;Resize=(412,232))
ಪವರ್ ಪಾಯಿಂಟ್
ಸಾಕಷ್ಟು ನಿದ್ರೆ, ಸಮರ್ಪಕವಾದ ನೀರಿನ ಸೇವನೆ, ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ - ಇವು ನನ್ನ ಆರೋಗ್ಯದ ರಹಸ್ಯಗಳು. ಇಂದು, ನಾನು ಯಾವುದೇ ಆಲೋಪತಿ ಔಷಧಿಗಳು ಅಥವಾ ಇನ್ಸುಲಿನ್ ಇಲ್ಲದೆ ಸಂಪೂರ್ಣ ಆರೋಗ್ಯದಿಂದ ಇದ್ದೇನೆ. 20 ಕೆಜಿ ತೂಕವನ್ನೂ ಕಳೆದುಕೊಂಡಿದ್ದೇನೆ. ಸ್ಥಿರ ಅಭ್ಯಾಸಗಳಿಂದ ದೀರ್ಘಕಾಲೀನ ಫಲಿತಾಂಶ ಪಡೆಯಬಹುದು ಎಂಬುದಕ್ಕೆ ನಾನೇ ಸಾಕ್ಷಿ.
ಅಮಿತ್ ಶಾ, ಕೇಂದ್ರ ಗೃಹ ಸಚಿವ
ನಾನು ನಿಮ್ಮೊಂದಿಗೆ ನನ್ನ ವೈಯಕ್ತಿಕ ಆರೋಗ್ಯ ಪಯಣವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ 4 ವರ್ಷಗಳಲ್ಲಿ, ನಾನು 20 ಕೆಜಿಗಿಂತಲೂ ಹೆಚ್ಚು ತೂಕವನ್ನು ಕಳೆದುಕೊಂಡಿದ್ದೇನೆ ಮತ್ತು ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದೇನೆ. ಇದೆಲ್ಲವೂ ಸಾಧ್ಯವಾಗಿದ್ದು ಕೆಲವು ಚಿಕ್ಕ ಜೀವನಶೈಲಿ ಬದಲಾವಣೆಗಳಿಂದ. ನನ್ನ ಈ ಅನುಭವವನ್ನು ಹಂಚಿಕೊಳ್ಳುವ ಮೂಲಕ ನಿಮ್ಮೆಲ್ಲರಿಗೂ ಆರೋಗ್ಯದ ಕಡೆಗೆ ಒಂದು ಹೆಜ್ಜೆ ಇಡಲು ಪ್ರೇರಣೆ ನೀಡಬಯಸುತ್ತೇನೆ.
2020ರ ಮೇ ತಿಂಗಳಿಂದ ನಾನು ನನ್ನ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲು ಆರಂಭಿಸಿದೆ. ಈ ಬದಲಾವಣೆಗಳು ಯಾವುದೇ ದೊಡ್ಡ ಕ್ರಾಂತಿಕಾರಿ ಯೋಜನೆಗಳಲ್ಲ, ಬದಲಿಗೆ ಸರಳವಾದ, ಸ್ಥಿರವಾದ ಅಭ್ಯಾಸಗಳು. ಸಾಕಷ್ಟು ನಿದ್ರೆ, ಸಮರ್ಪಕವಾದ ನೀರಿನ ಸೇವನೆ, ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ - ಇವು ನನ್ನ ಆರೋಗ್ಯದ ರಹಸ್ಯಗಳು. ಇಂದು, ನಾನು ಯಾವುದೇ ಅಲೋಪತಿ ಔಷಧಿಗಳು ಅಥವಾ ಇನ್ಸುಲಿನ್ ಇಲ್ಲದೆ ಸಂಪೂರ್ಣ ಆರೋಗ್ಯದಿಂದ ಇದ್ದೇನೆ. ಇದರ ಜೊತೆಗೆ, 20 ಕೆಜಿಗಿಂತಲೂ ಹೆಚ್ಚು ತೂಕವನ್ನು ಕಳೆದುಕೊಂಡಿದ್ದೇನೆ. ಸ್ಥಿರವಾದ ಅಭ್ಯಾಸಗಳಿಂದ ದೀರ್ಘಕಾಲೀನ ಫಲಿತಾಂಶಗಳನ್ನು ಪಡೆಯಬಹುದು ಎಂಬುದಕ್ಕೆ ನಾನೇ ಸಾಕ್ಷಿ.
ನನ್ನ ಈ ಯಶಸ್ಸಿನ ಹಿಂದೆ ಕೆಲವು ಸರಳ ಆದರೆ ಪರಿಣಾಮಕಾರಿ ಅಭ್ಯಾಸಗಳಿವೆ. ಇವುಗಳನ್ನು ನೀವೂ ಅಳವಡಿಸಿಕೊಂಡರೆ ಆರೋಗ್ಯದ ಕಡೆಗೆ ಒಂದು ದೊಡ್ಡ ಹೆಜ್ಜೆ ಇಡಬಹುದು.
ನಿದ್ರೆಗೆ ಆದ್ಯತೆ ನೀಡಿ:ಪ್ರತಿದಿನ 6–8 ಗಂಟೆಗಳ ಗಾಢ ನಿದ್ರೆ ಅತ್ಯಗತ್ಯ. ಇದು ಹಾರ್ಮೋನ್ ಸಮತೋಲನ, ರಕ್ತದ ಸಕ್ಕರೆ ನಿಯಂತ್ರಣ ಮತ್ತು ದೇಹದ ಚೇತರಿಕೆಗೆ ಸಹಾಯ ಮಾಡುತ್ತದೆ.
ನೀರಿನ ಸೇವನೆ ಮುಖ್ಯ:
ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ ಮತ್ತು ದಿನವಿಡೀ ಸಾಕಷ್ಟು ನೀರು ಸೇವಿಸಿ. ಇದು ಚಯಾಪಚಯವನ್ನು ನಿಯಂತ್ರಿಸುತ್ತದೆ. ಯಕೃತ್ ಹಾಗೂ ಕಿಡ್ನಿಗಳ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.
ಸಮತೋಲಿತ ಆಹಾರ: ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ. ತರಕಾರಿಗಳು, ಪ್ರೋಟೀನ್, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳಿಗೆ ಆದ್ಯತೆ ನೀಡಿ. ಸಂಸ್ಕರಿತ ಆಹಾರ ಮತ್ತು ಸಕ್ಕರೆಯನ್ನು ಕಡಿಮೆ ಮಾಡಿ.
ನಿಯಮಿತ ವ್ಯಾಯಾಮ:
ದಿನಕ್ಕೆ ಕನಿಷ್ಠ 2 ಗಂಟೆಗಳ ಕಾಲ ಚಲನೆಯಲ್ಲಿರಿ. ನಡಿಗೆ, ಯೋಗ, ತೂಕ ಎತ್ತುವಿಕೆ ಅಥವಾ ಕ್ರೀಡೆ ಯಾವುದೇ ಆಗಿರಲಿ. ತೀವ್ರತೆಗಿಂತ ಸ್ಥಿರತೆ ಮುಖ್ಯ.
ನಿಯಮಿತ ದಿನಚರಿ:
ಊಟ, ವ್ಯಾಯಾಮ ಮತ್ತು ನಿದ್ರೆಗೆ ಒಂದು ಸ್ಥಿರ ವೇಳಾಪಟ್ಟಿಯನ್ನು ರೂಢಿಸಿಕೊಳ್ಳಿ. ಇದು ಚಯಾಪಚಯ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ತ್ವರಿತ ಪರಿಹಾರಗಳಿಂದ ದೂರವಿರಿ:
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣವು ಕ್ರಮೇಣ ಸಾಧ್ಯವಾಗುತ್ತದೆ. ಕ್ರ್ಯಾಶ್ ಡಯಟ್‌ಗಳಿಗೆ ಬದಲಾಗಿ ಜೀವನಶೈಲಿ ಬದಲಾವಣೆಗಳಿಗೆ ಒತ್ತು ನೀಡಿ.
ಯಕೃತ್ ಆರೋಗ್ಯಕ್ಕೆ ಕಾಳಜಿ:
ಮದ್ಯಪಾನವನ್ನು ಮಿತಗೊಳಿಸಿ, ಅತಿಯಾದ ಕೊಬ್ಬಿನ ಆಹಾರಗಳನ್ನು ತಪ್ಪಿಸಿ ಮತ್ತು ಹಸಿರು ತರಕಾರಿಗಳು, ಸಿಟ್ರಸ್ ಹಣ್ಣುಗಳು ಮತ್ತು ಅರಿಶಿನದಂತಹ ಯಕೃತ್‌ಗೆ ಪೋಷಕವಾದ ಆಹಾರಗಳನ್ನು ಸೇವಿಸಿ.
ಮನಸ್ಸು-ದೇಹದ ಸಂಬಂಧ:
ಉತ್ತಮ ದೈಹಿಕ ಆರೋಗ್ಯವು ತೀಕ್ಷ್ಣವಾದ ಚಿಂತನೆ ಮತ್ತು ಉತ್ತಮ ನಿರ್ಧಾರ ಕೈಗೊಳ್ಳುವಿಕೆಗೆ ಸಹಾಯ ಮಾಡುತ್ತದೆ.
ಚಿಕ್ಕದಾಗಿ ಆರಂಭಿಸಿ, ಸ್ಥಿರವಾಗಿರಿ:
ಒಂದು ಗಂಟೆ ಮುಂಚೆ ಮಲಗುವುದು ಅಥವಾ 30 ನಿಮಿಷ ನಡಿಗೆ ಆರಂಭಿಸುವುದು.. ಹೀಗೆ ಯಾವುದಾದರೊಂದು ಸರಳ ಬದಲಾವಣೆಯಿಂದ ಆರಂಭಿಸಿ. ಕ್ರಮೇಣ ಇದನ್ನು ವಿಸ್ತರಿಸಿ.
ಯುವಕರಿಗೆ ಸಂದೇಶ:
ನಾನು ಯುವ ಭಾರತೀಯರಿಗೆ ಒಂದು ಸಂದೇಶ ನೀಡಲು ಬಯಸುತ್ತೇನೆ. ಆರೋಗ್ಯವು ಒಂದು ದೀರ್ಘಕಾಲೀನ ಹೂಡಿಕೆ. ನಿಮ್ಮ ದೇಹಕ್ಕೆ 2 ಗಂಟೆಗಳ ವ್ಯಾಯಾಮ ಮತ್ತು ಮೆದುಳಿಗೆ 6 ಗಂಟೆಗಳ ನಿದ್ರೆಯನ್ನು ಸಮರ್ಪಿಸಿ. ಆರೋಗ್ಯಯುತ ಜೀವನವು ಕೇವಲ ದೈಹಿಕವಾಗಿ ಫಿಟ್ ಆಗಿರುವುದು ಮಾತ್ರವಲ್ಲ, ಇದು ನಿಮ್ಮ ಮನಸ್ಸನ್ನು ಸ್ಪಷ್ಟವಾಗಿಡುತ್ತದೆ ಮತ್ತು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸನ್ನು ತರುತ್ತದೆ. ಒಟ್ಟಾರೆಯಾಗಿ, ಸರಳ ಜೀವನಶೈಲಿ ಬದಲಾವಣೆಗಳಿಂದ ದೊಡ್ಡ ಫಲಿತಾಂಶಗಳನ್ನು ಸಾಧಿಸಬಹುದು. ನನ್ನ ಪಯಣ ಒಂದು ಉದಾಹರಣೆಯಷ್ಟೇ. ಇಂದಿನಿಂದಲೇ ಒಂದು ಚಿಕ್ಕ ಹೆಜ್ಜೆ ಇಡಿ, ಆರೋಗ್ಯಯುತ ಭವಿಷ್ಯವನ್ನು ಕಟ್ಟಿಕೊಳ್ಳಿ!