಾವು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ ಈ ಸಮಸ್ಯೆಗಳಿಗೆ ಪರಿಹಾರವಾಗಿ ಪ್ರಧಾನಮಂತ್ರಿ ಆಯುಷ್ಮಾನ್‌ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಿದರು ಎಂದರು.

ವೈದ್ಯ ಕಾಲೇಜು, ಸೀಟುಗಳ ಸಂಖ್ಯೆ ಡಬಲ್‌:

2014ರ ಮೊದಲು ದೇಶದಲ್ಲಿ ಕೇಲವ ಏಳು ಏಮ್ಸ್ ಗಳಿದ್ದವು. ಈಗ ಅವುಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಅದೇ ರೀತಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 387 ರಿಂದ 780ಕ್ಕೆ, ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆ 51 ಸಾವಿರದಿಂದ 1.18 ಲಕ್ಷ, ಸ್ನಾಹತೋತ್ತರ ವೈದ್ಯಕೀಯ ಸೀಟುಗಳು 31 ಸಾವಿರದಿಂದ 74 ಸಾವಿರಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.

-ಬಾಕ್ಸ್‌-

ಶಾ ದೊಡ್ಡ ಶಕ್ತಿ, ಗಟ್ಟಿ

ನಾಯಕ: ಚುಂಚಶ್ರೀ

ಅಮಿತ್ ಶಾ ಅವರು ದೊಡ್ಡ ಶಕ್ತಿ. ಮರ ಹಣ್ಣು, ಹೂವು ನೀಡಬೇಕಾದರೆ ಮರದ ಬೇರುಗಳು ಆಳವಾಗಿರಬೇಕಾಗುತ್ತದೆ. ಹಾಗೆಯೇ ಅಮಿತ್ ಶಾ ಗಟ್ಟಿತನದ ನಾಯಕರು ಎಂದು ಇದೇ ವೇಳೆ ಡಾ.ನಿರ್ಮಲಾನಂದ ಸ್ವಾಮೀಜಿ ಬಣ್ಣಿಸಿದರು. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಶ್ರೇಷ್ಠವಾದದ್ದು. ಭಾರತ ಉಳಿದರೆ ಅಳಿಯುವರಾರು, ಭಾರತ ಅಳಿದರೆ ಉಳಿಯುವವರು ಯಾರು ಎಂಬ ಮಾತು ಅಕ್ಷರಶಃ ಸತ್ಯ. ನಮ್ಮಲ್ಲಿರುವ ಶತಮಾನಗಳ ಜ್ಞಾನ ಸಂಪತ್ತು ಮತ್ತು ಪರಂಪರೆ ಉಳಿಸಬೇಕಾಗಿದೆ ಎಂದರು.

-ಬಾಕ್ಸ್‌-

ಶಾ ಮಾರ್ಗದರ್ಶನದಲ್ಲಿ

ಇಲಾಖೆ ನಿರ್ವಹಣೆ: ಎಚ್ಡಿಕೆ

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ದೇಶದ ಅಭಿವೃದ್ಧಿಗಾಗಿ ನಾವೆಲ್ಲರೂ ಕಠಿಣ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೇವೆ. ಅಮಿತ್‌ ಶಾ ನನ್ನ ಹಿತೈಷಿಗಳು. ಅವರ ಸಲಹೆ, ಮಾರ್ಗದರ್ಶನದಲ್ಲಿ ನಮ್ಮ ಇಲಾಖೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇನೆ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

=====

ಕರ್ನಾಟಕದ ಎಲ್ಲ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಒಂದೊಂದಾಗಿ ಪರಿಹರಿಸಲಿದೆ ಎಂದ ಅವರು, ಆದಿಚುಂಚನಗಿರಿ ಮಠವು ರಾಜ್ಯಕ್ಕೆ ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಕೊಡುಗೆ ನೀಡಿದೆ. ಲಕ್ಷಾಂತರ ಬಡ ಮಕ್ಕಳ ಶಿಕ್ಷಣಕ್ಕೆ ಸೇವೆ ಮಾಡಿದೆ ಎಂದು ಶ್ಲಾಘಿಸಿದರು.

==

ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ರಾಜ್ ಕೋಠ್‌ನ ಅರ್ಶ ವಿದ್ಯಾ ಮಂದಿರದ ಪರಮಾತ್ಮಾನಂದ ಸ್ವಾಮೀಜಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ, ಸಂಸದ ಡಾ.ಕೆ. ಸುಧಾಕರ್, ಶಾಸಕರಾದ ಎಸ್.ಆರ್. ವಿಶ್ವನಾಥ್, ಎನ್. ಶ್ರೀನಿವಾಸ್, ಟ್ರಸ್ಟಿ ಡಿ. ದೇವರಾಜು, ಕುಲಪತಿ ಡಾ. ಎಂ.ಎ.ಶಂಕರ್, ಕುಲಸಚಿವ ಡಾ. ಸಿ.ಕೆ. ಸುಬ್ಬರಾಯ, ಪ್ರಾಂಶುಪಾಲ ಡಾ.ಕೆ.ಎಸ್. ಗಂಗಾಧರ, ಆಸ್ಪತ್ರೆಯ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ವಿ.ಆರ್. ಮತ್ತಿತರರು ಉಪಸ್ಥಿತರಿದ್ದರು.

 

PREV
Read more Articles on

Recommended Stories

ಭಾರತಕ್ಕೆ ಆಗಸ್ಟಲ್ಲೇ ಸ್ವಾತಂತ್ರ್ಯ ಸಿಕ್ಕಿದ್ದೇಕೆ?
ಭಾರತೀಯ ಪೌರತ್ವಕ್ಕೂ ಮೊದಲೇ ಸೋನಿಯಾಗೆ ಮತಹಕ್ಕು