;Resize=(412,232))
- ಕೆಪಿಸಿಸಿ ಕಚೇರಿಯಲ್ಲಿ ‘ಸಿದ್ದು ಮೇಷ್ಟ್ರು’ ಪ್ರೋಟೋಕಾಲ್ ಪಾಠ ಮಾಡಿದ್ದೇಕೆ? । ಸಿಎಂ ಪ್ರಶ್ನೆ ಕೇಳಿ ಜನ ಗೊಳ್ ಎಂದಿದ್ದೇಕೆ?
ದೀಪಾವಳಿ ಬಂತು ಅಂದರೆ ಮಕ್ಕಳಿಗೆ ಪಟಾಕಿ ಹೊಡೆಯುವ ಸಂಭ್ರಮ. ದೊಡ್ಡವರಿಗೆ ಇಸ್ಪೀಟ್ ಆಡಲು ಮತ್ತೊಂದು ನೆಪ. ನಮ್ಮ ಕೊಪ್ಪಳದಲ್ಲಂತೂ ಬೆಳಕಿನ ಹಬ್ಬದ ರಾತ್ರಿಯೆಲ್ಲ ಎಲೆಯಾಟದಬ್ಬರವೋ ಅಬ್ಬರ! ರಾಜಕಾರಣಿಗಳಿಂದ ಆರಂಭಗೊಂಡು ಕೃಷಿ ಕೂಲಿವರೆಗೂ ಎಲ್ಲರೂ ಎಲೆಯಾಟದಲ್ಲಿ ಮುಳುಗಿ ಒದ್ದಾಡುವವರೇ. ಇಂತಹ ಗೀಳುಪಟುಗಳ ಅಡ್ಡೆಯೊಂದರಲ್ಲಿ ಈ ಬಾರಿ ಡಿಜಿಟಲ್ ಅಟ್ಯಾಕ್ ಆಗಿದೆ.
ಗೋವಾ ಪ್ರೇಮಿಗಳಿಬ್ಬರು ಸೇರಿಕೊಂಡಿದ್ದ ಈ ಅಡ್ಡೆಯಲ್ಲಿ ಕೋಟ್ಯಧಿಪತಿಗಳೇ ಎಲೆ ಎಳೆದುಕೊಂಡು ಕೂತಿದ್ದರು. ಗೋವಾ ಸ್ಟೈಲಿನಲ್ಲೇ ಅಲ್ಲಿ ಎಲ್ಲ ಇತ್ತು. ಸೋ ಜೋಶ್ ಕೂಡ ಭರ್ಜರಿಯಾಗಿತ್ತು. ಎಲ್ಲರೂ ಎಲೆಯೆಳೆದು ಎಳೆದು ಇಟ್ಟರೇ ಗೆಲುವು ಮಾತ್ರ ಆ ಇಬ್ಬರಿಗೆ ಮಾತ್ರ ಬರುತ್ತಿತ್ತು. ಭಾರಿ ಲಕ್ ಬಿಡಪ್ಪ ಅಂತ ರಾತ್ರಿಯಿಡೀ ಎಲೆಯೆಳೆದರು. ಆದರೆ, ಆಡಿದವರೆಲ್ಲರೂ ಸೋತು ಸುಣ್ಣಾಗುತ್ತಿದ್ದರು. ಇಬ್ಬರು ಮಾತ್ರ ಎಲ್ಲರನ್ನು ಗುಮ್ಮಿ ಗುಮ್ಮಿ ಲಕ್ಷ ಲಕ್ಷ ಹಣ ಬಾಚಿಕೊಂಡರು.
ಹೀಗೆ ಬರೋಬ್ಬರಿ ಒಂದೂವರೆ ಕೋಟಿ ಆ ಇಬ್ಬರು ಗೋವಾ ಪ್ರೇಮಿಗಳ ಪಾಲಾಗಿತ್ತು. ಇದು ಸೋತು ಸುಣ್ಣವಾಗಿದ್ದವರ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಕೊನೆಯ ದಿನ ಅವರ ಮೇಲೆ ಅನುಮಾನ ಬಂದಾಗ ಇಸ್ಪೀಟ್ ಕಾರ್ಡ್ ಪರೀಕ್ಷಿಸಿದರು, ಆಗ ಬಣ್ಣ ಬಯಲಾಯಿತು!
ಅವುಗಳು ಗೋವಾದಿಂದ ಬಂದಿದ್ದ ಡಿಜಿಟಲ್ ಕಾರ್ಡ್! ಕಿವಿಯಲ್ಲಿಟ್ಟುಕೊಂಡಿದ್ದ ಬ್ಲ್ಯೂಟೂಥ್‌ಗೆ ಡಿಜಿಟಲ್ ಕಾರ್ಡ್ ಮೂಲಕ ಮಾಹಿತಿ ರವಾನೆಯಾಗುತ್ತಿತ್ತಂತೆ! ಅದರ ಆಧಾರದಲ್ಲಿಯೇ ಅವರು ಆಡಿ ಎಲ್ಲರನ್ನು ನಿವಾಳಿಸಿ ಹಾಕಿದ್ದರು. ಇದು ಪೂರ್ಣ ಬಟಾಬಯಲಾಗುವುದರೊಳಗೆ ಅವರಿಬ್ಬರು ನಾಪತ್ತೆಯಾಗಿದ್ದರು. ಆಗ ಅವರನ್ನು ಪತ್ತೆ ಮಾಡಿ ಬರೋಬ್ಬರಿ ₹40 ಲಕ್ಷ ವಸೂಲಿ ಮಾಡಲಾಗಿದೆ. ಆದರೆ, ಇನ್ನು ಕೋಟಿ ಮಾಯವಾಗಿದೆ. --
ಸಿದ್ದರಾಮಯ್ಯ ಎಂದ ಕೂಡಲೇ ಉತ್ತಮ ಆಡಳಿತಗಾರ, ಭಾಷಣಕಾರ, ಕನ್ನಡದ ಮೇಷ್ಟ್ರು ಹೀಗೆ ಹಲವು ವಿಚಾರಗಳು ಎಲ್ಲರ ಸ್ಮೃತಿ ಪಟಲದಲ್ಲಿ ಬರುತ್ತವೆ. ಹಾಗೆಯೇ, ತಮ್ಮ ಆಪ್ತರನ್ನೂ ಬಿಡದೆ, ಅವರ ತಪ್ಪನ್ನು ಹೇಳುತ್ತಾ ಅದನ್ನು ಸರಿಪಡಿಸಲು ಮುಂದಾಗುತ್ತಾರೆ. ಅದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಅದರಲ್ಲೂ ಕಳೆದ ವರ್ಷ ಕಾರ್ಯಕ್ರಮವೊಂದಕ್ಕೆ ತಡವಾಗಿ ಬಂದ ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಅವರಿಗೆ ವೇದಿಕೆ ಮೇಲೆಯೇ ನೀವು ತಡವಾಗಿ ಬಂದಿದ್ದೀರಿ ಎಂದು ಟೈಂ ಮ್ಯಾನೇಜ್‌ಮೆಂಟ್‌ನ ಪಾಠ ಮಾಡಿದ್ದರು. ಇದೀಗ ತಮ್ಮದೇ ಪಕ್ಷದ ನಾಯಕರೊಬ್ಬರಿಗೆ ಪಕ್ಷದ ಕಾರ್ಯಕ್ರಮದಲ್ಲಿನ ಪ್ರೋಟೋಕಾಲ್ ಕುರಿತಂತೆ ಪಾಠ ಹೇಳಿಕೊಟ್ಟಿದ್ದಾರೆ.
ಮತಗಳ್ಳತನ ಕುರಿತಂತೆ ಕೆಪಿಸಿಸಿಯಿಂದ ನಡೆದ ಸಹಿ ಸಂಗ್ರಹ ಅಭಿಯಾನದ ಮಾಹಿತಿ ನೀಡಲು ಶನಿವಾರ ಸುದ್ದಿಗೋಷ್ಠಿ ಕರೆಯಲಾಗಿತ್ತು. ಅದರಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಜತೆಗೆ ಕಾಂಗ್ರೆಸ್‌ನ ಹಲವು ನಾಯಕರೂ ಭಾಗವಹಿಸಿದ್ದರು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಎಲ್ಲರನ್ನೂ ಸ್ವಾಗತಿಸಿದರು. ನಂತರ ಸಿಎಂ ಮತ್ತು ಡಿಸಿಎಂ ಇಬ್ಬರಲ್ಲಿ ಮೊದಲು ಮಾತನಾಡಲು ಯಾರನ್ನು ಆಹ್ವಾನಿಸಬೇಕು ಎಂಬ ಗೊಂದಲಕ್ಕೆ ಚಂದ್ರಶೇಖರ್ ಒಳಗಾದರು. ಅದನ್ನು ನಿವಾರಿಸಿಕೊಳ್ಳಲು ತಮ್ಮ ಸ್ವಾಗತ ಭಾಷಣ ಮುಗಿಯುತ್ತಿದ್ದಂತೆ, ಸಿಎಂ ಕಡೆಗೆ ತಿರುಗಿ, ಮೊದಲು ನೀವು ಮಾತನಾಡುತ್ತೀರಾ? ಅಥವಾ ಡಿಸಿಎಂ ಅವರಿಗೆ ಹೇಳುವುದೇ ಎಂದು ವಿನಯವಾಗಿಯೇ ಪ್ರಶ್ನಿಸಿದರು.
ಅದನ್ನು ಕೇಳಿಸಿಕೊಂಡಿದ್ದೇ ಪ್ರೋಟೋಕಾಲ್ ಬಗ್ಗೆ ಹೇಳತೊಡಗಿದ ಸಿಎಂ, ‘ಇದು ಪಕ್ಷದ ಕಾರ್ಯಕ್ರಮ ಅಲ್ವೇನಯ್ಯ. ಹಾಗಿದ್ದ ಮೇಲೆ ಯಾರು ಮೊದಲು ಮಾತನಾಡಬೇಕು. ಕೆಪಿಸಿಸಿ ಅಧ್ಯಕ್ಷರೇ ಅಲ್ವೇ ಮೊದಲು ಮಾತನಾಡಬೇಕಾದದ್ದು. ಅವರಿಗೆ ಮೈಕ್ ಕೊಡಿ ಅವರೇ ಮೊದಲು ಮಾತನಾಡಲಿ’ ಎಂದರು.
ಕೊನೆಗೆ, ಸಿಎಂ ಮಾತಿಗೆ ಎದುರಾಡದೆ ಚಂದ್ರಶೇಖರ್ ತಮ್ಮ ಬಳಿಯಿದ್ದ ಮೈಕ್‌ನ್ನು ಡಿ.ಕೆ. ಶಿವಕುಮಾರ್ ಕೈಗಿತ್ತು ಸುಮ್ಮನಾದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಪುತ್ರನ ಮದುವೆ ಆರತಕ್ಷತೆ ಮುಗಿಸಿಕೊಂಡು ನೇರವಾಗಿ ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ 74 ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದರು. ಫುಲ್ ಜೋಶ್‌ನಲ್ಲಿದ್ದ ಅವರು ವೇದಿಕೆಯಲ್ಲಿ ವಿರಾಜಮಾನರಾಗಿದ್ದರು.
ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಭಾಷಣ ಆರಂಭಿಸುತ್ತಿದ್ದಂತೆಯೇ ಕಿಕ್ಕಿರಿದು ತುಂಬಿದ ಜನಸ್ತೋಮ ಏನೂ ಕೇಳಿಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಆಗಲೇ ಅಲರ್ಟ್ ಆದ ಸಿಎಂ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಕರೆದು ನೋಡಯ್ಯ ಮೈಕು ಎನ್ನುತ್ತಲೇ, ಸಚಿವ ಸಂತೋಷ್ ಲಾಡ್ ಹಾಗೂ ಜಮೀರ್ ಮೈಕ್ ಸೆಟ್ ಹುಡುಗನನ್ನು ಹುಡುಕಾಡಿದರು. ಆಗಲೇ ಎನ್.ಟಿ. ಶ್ರೀನಿವಾಸ್ ಕೈಯಲ್ಲಿ ಮೈಕೊಂದು ಕೊಟ್ಟು ನಿಟ್ಟುಸಿರು ಬಿಟ್ಟುಕೊಂಡು ವೇದಿಕೆ ಮೂಲೆಯಲ್ಲಿ ನಿಂತಿದ್ದ ಹುಡುಗನಿಗೆ ಉಭಯ ಸಚಿವರು ಸಲಹೆ ನೀಡಲು ಪ್ರಾರಂಭಿಸಿದರು.
ಅತ್ತ ಕೂಡ್ಲಿಗಿ ಶಾಸಕ ಶ್ರೀನಿವಾಸ್ ಅವರಂತೂ ಜನ ಬಂದಿದ್ದಾರೆ. ಸಿಎಂ, ಡಿಸಿಎಂ, ಸಚಿವರು ಬಂದಿದ್ದಾರೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ಆಗಿದೆ. ಆದ್ರ್ ಈ ಹೊತ್‌ನ್ಯಾಗ ಮೈಕ್ ಕೈ ಕೊಟ್ಟು ಬಿಡಬೇಕಾ ಎಂದು ಪರಿತಪಿಸಿದರು. ಸಂಸದ ತುಕಾರಾಂ ಅವರಂತೂ ಏ ಹುಡುಗ ಮೊದ್ಲು ಮೈಕ್ ಸರಿ ಮಾಡು ಎಂದು ಬೆನ್ನು ಹತ್ತಿದ್ದರು.
ಮೈಕ್ ಹುಡುಗ ಟೆಕ್ನಿಕಲ್ ಟೀಂಗೆ ಹಾಗೇ ಮಾಡು ಹೀಗೆ ಮಾಡು ಎಂದು ಹೇಳುತ್ತಲೇ ಸಾಗಿದ. ಆದರೆ, ಮೈಕ್ ಮಾತ್ರ ಸರಿ ಆಗಲೇ ಇಲ್ಲ. ಬಳಿಕ ಎರಡು ಮೈಕ್‌ಗಳನ್ನು ಆ ಕಡೆ ಈ ಕಡೆ ಕಟ್ಟಿ, ಈ ಹಿಂದಿನ ವ್ಯವಸ್ಥೆಯನ್ನು ಬದಲಿಸಿ ಮೈಕ್ ಹುಡುಗ ನಿಟ್ಟುಸಿರು ಬಿಟ್ಟ. ಆದರೆ ಇದೆಲ್ಲವನ್ನು ಗಮನಿಸುತ್ತಲೇ ಇದ್ದ ಸಿದ್ದರಾಮಯ್ಯ ಮಾತ್ರ; ಭಾಷಣ ಆರಂಭಿಸುವ ಮುನ್ನ ಮೈಕ್ ಸರಿಯಾಗಿದೆಯಾ? ಎಂದು ಆ ಹುಡುಗನಿಗೆ ಪ್ರಶ್ನಿಸಿದರು.
ಹುಡುಗ ಮಾತ್ರ ಎಲ್ಲವೂ ಸರಿಯಾಗಿದೆ ಸಾಹೇಬರೇ ಎಂದು ಉತ್ತರಿಸಿದ. ಜನ ಗೊಳ್ ಎಂದು ನಕ್ಕರು.
ಸಿಎಂ ಮತ್ತು ಡಿಸಿಎಂ ಇಬ್ಬರಲ್ಲಿ ಮೊದಲು ಮಾತನಾಡಲು ಯಾರನ್ನು ಆಹ್ವಾನಿಸಬೇಕು ಎಂಬ ಗೊಂದಲಕ್ಕೆ ಚಂದ್ರಶೇಖರ್ ಒಳಗಾದರು. ಅದನ್ನು ನಿವಾರಿಸಿಕೊಳ್ಳಲು ತಮ್ಮ ಸ್ವಾಗತ ಭಾಷಣ ಮುಗಿಯುತ್ತಿದ್ದಂತೆ, ಸಿಎಂ ಕಡೆಗೆ ತಿರುಗಿ, ಮೊದಲು ನೀವು ಮಾತನಾಡುತ್ತೀರಾ? ಅಥವಾ ಡಿಸಿಎಂ ಅವರಿಗೆ ಹೇಳುವುದೇ ಎಂದು ವಿನಯವಾಗಿಯೇ ಪ್ರಶ್ನಿಸಿದರು.
ಅದನ್ನು ಕೇಳಿಸಿಕೊಂಡಿದ್ದೇ ಪ್ರೋಟೋಕಾಲ್ ಬಗ್ಗೆ ಹೇಳತೊಡಗಿದ ಸಿಎಂ, ‘ಇದು ಪಕ್ಷದ ಕಾರ್ಯಕ್ರಮ ಅಲ್ವೇನಯ್ಯ. ಹಾಗಿದ್ದ ಮೇಲೆ ಯಾರು ಮೊದಲು ಮಾತನಾಡಬೇಕು. ಕೆಪಿಸಿಸಿ ಅಧ್ಯಕ್ಷರೇ ಅಲ್ವೇ ಮೊದಲು ಮಾತನಾಡಬೇಕಾದದ್ದು. ಅವರಿಗೆ ಮೈಕ್ ಕೊಡಿ ಅವರೇ ಮೊದಲು ಮಾತನಾಡಲಿ’ ಎಂದರು.
-ಸೋಮರಡ್ಡಿ ಅಳವಂಡಿ
-ಗಿರೀಶ್ ಗರಗ
- ಕೃಷ್ಣ ಲಮಾಣಿ