-ವಿಕಾಸ್ ಪುತ್ತೂರು, ಲೇಖಕರು ಮತ್ತು ಬಿಜೆಪಿ ಮುಖಂಡರು
ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಾಡಹಬ್ಬ ಈ ಬಾರಿ ತೀವ್ರ ವಿವಾದವಾಗಿ ಮಾರ್ಪಟ್ಟಿದೆ. ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪಡೆದ ಕರ್ನಾಟಕದ ಮುಸ್ಲಿಂ ಮಹಿಳೆ ಹಾಗೂ ಪ್ರಗತಿಪರರೊಂದಿಗೆ ಒಡನಾಟ ಹೊಂದಿರುವ ಬಾನು ಮುಷ್ತಾಕ್ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಸರ್ಕಾರ ಆಯ್ಕೆ ಮಾಡಿತು. ಇದರ ಬೆನ್ನಲ್ಲೇ, ಮುಷ್ತಾಕ್‌ರ ಸಾಮಾಜಿಕ ನಿಲುವುಗಳು, ಅವರ ಬರಹ ಮತ್ತು ಭಾಷಣಗಳಲ್ಲಿರುವ ನಮ್ಮ ನೆಲದ ಸಂಸ್ಕೃತಿಯನ್ನು ಅಣಕಿಸುವಂತಹ ವೈರುಧ್ಯಗಳು ಮುನ್ನೆಲೆಗೆ ಬಂದವು. ‘ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿಬಿಟ್ಟಿರಿ… ಅರಿಶಿನ ಕುಂಕುಮದಿಂದ ಆಕೆಯನ್ನು ಲೇಪಿತಳನ್ನಾಗಿ ಮಾಡಿ ಮಂದಾಸನದಲ್ಲಿ ಕೂರಿಸಿಬಿಟ್ಟಿರಿ… ನಾನು ಹೇಗೆ ಇನ್ವಾಲ್ವ್ ಆಗಬೇಕು?’ ಎಂದು ದುರ್ಗೆಯ ಸ್ವರೂಪಿಣಿಯಾಗಿರುವ ಕನ್ನಡಾಂಬೆ ಭುವನೇಶ್ವರಿಯ ಕುರಿತು ಅವರು ಈ ಹಿಂದೆ ಮಾಡಿದ ಭಾಷಣ ತೀವ್ರ ಟೀಕೆಗೆ ಒಳಪಟ್ಟಿತು. ಮುಷ್ತಾಕ್ ಅವರು ಮುಸ್ಲಿಂ ಆಗಿರುವ ಕಾರಣ, ಹಿಂದೂ ಆಚರಣೆಯು ತಮ್ಮನ್ನು ಪ್ರತ್ಯೇಕಿಸುತ್ತದೆ ಎಂಬುದು ಅವರ ಮಾತಿನ ತಾತ್ಪರ್ಯ.
ದಸರಾ ಕೂಡ ಅದೇ ಸನಾತನ ಸಂಸ್ಕೃತಿಯ ಭಾಗವಾಗಿರುವಾಗ, ವಿರೋಧಾಭಾಸ ಹೊಂದಿರುವ ಮುಷ್ತಾಕ್ ದಸರಾವನ್ನು ಉದ್ಘಾಟಿಸುವುದು ಸೂಕ್ತವಲ್ಲವೆಂಬ ಜನಾಭಿಪ್ರಾಯ ರೂಪುಗೊಂಡಿತು. ಮೈಸೂರು ರಾಜಮನೆತನದವರನ್ನೂ ಒಳಗೊಂಡಂತೆ ರಾಜ್ಯದ ಜನ ಸರ್ಕಾರದ ನಿರ್ಣಯವನ್ನು ವಿರೋಧಿಸಿದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನೂ ಏರಿತು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಸರ್ಕಾರ ವಿತಂಡವಾದಕ್ಕಿಳಿಯಿತು. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯೇ ಅಲ್ಲ ಎಂದು ಉಪಮುಖ್ಯಮಂತ್ರಿಗಳು ಗುಟುರು ಹಾಕಿದರೆ, ‘ದಸರಾ ಒಂದು ಸಾಂಸ್ಕೃತಿಕ ಉತ್ಸವ, ನಾಡಹಬ್ಬ. ಇದರಲ್ಲಿ ಇಂತಹ ಧರ್ಮದವರೇ ಭಾಗವಹಿಸಬೇಕು ಎಂದೇನಿಲ್ಲ. ಹೈದರ್ ಅಲಿ, ಟಿಪ್ಪು ಸುಲ್ತಾನ್ ದಸರಾ ಆಚರಣೆ ಮಾಡಿರಲಿಲ್ಲವೇ? ಇದು ಸೆಕ್ಯುಲರ್ ಹಬ್ಬ’ ಎಂದು ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಮೈಸೂರು ದಸರಾ ಸೆಕ್ಯುಲರ್ ಹಬ್ಬವೇ?
ಗಂಗ, ಚಾಲುಕ್ಯ, ಚೋಳ, ಹೊಯ್ಸಳ, ವಿಜಯನಗರ.. ಹೀಗೆ ಸಾಲು ಸಾಲು ಹಿಂದೂ ಸಾಮ್ರಾಜ್ಯಗಳು ಮೈಸೂರನ್ನು ಆಳಿವೆ. 1565ರಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಳ್ಳುವವರೆಗೂ ಅವರ ಸಾಮಂತ ರಾಜರಾಗಿ ಯದುವಂಶಸ್ಥರು ಮೈಸೂರಿನ ಆಡಳಿತ ನಡೆಸಿದ್ದರು. ತದನಂತರ ಅದೇ ಯದುವಂಶದ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಸ್ವತಂತ್ರ ಮೈಸೂರು ರಾಜ್ಯವು, 1610ರಲ್ಲಿ ಶ್ರೀರಂಗಪಟ್ಟವನ್ನು ತನ್ನ ರಾಜಧಾನಿಯಾಗಿ ಘೋಷಿಸಿ, ದಸರಾಕ್ಕೆ ನಾಡಹಬ್ಬದ ಮಾನ್ಯತೆ ನೀಡಿತು. ಹಿಂದಿನ ಸಾಮ್ರಾಜ್ಯಗಳ ಭೌಗೋಳಿಕ ವ್ಯಾಪ್ತಿ ವಿಶಾಲವಾಗಿದ್ದರಿಂದ ದಸರಾಗೆ ಆ ಕಾಲಾವಧಿಯಲ್ಲಿ ನಾಡಹಬ್ಬದ ಸ್ಥಾನಮಾನ ಸಿಕ್ಕಿರಲಿಲ್ಲ, ಆದರೆ ಆಚರಣಾ ಶೈಲಿಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಇದು ಅಂದಿನ ವಿದೇಶಿ ರಾಯಭಾರಿಗಳಾಗಿದ್ದ ಪರ್ಶಿಯಾದ ಅಬ್ದುರ್ ರಜಾಕ್ ಹಾಗೂ ಇಟಲಿಯ ನಿಕೊಲೊʼಡೆ ಕೊಂಟಿ ಅವರ ಬರಹಗಳಲ್ಲಿಯೂ ದಾಖಲಾಗಿದೆ.
ದಸರಾ ಒಂದು ಅಪ್ಪಟ ಹಿಂದೂ ಧಾರ್ಮಿಕ ಆಚರಣೆ. ಹಿಂದೂ ಪಂಚಾಂಗದಂತೆ ಪ್ರತಿ ಆಶ್ವಯುಜ ಮಾಸದ ಶುಕ್ಲಪಕ್ಷದ ಮೊದಲ 9 ದಿನ ದುರ್ಗೆಯ ನವರೂಪಗಳನ್ನು ಆರಾಧಿಸಿದರೆ, 10ನೇ ದಿನ ಮಹಿಷಾಸುರನನ್ನು ವಧೆ ಮಾಡಿ, ಧರ್ಮಕ್ಕೆ ವಿಜಯಪ್ರಾಪ್ತಿಯಾದ ಸ್ಮರಣಾರ್ಥ ವಿಜಯ ದಶಮಿಯನ್ನು ಆಚರಿಸಲಾಗುತ್ತದೆ. ಇಷ್ಟಕ್ಕೂ ಮಹಿಷಾಸುರನೆಂಬ ಅಸುರ ಇದ್ದದ್ದು ಮೈಸೂರಿನಲ್ಲಿಯೇ. ಮಹಿಷಾಸುರನ ಊರು ಎಂಬುದೇ ಮುಂದೆ ಮಹಿಷೂರು ಆಗಿ ನಂತರ ಮೈಸೂರು ಆಗಿ ಪ್ರಚಲಿತಕ್ಕೆ ಬಂದಿದೆ. ಮಹಿಷಾಸುರನ ಉಪಟಳದಿಂದ ಬೇಸತ್ತ ದೇವತೆಗಳು ಪಾರ್ವತಿದೇವಿಯಲ್ಲಿ ಅಳಲನ್ನು ತೋಡಿಕೊಂಡಾಗ, ಆಕೆ ಚಾಮುಂಡೇಶ್ವರಿ ರೂಪವನ್ನು ತಾಳಿ ಮಹಿಷಾಸುರನನ್ನು ಇಂದಿನ ಚಾಮುಂಡಿ ಬೆಟ್ಟದಲ್ಲಿ ವಧಿಸುತ್ತಾಳೆ. ಮುಂದೆ ಆ ಸ್ಥಳದಲ್ಲಿಯೇ ಚಾಮುಂಡೇಶ್ವರಿಯ ದೇವಸ್ಥಾನವೂ ನಿರ್ಮಾಣವಾಗುತ್ತದೆ. ಈ ಬಗ್ಗೆ ದೇವಿ ಭಾಗವತದಲ್ಲಿ ಸ್ಪಷ್ಟ ಉಲ್ಲೇಖವಿದ್ದು, ರಾಜ್ಯ ಸರ್ಕಾರದ ಅಧಿಕೃತ ಜಾಲತಾಣದಲ್ಲಿಯೂ ಈ ಇತಿಹಾಸವನ್ನು ಅನುಮೋದಿಸಲಾಗಿದೆ. ಹೀಗಿರುವಾಗ ಹಿಂದೂ ಧರ್ಮವನ್ನು ನಂಬದ ಹಿಂದೂಯೇತರರಿಗೂ ಹಿಂದೂ ದೇವತೆಗಳನ್ನಷ್ಟೇ ಆರಾಧಿಸುವ ಈ ಆಚರಣೆಗೂ ಸಂಬಂಧವಿರಲು ಸಾಧ್ಯವೇ?
ಹೈದರಾಲಿ, ಟಿಪ್ಪು ದಸರಾ ಆಚರಿಸಿದ್ದೇಕೆ?
ಇನ್ನು ಹೈದರ್ ಅಲಿ, ಟಿಪ್ಪು ಸಮಯದಲ್ಲಿ ದಸರಾ ಆಚರಿಸಲಿಲ್ಲವೇ ಎಂಬ ಮುಖ್ಯಮಂತ್ರಿಗಳ ಪ್ರಶ್ನೆಯೇ ದಿಕ್ಕು ತಪ್ಪಿಸುವಂಥದ್ದು. ಏಕೆಂದರೆ ಮೈಸೂರು ರಾಜ್ಯದ ಸುದೀರ್ಘ ಇತಿಹಾಸದಲ್ಲಿ ಅವರಿಬ್ಬರನ್ನೂ ಒಳಗೊಂಡಂತೆ ಮುಸಲ್ಮಾನ ಆಡಳಿತವಿದ್ದಿದ್ದು 1761-99ರವರೆಗೆ ಮಾತ್ರ, ಅಂದರೆ ಕೇವಲ 39 ವರ್ಷಗಳು. ಆ ಕಾಲಘಟ್ಟದಲ್ಲಿ ಮುಸಲ್ಮಾನ ಸುಲ್ತಾನರ ಹಾವಳಿ ಉತ್ತರ ಭಾಗದಲ್ಲಿ ಬಿರುಸಿನಿಂದಿತ್ತು. ಮೈಸೂರು ರಾಜ್ಯದಲ್ಲಿ ಆ ಪ್ರಮಾಣದಲ್ಲಿನ್ನೂ ಪಸರಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಮೈಸೂರು ರಾಜ್ಯದಲ್ಲಿ ಮುಸಲ್ಮಾನರ ಜನಸಂಖ್ಯೆ ಕ್ಷಿಪ್ರವಾಗಿ ಏರಿಕೆಯಾಗಿರಲಿಲ್ಲ. ಹಿಂದೂಗಳ ಜನಸಂಖ್ಯೆಯೇ ಬಹುಪಾಲು ಇದ್ದಿದ್ದರಿಂದ ಹೈದರ್ ಅಥವಾ ಟಿಪ್ಪುವಿಗೆ ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ಏಕಾಏಕಿ ದಾಳಿ ಮಾಡಲು ಸಂಪೂರ್ಣವಾಗಿ ಸಾಧ್ಯವಾಗಲಿಲ್ಲ. ಟಿಪ್ಪು ದಸರಾಗೆ ಸಂಬಂಧಿಸಿದಂತೆ ಸಾಕಷ್ಟು ಕಿರುಕುಳ ಕೊಟ್ಟಿರುವುದಕ್ಕೆ ಇತಿಹಾಸದಲ್ಲಿ ಸಾಕ್ಷ್ಯಗಳಿವೆ. ಅದೇನೇ ಇದ್ದರೂ, ಹೈದರ್-ಟಿಪ್ಪು ಕಾಲದಲ್ಲಿ ದಸರಾ ಆಚರಿಸಲಾಗುತ್ತಿತ್ತು ಎಂಬುದನ್ನೇ ಕವಚವನ್ನಾಗಿಸಿ ದಸರಾದ ಧಾರ್ಮಿಕ ಮೌಲ್ಯವನ್ನು ಹಾಳುಗೆಡವಿ ಅದಕ್ಕೆ ಸೆಕ್ಯುಲರ್ ಪಟ್ಟ ಕಟ್ಟಲು ಸರ್ಕಾರ ಮುಂದಾಗಿರುವುದು ನಾಡದ್ರೋಹವಲ್ಲದೇ ಮತ್ತೇನು?
ಹೈಜಾಕ್ ಆದ ಕೇರಳದ ಓಣಂ ಹಬ್ಬ
ಹಿಂದೆ ಕೇರಳವನ್ನು ಮಹಾಬಲಿ ಚಕ್ರವರ್ತಿ ಆಳುತ್ತಿದ್ದ. ಆತ ಇಂದ್ರನನ್ನು ಜಯಿಸಿ ಸಮಸ್ತ ಭೂಮಂಡಲವನ್ನು ಆಕ್ರಮಣಗೈಯುತ್ತಾನೆ. ಇದರಿಂದ ವಿಚಲಿತನಾದ ಇಂದ್ರ ವಿಷ್ಣುವಿನ ಮೋರೆ ಹೋಗಿ ತನ್ನನ್ನು ರಕ್ಷಿಸುವಂತೆ ಕೋರಿದಾಗ, ವಾಮನನ ಅವತಾರ ತಾಳಿದ ವಿಷ್ಣು ಬಲಿಯ ಬಳಿ ತೆರಳಿ 3 ಹೆಜ್ಜೆಗಳ ಜಾಗವನ್ನು ದಾನವಾಗಿ ಕೇಳುತ್ತಾನೆ. ಬಲಿ ಒಪ್ಪಿದ ಬಳಿಕ ಬೃಹದ್ರೂಪಿಯಾದ ವಾಮನ ಮೊದಲ ಹೆಜ್ಜೆಯಲ್ಲಿ ಸ್ವರ್ಗವನ್ನು, ಎರಡನೇ ಹೆಜ್ಜೆಯಲ್ಲಿ ಭೂಮಂಡಲವನ್ನು ವ್ಯಾಪಿಸುತ್ತಾನೆ. ಮೂರನೇ ಹೆಜ್ಜೆಯಿಡಲು ಜಾಗವಿಲ್ಲದಾಗ ಬಲಿ ತನ್ನ ಶಿರವನ್ನೇ ವಾಮನನಿಗೆ ಅರ್ಪಿಸುತ್ತಾನೆ. ಬಲಿಯ ನಿಷ್ಠೆಗೆ ಮಣಿದ ವಿಷ್ಣು ವರ್ಷಕ್ಕೊಮ್ಮೆ ಭೂಮಂಡಲಕ್ಕೆ ಹಿಂದಿರುಗುವ ವರವನ್ನು ನೀಡುತ್ತಾನೆ.
ಹಿಂದೂ ಮಲ್ಯಾಳ ಪಂಚಾಂಗದ ಅನ್ವಯ ಪ್ರತಿಚಿಂಗಂ ಮಾಸದ ತಿರುಓಣಂ ನಕ್ಷತ್ರದಂದು ಬಲಿ ತನ್ನ ನೆಲಕ್ಕೆ ಆಗಮಿಸುತ್ತಾನೆ. ಆ ದಿನವನ್ನೇ ಕೇರಳದಲ್ಲಿ ಓಣಂ ಹಬ್ಬವಾಗಿ ಆಚರಿಸಲಾಗುತ್ತದೆ. ಓಣಂ ಅನ್ನು ಕೇರಳದ ಅಧಿಕೃತ ನಾಡಹಬ್ಬವೆಂದು 1961ರಲ್ಲಿ ಘೋಷಿಸಲಾಯಿತು. ಇದರ ಬೆನ್ನಲ್ಲೇ ಕುತಂತ್ರ ಪ್ರಾರಂಭಿಸಿದ ಎಡಪಂಥೀಯರು ವಾಮನನ್ನು ಶೋಷಕ ಹಾಗೂ ಬಲಿಯನ್ನು ಶೋಷಿತನೆಂಬಂತೆ ಬಿಂಬಿಸಿ, ಸಮಾಜದಲ್ಲಿನ ಎಲ್ಲಾ ಶೋಷಿತರ ವಿಜಯದ ಹಬ್ಬವಿದು ಎನ್ನುವ ರೀತಿಯಲ್ಲಿ ಬದಲಿಸಿದರು. ಓಣಂ ಕೇವಲ ಹಿಂದೂಗಳದ್ದಲ್ಲ, ಮುಸ್ಲಿಂ ಹಾಗೂ ಕ್ರೈಸ್ತರಿಗೂ ಸಂಬಂಧಿಸಿದ್ದು ಎಂದು ಸರ್ಕಾರವೇ ಪ್ರತಿಪಾದಿಸುತ್ತಾ ಬಂದಿದೆ. ಇದೆಲ್ಲದರ ಪರಿಣಾಮವಾಗಿ ಓಣಂ ತನ್ನ ಮೂಲಸ್ವರೂಪ ಕಳೆದುಕೊಂಡಿದೆ, ಮಾತ್ರವಲ್ಲ ಅದನ್ನು ಹೈಜಾಕ್ ಮಾಡಿ ಸೆಕ್ಯುಲರ್ ಪಟ್ಟ ಕಟ್ಟುವಲ್ಲಿ ಎಡಪಂಥೀಯರು ಬಹುತೇಕ ಯಶಸ್ವಿಯಾಗಿದ್ದಾರೆ.
ದಸರಾ ಓಣಂನಂತೆ ಹೈಜಾಕ್ ಆಗದಿರಲಿ
ಓಣಂನಂತೆಯೇ ದಸರಾವನ್ನೂ ಹೈಜಾಕ್ ಮಾಡಬೇಕೆನ್ನುವ ಹುನ್ನಾರ ಬಹುಕಾಲದಿಂದ ನಡೆಯುತ್ತಿದೆ. ಎಡಪಂಥೀಯರು ಮಹಿಷ ದಸರಾವೆಂಬ ಬಂಡಾಯ ದಸರಾವನ್ನು ಆಚರಿಸಲಾರಂಭಿಸಿರುವುದು, ಅದಕ್ಕೆ ಕೆಲ ಸಚಿವರು ಬೆನ್ನು ತಟ್ಟುತ್ತಿರುವುದು ಹಿಂದೂಗಳಲ್ಲಿ ಬಿರುಕು ಮೂಡಿಸುವ ಕುತಂತ್ರ. ಮೈಸೂರು ಸಂಸ್ಥಾನ ದಸರಾ ಆಚರಣೆಗೆ ನೀಡಿದ ನಾಡಹಬ್ಬದ ಮಾನ್ಯತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಸರ್ಕಾರ ಯತ್ನಿಸುತ್ತಿರುವುದು ದಸರಾ ಆಚರಣೆಗೆ ಸೆಕ್ಯುಲರ್ ಪಟ್ಟ ಕಟ್ಟುವ ಷಡ್ಯಂತ್ರ. ಈ ಹಿಂದೆ ಬರಗೂರು ರಾಮಚಂದ್ರಪ್ಪನವರು ದಸರಾ ಉದ್ಘಾಟಿಸಲು ಬಂದಾಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳುವುದಿಲ್ಲ ಎಂದು ಕ್ಯಾತೆ ತೆಗೆದಿದ್ದರು. ಹಿಂದೂ ಆಚರಣೆಗಳ ಮೇಲೆ ನಂಬಿಕೆಯಿಲ್ಲದ ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ ಮುಂತಾದವರಿಂದಲೂ ಸರ್ಕಾರ ದಸರಾವನ್ನು ಉದ್ಘಾಟಿಸಿದೆ, ಈ ಬಾರಿ ಆ ಪಟ್ಟಿಗೆ ಮುಷ್ತಾಕ್ ಹೆಸರು ಸೇರ್ಪಡೆಯಾಗಿದೆ. ಇದು ಹಿಂದೂ ನಂಬಿಕೆಗಳಿಗೆ ಘಾಸಿ ತರುವ ಪಿತೂರಿಯಷ್ಟೇ. ಮೈಸೂರು ದಸರಾ ಸುಂದರವಾಗಿಯೇ ಉಳಿಯಲಿ, ಓಣಂನಂತೆ ಹೈಜಾಕ್ ಆಗದಿರಲಿ.