ದುಶ್ಚಟಗಳಿಗೆ ಹಣ ಹೊಂದಿಸಲು ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ಬೈಕ್‌ ಕದ್ದ ಗಾರೆ ಕೆಲಸಗಾರ ಸೆರೆ

KannadaprabhaNewsNetwork | Updated : Mar 18 2025, 06:47 AM IST

ಸಾರಾಂಶ

ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿ ಹಳೇ ಬಾಗಲೂರು ನಿವಾಸಿ ಕುಟ್ಟಿವೇಡಿ ಮುರುಗೇಶ್‌(21) ಬಂಧಿತ. ಆರೋಪಿಯಿಂದ ₹9 ಲಕ್ಷ ಮೌಲ್ಯದ 8 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಕಮ್ಮನಹಳ್ಳಿಯ ಸಿಎಂಆರ್‌ ರಸ್ತೆಯ ಟೀ ಅಂಗಡಿ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ ಕಂಬಿಕೊಲೈ ಮೂಲದ ಮುರಗೇಶ್‌ ನಗರದ ಕೆ.ಜಿ.ಹಳ್ಳಿಯ ಹಳೇ ಬಾಗಲೂರಿನಲ್ಲಿ ನೆಲೆಸಿದ್ದ. 8ನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದ ಆರೋಪಿಯು ಗಾರೆ ಕೆಲಸ ಮಾಡಿಕೊಂಡಿದ್ದ. ದುಶ್ಚಟಗಳನ್ನು ಮೈಗೂಡಿಸಿಕೊಡಿಸಿಕೊಂಡಿದ್ದ ಮುರುಗೇಶ್‌, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದ. ಪ್ರಕರಣದ ತನಿಖೆ ವೇಳೆ ಬಾತ್ಮೀದಾರರು ನೀಡಿದ ಖಚಿತ ಮೇರೆಗೆ ಕಮ್ಮನಹಳ್ಳಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ದ್ವಿಚಕ್ರ ವಾಹನ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆ ನಗರದ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

 8 ಬೈಕ್‌ ಕಳವು ಪ್ರಕರಣ ಪತ್ತೆ:

ಆರೋಪಿ ನೀಡಿದ ಮಾಹಿತಿ ಮೇರೆಗೆ ಕಮ್ಮನಹಳ್ಳಿಯ ಸೇಂಟ್‌ ಥಾಮಸ್‌ ಚರ್ಚ್‌ ಪಕ್ಕದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ ನಾಲ್ಕು ದ್ವಿಚಕ್ರ ವಾಹನ ಹಾಗೂ ಹಳೇ ಬಾಗಲೂರು ಲೇಔಟ್‌ ಮುಖ್ಯರಸ್ತೆಯ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ ಮೂರು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಯ ಬಂಧನದಿಂದ ಬಾಣಸವಾಡಿ ನಾಲ್ಕು, ಕೆ.ಜಿ.ಹಳ್ಳಿ ಎರಡು, ಆರ್‌.ಟಿ.ನಗರ ಮತ್ತು ಗೋವಿಂದಪುರ ಠಾಣೆ ತಲಾ ಒಂದು ಸೇರಿದಂತೆ ಒಟ್ಟು ಎಂಟು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article