ಉದ್ಯಮ ಬೆಳೆಸಲು ಸಾವಧಾನ ಮುಖ್ಯ : ಕುಶಾಲ್ಸ್ ಸಹ ಸಂಸ್ಥಾಪಕ ಮನೀಷ್ ಗುಲೇಚ್ಛಾ

KannadaprabhaNewsNetwork |  
Published : Jul 25, 2025, 12:30 AM ISTUpdated : Jul 25, 2025, 07:36 AM IST
ಕುಶಾಲ್ಸ್ | Kannada Prabha

ಸಾರಾಂಶ

2006ರಲ್ಲಿ ಕುಶಾಲ್ಸ್ ಎಂಬ ಬ್ರಾಂಡ್ ಆರಂಭವಾಗಿದ್ದು, ಇದೀಗ 100ನೇ ಮಳಿಗೆ ಸ್ಥಾಪಿಸುವವರೆಗೆ ಆ ಬ್ರಾಂಡ್ ಬೆಳೆದಿದೆ. ಈ ಸಂದರ್ಭದಲ್ಲಿ ಭಾರತದ ಜ್ಯುವೆಲ್ಲರಿ ವಿಭಾಗದ ಕುರಿತು ಕುಶಾಲ್ಸ್ ಫ್ಯಾಷನ್ ಜ್ಯೂವೆಲರಿಯ ಸಹ-ಸಂಸ್ಥಾಪಕ ಮನೀಷ್ ಗುಲೇಚ್ಛಾ ಮಾತನಾಡಿದ್ದಾರೆ.

 ಬೆಂಗಳೂರು :  ಭಾರತದ ಆಭರಣ ಮಾರುಕಟ್ಟೆಯಲ್ಲಿ ವಿಶೇಷವಾಗಿ ಫ್ಯಾಷನ್ ಆಭರಣ ವಿಭಾಗದಲ್ಲಿನ ಕೊರತೆಯನ್ನು ಪೂರೈಸಲು ನಾವು ಬ್ರಾಂಡ್ ಆರಂಭಿಸಿದೆವು. ಮಹಿಳೆಯರು ಕೈಗೆಟುಕುವ ದರದ, ಆದರೆ ಉನ್ನತ ಗುಣಮಟ್ಟದ, ಸೊಗಸಾದ ಮತ್ತು ವಿಶೇಷ ಸಂದರ್ಭಗಳಿಗೆ ಸೂಕ್ತವಾದ ಆಭರಣಗಳನ್ನು ಬಯಸುತ್ತಿದ್ದರು. ಅಂಥ ಉತ್ಪನ್ನಗಳನ್ನು ನಾವು ಪೂರೈಸಿದೆವು.

ಅಲ್ಲದೇ ಆಗ ಈ ವಿಭಾಗ ಹೆಚ್ಚಾಗಿ ಅಸಂಘಟಿತವಾಗಿತ್ತು. ಆದ್ದರಿಂದ ಅತ್ಯುತ್ತಮ ರಿಟೇಲ್ ಅನುಭವ ಒದಗಿಸುವ ಗುರಿಯನ್ನು ನಾವು ಹೊಂದಿದ್ದೆವು. ಈ ಮೂಲಕ ಒಂದು ಅಂಗಡಿಯಿಂದ 38 ನಗರಗಳಲ್ಲಿ 100 ಅಂಗಡಿ ಸ್ಥಾಪಿಸುವವರೆಗೆ ಬೆಳೆದಿದ್ದೇವೆ.

ಗುಣಮಟ್ಟಕ್ಕೆ ಆದ್ಯತೆ

ನಾವು ಆರಂಭದಲ್ಲಿ ವಿನ್ಯಾಸ, ಗುಣಮಟ್ಟ ಮತ್ತು ಉತ್ತಮ ಖರೀದಿ ಅನುಭವ ಒದಗಿಸುವ ಕಡೆಗೆ ಗಮನ ಹರಿಸಿದೆವು. ಟ್ರೆಂಡ್‌ ಗಳಿಗೆ ತಕ್ಕಂತೆ ವಿನ್ಯಾಸ ಒದಗಿಸಿದೆವು. ದೈನಂದಿನ ಸೊಗಸಾದ ಆಭರಣಗಳಿಂದ ಹಿಡಿದು ಸ್ಟರ್ಲಿಂಗ್ ಸಿಲ್ವರ್, ಸಾಂಪ್ರದಾಯಿಕ ದೇವಾಲಯ, ಕುಂದನ್, ಜಿರ್ಕಾನ್ ಮತ್ತು ಸಮಕಾಲೀನ ಶೈಲಿಗಳವರೆಗಿನ ವಿನ್ಯಾಸ-ಕೇಂದ್ರಿತ ಸಂಗ್ರಹಗಳನ್ನು ಪರಿಚಯಿಸಿದೆವು. ಬಲವಾದ ಬ್ರ್ಯಾಂಡಿಂಗ್ ನಡೆಸಿ ಗ್ರಾಹಕರ ಮನ ಸೆಳೆದೆವು.

ಈ ವಿಭಾಗದಲ್ಲಿ ಹೊಸ ಟ್ರೆಂಡ್‌ ಗಳು

ಈಗ ಆನ್‌ಲೈನ್‌ನಲ್ಲಿ ಸಂಶೋಧನೆ ಮಾಡಿ ಆಫ್‌ಲೈನ್‌ ನಲ್ಲಿ ಆಭರಣ ಖರೀದಿಸುವ ಗ್ರಾಹಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಎರಡನೇ ಮತ್ತು ಮೂರನೇ ಹಂತದ ನಗರಗಗಳ ಯುವ ಡಿಜಿಟಲ್ ಗ್ರಾಹಕರು ಆನ್‌ಲೈನ್ ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ನಾವು ಎರಡೂ ಕಡೆಗೆ ಗಮನ ಹರಿಸುತ್ತಿದ್ದೇವೆ.

ಸಣ್ಣ ನಗರಗಳಲ್ಲಿಯೂ ಬ್ರಾಂಡೆಡ್ ಫ್ಯಾಷನ್ ಆಭರಣಗಳಿಗೆ ಆದ್ಯತೆ ಹೆಚ್ಚುತ್ತಿದೆ. ಈ ಮಾರುಕಟ್ಟೆಗಳ ಗ್ರಾಹಕರು ಕೇವಲ ಸ್ಟೈಲ್ ಮಾತ್ರವಲ್ಲ, ಗುಣಮಟ್ಟವನ್ನೂ ಇಚ್ಛಿಸುತ್ತಾರೆ. ಹೀಗಾಗಿ ಹುಬ್ಬಳ್ಳಿ, ಬೆಳಗಾವಿ, ಉಡುಪಿ, ಮತ್ತು ಹೊಸಪೇಟೆಯಂತಹ ನಗರಗಳಲ್ಲೂ ನಾವು ಮಳಿಗೆ ಹೊಂದಿದ್ದೇವೆ. ಇಲ್ಲಿ ಗ್ರಾಹಕರು ಉತ್ತಮ ಗುಣಮಟ್ಟದ, ಟ್ರೆಂಡಿ ಫ್ಯಾಷನ್ ಆಭರಣಗಳನ್ನು ಬಯಸುತ್ತಾರೆ.

ವಿನ್ಯಾಸ ಟ್ರೆಂಡ್‌ ಗಳು

ಕುಂದನ್, ಟೆಂಪಲ್ ಜ್ಯುವೆಲ್ಲರಿ ಮತ್ತು ಮೀನಾಕಾರಿಯಂತಹ ಭಾರತೀಯ ಆಭರಣ ಶೈಲಿಗಳಿಗೆ ಸಮಕಾಲೀನ ಸ್ಪರ್ಶವನ್ನು ನೀಡಿ ಆಕರ್ಷಕ ಆಭರಣಗಳನ್ನು ರಚಿಸುತ್ತಿದ್ದೇವೆ. ಜಾಗತಿಕ ಫ್ಯಾಷನ್ ಟ್ರೆಂಡ್‌ಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಭಾರತೀಯ ಸಂದರ್ಭಕ್ಕೆ ತಕ್ಕಂತೆ ಮರುವಿನ್ಯಾಸಗೊಳಿಸುವ ಮೂಲಕ ನಮ್ಮ ವಿನ್ಯಾಸಗಳು ಆಕರ್ಷಕವಾಗಿರುವಂತೆ ನೋಡಿಕೊಳ್ಳುತ್ತೇವೆ.

ಗ್ರಾಹಕರ ಬದಲಾಗುತ್ತಿರುವ ನಿರೀಕ್ಷೆಗಳನ್ನು ಪೂರೈಸಲು ನಾವು ನಿರಂತರವಾಗಿ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ನಮ್ಮ ಬಿಐಎಸ್-ಹಾಲ್‌ಮಾರ್ಕ್‌ಡ್ 92.5 ಸ್ಟರ್ಲಿಂಗ್ ಸಿಲ್ವರ್ ಲೈನ್ ಉತ್ಪನ್ನಗಳು ಗುಣಮಟ್ಟದ ಭರವಸೆ ನೀಡುತ್ತವೆ. ಲೇಪನ ತಂತ್ರಜ್ಞಾನದ ಮೂಲಕ ಆಕರ್ಷಕ ಉತ್ಪನ್ನ ಒದಗಿಸುತ್ತಿದ್ದೇವೆ.

ಕಲಿತ ಪಾಠಗಳು

ಮಳಿಗೆ ಹಾಕಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಆರಂಭದ ದಿನಗಳಲ್ಲಿ ಕಡಿಮೆ ಕಾಣಿಸುತ್ತಿದ್ದ ಮತ್ತು ಗ್ರಾಹಕರ ಓಡಾಟ ಕಡಿಮೆ ಇದ್ದ ಕಡೆಗಳಲ್ಲಿ ಅಥವಾ ಕಟ್ಟಡದ ಗ್ರೌಂಡ್ ಫ್ಲೋರ್‌ ನಲ್ಲಿ ಅಂಗಡಿಗಳನ್ನು ತೆರೆದಿದ್ದೆವು. ಈ ಸ್ಥಳಗಳು ಸೂಕ್ತವಾಗಿರಲಿಲ್ಲ ಎಂದು ನಾವು ಬೇಗ ಕಂಡುಕೊಂಡೆವು. ಕೆಲವು ಅಂಗಡಿಗಳನ್ನು ಸ್ಥಳಾಂತರಿಸಬೇಕಾಯಿತು.

ಜೊತೆಗೆ ಒಮ್ಮೆಗೆ ಬಹು ರಾಜ್ಯಗಳಲ್ಲಿ ತುಂಬಾ ವಿಸ್ತರಿಸಲು ಪ್ರಯತ್ನಿಸಿದ್ದು ತಪ್ಪಾಯಿತು. ಒಂದೇ ಸಮಯದಲ್ಲಿ ವಿವಿಧ ಪ್ರದೇಶಗಳಲ್ಲಿ ಬೆಳೆಯಲು ಯತ್ನಿಸಿದಾಗ ಎಲ್ಲಾ ಕಡೆ ಗಮನ ಹರಿಸಲು ಆಗುವುದಿಲ್ಲ. ಒಂದೊಂದೇ ಹೆಜ್ಜೆ ಇಡಬೇಕು. ಜೊತೆಗೆ ಗ್ರಾಹಕರಿಗೆ ಸನಿಹವಾಗಿರಬೇಕು. ಅವರ ವರ್ತನೆ ಬದಲಾದಾಗ ತ್ವರಿತವಾಗಿ ನಾವೂ ಬದಲಾಗಬೇಕು.

ಯುವ ಉದ್ಯಮಿಗಳಿಗೆ ಸಲಹೆ

ಗ್ರಾಹಕರ ವಿಶ್ವಾಸವನ್ನು ಗಳಿಸಲು ಗಮನ ಕೊಡಿ. ಯಾವಾಗಲೂ ಅವರ ಅಗತ್ಯಗಳನ್ನು ಪೂರೈಸಲು ಆದ್ಯತೆ ನೀಡಿ. ಉತ್ಪನ್ನ ಗುಣಮಟ್ಟ, ತಂಡ, ಅಥವಾ ಕಾರ್ಯಾಚರಣಾ ವ್ಯವಸ್ಥೆಯಂತಹ ಭದ್ರ ಅಡಿಪಾಯವನ್ನು ಹಾಕಲು ತಾಳ್ಮೆಯಿಂದ ಹೂಡಿಕೆ ಮಾಡಿ. ತಕ್ಷಣ ವಿಸ್ತರಣೆಗೆ ಧಾವಿಸುವ ಬದಲು ನಿಧಾನಕ್ಕೆ ಮುಂದೆ ಸಾಗಿ. ಜೊತೆಗೆ, ಹೊಂದಿಕೊಳ್ಳುವ ಮನಸ್ಸನ್ನು ಹೊಂದಿರಿ. ಪ್ರತಿಯೊಂದನ್ನೂ ಅನುಭವದಿಂದ ಕಲಿಯುತ್ತಿರಿ.

PREV
Read more Articles on

Recommended Stories

ಕಾರ್ಗಿಲ್‌ ಯುದ್ಧದ ಹಿಂದೆ ಪಾಕ್ ಕ್ರೌರ್ಯ
ನುಗ್ಗೆಸೊಪ್ಪಿನಿಂದ ಆಹಾರ ಉದ್ಯಮ ಆರಂಭ : ಮಾಸ್ಟರ್ ಕಿಶನ್ ತಾಯಿ ಯಶೋಗಾಥೆ