;Resize=(412,232))
ಆಂಥ್ರೋಪಿಕ್ ಸಂಸ್ಥೆಯು ಮಿಥೋಸ್ ಎಂಬ ಎಐ ಟೂಲ್ ಸಿದ್ಧಪಡಿಸಿದ್ದು, ಈ ಟೂಲ್ ಓಎಸ್‌ನಲ್ಲಿ ದೋಷವನ್ನು ಸರಿಪಡಿಸುವುದಕ್ಕೂ ನೆರವಾಗುತ್ತದೆ ಮತ್ತು ದುರದೃಷ್ಟನಶಾತ್ ವ್ಯವಸ್ಥೆಯನ್ನು ಹಾಳುಗೆಡವುದಕ್ಕೂ ಸಹಾಯ ಮಾಡುತ್ತದೆ. ಹಾಗಾಗಿ ಹ್ಯಾಕರ್‌ಗಳ ಕೈಗೆ ಸಿಕ್ಕರೆ ಏನು ಗತಿ ಎಂಬ ಆತಂಕ ಉಂಟುಮಾಡಿದೆ.
ಆಂಥ್ರೋಪಿಕ್ ಕಂಪನಿಯು ಅತ್ಯಂತ ಶಕ್ತಿಶಾಲಿ ಮತ್ತು ಹೊಸ ಎಐ ಮಾಡೆಲ್ ‘ಕ್ಲೋಡ್ ಮಿಥೋಸ್’ ಸಿದ್ಧಗೊಳಿಸಿದೆ. ಅತ್ಯಂತ ಸೂಕ್ಷ್ಮ ಸಾಫ್ಟ್‌ವೇರ್ ದೋಷಗಳನ್ನೂ ಪತ್ತೆ ಹಚ್ಚುವುದು ಇದರ ಹೆಚ್ಚುಗಾರಿಕೆ. ಓಪನ್‌ಬಿಎಸ್‌ಡಿ ಎಂಬ ಓಎಸ್‌ನಲ್ಲಿ 27 ವರ್ಷಗಳಿಂದ ಅಡಗಿದ್ದ ದೋಷವನ್ನು ಇದು ಕೆಲವೇ ಗಂಟೆಯೊಳಗೆ ಪತ್ತೆ ಹಚ್ಚಿದೆ. 16 ವರ್ಷಗಳಿಂದ ತಲೆನೋವಾಗಿದ್ದ ಎಫ್‌ಎಫ್‌ಎಂಪೆಗ್ ಎಂಬ ಮೀಡಿಯಾ ಲೈಬ್ರೆರಿಯಲ್ಲಿದ್ದ ದೋಷವನ್ನೂ ಬಹುಬೇಗ ಗುರುತಿಸಿಕೊಟ್ಟಿದೆ. ಕಂಪನಿಯೇ ಹೇಳುವಂತೆ ಪ್ರಮುಖ ಓಎಸ್‌ಗಳಲ್ಲಿ ಅಡಗಿರುವ ಇಂಥಾ ಸಾವಿರಾರು ದೋಷಗಳನ್ನು ಈ ಎಐ ಬಹು ವೇಗವಾಗಿ ಪತ್ತೆ ಮಾಡಿದೆಯಂತೆ.
ಇಷ್ಟೆಲ್ಲ ಉಪಕಾರ ಮಾಡುತ್ತಿರುವ ಎಐ ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಿಲ್ಲ ಅಂತ ಇದರ ಸೃಷ್ಟಿಕರ್ತ ಆಂಥ್ರೋಪಿಕ್ ಹೇಳಿದೆ. ತನ್ನ ಪಾಲುದಾರರಾದ ಅಮೆಜಾನ್, ಆ್ಯಪಲ್, ಮೈಕ್ರೋಸಾಫ್ಟ್‌ನಂಥಾ ಸುಮಾರು 40 ಕಂಪನಿಗಳಿಗೆ ಮಾತ್ರ ಅವರ ಸಾಫ್ಟ್‌ವೇರ್‌ಗಳ ದೋಷ ಪತ್ತೆ ಹಚ್ಚುವುದಕ್ಕೆ ನೀಡಿದೆ.
ಇದು ಹ್ಯಾಕರ್‌ಗಳ ಕೈಗೆ ಸಿಕ್ಕರೆ ತದ್ವಿರುದ್ಧ ಪರಿಣಾಮ ಉಂಟು ಮಾಡಬಲ್ಲದು.
1. ಸಾಫ್ಟ್‌ವೇರ್‌ನ ಹಲವು ಕಡೆ ಇರುವ ಸೂಕ್ಷ್ಮ ದೋಷ ಪತ್ತೆ ಮಾಡಿ ಒಂದೇ ಬಾರಿ ದೊಡ್ಡ ದಾಳಿ ನಡೆಸುವ ಅಪಾಯ.
2. ಇದು ಕೆಲಸಕ್ಕಿಳಿದರೆ ವ್ಯಕ್ತಿಯಿಂದ ಕಮಾಂಡ್‌ಗೆ ಕಾಯುವ ಅಗತ್ಯವೇ ಇಲ್ಲ. ಯಾರೊಬ್ಬರ ಸಹಾಯವೂ ಇಲ್ಲದೆ ಇದು ಅನೇಕ ತಾಸು ಅಥವಾ ಒಂದಿಷ್ಟು ದಿನಗಳವರೆಗೆ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತ ಹೋಗಬಲ್ಲದು.
3. ಇದು ಎಷ್ಟು ಚಾಣಾಕ್ಷ ಅಂದರೆ ಬಹು ಬೇಗ ತಪ್ಪುಗಳು ಎಲ್ಲೆಲ್ಲಿವೆ ಅಂತ ಹುಡುಕಿ ಅದನ್ನು ಸರಿಪಡಿಸುತ್ತ ಹೋಗುತ್ತದೆ. ಇದು ಹ್ಯಾಕರ್‌ಗಳ ಕೈಗೆ ಸಿಕ್ಕಿ ಅವರು ಸೈಬರ್ ದಾಳಿ ಪ್ರಯತ್ನ ಮಾಡಿದಾಗಲೂ ಅವರು ಕೊಟ್ಟ ಕೆಲಸವನ್ನು ಕಂಪ್ಲೀಟ್ ಮಾಡಿಯೇ ತೀರುತ್ತದೆ. ಇದು ಕೆಲಸಕ್ಕಿಳಿದರೆ ಅಟ್ಯಾಕ್ ನಿಲ್ಲಿಸುವುದು ಕಷ್ಟ.
ಈ ಬಗ್ಗೆ ವಿವರ ನೀಡುವ ತಂತ್ರಜ್ಞಾನ ಪರಿಣತ ಮಧು ವೈ ಎನ್, ‘ಇತ್ತೀಚೆಗಷ್ಟೇ ಆಂಥ್ರೋಪಿಕ್ ಸಂಸ್ಥೆಯ ಉದ್ಯೋಗಿಯೊಬ್ಬನ ಅಚಾತುರ್ಯದಿಂದ ಸುಮಾರು ಮೂರು ಸಾವಿರ ಗುಪ್ತ ಫೈಲುಗಳು ಲೀಕ್ ಆಗಿದ್ದವು. ಈ ಮಿಥೋಸ್ ಬಗ್ಗೆ ಜಗತ್ತಿಗೆ ತಿಳಿದಿದ್ದೇ ಈ ಫೈಲುಗಳಿಂದ. ಅಕಸ್ಮಾತ್ ಈ ಮಾಡೆಲ್ ಕೂಡ ಇದೇ ರೀತಿ ಕೆಟ್ಟವರ ಕೈಸೇರಿದರೆ ಜಗತ್ತಿನ ಬ್ಯಾಂಕುಗಳು ಮತ್ತು ಇತರ ಸೂಕ್ಷ್ಮ ವ್ಯವಸ್ಥೆಗಳು ನೆಲಸಮವಾಗುವ ಆತಂಕವಿದೆ. ಹೀಗಾಗಿ, ಜಗತ್ತು ಈಗ ಎಚ್ಚೆತ್ತುಕೊಂಡಿದ್ದು ದೋಷಗಳನ್ನು ಸರಿಪಡಿಸುವ ಮತ್ತು ಸೆಕ್ಯುರಿಟಿ ವಾಲ್‌ಗಳನ್ನು ಬಲಪಡಿಸುವ ಕಾರ್ಯದಲ್ಲಿ ನಿರತವಾಗಿವೆ’ ಎನ್ನುತ್ತಾರೆ.
1. ಇದು ಮನುಷ್ಯನ ಸಹಾಯವಿಲ್ಲದೆ, ಹಂತ ಹಂತವಾಗಿ ಸೈಬರ್ ದಾಳಿಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ.
2. ಈಗಾಗಲೇ ಆನ್‌ಲೈನ್ ಫೋರಂ ಒಂದರಲ್ಲಿ ಕೆಲವರು ಇದನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಎನ್ನಲಾಗಿದ್ದು ಆತಂಕ ಸೃಷ್ಟಿಸಿದೆ.
3. ಒಂದು ವೇಳೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ದಾಳಿಯಾದರೆ ಮಾರ್ಕೆಟಿಂಗ್ ಮತ್ತು ಪೇಮೆಂಟ್ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಬಹುದು. ಬ್ಯಾಂಕಿಂಗ್ ವಲಯದಲ್ಲಿ ಒಂದು ಸಣ್ಣ ಸೈಬರ್ ದಾಳಿ ನಡೆದರೂ, ಅದು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡುತ್ತದೆ. ಸಂಬಳ, ಬಾಡಿಗೆ ಮತ್ತು ಇಎಂಐ ಪಾವತಿಗಳು ನಿಂತುಹೋಗಬಹುದು. ಎಟಿಎಂಗಳು ಕೆಲಸ ಮಾಡದಿರಬಹುದು ಮತ್ತು ಕಾರ್ಡ್ ಪೇಮೆಂಟ್ ನಿಲ್ಲಬಹುದು. ಇದು ಇಡೀ ದೇಶದ ಹಣಕಾಸು ವ್ಯವಸ್ಥೆಯಲ್ಲಿ ದೊಡ್ಡ ಸಂಚಲನ ಮೂಡಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಇದು ಒಳ್ಳೆಯವರ ಕೈಲಿದ್ದರೆ ಹರಿತವಾದ ಕತ್ತಿಯಂತೆ ರಕ್ಷಣೆ ನೀಡಬಲ್ಲದು, ಆದರೆ ಕೆಟ್ಟವರ ಕೈಸೇರಿದರೆ ‘ಆಟಂ ಬಾಂಬ್’ನಂತೆ ಅಪಾಯಕಾರಿಯಾಗಬಲ್ಲದು. ಇದನ್ನೇ ತಜ್ಞರು ‘Dual-use’ ತಂತ್ರಜ್ಞಾನ (ರಕ್ಷಣೆಗೂ ಸೈ, ದಾಳಿಗೂ ಸೈ) ಎಂದು ಕರೆಯುತ್ತಿದ್ದಾರೆ.
- ಮಧು ವೈ ಎನ್, ತಾಂತ್ರಿಕ ಪರಿಣಿತರು
ಹಣಕಾಸು ಸಚಿವರ ತುರ್ತು ಸಭೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಈ ಸಂಬಂಧ ಮಹತ್ವದ ಮಾತುಕತೆ ನಡೆಸಿದ್ದಾರೆ. ಎಐ ನಿರ್ಮಿತ ಅಪಾಯಗಳನ್ನೆದುರಿಸಲು ಸಜ್ಜಾಗುವಂತೆ ಕರೆ ನೀಡಿದ್ದಾರೆ. ರಕ್ಷಣೆಗೆ ಹೊಸ ವಿಧಾನಗಳನ್ನು ಕಂಡುಕೊಳ್ಳುವಂತೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ (ಐಬಿಎ)ಗೂ ಸೂಚನೆ ಕೊಟ್ಟಿದ್ದಾರೆ.