ರಾಮ ಧರೆಗವತರಿಸಿದ ಪುಣ್ಯ ದಿನವೇ ಶ್ರೀರಾಮನವಮೀ
-ಧರ್ಮ ಕಾರ್ಯ-ರಾಮನ ನೆಪದಲ್ಲಿ ಪ್ರಸಾದ ರೂಪದಲ್ಲಿ ಹೆಸರುಬೇಳೆ ಸ್ವೀಕರಿಸುವುದರಿಂದ ಉಷ್ಣ ಕಾಲದಲ್ಲಿ ದೇಹವೂ ತಂಪು
-ಡಾ। ಗಣಪತಿ ಆರ್.ಭಟ್, ಸಂಸ್ಕೃತ ಪ್ರಾಧ್ಯಾಪಕ. ಬೆಂಗಳೂರು.
ಲೋಕದಲ್ಲಿ ಮಹಾಪುರುಷರು ಹೇಗಿರುತ್ತಾರೆ ಎಂಬುದಕ್ಕೆ ‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ ಎಂಬುದಾಗಿ ಕಠಿಣವೆಂದರೆ ಇಂದ್ರನ ವಜ್ರಾಯುಧಕ್ಕಿಂತಲೂ ಕಠಿಣ, ಮೃದುವೆಂದರೆ ಕೋಮಲವಾದ ಹೂವಿಗಿಂತಲೂ ಮೃದುವಾಗಿರುತ್ತಾರೆ ಎಂಬುದಾಗಿ ಕವಿ ಭವಭೂತಿ ಗುಣಗಾನ ಮಾಡುತ್ತಾನೆ. ಈ ಸೂಕ್ತಿಯನ್ನು ಕವಿಯು ಹೇಳಿದ್ದು ಪುರುಷೋತ್ತಮನೆನಿಸಿದ ಶ್ರೀರಾಮನನ್ನು ಉದಾಹರಿಸಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ನಮ್ಮ ಭರತಭೂಮಿಯನ್ನು ತಪೋಬಲದಿಂದ ಪುಣ್ಯಭೂಮಿಯಾಗಿಸಿದವರು ಅನೇಕ ಋಷಿಮುನಿಗಳಾದರೆ, ಕ್ಷಾತ್ರಬಲದಿಂದ ತೇಜೋಮಯರಾಗಿಸಿದವರು ಲೆಕ್ಕವಿಲ್ಲದಷ್ಟು ರಾಜರುಗಳು. ಸುದೀರ್ಘವಾದ ಸಂಸ್ಕೃತಿಯ ಪರಂಪರೆಯನ್ನೇ ಹೊತ್ತಿರುವ ಈ ಭೂಮಿಗೆ ವಿದ್ಯಾಬಲದಿಂದ ಪಾವಿತ್ರ್ಯವನ್ನೂ, ಕ್ಷಾತ್ರಬಲದಿಂದ ಕಾಂತಿಯನ್ನೂ ನೀಡಿದ ರಾಜರ್ಷಿಯು ಪ್ರಭು ಶ್ರೀರಾಮಚಂದ್ರ. ಇಂಥ ಲೋಕೋತ್ತರ ಪುರುಷನಾದ ಶ್ರೀರಾಮನು ಧರೆಗವತರಿಸಿದ ಪುಣ್ಯ ದಿನವೇ ಶ್ರೀರಾಮನವಮೀ.
ರಾಮಾವತರಣದ ಪುಣ್ಯಗಳಿಗೆ:
ಈ ಲೋಕದಲ್ಲಿ ದುಷ್ಕೃತಿಯು ಹೆಚ್ಚಾದಾಗ ದುಷ್ಟರ ವಿನಾಶವಾಗಿ, ಶಿಷ್ಟಾಚಾರದ ರಕ್ಷಣೆಯಾಗಿ, ಧರ್ಮ ಸ್ಥಾಪನೆಯಾಗಲು ಭಗವದವತರಣವಾಗಬೇಕಲ್ಲ? ಅಂಥದ್ದೊಂದು ಭೂಮಿಕೆಯು ರಾಮಾವತರಣಕ್ಕೂ ಇತ್ತು. ರಾಮನ ಚರಿತ್ರೆಯನ್ನು ಅಧಿಕೃತವಾಗಿ ಸಾರುವ ಮುನಿ ವಾಲ್ಮೀಕಿ ವಿರಚಿತ ಐತಿಹಾಸಿಕ ಕಾವ್ಯವಾದ ಶ್ರೀಮದ್ ರಾಮಾಯಣ ಗ್ರಂಥವು ರಾಮಾವತರಣದ ವಿವರಣೆಯನ್ನು ನಮಗೆ ವಿಶದಪಡಿಸುತ್ತದೆ. ಮನುಷ್ಯ ಮಾತ್ರರಿಂದಲೇ ತನ್ನ ಮರಣ ಸಾಧ್ಯವೆಂಬ ವರವನ್ನು ಪಡೆದು ಅಹಂಕಾರದಿಂದ ಮೆರೆಯುತ್ತಲಿದ್ದ ರಾವಣನ ಸಂಹಾರಕ್ಕೆಂದು ಶ್ರೀಮನ್ನಾರಾಯಣನು ಸಂಕಲ್ಪ ಮಾಡಿದಾಗ ಭಗವದವತರಣಕ್ಕೆ ಭೂಮಿಯಲ್ಲಿ ಯಥೋಚಿತವಾದ ಆಶ್ರಯವು ಒದಗಿಬಂದಿದ್ದು ಸೂರ್ಯವಂಶವೆಂಬ ಪುಣ್ಯಕುಲದಲ್ಲಿ. ಸಂತಾನವಿಲ್ಲದೆ ಪರಿತಪಿಸುತ್ತಲಿದ್ದ ರಾಜಾ ದಶರಥನು ನಡೆಸಿದ ಮಹಾಯಾಗದ ಕೊನೆಯಲ್ಲಿ ಪ್ರಸಾದರೂಪದಲ್ಲಿ ಸೇವಿಸಿದ ಪಾಯಸವು ಸೇವಿಸಿದವರ ಬಾಯನ್ನಷ್ಟೇ ಸವಿಗೊಳಿಸಲಿಲ್ಲ. ಬದಲಾಗಿ ಆ ಪಾಯಸವೇ ಭಗವದವತರಣಕ್ಕೆ ಧಾತುವಾಗಿ ತನ್ಮೂಲಕವೇ ರಾಮನು ಜನಿಸಿ ಇಡೀ ಲೋಕವೇ ಸವಿಯನ್ನುಂಡಿತು!
ತತಶ್ಚ ದ್ವಾದಶೇ ಮಾಸೇ ಚೈತ್ರೇ ನಾವಮಿಕೇ ತಿಥೌ||
ನಕ್ಷತ್ರೆಽದಿತಿದೈವ ಸೊಚ್ಚಸಂಸ್ಥೇಷು ಪಂಚಸು|
ಗ್ರಹೇಷು ಕರ್ಕಟೇ ಲಗ್ನೇ ವಾಕ್ಪತಾವಿಂದುನಾ ಸಹ||
ಪ್ರೊದ್ಯಮಾನೇ ಜಗನ್ನಾಥಂ ಸರ್ವಲೋಕನಮಸ್ಕೃತಮ್|
ಕೌಸಲ್ಯಾಜನಯದ್ರಾಮಂ ಸರ್ವಲಕ್ಷಣಸಂಯುತಮ್||
ಎಂಬುದಾಗಿ ವಾಲ್ಮೀಕಿ ರಾಮಾಯಣವು ಚೈತ್ರಮಾಸದ ನವಮೀ ತಿಥಿಯಂದು ಬುಧವಾರ ಮಧ್ಯಾಹ್ನಕಾಲದಲ್ಲಿ ಪುನರ್ವಸು ನಕ್ಷತ್ರವೂ, ಕರ್ಕಾಟಕ ಲಗ್ನವೂ ಇರುವಾಗ ದಶರಥರಾಜನ ಜ್ಯೇಷ್ಠಪುತ್ರನಾಗಿ, ಸರ್ವಲಕ್ಷಣಸಂಪನ್ನನಾದ ರಾಮನಾಗಿ ಜನಿಸುವ ಮೂಲಕ ಸರ್ವನಮಸ್ಕೃತನಾದ ಜಗನ್ನಾಥನ ಅವತರಣವಾಯಿತು ಎಂದು ಬಣ್ಣಿಸುತ್ತದೆ.
ಹೆಸರಿಗೆ ತಕ್ಕಂತೆ ಬದುಕಿದ ರಾಮ:
ಅರಮನೆಯಲ್ಲಿ ಹುಟ್ಟಿದ ಮೊದಲ ಸಂತಾನವು ಸಹಜವಾಗಿಯೇ ಎಲ್ಲರ ಆನಂದವನ್ನು ವರ್ಧಿಸುತ್ತದಲ್ಲ. ಹಾಗಾಗಿ ಆತನಿಗಿಟ್ಟ ರಾಮ ಎಂಬ ಹೆಸರು ಅನ್ವರ್ಥವೇ ಆಯಿತು. ಹಾಗೆ ಇಟ್ಟ ಹೆಸರಿಗೆ ಅನ್ವರ್ಥವಾಗುವಂತೆ ಆತನು ಬದುಕಿದನಲ್ಲ ಅದುವೇ ಆತನನ್ನು ಚಾರಿತ್ರಿಕನನ್ನಾಗಿ ಮಾಡಿದ್ದು ಸುಳ್ಳಲ್ಲ. ಬಾಲ್ಯದಲ್ಲಿ ರಕ್ಷಣೆಯನ್ನು ಕೋರಿ ಬಂದ ವಿಶ್ವಾಮಿತ್ರರನ್ನು ಹಿಂಬಾಲಿಸಿ ಅವರ ಮನೋರಥವನ್ನು ಪೂರೈಸಿದ್ದು, ಅಹಲ್ಯೆಗೆ ವಿಮೋಚನೆಯನ್ನು ಕೊಡಿಸಿದ್ದು, ಪಿತೃವಾಕ್ಯವನ್ನು ಉಳಿಸಲಿಕ್ಕಾಗಿ ಪಟ್ಟವನ್ನು ಬಿಟ್ಟು ಕಾಡಿಗೆ ತೆರಳಿ, ತಾಯಿ ಕೈಕೇಯಿಯನ್ನು ಸಮಾಧಾನ ಪಡಿಸಿದ್ದು, ತನ್ನ ಬರುವಿಕೆಗಾಗಿ ಕಾದಿದ್ದ ವೃದ್ಧ ಶಬರಿಯನ್ನು ಉದ್ಧರಿಸಿದ್ದು, ಸುಗ್ರೀವನಿಗೆ ರಾಜ್ಯ ಕೊಡಿಸಿ ಸಂತೈಸಿದ್ದು, ಭಕ್ತ ಆಂಜನೇಯನಿಗೆ ಸೇವೆಯ ಭಾಗ್ಯವನ್ನು ಕರುಣಿಸಿ ತೃಪ್ತಿಗೊಳಿಸಿದ್ದು, ಹಸ್ತಚಾಚಿದ ವಿಭೀಷಣನಿಗೆ ಸ್ನೇಹದ ಸಿಂಚನ ಹರಿಸಿದ್ದು... ಹೀಗೆ ಆತನ ಚರಿತ್ರೆಯ ಪ್ರತಿ ಪುಟವೂ ತನ್ನ ನಂಬಿ ಬಂದವರಿಗೆ ಆತ ಸುಖದ ಖನಿಯೆಂದೂ, ಧರ್ಮದುರುಳರಿಗೆ ಸುಡುವ ಅಗ್ನಿಯೆಂಬುದನ್ನೂ ಸಾರುತ್ತದೆ. ವಾಲ್ಮೀಕಿ ಮಹರ್ಷಿಗಳು ‘ಗುಣವಂತನೂ, ಶಕ್ತಿವಂತನೂ, ಕೃತಜ್ಞನೂ, ಸಕಲ ಪ್ರಾಣಿಗಳಲ್ಲಿ ದಯೆಯುಳ್ಳವನೂ, ಇಂದ್ರಿಯನಿಗ್ರಹಿಯೂ ವ್ಯಕ್ತಿ ಪ್ರಸ್ತುತ ಲೋಕದಲ್ಲಿ ಯಾರಿದ್ದಾರೆಂದು ಜಿಜ್ಞಾಸುವಾಗಿ ನಾರದ ಮುನಿಗಳಲ್ಲಿ ಕೇಳಿದಾಗ, ಆ ಎಲ್ಲ ಗುಣಗಳು ಒಬ್ಬರಲ್ಲಿಯೇ ಇರುವುದು ವಿರಳವಾದರು ಅವರು ಉದಾಹರಿಸುವುದು ರಾಮನನ್ನು. ಉಪನಿಷತ್ ವಾಣಿಯೊಂದು ರಾಮ ಶಬ್ದವನ್ನು ನಿರ್ವಾಚಿಸುವ ರೀತಿಯನ್ನು ಗಮನಿಸಿ;
ರಮಂತೇ ಯೋಗಿನೋಽನಂತೇ ನಿತ್ಯಾನಂದೇ ಚಿದಾತ್ಮನಿ|
ಇತಿ ರಾಮಪದೇನಾಸೌ ಪರಂಬ್ರಹ್ಮಾಭಿಧೀಯತೆ||
‘ಅನಂತವೂ, ನಿತ್ಯಾನಂದವೂ, ಚಿನ್ಮಯವೂ ಆದ ಯಾವ ಪರಬ್ರಹ್ಮತತ್ತ್ವದಲ್ಲಿ ಯೋಗಿಗಳು ಆನಂದವನ್ನು ಹೊಂದುತ್ತಾರೆಯೋ ಆ ತತ್ತ್ವಕ್ಕೆ ಇರುವ ಹೆಸರೇ ರಾಮ’ ಅಲ್ಲಿಗೆ ಪರಬ್ರಹ್ಮವನ್ನು ಅನುಸಂಧಾನ ಮಾಡುವ ಯೋಗಿಗಳಿಗೆ ಆತನು ಸಾಕ್ಷಾತ್ ಪರಬ್ರಹ್ಮವೇ ಆಗಿದ್ದಾನೆ ಎಂಬುದು ವಾಸ್ತವ.
ಕರ್ತವ್ಯಪ್ರಜ್ಞೆಗೆ ಇನ್ನೊಂದು ಹೆಸರು ರಾಮ:
ಭಗವಂತನು ತನ್ನ ಕೃಷ್ಣಾವತರಣದಲ್ಲಿ ಕರ್ತವ್ಯಪ್ರಜ್ಞೆಯನ್ನು ಉಪದೇಶದ ಮೂಲಕ ಬಹಳ ಸೊಗಸಾಗಿ ನಿರೂಪಿಸುತ್ತಾನೆ. ಆದರೆ ಅದಕ್ಕೂ ಮುನ್ನವೇ ಕರ್ತವ್ಯಪ್ರಜ್ಞೆಯ ಪ್ರಯೋಗವಿಧಿಯನ್ನು ರಾಮಾವತರಣದ ಮೂಲಕ ಭಗವಂತನು ತೋರಿಸಿದ್ದಾನೆ. ಪಿತೃವಾಕ್ಯಪರಿಪಾಲನೆ ಮಾಡುತ್ತ ಪಟ್ಟವನ್ನು ತ್ಯಾಗ ಮಾಡಿ ಕಾಡಿಗೆ ನೆಡೆಯುತ್ತ, ಅಯೋಧ್ಯೆಗೆ ಹತ್ತಿರದಲ್ಲಿದ್ದರೆ ತನ್ನ ಪ್ರತಿಜ್ಞೆಗೆ ಭಂಗಬರುವುದೆಂದು ಭರದ್ವಾಜರ ಆಶ್ರಯವನ್ನು ನಿರಾಕರಿಸಿ ದಂಡಕಾರಣ್ಯ ಪ್ರವೇಶಿಸುವ ರಾಮನು ಮುಂದೆ ಉತ್ತರಕಾಂಡದಲ್ಲಿ ಜನರ ಶಂಕೆಯನ್ನು ನಿವಾರಿಸಲು, ಸೀತೆಯನ್ನೂ ಪರಿತ್ಯಾಗ ಮಾಡಿ, ತನ್ನ ಕಾಲೀನವಾದ ರಾಜಧರ್ಮಕ್ಕೆ ಮನ್ನಣೆಯನ್ನು ನೀಡುತ್ತಾನೆ. ಮೇಲ್ನೋಟಕ್ಕೆ ರಾಮನು ನಿಷ್ಕರುಣಿಯಂತೆ ಕಂಡುಬಂದರೂ ಆಯಾ ಸಂದರ್ಭಗಳಲ್ಲಿ ಯಾವುದು ನ್ಯಾಯವೋ ಅದನ್ನು ವಿವೇಚಿಸಿ ಧರ್ಮಕ್ಕೆ ಹಿತವಾಗುವಂತೆ ಮಾಡುತ್ತಾನೆ.
ರಾಮನವಮಿಯ ಆಚರಣೆ ಹೇಗೆ?
ಶ್ರೀಮನ್ನಾರಾಯಣನ ಏಳನೆಯ ಅವತಾರವೆನಿಸಿದ ಶ್ರೀರಾಮನು ಜನಿಸಿದ ದಿನವು ಚಾಂದ್ರಮಾನ ಪದ್ಧತಿಯಂತೆ ಚೈತ್ರಮಾಸದ ಶುಕ್ಲಪಕ್ಷದ ನವಮೀ ತಿಥಿಯಂದು ಎಂಬುದನ್ನು ವಿದ್ವಾಂಸರೆಲ್ಲ ಏಕಮತದಿಂದ ಒಪ್ಪುತ್ತಾರೆ. ವಿಶೇಷತಃ ಭಕ್ತರು ವ್ರತವಾಗಿ ಇದನ್ನು ಆಚರಿಸುವುದು ವಾಡಿಕೆ. ಹಿಂದಿನ ದಿನದ ರಾತ್ರಿಯಿಂದಲೇ ನಿರಾಹಾರ, ಫಲಾಹಾರಾದಿ ಉಪವಾಸವನ್ನು ಕೈಗೊಂಡು ಈ ವ್ರತವನ್ನು ಆಚರಿಸುವುದು ಹೆಚ್ಚು ಸೂಕ್ತ. ನವಮಿಯ ದಿನ ಮಂಟಪವನ್ನು ನಿರ್ಮಿಸಿ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಬಹುದು. ರಾಮತಾರಕಹೋಮ, ರಾಮನಾಮ ಜಪ ಇತ್ಯಾದಿ ಕೈಗೊಳ್ಳಲು ಈ ದಿನ ಅತ್ಯಂತ ಸೂಕ್ತವಾದುದು. ಅಂದಹಾಗೆ ನಮ್ಮ ವ್ರತ-ಪರ್ವಗಳು ನಮ್ಮ ಚಟುವಟಿಕೆ ಮತ್ತು ನಿಸರ್ಗದ ಬದಲಾವಣೆಯ ಜೊತೆಗೆ ಸದಾ ಪೂರಕವಾಗಿಯೇ ಇರುತ್ತದೆಯಲ್ಲ. ಕೃಷಿಯೇ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ಈಗ ಕೃಷಿ ಚಟುವಟಿಕೆಗೆ ಸ್ವಲ್ಪ ಬಿಡುವಿನ ಕಾಲ. ವಾತಾವರಣದಲ್ಲಿ ಚಳಿ ಪೂರ್ತಿ ಕಡಿಮೆಯಾಗಿ ಈಗ ಉಷ್ಣ ಹವೆಯು ಪಸರಿಸುತ್ತಿರುವುದರಿಂದ ನಮ್ಮ ಆರೋಗ್ಯವನ್ನು ಆಹಾರ-ವಿಹಾರಾದಿ ಚರ್ಯೆಗಳ ಮೂಲಕ ಸಮತೋಲನದಲ್ಲಿರಿಸಿ ಕೊಳ್ಳುವಂತೆ ಈ ರಾಮನವಮೀ ಪರ್ವವು ನಮಗೆ ಅನುವು ಮಾಡಿಕೊಡುತ್ತದೆ. ಅದು ಹೇಗೆ ಎನ್ನುವಿರಾ? ಹೆಸರುಬೇಳೆ ಇತ್ಯಾದಿ ಧಾನ್ಯಗಳಿಂದ ಮಾಡಿದ ಕೋಸಂಬರಿ, ಬೆಲ್ಲದ ಪಾನಕವೂ ಈ ಪರ್ವಕಾಲದಲ್ಲಿ ಯಥೇಷ್ಟವಾಗಿ ಪ್ರಸಾದ ರೂಪದಲ್ಲಿ ಸ್ವೀಕರಿಸುವುದರಿಂದ ದೇಹವೂ ತಂಪಾಗಿರುತ್ತದೆ.