ಅವ್ವ ಪುಸ್ತಕೋತ್ಸವದಲ್ಲಿ ಹತ್ತು ಕೃತಿಗಳ ಲೋಕಾರ್ಪಣೆ; ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jan 31, 2024, 02:18 AM IST
Book Release 1 | Kannada Prabha

ಸಾರಾಂಶ

ಅವ್ವ ಪುಸ್ತಕೋತ್ಸವದಲ್ಲಿ ಹತ್ತು ಕೃತಿಗಳ ಲೋಕಾರ್ಪಣೆ; ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಕ್ಕಳನ್ನು ಯಾವುದೇ ಮಾಧ್ಯಮದಲ್ಲಿ ಓದಿಸಿದರೂ ಬಾಲ್ಯದಿಂದಲೇ ಕನ್ನಡ ಪುಸ್ತಕ ಓದುವ ತುಡಿತವನ್ನು ರೂಢಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಕನ್ನಡ ಓದುಗರು ಯಾರು ಎಂದು ಪ್ರಶ್ನಿಸುವ ಸಂದರ್ಭ ಬರಬಹುದು ಎಂದು ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ಆರ್‌.ಪೂರ್ಣಿಮಾ ಹೇಳಿದ್ದಾರೆ.

ಅವ್ವ ಪುಸ್ತಕಾಲಯದಿಂದ ನಡೆದ ‘ಅವ್ವ ಪುಸ್ತಕೋತ್ಸವ’ ಹತ್ತು ಕೃತಿಗಳ ಲೋಕಾರ್ಪಣೆ, ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ವರ್ಷಕ್ಕೆ ಕನ್ನಡದ ಸರಿಸುಮಾರು 8 ಸಾವಿರ ಪುಸ್ತಕ ಲೋಕಾರ್ಪಣೆ ಆಗುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಅದರ ಭರ್ಜರಿ ಪ್ರಚಾರವೂ ಆಗುತ್ತಿದೆ. ಆದರೆ ಎಷ್ಟು ಓದುಗರು ಪುಸ್ತಕ ಕೊಂಡು ಓದುತ್ತಿದ್ದಾರೆ ಎಂಬುದು ಇವತ್ತಿನ ಪ್ರಶ್ನೆಯಾಗಿ ಉಳಿದಿದೆ. ಇಂದಿನ ಮಕ್ಕಳೇ ನಾಳಿನ ಓದುಗರಾಗುವಂತೆ ರೂಪುಗೊಳಿಸುವ ಹೊಣೆ ಪೋಷಕರ ಮೇಲಿದೆ. ಇವತ್ತಿನ ಅಗತ್ಯಕ್ಕೆ ಯಾವ ಮಾಧ್ಯಮದಲ್ಲಿ ಓದಿದರೂ ಮಕ್ಕಳು ಕನ್ನಡದ ಓದುಗರಾಗಿಸಬೇಕು ಎಂದರು.

‘ಕನ್ನಡಪ್ರಭ’ ಪುರವಣಿ ಸಂಪಾದಕ ಗಿರೀಶ್‌ರಾವ್‌ ಹತ್ವಾರ್‌ (ಜೋಗಿ), ಹೊಗಳುವಿಕೆಯಿಂದ ಲೇಖಕ ಒಂದೇ ಶೈಲಿಯ ಬರವಣಿಗೆಯತ್ತ ವಾಲುವ ಸಾಧ್ಯತೆ ಇದೆ. ಹೀಗಾಗಿ ಮೆಚ್ಚುಗೆ ವ್ಯಕ್ತಪಡಿಸಿದವರನ್ನು ಕೊಂಚ ಅನುಮಾನದಿಂದಲೇ ನೋಡುತ್ತ ನಮ್ಮ ಬರವಣಿಗೆಯನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಬೇಕು ಎಂದರು.

ಪ್ರಸ್ತುತ ಕೃತಿಗಳು ಅತೀವೇಗವಾಗಿ ಮರುಮುದ್ರಣ ಕಾಣುತ್ತಿವೆ. ಆದರೆ, ಲೇಖಕ ಕೇವಲ ಅಂಕಿ ಅಂಶವನ್ನು ನೆಚ್ಚಿಕೊಳ್ಳಬಾರದು. ಅಂತರಂಗ ತೆರೆದಿಟ್ಟುಕೊಂಡು ಪುಸ್ತಕ ಕೊಂಡವರಲ್ಲೂ ನಮ್ಮ ಕೃತಿಯನ್ನು ನೈಜವಾಗಿ ಓದಿದವರು ಎಷ್ಟು ಎಂಬುದನ್ನು ಅರಿಯಬೇಕು ಎಂದು ಹೇಳಿದರು.

ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು ಫಾತಿಮಾ ರಲಿಯಾ (ಕಡಲು ನೋಡಲು ಹೋದವಳು) ಸ್ವೀಕರಿಸಿದರು. ಮುಖ್ಯ ಅತಿಥಿ ಮಹೇಶ್ ಅರಬಳ್ಳಿ ಮಾತನಾಡಿದರು. ಅನಂತ ಕುಣಿಗಲ್ ಆಶಯ ನುಡಿದರು. ಅನಸೂಯಾ‌ ಯತೀಶ್ ಪುಸ್ತಕ ಪರಿಚಯಿಸಿದರು. ಯುವ ನಿರೂಪಕಿ ಸ್ಫೂರ್ತಿ ಮುರಳಿಧರ್‌ ಹಾಗೂ ಸಂಜಯ್‌ ಶೆಟ್ಟಿ ಕೇರಳಾಪೂರ್‌ ಕಾರ್ಯಕ್ರಮ ನಿರೂಪಿಸಿದರು.

ಕೃತಿ ಬಿಡುಗಡೆ:

ಮಂಜುಳಾ ಭಾರ್ಗವಿ - ಪರಪಂಚ ನೀನೆ, ಉದ್ದೀಪನ ಕಿಡಿಗಳು, ಅನಂತ್ ಕುಣಿಗಲ್‌- ಕಾಡ್ಗಿಚ್ಚು, ಖೈದಿಯ ಗೋಡೆ ಕವಿತೆಗಳು, ದೀಪಿಕಾ ಬಾಬು- ಸ್ತ್ರೀ ಲಹರಿ, ಡಾ.ಚಾಂದಿನಿ ಖಲೀದ್‌-ತುಂತುರು, ಚೇತನ್‌ ಗವಿಗೌಡ-ಪೋಸ್ಟ್‌ ಬಾಕ್ಸ್‌, ಅಲೈಕ್ಯ ಮೈತ್ರೇಯಿ-ಪಿಂಕಿವೇ, ಸಮರ್ಥ ಶ್ರೀಧರ್‌- ಅಲೆಗಳ ಕಥೆ, ವೀಣಾ ರಾವ್‌- ಮಧುರಾ ಮುರಳಿ ಕೃತಿ ಬಿಡುಗಡೆಯಾದವು.

PREV

Recommended Stories

ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಅತ್ಯಂತ ಮನಮೋಹಕ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 650