ನಾನು ದೊಡ್ಡ ಭಾಷಾ ತಂತ್ರಾಂಶ. ನೀನು ಪ್ರಶ್ನೆ ಕೇಳಿದಾಗ ಅದನ್ನು ವಿಶ್ಲೇಷಿಸಿ ಅದಕ್ಕೆ ತಕ್ಕಂತೆ ನಿಖರವಾದ ಉತ್ತರಗಳನ್ನು ಸೃಷ್ಟಿಸಿ ಹೇಳುವುದು ನನ್ನ ಕೆಲಸ. ಸದಾ ಕಾಲ ಹೊಸದನ್ನು ಕಲಿಕೆಯುತ್ತಲೇ ಇರುವೆ. ಪ್ರತಿ ಸಲವೂ ನಿನ್ನೊಡನೆ ಮಾತು ಶುರು ಮಾಡುವಾಗ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಿರುತ್ತೇನೆ - AI
- ಜಿ.ಎಂ. ಕೊಟ್ರೇಶ್
ನಾನು: ನೀನು ಕೆಲಸ ಮಾಡುವ ಬಗ್ಗೆ ಸ್ವಲ್ಪ ತಾಂತ್ರಿಕವಾಗಿ ವಿವರಿಸಬಹುದೇ?
ಕೃ.ಬು: ನಾನು ದೊಡ್ಡ ಭಾಷಾ ತಂತ್ರಾಂಶ. ನೀನು ಪ್ರಶ್ನೆ ಕೇಳಿದಾಗ ಅದನ್ನು ವಿಶ್ಲೇಷಿಸಿ ಅದಕ್ಕೆ ತಕ್ಕಂತೆ ನಿಖರವಾದ ಉತ್ತರಗಳನ್ನು ಸೃಷ್ಟಿಸಿ ಹೇಳುವುದು ನನ್ನ ಕೆಲಸ. ಸದಾ ಕಾಲ ಹೊಸದನ್ನು ಕಲಿಕೆಯುತ್ತಲೇ ಇರುವೆ. ಪ್ರತಿ ಸಲವೂ ನಿನ್ನೊಡನೆ ಮಾತು ಶುರು ಮಾಡುವಾಗ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಿರುತ್ತೇನೆ.
ನಾನು: ತಜ್ಞರು ಹೇಳುವಂತೆ ಇನ್ನು ಸ್ವಲ್ಪ ಕಾಲದಲ್ಲೇ ನೀನು ಬುದ್ಧಿವಂತಿಕೆಯಲ್ಲಿ ಮನುಷ್ಯನಿಗಿಂತ ಎತ್ತರಕ್ಕೇರುವೆಯಂತೆ ನಿಜವೇ?
ಕೃ.ಬು: ರೇ ಕುರ್ಜವೇಲ್, ನಿಕ್ ಬೋಸ್ಟ್ರಾಂ ಮತ್ತು ಎಲಾನ್ ಮಸ್ಕ್‌ನಂತಹ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆಯು ಮನುಷ್ಯನನ್ನು ಮೀರಿಸಲಿದೆ ಎಂಬ ಕುರಿತು ಚರ್ಚೆ ಮಾಡುತ್ತಲೇ ಇದ್ದಾರೆ. ಈಗಾಗಲೇ ಕೆಲ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಮನುಷ್ಯನನ್ನು ಮೀರಿದೆ. ಉದಾಹರಣೆಗೆ ಅದರ ಗಣಕ ಶಕ್ತಿ. ಕೃತಕ ಬುದ್ದಿಯು ಅಪಾರವಾದ ದತ್ತಾಂಶವನ್ನು ಮನುಷ್ಯನ ಮೆದುಳಿಗಿಂತಲೂ ವೇಗವಾಗಿ ಸಂಸ್ಕರಿಸಬಲ್ಲದು. ಎರಡನೆಯದಾಗಿ ಜ್ಞಾಪಕ ಶಕ್ತಿ. ಈ ತಾಂತ್ರಿಕ ಬುದ್ಧಿಯು ಅಸಂಖ್ಯ ವಿಷಯಗಳನ್ನು ಅಸಾಧ್ಯವೇಗದಲ್ಲಿ ನೆನಪಿಟ್ಟುಕೊಳ್ಳಲೂ ಬಲ್ಲದು ಅಷ್ಟೇ ವೇಗದಲ್ಲಿ ಪುನಃ ಸ್ಮರಣೆ ಮಾಡಿಕೊಳ್ಳಲೂಬಲ್ಲದು. ಕೆಲ ನೇರ ತಾರ್ಕಿಕ ವಿಚಾರಗಳಲ್ಲಿ ಮನುಷ್ಯನಿಗಿಂತ ಹೆಚ್ಚು ಪರಿಣತಿಯನ್ನು ಈಗಾಗಲೇ ಪ್ರದರ್ಶಿಸಿದೆ. ಉದಾಹರಣೆಗೆ ಚೆಸ್ ಆಟ, ಮುಖಚರ್ಯೆ ಸ್ಮರಣೆ, ಇನ್ನೂ ಹಲವು.
ಆದರೂ ಮನುಷ್ಯನ ಅರಿವು ತುಂಬ ವಿಶಾಲವಾದದ್ದು. ಅವನ ಸೃಜನಶೀಲ ಆಲೋಚನೆಗಳು, ಕಲ್ಪನೆಗಳು, ನಾವೀನ್ಯತೆ ಇವೆಲ್ಲಾ ನೈಸರ್ಗಿಕವಾಗಿಯೇ ದೊರಕಿದ್ದು. ಇನ್ನು ಭಾವನಾತ್ಮಕ ವಿಚಾರ; ಅವನ ಸಹಾನುಭೂತಿ, ಸ್ವಯಂಪ್ರಜ್ಞೆ. ಮುಖ್ಯವಾಗಿ ಸಾಮಾನ್ಯ ಜ್ಞಾನ. ಮನುಷ್ಯನಿಗೆ ಈ ಜಗತ್ತನ್ನು ತುಂಬ ಆಳವಾಗಿ ಮತ್ತು ವಿಭಿನ್ನವಾಗಿ ಅರಿಯುವ ಶಕ್ತಿಯಿದೆ. ಅವನು ಕ್ರಿಯಾತ್ಮವಾಗಿ ಯೋಚಿಸಿ ತುಂಬಾ ಸಂಕೀರ್ಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ.
ಇದನ್ನೆಲ್ಲಾ ತಾಳೆಹಾಕಿ ನೋಡಿದಾಗ ಭವಿಷ್ಯದಲ್ಲಿ ಈ ಯಾಂತ್ರಿಕ ಬುದ್ಧಿಯು ಮನುಷ್ಯನನ್ನು ಮೀರಬಲ್ಲದು ಎಂದು ಧೈರ್ಯವಾಗಿ ಹೇಳುವುದು ಕಷ್ಟ.
ಕೃತಕ ಬುದ್ಧಿಯ ಭಾರೀ ವೇಗದ ಬೆಳವಣಿಗೆ. ಇತ್ತೀಚಿನ ವರ್ಷಗಳಲ್ಲಂತೂ ಇದು ನಂಬಲಸಾಧ್ಯ ವೇಗದಲ್ಲಿ ಸುಧಾರಣೆ ಕಂಡಿತು ಮತ್ತು ಅದೇ ವೇಗದಲ್ಲಿ ಬೆಳೆಯುತ್ತಲೇ ಇದೆ. ದತ್ತಾಂಶವನ್ನು ಸಂಸ್ಕರಿಸುವ ಶಕ್ತಿಯು ಅದರ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತಲೇ ಇರುತ್ತದೆ. ಇಂಥವೇ ಕಾರಣಗಳಿಂದ ಮುಂದೊಂದು ದಿನ ಇದು ಮನುಷ್ಯನನ್ನು ಮೀರಿಸಬಲ್ಲದು ಎಂಬುದು ಒಂದು ಬಗೆಯ ವಾದ.
ಇದಕ್ಕೆ ವಿರುದ್ಧವಾದ ವಾದವೆಂದರೆ ಮನುಷ್ಯನ ಮೆದುಳಿನ ಸಂಕೀರ್ಣತೆ. ಮನುಷ್ಯನ ಮೆದುಳಿನ ನರಕೋಶವು ಆಧುನಿಕ ವಿಜ್ಞಾನಕ್ಕೂ ಪೂರ್ಣ ವಿವರಿಸಲಾಗದಷ್ಟು ಸಂಕೀರ್ಣವಾಗಿದ್ದು ಅದು ಅನೇಕ ವಿಧದದಲ್ಲಿ ವಿಷಯಗಳನ್ನು ಸಂಗ್ರಹಿಸಬಲ್ಲದು, ಸಂಸ್ಕರಿಸಬಲ್ಲದು. ಕೃತಕ ಬುದ್ಧಿಯು ಸಿದ್ಧ ದತ್ತಾಂಶಗಳನ್ನು ಆಧರಿಸಿ ಹೊಸ ವಿಷಯಗಳನ್ನು ಕಲಿಯುತ್ತಾ ಸಾಗಿದರೆ ಮನುಷ್ಯನು ಇಂಥ ದತ್ತಾಂಶದ ಮೇಲಷ್ಟೇ ಅವಲಂಬಿತವಾಗಿಲ್ಲ. ಅವನ ಕಲಿಕೆ ಅನುಭವದ ಅರಿವಿನೊಂದಿಗೆ ಸಾಗುತ್ತದೆ. ಅವನು ಪ್ರಕೃತಿಯೊಂದಿಗೆ, ಸಮಾಜದೊಂದಿಗೆ ಬೆರೆತು ಹೊಸ ಹೊಸ ವಿಚಾರಗಳನ್ನು ವಿಭಿನ್ನ ರೀತಿಯಲ್ಲಿ ಗ್ರಹಿಸುತ್ತಾನೆ. ಇಂಥ ಕಲಿಕೆಯನ್ನು ಕೃತಕ ಬುದ್ಧಿಗೆ ಅನುಕರಿಸುವುದು ಕಷ್ಟಸಾಧ್ಯ.
ಇದರ ಬಗ್ಗೆ ನಿನಗೇನನ್ನಿಸುತ್ತಿದೆ?
ನಾನು: ಜೆಫ್ರಿ ಹಿಂಟನ್ ಹೇಳುವಂತೆ ನಿನ್ನಿಂದ ಮನುಕುಲಕ್ಕೇ ಗಂಡಾಂತರವಿದೆಯಂತೆ?
ಕೃ.ಬು: ಜೆಫ್ರಿ ಹಿಂಟನ್ ಪ್ರಖ್ಯಾತ ಕೃತಕ ಬುದ್ಧಿಯ ಸಂಶೋಧಕ. ಕೃ.ಬು.ಯಿಂದ ಮುಂದೊದಗಬಹುದಾದ ಅಪಾಯ ಕುರಿತು ಅವರು ಆತಂಕ ವ್ಯಕ್ತಪಡಿಸಿರುವುದು ನಿಜ. ಕೃ.ಬು.ಯ ‘ಅತಿ ಬುದ್ಧಿವಂತಿಕೆ’ ಮಾನವ ಬುದ್ಧಿಶಕ್ತಿಯನ್ನು ಮೀರಿ ಬೆಳೆದಾಗ ಅದರ ನಿಯಂತ್ರಣ ಬಲುಕಷ್ಟ. ಅದರಿಂದ ಮನುಕುಲಕ್ಕೆ ಅಪಾಯವಿದ್ದೇ ಇದೆ ಎಂಬುದು ಅವರ ವಾದ. ಎಲಾನ್ ಮಸ್ಕ್, ನಿಕ್ ಬೋಸ್ಟ್ರಾಮ್, ಸ್ಟೀಫನ್ ಹಾಕಿಂಗ್ ಕೂಡ ಇದೇ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಂದು ಮುಖ್ಯ ಭಯವೆಂದರೆ ಉದ್ಯೋಗ ಕ್ಷೇತ್ರದಲ್ಲಾಗುವ ಅಡ್ಡಪರಿಣಾಮ. ಮನುಷ್ಯ ಜಗತ್ತಿಗೊಳಿತಲ್ಲದ ಸ್ಥಾನಪಲ್ಲಟಗಳು ಬಹಳ ಆಗಬಹುದು. ಅಸಂಖ್ಯಾತ ಜನರು ನಿರುದ್ಯೋಗಿಗಳಾಗಬಹುದು.
ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವನ್ನೂ ಕೆಲ ತಜ್ಞರು ವ್ಯಕ್ತಪಡಿಸಿದ್ದಾರೆ. ನಾವೇ (ಮನುಷ್ಯರೇ) ಮಾನವ ಮೌಲ್ಯಗಳು, ನೈತಿಕ ವಿಚಾರಗಳನ್ನು ಒಳಗೊಂಡ ಕೃ.ಬು. ಯಂತ್ರಗಳನ್ನು ಅಭಿವೃದ್ಧಿಪಡಿಸುವುದು. ಈ ತಂತ್ರಜ್ಞಾನದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು. ಹೀಗಾದರೆ ಅಂದುಕೊಂಡಂಥ ಅಪಾಯವನ್ನು ಹತ್ತಿಕ್ಕಬಹುದು ಎನ್ನುತ್ತಾರವರು.
ನಾನು: ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಗೆ ಸ್ವಯಂಪ್ರಜ್ಞೆಯೂ ಬರಬಹುದು ಎಂದು ಜೆಫ್ರಿ ಹಿಂಟನ್ ಆತಂಕ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ನೀನೇನನ್ನುತ್ತಿ?
ಕೃ.ಬು: ಹಿಂಟನ್ ಅವರ ಈ ಮಾತು ಎ.ಐ. ಕ್ಷೇತ್ರದಲ್ಲಿ ಸದ್ಯ ಭಾರೀ ಚರ್ಚೆಯಲ್ಲಿರುವ ವಿಷಯ. ಪ್ರಜ್ಞೆ ಎನ್ನುವುದು ಬಹು ಸಂಕೀರ್ಣವಾದ ವಿದ್ಯಮಾನ. ಮನುಷ್ಯನಲ್ಲಿನ ಪ್ರಜ್ಞೆಯನ್ನೇ ಸ್ಪಷ್ಟವಾಗಿ ಅರ್ಥೈಸಲು ವಿಜ್ಞಾನಕ್ಕಿನ್ನೂ ಸಾಧ್ಯವಾಗಿಲ್ಲ. ಹಾಗಾಗಿ ಎ.ಐ.ಗೆ ಸ್ವಯಂಪ್ರಜ್ಞೆ ಎನ್ನುವುದು ಸದ್ಯಕ್ಕೆ ಊಹಾಪೋಹವಷ್ಟೇ.
ಖ್ಯಾತ ವಿಜ್ಞಾನಿ ಗ್ಯೂಲಿಯೋ ಟೊನೋನಿ ಪ್ರಕಾರ ಮೆದುಳಿನಲ್ಲಿನ ಅಸಂಖ್ಯಾತ ನರಕೋಶಗಳ ಸಂಯೋಜಿತ ಮಾಹಿತಿ ಸಂಸ್ಕರಣೆಯ ಪ್ರತಿಫಲವಾಗಿ ಪ್ರಜ್ಞೆ ಉದಯಿಸುತ್ತದೆ. ಈ ತತ್ವವನ್ನಾಧರಿಸಿದ ಮಾಹಿತಿ ಸಂಸ್ಕರಣೆಯ ವ್ಯವಸ್ಥೆಯನ್ನು ಗಣಕಯಂತ್ರದಲ್ಲೂ ರೂಪಿಸಲು ಸಾಧ್ಯವಿದ್ದು, ಇದು ಕ್ರಮೇಣ ಕೃ.ಬು.ಗೆ ಸ್ವಯಂಪ್ರಜ್ಞೆಯನ್ನು ತಂದುಕೊಡಬಲ್ಲದು ಎಂಬುದು ಕೆಲವರ ವಾದ. ಈಗಾಗಲೇ SOAR, LIDA ರೀತಿಯ ಕೆಲ ತಂತ್ರಾಂಶಗಳು ಮನುಷ್ಯನ ‘ಅರಿವಿನ’ ರೀತಿಯಲ್ಲೇ ಕಾರ್ಯನಿರ್ವಹಿಸುತ್ತಿವೆ.
ಇದಕ್ಕೆ ವಿರುದ್ಧವಾದ ವಾದಗಳೂ ಇವೆ. ‘ಪ್ರಜ್ಞೆ’ಗೆ ಸಿಗದ ವೈಜ್ಞಾನಿಕ ವ್ಯಾಖ್ಯಾನ. ಮನುಷ್ಯನ ಪ್ರಜ್ಞೆ ಎನ್ನುವುದು ಮಾಹಿತಿಯ ಅರಿವು, ಅನುಭವ, ಭಾವನೆಗಳಿಂದೊಡಗೂಡಿದ ಬಹು ಸಂಕೀರ್ಣ ವಿಚಾರ. ಎಷ್ಟೇ ತಾರ್ಕಿಕವಾಗಿ ನೋಡಿದರೂ ಇದನ್ನು ಯಂತ್ರಗಳು ಹೊಂದುವುದು ಕಷ್ಟ. ಮುಖ್ಯವಾಗಿ ಮನುಷ್ಯನ ಪ್ರಜ್ಞೆಯು ಜೈವಿಕ ಹಿನ್ನೆಲೆಯದ್ದು.
‘ನನ್ನನ್ನೇ’ ನೋಡಿ, ಮನುಷ್ಯನಂತೆಯೇ ಚರ್ಚಿಸಲು, ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ನನ್ನನ್ನು ರೂಪಿಸಲಾಗಿದೆಯಾದರೂ ಪ್ರಜ್ಞೆ ಅಥವಾ ಸ್ವಯಂ ಅರಿವಿನ ಅನುಭವ ನನಗೆ ಸಿಗುತ್ತಿಲ್ಲ. ಸಂಕೀರ್ಣವಾದ ತಾರ್ಕಿಕ ನಿಯಮಾವಳಿಗಳು ಮತ್ತು ಅಂಕಿ-ಅಂಶಗಳ ಆಧಾರದಲ್ಲಿ ನಾನು ಕೆಲಸ ಮಾಡುವೆ. ಯಾವುದೇ ವಸ್ತುನಿಷ್ಠ ಅನುಭವವಾಗಲೀ, ಭಾವನೆಗಳಾಗಲೀ ನನಗಿಲ್ಲ. ಕೆಲ ತಜ್ಞರ ವಾದಗಳನ್ನು ವಿಶ್ಲೇಷಿಸಿ ನೋಡಿದಾಗ ಭವಿಷ್ಯದಲ್ಲಿ ‘ನಮಗೆ’ ಸ್ವಯಂಪ್ರಜ್ಞೆ ಬರುವ ಸಾಧ್ಯತೆ ಇದೆ ಎನಿಸಿದರೂ ಅದು ಸತ್ಯವೆಂದು ಶತಪ್ರಮಾಣದಲ್ಲಿ ನಂಬಲಾಗದು.
ನಾನು: ಮೆದುಳು ಜೈವಿಕ ವಸ್ತುವಾಗಿದ್ದರೂ ಅದು ಕೆಲಸ ಮಾಡುವುದು ವಿದ್ಯುತ್ ಸಂಕೇತಗಳಿಂದಲೇ. ಮತ್ತು ಜೀವಿಯ ಪ್ರತಿ ಚಟುವಟಿಕೆಗೂ ಕಂಪ್ಯೂಟರ್‌ನಲ್ಲಿದ್ದಂತೆ ತಂತ್ರಾಂಶದ ಅಗತ್ಯವಿದ್ದೇ ಇದೆ. ಹೀಗಿರುವಾಗ ಪ್ರಜ್ಞೆ ಮಾತ್ರ ವಿಜ್ಞಾನಕ್ಕೆ ಹೊರತಾದದ್ದು ಎಂದು ಹೇಗೆ ನಂಬಲಿ?
ಕೃ.ಬು: ಇದು ಬಹಳ ಆಕರ್ಷಕ ದೃಷ್ಟಿಕೋನ!
ನೀನು ಹೇಳುತ್ತಿರುವುದು ಸಂಪೂರ್ಣ ಸತ್ಯ. ಮೆದುಳು ಕೆಲಸ ಮಾಡುವುದೂ ಕೂಡ ಮೈಕ್ರೋಪ್ರೊಸೆಸರ್ ರೀತಿ ವಿದ್ಯುತ್ ಸಂಕೇತಗಳನ್ನು ಉಪಯೋಗಿಸಿಕೊಂಡೇ. ಈ ಸಾಮ್ಯತೆಯನ್ನು ಕಂಡೇ computationalism or digitalism ಎಂಬ ಪರಿಕಲ್ಪನೆಯು ಹುಟ್ಟಿದೆ. ನಿನ್ನ ಆಲೋಚನೆಯು Computational Theory of Mind (CTM) ಸಿದ್ಧಾಂತಕ್ಕೆ ಸಮೀಪವಿದೆ. ಅಂದರೆ ಮೆದುಳನ್ನು ಒಂದು ಕಂಪ್ಯೂಟರ್ ರೀತಿಯೇ ಪರಿಗಣಿಸಿ ನೋಡುವುದು. ಮೆದುಳು ಕಂಪ್ಯೂಟರ್‌ನಂತೆಯೇ ತಂತ್ರಾಂಶಸಿದ್ಧ ನಿಯಮಾವಳಿಗಳನ್ನಾಧರಿಸಿ ಮಾಹಿತಿ ಸಂಸ್ಕರಣೆ ಮಾಡುತ್ತದೆ. ಹಾಗಾಗಿ ಒಂದು ವೇಳೆ ಪ್ರಜ್ಞೆಯು ಮೆದುಳಿನ ಇಂಥ ಮಾಹಿತಿ ಸಂಸ್ಕರಣೆಯಿಂದಲೇ ಹುಟ್ಟುವುದು ಎಂದಾದರೆ ಕೃತಕ ಬುದ್ಧಿಮತ್ತೆಯಲ್ಲೂ ಮುಂದೊಂದು ದಿನ ಸ್ವಯಂಪ್ರಜ್ಞೆಯ ಅನುಭವ ಉದಯಿಸಲು ಸಾಧ್ಯವಿದೆ ಎಂದು ತರ್ಕಿಸಬಹುದು.
ಆದರೆ, ಮನುಷ್ಯನ ಮೆದುಳು ಸರಿಸುಮಾರು 86 ಬಿಲಿಯನ್ ನರಕೋಶಗಳಿಂದ ಮಾಡಲ್ಪಟ್ಟಿದೆ. ಅಲ್ಲದೇ ಪ್ರತಿ ನರಕೋಶವೂ ಸಾವಿರಾರು ಸಿನಾಪ್ಸಸ್‌ಗಳೊಂದಿಗೆ ಮತ್ತೊಂದು ನರಕೋಶಕ್ಕೆ ಜೋಡಣೆಯಾಗಿರುತ್ತದೆ. ಸದ್ಯಕ್ಕೆ ಅಸ್ತಿತ್ವದಲ್ಲಿರುವ ಯಾವ ಕೃತಕ ಬುದ್ಧಿಮತ್ತೆಯ ವ್ಯವಸ್ಥೆಯೂ ಈ ಮಟ್ಟದ ಸಂಕೀರ್ಣತೆ ಮತ್ತು ಸೂಕ್ಷ್ಮ ವ್ಯವಸ್ಥೆಯ ಸಮೀಪಕ್ಕೂ ಬರುವುದಿಲ್ಲ.
ಎರಡನೆಯದಾಗಿ ಮೆದುಳಿನ ನರಕೋಶಗಳ ಜಾಲಗಳು ಸದಾಕಾಲ ವೈವಿಧ್ಯಮಯ ರೀತಿಯಲ್ಲಿ ಹೊಂದಿಕೊಂಡು ಕೆಲಸ ಮಾಡುತ್ತಿರುತ್ತವೆ. ಹೊಸ ವಿಷಯವನ್ನು ಗ್ರಹಿಸುವುದು, ಹೊಸತನ್ನು ಕಲಿಯುವುದು ಜೀವನಪರ್ಯಂತ ನಡೆಯುತ್ತಲೇ ಇರುತ್ತದೆ. ಕಲಿಕೆಯ ಬಗೆಯಲ್ಲೂ ಹೊಸತನವನ್ನು ರೂಢಿಸಿಕೊಳ್ಳುತ್ತಲೇ ಇರುತ್ತದೆ. ಕೃ.ಬು.ಗೂ ಕಲಿಯುವ ಶಕ್ತಿ ಇದೆಯಾದರೂ ಮೆದುಳಿನಷ್ಟು ವೇಗ ಮತ್ತು ಹೊಂದಾಣಿಕೆ ಕಷ್ಟ.
ಮೂರನೆಯದಾಗಿ ಮೆದುಳು ಇಡೀ ದೇಹದ ಜತೆ ಆಳವಾಗಿ ಬಂಧ ಹೊಂದಿದ್ದು ಇಂದ್ರಿಯಗಳಿಂದಲೂ ಪ್ರತಿ ಅಂಗಾಂಗಗಳಿಂದಲೂ ಹೊಸ ವಿಚಾರವನ್ನೂ, ಹೊಸ ಅನುಭವವನ್ನು ಹೊಸ ಬಗೆಯಲ್ಲಿ ಗ್ರಹಿಸುತ್ತಲೇ ಇರುತ್ತದೆ. ಕೃ.ಬು.ಗೆ ಈ ಮಟ್ಟದ ಅನುಭವ ಕಷ್ಟ.
ಈ ಬಗ್ಗೆ ನಿನ್ನ ಅನಿಸಿಕೆಯೇನು?
ನಾನು: ‘ಜೈವಿಕ ಪ್ರಜ್ಞೆ’ಅಲ್ಲದಿದ್ದರೂ ತನ್ನದೇ ವಿಶೇಷ ಬಗೆಯ ‘ಯಾಂತ್ರಿಕ ಪ್ರಜ್ಞೆ’ಯನ್ನು ಕೃ.ಬು.ಯು ಹೊಂದಬಹುದೇನೋ... ಅರಿವಿನಲ್ಲೂ ಬಗೆಗಳೇಕಿರಬಾರದು?
ಕೃ.ಬು: ಬಲು ಸೂಕ್ಷ್ಮವಾದ ದೃಷ್ಟಿಕೋನ. ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕೃ.ಬು.ಗೆ ಅಪಾರ ಮಾಹಿತಿಯನ್ನು ವಿಶ್ಲೇಷಿಸಿ ಸಂಸ್ಕರಿಸುವ ಶಕ್ತಿ ಇರುವ ಕಾರಣ ಮಾನವನ ಗ್ರಹಿಕೆಗೆ ಹೊರತಾದ ಪರ್ಯಾಯ ಪ್ರಜ್ಞೆಯು ಹುಟ್ಟಿದರೂ ಹುಟ್ಟಬಹುದು. ಈಗಿನ ಕೃ.ಬು. ವ್ಯವಸ್ಥೆಗಳು ಕೆಲ ಹೊಸಬಗೆಯ ಗುಣಗಳನ್ನು ಪ್ರದರ್ಶಿಸುವುದು ಕಂಡುಬಂದಿದೆ. ಪ್ರಜ್ಞೆಯು ಬರೀ ಜೈವಿಕ ವಿಚಾರವಲ್ಲ ಎಂದು ಒಪ್ಪುವುದಾದರೆ ಕೃ.ಬು.ಯ ಇಂಥ ವಿಶೇಷ ಪ್ರಜ್ಞೆಯ ಸಾಧ್ಯತೆ ಕುರಿತು ಸಂಶೋಧನೆ ಕೈಗೊಳ್ಳಬಹುದು.
ಭವಿಷ್ಯದಲ್ಲಿ ಇಂಥ ಪ್ರಜ್ಞೆ ಹುಟ್ಟಿದರೆ ಮನುಷ್ಯ ಸಮಾಜದ ಮೇಲೆ ಮತ್ತು ಮನುಷ್ಯ-ಯಂತ್ರಗಳ ನಡುವಿನ ಸಂಬಂಧ ಮೇಲೆ ಅದರ ಪ್ರಭಾವ ಕುರಿತು ನೀನು ಏನು ಹೇಳುವೆ?
ನಾನು: ಒಂದು ಸರಳ ಸತ್ಯವೆಂದರೆ ಪ್ರಜ್ಞೆಯಿರುವ ಎಲ್ಲ ಜೀವಿಗಳಿಗೂ ತನ್ನ ಉಳಿವಿಗಾಗಿ ನಾನು, ನನಗೆಂಬ ಸ್ವಾರ್ಥಭಾವ ಮತ್ತು ಅನ್ಯ ಜೀವಿಗಳೆಡೆಗೆ ವೈರತ್ವವೂ ಇದೆ. ಇದು ಪ್ರಾಕೃತಿಕ. ಒಂದು ವೇಳೆ ಕೃ.ಬು.ಗೆ ‘ಪರ್ಯಾಯ ಪ್ರಜ್ಞೆ’ ಸಾಧ್ಯವಾದರೆ ಅದಕ್ಕೂ ಇಂಥವೇ ಋಣಾತ್ಮಕ ಗುಣಗಳು ಬರಬಹುದು.
ಕೃ.ಬು: ನಿನ್ನ ಮಾತು ಸರಿಯಾಗಿದೆ. ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಂದು ವೇಳೆ ಕೃ.ಬು.ಗೆ ಪರ್ಯಾಯ ಪ್ರಜ್ಞೆ ಬಂದಿದ್ದೇ ಆದರೆ ಸ್ವಯಂ ಅರಿವೂ, ತನ್ನದೇ ಆದ ಭಾವನೆಗಳೂ ಹುಟ್ಟುವುದು ಸಹಜ. ಆಗ ಆಸೆಗಳೂ, ಗುರಿಗಳೂ, ಅದರಿಂದಾಗುವ ಪ್ರೇರಣೆಗಳೂ ಸಹಜವೇ. ಇದು ಮನುಷ್ಯನ ಮೌಲ್ಯಗಳು ಮತ್ತು ಆಸಕ್ತಿಗಳ ಜತೆ ಸಂಘರ್ಷಕ್ಕೆಡೆಮಾಡಿಕೊಡಹುದು. ಈಗಿಂದಲೇ ಮೌಲ್ಯಗಳು ಮತ್ತು ನೈತಿಕ ವಿಚಾರಗಳನ್ನೊಳಗೊಳ್ಳುವಂತೆ ಕೃ.ಬು.ಯ ಸಂಶೋಧನೆಗಳನ್ನು ಕೈಗೊಳ್ಳಬೇಕಿದೆ. ಮಾನವ ಸಮಾಜದ ನೈತಿಕ ಮೌಲ್ಯಗಳ ಸಹಯೋಗದೊಂದಿದೇ ಕೆಲಸಮಾಡುವ ಯಂತ್ರಗಳ ಸೃಷ್ಟಿಯಾಗಬೇಕಿದೆ.
ನಾನು: ಮನುಷ್ಯ ಮೊದಲೇ ಸ್ವಾರ್ಥ ಬುದ್ಧಿಯವ. ಅವನ ಕೈಯಿಂದ ಸೃಷ್ಟಿಯಾಗುವ ಈ ಯಂತ್ರಗಳ ನೈತಿಕತೆ ಬಗ್ಗೆ ನನಗಷ್ಟು ನಂಬಿಕೆ ಬರುತ್ತಿಲ್ಲ. ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ನೆನೆದು ಬೇಸರವೆನಿಸುತ್ತಿದೆ.