ಗಿರೀಶ್ ಮಾದೇನಹಳ್ಳಿ
ರಾಜಧಾನಿಗೆ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್)ಯಿಂದ ‘ಶಾಪ ಮುಕ್ತಿ’ಗೊಳಿಸಲು ಯೋಜಿಸಿರುವ ಸಂಚಾರ ವಿಭಾಗದ ಪೊಲೀಸರು. ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸೇರಿದಂತೆ ಇತರೆ ಇಲಾಖೆಗಳನ್ನು ಸಂಯೋಜನೆಗೊಳಿಸಿ 25 ಕೋಟಿ ರು. ವೆಚ್ಚದ ‘ಮೊಬೈಲಿಟಿ ಡಿಜಿಟಲ್ ಟ್ವೀನ್’ (ಎಂಡಿಟಿ) ಎಂಬ ಹೊಸ ಯೋಜನೆಯನ್ನು ರೂಪಿಸಿದ್ದಾರೆ.
ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರವು ಸಕರಾತ್ಮಕವಾಗಿ ಸ್ಪಂದಿಸಿದ್ದು, ಈ ವರ್ಷದ ಬಜೆಟ್‌ನಲ್ಲಿ ಸಂಚಾರ ಪೊಲೀಸರ ಯೋಜನೆಯನ್ನು ಬೆಂಗಳೂರಿಗರಿಗೆ ಕೊಡುಗೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುವ ಸಾಧ್ಯತೆಯಿದೆ.ಈ ಯೋಜನೆ ಮೂಲಕ ಸಂಚಾರ ದಟ್ಟಣೆ ಹಾಗೂ ಜನಸಂದಣಿ ನಿರ್ವಹಣೆ ಸಂಬಂಧ ಪರಸ್ಪರ ಆರೋಪಿಸಿಗೊಳ್ಳದೆ ಪೊಲೀಸರಷ್ಟೇ ಜಿಬಿಎ ಹಾಗೂ ಮೆಟ್ರೋ ಸೇರಿ ಇತರೆ ಇಲಾಖೆಗಳನ್ನು ಜವಾಬ್ದಾರಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಏನಿದು ಯೋಜನೆ?:
ಸಂಚಾರ ಸಮಸ್ಯೆಗೆ ಅನಿರೀಕ್ಷಿತವಾಗಿ ಜನಸಂಖ್ಯೆ ಬೆಳವಣಿಗೆ, ವಾಹನಗಳ ಸಂಖ್ಯೆ ಹೆಚ್ಚಳ ಹಾಗೂ ಹದಗೆಟ್ಟ ರಸ್ತೆಗಳು ಮಾತ್ರವಲ್ಲದೆ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಸಹ ಪ್ರಮುಖ ಕಾರಣವಾಗಿದೆ. ಇದಕ್ಕೆ ಪೊಲೀಸರನ್ನು ಹೊಣೆಗಾರರನ್ನಾಗಿ ಜಿಬಿಎ, ಬೆಸ್ಕಾಂ, ಮೆಟ್ರೋ ಹಾಗೂ ಜಲಮಂಡಳಿ ಇತರೆ ಇಲಾಖೆಗಳು ಮಾರು ದೂರ ನಿಲ್ಲುತ್ತವೆ. ಈಗ ಸಂಚಾರ ದಟ್ಟಣೆಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಇತರೆ ಇಲಾಖೆಗಳಿಗೆ ಸರ್ಕಾರ ಸೂಚಿಸಿದೆ. ಈ ನಿಟ್ಟಿನಲ್ಲಿ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ತಾಂತ್ರಿಕತೆ ಬಳಸಿಕೊಂಡು ಹೊಸ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.ಉದಾಹರಣೆಗೆ ರಸ್ತೆ ಕಾಮಗಾರಿ ಕೈಗೊಂಡರೆ ಆ ಮಾರ್ಗದ ಸಂಪೂರ್ಣ ಚಿತ್ರಣ ಎಂಡಿಟಿಯಲ್ಲಿ ಆಪ್ ಲೋಡ್ ಮಾಡಬೇಕಾಗುತ್ತದೆ. ಆಗ ಆ ರಸ್ತೆಗೆ ಪೊಲೀಸರು ಪರ್ಯಾಯ ರಸ್ತೆಗಳನ್ನು ಸೂಚಿಸಲಿದ್ದಾರೆ. ಅದೇ ರೀತಿ ಮೆಟ್ರೋ ನಿಲ್ದಾಣಗಳಲ್ಲಿ ಜನ ಸಂದಣಿ ಉಂಟಾದರೆ ತಕ್ಷಣವೇ ಮೆಟ್ರೋ ಅಧಿಕಾರಿಗಳು ಮಾಹಿತಿ ಕೊಡಬೇಕು. ಆಗ ಜನದಟ್ಟಣೆ ಉಂಟಾಗದಂತೆ ಮುಂಜಾಗ್ರತೆ ವಹಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಎಂಡಿಟಿ ಪ್ರತ್ಯೇಕ ಆ್ಯಪ್ ಸಹ ಇರಲಿದೆ. ಆ ಆ್ಯಪ್‌ನಲ್ಲಿ ಎಲ್ಲ ಇಲಾಖೆಗಳು ಸಂಯೋಜನೆಗೊಳಿಸಲಾಗುತ್ತದೆ. ಪ್ರತಿ ಕ್ಷಣದ ಮಾಹಿತಿ ಅಲ್ಲಿ ಆಪ್ ಡೇಟ್ ಆಗಲಿದೆ. ಇದರಿಂದ ಯಾವ್ಯಾವ ರಸ್ತೆಗಳಲ್ಲಿ ಕಾಮಗಾರಿ ನಡೆದಿದೆ, ಜನರ ಜಮಾವಣೆ ಹಾಗೂ ವಾಹನಗಳ ಓಡಾಟದ ಬಗ್ಗೆ ಮಾಹಿತಿ ಸಿಗಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಘಟನೆ ನೆನಪು:
ಜನದಟ್ಟಣೆ ನಿರ್ವಹಣೆಗೆ ಸಹ ಒತ್ತು ಕೊಡಲಾಗಿದೆ. ದಿಢೀರನೇ ಜನ ಜಮಾವಣೆಗೊಂಡರೆ ಸಂಚಾರಕ್ಕೆ ಮಾತ್ರವಲ್ಲ ಕಾನೂನು ಮತ್ತು ಸುವ್ಯವಸ್ಥೆ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಇಲಾಖೆಗಳು ಒಬ್ಬರಿಗೊಬ್ಬರು ಪೂರಕವಾಗಿ ಕಾರ್ಯನಿರ್ವಹಿಸಿದರೆ ಅನಾಹುತಗಳು ತಪ್ಪಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.ಇದಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತವು ಉದಾಹರಣೆಯಾಗಿದೆ. ಆ ದಿನ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಬಗ್ಗೆ ಸಕಾಲದಲ್ಲಿ ಲಭ್ಯವಾಗಿದ್ದರೆ ಪೊಲೀಸರು ಮತ್ತಷ್ಟು ಬಂದೋಬಸ್ತ್ ಮಾಡಿಕೊಳ್ಳಲು ಅವಕಾಶವಾಗುತ್ತಿತ್ತು ಎಂದು ತಿಳಿಸಿದ್ದಾರೆ.