ಎಐ ಬರೆದ ಒಂದಾದರು ಪುಸ್ತಕ ಇದ್ದರೆ ತೋರಿಸಿ

Published : Oct 07, 2025, 05:59 AM IST
Chethan bhagath Diwali

ಸಾರಾಂಶ

ಕೃತಕ ಬುದ್ಧಿಮತ್ತೆ ಅಥವಾ ಚಾಟ್‌ಜಿಪಿಟಿ ಲೇಖಕನಾಗಿ ನನ್ನ ವೃತ್ತಿಯ ಮೇಲೆ ಪರಿಣಾಮ ಬೀರಲಿದೆಯೇ ಎಂದು ಹಲವರು ಕೇಳುತ್ತಾರೆ. ಅದಕ್ಕೆ ‘ಇಲ್ಲ’ ಎಂಬುದಷ್ಟೇ ನನ್ನ ಉತ್ತರ. ಅದರಲ್ಲೂ ಕಾದಂಬರಿ ಕ್ಷೇತ್ರದಲ್ಲಿ ಇದು ಸಾಧ್ಯವಿಲ್ಲ. ಭಾವನೆಗಳಿಲ್ಲದೆ ಬರವಣಿಗೆ ಎಂದಿಗೂ ಯಶಸ್ವಿಯಾಗದು.

  ಚೇತನ್‌ ಭಗತ್‌, ಖ್ಯಾತ ಸಾಹಿತಿ

  +++

ಇಂದು ಕೃತಕ ಬುದ್ಧಿಮತ್ತೆ (ಎಐ) ಬಹುತೇಕ ಎಲ್ಲ ಕ್ಷೇತ್ರಗಳನ್ನು ಆವರಿಸಿದೆ. ಸಾಹಿತ್ಯ ಮತ್ತು ಬರವಣಿಗೆ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡುತ್ತಿದೆ. ಬೇಕಾದ ಮಾಹಿತಿಯನ್ನು ಕೈಬೆರಳ ತುದಿಯಲ್ಲಿ ಒದಗಿಸುವುದರಿಂದ ಹಿಡಿದು, ಅಪೇಕ್ಷಿಸಿದ ವಿಷಯದ ಬಗ್ಗೆ ಲೇಖನ ಒದಗಿಸುವುದರ ವರೆಗೂ ಎಐನ ವ್ಯಾಪ್ತಿ ವಿಸ್ತರಿಸಿದೆ. ಇದೇ ವಿಚಾರವಾಗಿ ನನ್ನ ಬಳಿ ಹಲವರು ಪ್ರಶ್ನೆಗಳನ್ನು ಕೇಳುತ್ತಾರೆ. ಅದೇನೆಂದರೆ, ಒಬ್ಬ ಕಾದಂಬರಿಕಾರನಾಗಿ ಎಐ ನಿಮ್ಮ ವೃತ್ತಿಯ ಮೇಲೆ ಪರಿಣಾಮ ಬೀರುವುದಿಲ್ಲವೆ? ಮುಂದೊಂದು ದಿನ ಎಐಯೇ ಕಾದಂಬರಿ ರಚಿಸುವ ದಿನಗಳು ಬರಲಾರವೆ? ಎಂಬುದು. ಈ ಬಗ್ಗೆ ನನ್ನ ಚಿಂತನೆ ಸ್ಪಷ್ಟವಾಗಿದೆ.

ಎಐ ಕೌಶಲ್ಯ ಹೊಂದಿರುತ್ತದೆ, ಆದರೆ ಕಲೆಯನ್ನಲ್ಲ. ಈ ಉಪಕರಣಗಳು ನಿಜವಾದ ಭಾವನೆಯನ್ನು ಬರವಣಿಗೆಯಲ್ಲಿ ಇಳಿಸಲು ಸಾಧ್ಯವಿಲ್ಲ. ಮಾನವ ಅನುಭವದಿಂದ ಪಡೆದ ಸೃಜನಶೀಲತೆಯನ್ನು ಬೇರಾವುದೂ ಬದಲಿಸಲು ಸಾಧ್ಯವಿಲ್ಲ. ಮನುಷ್ಯನ ಭಾವನೆಗಳ ಮೇಲೆ ನಿರ್ಮಾಣವಾದ ಕಥೆಯನ್ನು ಯಂತ್ರಗಳು ಸೃಷ್ಟಿಸಲಾರವು. ಒಬ್ಬ ಲೇಖಕನಾಗಿ, ಎಐ ಅಥವಾ ಚಾಟ್‌ಜಿಪಿಟಿ ನನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಯಾರಾದರೂ ಪ್ರಶ್ನಿಸಿದರೆ, ನನ್ನ ಉತ್ತರ ‘ಅದು ಪರಿಣಾಮ ಬೀರುವುದಿಲ್ಲ. ಕನಿಷ್ಠ ಕಾದಂಬರಿ ಮೇಲಂತೂ ಸಾಧ್ಯವೇ ಇಲ್ಲ.’

ಈಗ ಎಐ ಮತ್ತು ಮನುಷ್ಯನ ಹೋಲಿಕೆ ಮಾಡಿ ನೋಡೋಣ. ಎಐಗೆ ಜೀವನದ ಕಷ್ಟಗಳಿಂದ ಹೃದಯ ಛಿದ್ರಗೊಂಡ ನೋವಿಲ್ಲ. ಆದರೆ ನನಗಿದೆ. ಚಾಟ್‌ಜಿಪಿಟಿಗೆ ಬಾಲ್ಯದ ಕರಾಳ ಆಘಾತಗಳ ನೆನಪುಗಳಿಲ್ಲ. ಆದರೆ ನನಗೆ ಅಂತಹ ಆಘಾತಗಳ ಸ್ಮರಣೆಯಿದೆ. ನಾನು ಪ್ರೀತಿಯನ್ನು ಅನುಭವಿಸಿದ್ದೇನೆ. ಪ್ರೀತಿ ಮುರಿದ ಅನುಭವವೂ ನನಗಾಗಿದೆ. ನಾನು ಬದುಕಿನ ಏರಿಳಿತಗಳ ಮೂಲಕ ಜೀವಂತವಾಗಿದ್ದೇನೆ. ಆದರೆ ಎಐಗೆ ಇದ್ಯಾವುದರ ಪರಿವೆಯಿಲ್ಲ. ಈ ನೈಜ ಭಾವನೆಗಳನ್ನು ಓದುಗರಿಗೆ ವರ್ಗಾಯಿಸಿದರೆ ಮಾತ್ರ ಪುಸ್ತಕಗಳು ಯಶಸ್ವಿಯಾಗುತ್ತವೆ. ನೀವು ಯಾವ ಭಾವನೆಗಳನ್ನೂ ಅನುಭವಿಸದಿದ್ದರೆ ಅಥವಾ ಅವುಗಳನ್ನು ಕಾದಂಬರಿಯಲ್ಲಿ ಸಮರ್ಥವಾಗಿ ಇಳಿಸದಿದ್ದರೆ, ಆ ಕೃತಿ ಯಶಸ್ವಿಯಾಗುವುದಿಲ್ಲ.

ಇನ್ನೊಂದು ವಿಚಾರವೆಂದರೆ, ಕಥೆಯ ಜೀವಾಳ ಅಡಗಿರುವುದೇ ಮನುಷ್ಯ ಸಂಪರ್ಕದಲ್ಲಿ. ಸಾಮಾನ್ಯವಾಗಿ, ಮನುಷ್ಯರು ಮನುಷ್ಯರಲ್ಲಿ ಆಸಕ್ತಿ ಹೊಂದಿರುತ್ತಾರೆ. ನಾವೇಕೆ ಇಲ್ಲಿ ಮಾತಾಡುತ್ತಿದ್ದೇವೆ? ಏಕೆಂದರೆ ನೀವು ಮಾತನಾಡುವ ಒಂದು ನಿರ್ದಿಷ್ಟ ವಿಧಾನವನ್ನು ಹೊಂದಿದ್ದೀರಿ ಮತ್ತು ನಾನದನ್ನು ಇಷ್ಟಪಡುತ್ತೇನೆ. ಒಂದು ವೇಳೆ ನಮ್ಮಿಬ್ಬರನ್ನೂ ಯಂತ್ರಗಳು ಬದಲಾಯಿಸಿದರೆ, ಅವು ಅಣು ವಿಜ್ಞಾನದಿಂದ ಬಾಹ್ಯಾಕಾಶ ಮತ್ತು ರಾಜಕೀಯದವರೆಗೂ ಮಾತಾಡಬಹುದು. ಆದರೆ ಅದನ್ನು ಕೂತು ಕೇಳಲು ಯಾರು ತಾನೇ ಇಷ್ಟಪಡುತ್ತಾರೆ? ಮನುಷ್ಯ ಮನುಷ್ಯನ ಜೊತೆ ಮಾತಾಡುವಾಗ ಒದಗುವ ಆನಂದ ಯಂತ್ರಗಳ ಜೊತೆ ಮಾತಾಡಿದಾಗ ಒದಗಲು ಸಾಧ್ಯವಿಲ್ಲ.

ಎಐ ಬಂದು ಇಷ್ಟು ದಿನಗಳಾಗಿವೆ. ಎಐ ಬರೆದ ಒಂದೇ ಒಂದು ಪುಸ್ತಕವನ್ನು ನನಗೆ ತೋರಿಸಿ. ಜನರು ಜನರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ನಾವು ಮಾತನಾಡುವುದೂ ಅದೇ ಕಾರಣಕ್ಕಾಗಿ. ಎಐನಂಥ ಮಾದರಿಗಳು ಆಡಳಿತಾತ್ಮಕ ಕೆಲಸವನ್ನು ನಿರ್ವಹಿಸಬಲ್ಲವು, ಆದರೆ ಅವು ನಿಜವಾದ ಭಾವನೆಯನ್ನು ಬರವಣಿಗೆಯಲ್ಲಿ ತರಲು ಸಾಧ್ಯವೇ ಇಲ್ಲ. ಭಾವನಾತ್ಮಕ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಎಐ ಸಮರ್ಥವಾಯಿತು ಎಂದೇ ಇಟ್ಟುಕೊಳ್ಳಿ, ಆಗ ಪ್ರೇಕ್ಷಕರ ದೃಷ್ಟಿಯಲ್ಲಿ ಅದು ಇನ್ನೂ ದೃಢೀಕರಣ ಹೊಂದಿರುವುದಿಲ್ಲ. ಭವಿಷ್ಯದಲ್ಲಿ ಎಐ ಭಾವನೆಗಳನ್ನು ಅನುಕರಿಸಲು ಕಲಿತರು ಸಹ, ಜನರು ಏನನ್ನಾದರೂ ಎಐ ಬರೆದಿದ್ದೆಂದು ತಿಳಿದ ತಕ್ಷಣ ಅದನ್ನು ಓದುವುದನ್ನು ಅಥವಾ ಎಐ ಆಧರಿತ ಸಿನಿಮಾ ನೋಡುವುದನ್ನು ನಿಲ್ಲಿಸಿಬಿಡುತ್ತಾರೆ.

ಎಐ ಮನುಷ್ಯನ ಕೆಲಸಗಳನ್ನು ಸುಲಭಗೊಳಿಸಬಹುದು, ಆಡಳಿತಾತ್ಮಕ ಕೆಲಸಗಳನ್ನು ನಿಭಾಯಿಸುವಲ್ಲಿಯೂ ನೆರವಾಗಬಹುದು. ಆದರೆ ಮನುಷ್ಯನ ಸೃಜನಶೀಲತೆ, ಅಭಿವ್ಯಕ್ತಿ ಸಾಮರ್ಥ್ಯ, ಚಿಂತನೆ, ಕಲಾತ್ಮಕತೆಗಳು ಎಐಗೆ ಬರಲು ಸಾಧ್ಯವಿಲ್ಲ. ಹಾಗಾಗಿ ಎಐ ಸಾಹಿತ್ಯದ ಮೇಲೆ ಕರಿನೆರಳು ಬೀರಬಹುದು, ಮುಂದೊಮ್ಮೆ ಕಾದಂಬರಿಯನ್ನೂ ರಚಿಸಬಹುದು ಎಂದು ಆತಂಕಪಡುವುದರಲ್ಲಿ ಅರ್ಥವಿಲ್ಲ.

PREV
Read more Articles on

Recommended Stories

ಮಹರ್ಷಿ ವಾಲ್ಮೀಕಿ ಕಂಡ ಕನಸು : ‘ಪ್ರಜಾರಾಜ್ಯ’ - ರಾಮಾಯಣದಲ್ಲಿ ವಿವರಣೆ
‘ಹಗಲೆಲ್ಲ ಶಾ ಜತೆ ಮಾತಾಡ್ತೀರಿ... ಮುಂಜಾನೆದ್ದು ಖಂಡಿಸ್ತೀರಿ’