ವಾಹನ ಸವಾರರೇ ಇತ್ತ ಗಮನಿಸಿ : ಹೊಸವರ್ಷಾಚರಣೆ ನಡೆಯುವ ಹಿನ್ನೆಲೆ ನಗರದ ಸಂಚಾರದಲ್ಲಿ ಭಾರಿ ಬದಲಾವಣೆ

KannadaprabhaNewsNetwork |  
Published : Dec 29, 2024, 01:16 AM ISTUpdated : Dec 29, 2024, 04:46 AM IST
bengaluru traffic.jpg

ಸಾರಾಂಶ

ನಗರದ ವಿವಿಧೆಡೆ  ಸಂಚಾರ ಪೊಲೀಸರು ಡಿ.31 ಮತ್ತು ಜ.1ರ ಮುಂಜಾನೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ ಸೇರಿ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ವಾಹನ ನಿಲುಗಡೆ ನಿಷೇಧ ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ.

  ಬೆಂಗಳೂರು : ನಗರದ ವಿವಿಧೆಡೆ ಹೊಸವರ್ಷಾಚರಣೆ ನಡೆಯುವ ಹಿನ್ನೆಲೆಯಲ್ಲಿ ವಾಹನ ಚಾಲಕರು ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸರು ಡಿ.31 ಮತ್ತು ಜ.1ರ ಮುಂಜಾನೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ ಸೇರಿ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ವಾಹನ ನಿಲುಗಡೆ ನಿಷೇಧ ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ.

ಡಿ.31ರ ರಾತ್ರಿ 10 ಗಂಟೆಯಿಂದ ಜ.1ರ ಮುಂಜಾನೆ 2 ರಿಂದ 3 ಗಂಟೆವರೆಗೆ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತ, ಕಾವೇರಿ ಎಂಪೋರಿಯಂ ಜಂಕ್ಷನ್, ಎಸ್‌ಬಿಐ ವೃತ್ತ, ಸೇರಿ ಹಲವು ರಸ್ತೆಗಳಲ್ಲಿ ಪೊಲೀಸ್‌ ವಾಹನಗಳು, ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ಕೋರಮಂಗಲ ವೈ.ಡಿ. ಮಠ ರಸ್ತೆ, ಬ್ಯಾಟರಾಯನಪುರ ಸರ್ವಿಸ್ ರಸ್ತೆ, ಓರಿಯನ್ ಮಾಲ್ ಮುಂದೆ ಸೇರಿ ಇತರ ಕಡೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಮೇಲ್ಸೇತುವೆಗಳಿಗೆ ನಿರ್ಬಂಧ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮೇಲ್ಸೇತುವೆ ಹೊರತುಪಡಿಸಿ ನಗರದ ಉಳಿದ ಎಲ್ಲಾ ಮೇಲ್ಸೇತುವೆಗಳಲ್ಲಿ ಡಿ.31ರಂದು ರಾತ್ರಿ 11 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಅತಿವೇಗ, ನಿರ್ಲಕ್ಷ್ಯದ ಚಾಲನೆ ಹಾಗೂ ಬೈಕ್‌ ವ್ಹೀಲಿಂಗ್‌ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಕಂಡುಬಂದಲ್ಲಿ 112 ಪೊಲೀಸ್‌ ಸಹಾಯವಾಣಿಗೆ ಮಾಹಿತಿ ನೀಡಬೇಕು. ರಾತ್ರಿ ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್‌ ಮಾಡಿದರೆ, ಅಂತಹ ವಾಹನಗಳನ್ನು ಟೋಯಿಂಗ್‌ ಮಾಡುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ನಾಕಾಬಂಧಿ ತಪಾಸಣೆ:

ಡಿ.31ರ ರಾತ್ರಿ ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಮದ್ಯ ಸೇವಿಸಿ ಸಿಕ್ಕಿಬಿದ್ದಲ್ಲಿ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ಚಾಲನಾ ಪರವಾನಗಿ(ಡಿಎಲ್‌) ಜಪ್ತಿ ಮಾಡಿ ಅಮಾನತಿಗೆ ಸಾರಿಗೆ ಇಲಾಖೆಗೆ ಕಳುಹಿಸಲಾಗುವುದು. ಹೀಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂಧಿ ಹಾಕಿ ವಾಹನಗಳ ತಪಾಸಣೆ ನಡೆಸುವುದಾಗಿ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌.ಅನುಚೇತ್‌ ತಿಳಿಸಿದ್ದಾರೆ.

ಆಟೋ-ಕ್ಯಾಬ್‌ಗಳಲ್ಲಿ ಹೆಚ್ಚು ಹಣ ಪಡೆದರೆ ಕ್ರಮ: ಎಚ್ಚರ

ನಗರದ ಎಂ.ಜಿ.ರಸ್ತೆ, ಬ್ರಿಗೇಟ್‌ ರಸ್ತೆ, ಮಹದೇವಪುರ, ಕೋರಮಂಗಲ, ಮಾಲ್‌ ಆಫ್‌ ಏಸಿಯಾ, ಒರಾಯನ್‌ ಮಾಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಒಲಾ, ಉಬರ್‌, ಆಟೋ ಸೇರಿದಂತೆ ಇತರೆ ಸಾರಿಗೆಗಳಲ್ಲಿ ಪಿಕಪ್‌ ಹಾಗೂ ಡ್ರಾಪ್‌ಗೆ ಅವಕಾಶ ನೀಡಲಾಗಿದೆ. ಕ್ಯಾಬ್‌ ಹಾಗೂ ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇರಿಸಿದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ