ಕೆಲಸ ಬದಲಾದಾಗ ಎಸ್‌ಐಪಿ ನಿಲ್ಲಿಸಿದರೆ ಆಗುವ ತೊಂದರೆಗಳೇನು!

Published : Feb 10, 2026, 12:01 PM IST
SIP Investment

ಸಾರಾಂಶ

ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಆರ್ಥಿಕ ಅನಿಶ್ಚಿತತೆಯ ನೆಪವೊಡ್ಡಿ ನಾವು ಮಾಡುವ ಸಣ್ಣ ತಪ್ಪು, ಭವಿಷ್ಯದ ಲಾಭಕ್ಕೆ ಕತ್ತರಿ ಹಾಕಬಹುದು. ಎಸ್ಐಪಿ ನಿಲ್ಲಿಸುವುದು ನಿಮ್ಮ ಸಂಪತ್ತಿನ ಓಟಕ್ಕೆ ಹಾಕುವ ಬ್ರೇಕ್.

ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಆರ್ಥಿಕ ಅನಿಶ್ಚಿತತೆಯ ನೆಪವೊಡ್ಡಿ ನಾವು ಮಾಡುವ ಸಣ್ಣ ತಪ್ಪು, ಭವಿಷ್ಯದ ಲಾಭಕ್ಕೆ ಕತ್ತರಿ ಹಾಕಬಹುದು. ಎಸ್ಐಪಿ ನಿಲ್ಲಿಸುವುದು ನಿಮ್ಮ ಸಂಪತ್ತಿನ ಓಟಕ್ಕೆ ಹಾಕುವ ಬ್ರೇಕ್. ಹಾಗಾಗಿ ಏನು ಮಾಡಬೇಕು, ಏನು ಮಾಡಬಾರದು ಎಂದು ಈ ಲೇಖನದಲ್ಲಿ ನೋಡೋಣ.

ಗೌರವ್‌ ಜೆನ್‌ ಜೀ ಯುವಕ. ಚಿಕ್ಕ ವಯಸ್ಸಲ್ಲೇ ಎಸ್‌ಐಪಿಯಲ್ಲಿ ಹೂಡಿಕೆ ಆರಂಭಿಸಿದ್ದ. ಸುಗಮವಾಗಿ ಹೂಡಿಕೆ ಸಾಗುತ್ತಿತ್ತು. ಇಂಥಾ ವೇಳೆಯಲ್ಲೇ ಈತ ಉದ್ಯೋಗ ಬದಲಾಯಿಸಬೇಕಾಯ್ತು. ಹೊಸ ಕೆಲಸ ಹುಡುಕಿಕೊಂಡರೂ ತಕ್ಷಣದ ಅನಿಶ್ಚಿತತೆಯಿಂದ ಪಾರಾಗಲು ಎಸ್‌ಐಪಿ ಅನ್ನು ನಿಲ್ಲಿಸಿದ. ಪರಿಸ್ಥಿತಿ ಸರಿಹೋದ ಮೇಲೆ ವಾಪಾಸ್‌ ಶುರು ಮಾಡಿದ್ರಾಯ್ತು ಅಂದುಕೊಂಡ. ಆದರೆ ಮತ್ತೆ ಉತ್ತಮ ಆರ್ಥಿಕ ಸ್ಥಿತಿಗೆ ಮರಳುವ ಹೊತ್ತಿಗೆ ವರ್ಷಗಳೇ ಕಳೆದಿದ್ದವು, ಮಾರುಕಟ್ಟೆ ಎಷ್ಟೋ ಮುಂದೆ ಸಾಗಿತ್ತು. ಲಾಭ ಬಹಳ ಕಡಿಮೆ ಇತ್ತು. ಯಾಕೆ ಹೀಗಾಯಿತು ಎಂಬುದನ್ನು ಇಲ್ಲಿ ತಿಳಿಯೋಣ.

ಅಭ್ಯಾಸ ತಪ್ಪಿದರೆ ಅಪಾಯ ಕಾಯಂ

ಅನೇಕ ಹೂಡಿಕೆದಾರರು ಉದ್ಯೋಗ ಬದಲಿಸುವಾಗ ಅಥವಾ ಆದಾಯದಲ್ಲಿ ವ್ಯತ್ಯಾಸವಾದಾಗ ಮೊದಲು ಮಾಡುವ ಕೆಲಸ ಎಸ್ಐಪಿ ಸ್ಥಗಿತಗೊಳಿಸುವುದು. ‘ಪರಿಸ್ಥಿತಿ ಸುಧಾರಿಸಿದ ಮೇಲೆ ಮತ್ತೆ ಆರಂಭಿಸೋಣ’ ಎಂಬ ಈ ಆಲೋಚನೆಯೇ ಹೂಡಿಕೆದಾರರ ವಿಲನ್‌. ಒಮ್ಮೆ ಹೂಡಿಕೆಯ ಸರಪಳಿ ಮುರಿದರೆ, ಮಾರುಕಟ್ಟೆ ಚೇತರಿಸಿಕೊಂಡರೂ ಮಾನಸಿಕವಾಗಿ ಮತ್ತೆ ಹೂಡಿಕೆ ಆರಂಭಿಸಲು ಹೂಡಿಕೆದಾರರು ಹಿಂಜರಿಯುತ್ತಾರೆ. ಇದು ಕೇವಲ ಮಾರುಕಟ್ಟೆಯ ನಷ್ಟವಲ್ಲ, ಬದಲಾಗಿ ಹೂಡಿಕೆಯ ಶಿಸ್ತಿನ ಕುಸಿತ.

ಸಣ್ಣ ವಿರಾಮ, ದೊಡ್ಡ ನಷ್ಟ

ತಿಂಗಳಿಗೆ ರು. 20,000 ಎಸ್ಐಪಿ ಮಾಡುವ ವ್ಯಕ್ತಿ, ವರ್ಷದಲ್ಲಿ ಕೇವಲ ಒಂದು ತಿಂಗಳು ಹೂಡಿಕೆ ತಪ್ಪಿಸಿದರೂ, ಮುಂದಿನ 20-25 ವರ್ಷಗಳಲ್ಲಿ ಅಂದಾಜು ₹35 ಲಕ್ಷದಷ್ಟು ಸಂಯೋಜಿತ ಲಾಭವನ್ನು ಕಳೆದುಕೊಳ್ಳಬೇಕಾಗುತ್ತದೆ. ‘ಹೂಡಿಕೆ ಮಾಡದ ಹಣವು ಎಂದಿಗೂ ಹೆಚ್ಚುವುದಿಲ್ಲ’ ಎಂಬ ತಜ್ಞರು ಮಾತು ಈ ವಿಚಾರದಲ್ಲಿ ಅಕ್ಷರಶಃ ನಿಜ.

ಸುರಕ್ಷಿತ ಹೂಡಿಕೆಗೆ ತಜ್ಞರ ಸಲಹೆಗಳು

- ಆದಾಯದ ಕೊರತೆಯಿದ್ದರೆ ಎಸ್ಐಪಿ ಸಂಪೂರ್ಣ ನಿಲ್ಲಿಸುವ ಬದಲು, ಅದರ ಮೊತ್ತವನ್ನು ಕನಿಷ್ಠ ಮಟ್ಟಕ್ಕೆ ಇಳಿಸಿ. ಇದು ನಿಮ್ಮ ಹೂಡಿಕೆಯ ಹವ್ಯಾಸವನ್ನು ಜೀವಂತವಾಗಿರಿಸುತ್ತದೆ.

- ಉದ್ಯೋಗ ಬದಲಾವಣೆಯ ಸಮಯದ ಖರ್ಚುಗಳಿಗಾಗಿ ಪ್ರತ್ಯೇಕ ತುರ್ತು ನಿಧಿಯನ್ನು ಇಟ್ಟುಕೊಳ್ಳಿ. ಎಸ್ಐಪಿ ಹಣವನ್ನು ಅದಕ್ಕೆ ಬಳಸಬೇಡಿ.

- ಹೂಡಿಕೆಯು ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತವಾಗುವಂತೆ ನೋಡಿಕೊಳ್ಳಿ. ನಿರ್ಧಾರಗಳು ಭಾವನಾತ್ಮಕವಾಗಿರದೆ, ಪ್ರಾಕ್ಟಿಕಲ್‌ ಆಗಿರಲಿ.

ಹೂಡಿಕೆದಾರರು ಮುಖ್ಯವಾಗಿ ಅರಿತುಕೊಳ್ಳಬೇಕಾದ್ದು, ಇಲ್ಲಿ ನಿರಂತರತೆ ಹಾಗೂ ಸ್ಥಿರತೆಗೆ ಲಾಭ ಜಾಸ್ತಿ. ನಿಮ್ಮ ಉದ್ದೇಶ, ಎಷ್ಟು ಹೂಡಿಕೆ ಮಾಡುತ್ತಿದ್ದೀರಿ ಅನ್ನುವುದರ ಜೊತೆಗೆ ಹೂಡಿಕೆಯಲ್ಲಿ ಶಿಸ್ತು ಬಹಳ ಮುಖ್ಯ. ಅದನ್ನು ಕಾಪಾಡಿಕೊಳ್ಳಬೇಕು.

 

PREV
Read more Articles on

Recommended Stories

ಇನ್ನು 3 ವರ್ಷದಲ್ಲಿ ಆಕಾಶದಲ್ಲೂ ಎಐ ಕೆಲಸ: ಎಲಾನ್‌ ಮಸ್ಕ್‌
ನೀವೂ ‘ಹೋಮೋ ವಲ್ಗರಿಕಸ್‌’ ಪಂಗಡವೇ?! ಮೊಬೈಲ್‌ ಹಿಡಿದು ಅಸಭ್ಯ ವರ್ತನೆ