;Resize=(412,232))
ಎಸ್ಟಿಗೆ ಸೇರುವ ಪ್ರಯತ್ನ ಕೇವಲ ಕುರುಬ ಸಮುದಾಯ ಅಷ್ಟೇ ಮಾಡುತ್ತಿಲ್ಲ, ಬೆಸ್ತರು, ಮಡಿವಾಳರು ಸೇರಿ ಅನೇಕರು ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಎಸ್ಟಿಗೆ ಬರಲು ನಮ್ಮ ತಕರಾರು ಇಲ್ಲ. ಕುಲಶಾಸ್ತ್ರೀಯ ಅಧ್ಯಯನವಾಗಿ ಅರ್ಹರು ಯಾರು ಬೇಕಿದ್ದರೂ ಬರಲಿ ಎನ್ನುವ ವಿಶಾಲ ಮನೋಭಾವ ನಮ್ಮಲ್ಲಿದೆ.
ಪರಿಶಿಷ್ಟ ಪಂಗಡ ಯಾದಿಗೆ ಸೇರ್ಪಡೆಯಾಗಲು ಹಲವು ಸಮುದಾಯಗಳು ಪ್ರಯತ್ನಿಸುತ್ತಿವೆ. ಇಂಥ ಪ್ರಯತ್ನ ನಡೆಸುತ್ತಿರುವ ಸಮುದಾಯಗಳಿಗೆ ನಮ್ಮ ಕಾಂಗ್ರೆಸ್ ನಾಯಕ ಉಗ್ರಪ್ಪ ಅವರದ್ದೊಂದು ಫ್ರೀ ಅಡ್ವೈಸ್ ಇದೆ. ಅದು- ಖಾಲಿ ತಟ್ಟೆಯಲ್ಲಿ ಬರಬೇಡಿ. ಫುಲ್ ಮೀಲ್ಸ್ ಜತೆ ಬನ್ನಿ...
ಅರ್ಥವಾಗಿಲ್ವ? ಮೊನ್ನೆ ಕೊಪ್ಪಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಈ ಗೋಷ್ಠಿಯಲ್ಲಿ ಕುರುಬ ಸಮುದಾಯ ಸೇರಿ ಅನೇಕ ಸಮುದಾಯಗಳು ಎಸ್ಟಿಗೆ ಸೇರ್ಪಡೆಯಾಗುವ ದಿಸೆಯಲ್ಲಿ ಪ್ರಯತ್ನ ನಡೆಸಿದ್ದಾರಲ್ವಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉಗ್ರಪ್ಪ ಅವರು ಹೌದು, ಎಸ್‌ಟಿಗೆ ಸೇರುವ ಪ್ರಯತ್ನ ಕೇವಲ ಕುರುಬ ಸಮುದಾಯ ಅಷ್ಟೇ ಮಾಡುತ್ತಿಲ್ಲ, ಬೆಸ್ತರು, ಮಡಿವಾಳರು ಸೇರಿ ಅನೇಕರು ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಎಸ್ಟಿಗೆ ಬರಲು ನಮ್ಮ ತಕರಾರು ಇಲ್ಲ. ಕುಲಶಾಸ್ತ್ರೀಯ ಅಧ್ಯಯನವಾಗಿ ಅರ್ಹರು ಯಾರು ಬೇಕಿದ್ದರೂ ಬರಲಿ ಎನ್ನುವ ವಿಶಾಲ ಮನೋಭಾವ ನಮ್ಮಲ್ಲಿದೆ ಎಂದರು.
ಜತೆಗೆ, ಹೀಗೆ ಬರುವವರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹಿಂದುಳಿದ ವರ್ಗದ ಆಯೋಗದಿಂದ ತೆಗೆದುಕೊಂಡು ಬರಬೇಕು ಎಂದವರೇ, ಕೇವಲ ಖಾಲಿ ತಟ್ಟೆಯೊಂದಿಗೆ ಬರಬೇಡಿ, ಅನ್ನದೊಂದಿಗೆ ತಟ್ಟೆ ತೆಗೆದುಕೊಂಡು ಯಾರಾದರೂ ಬರಲಿ, ನಾವೆಲ್ಲ ಸಾಮೂಹಿಕ ಭೋಜನ ಮಾಡಲು ಸಿದ್ಧರಿದ್ದೇವೆ. ಆದರೆ, ಖಾಲಿ ತಟ್ಟೆಯಲ್ಲಿ ಮಾತ್ರ ಬರಬೇಡಿ ಎಂದರು. ಈಗ ಅರ್ಥ ಆಯ್ತಾ?
ಛಲವಾದಿ ನಾರಾಯಣಸ್ವಾಮಿ ಹೇಳಿ ಕೇಳಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ವೇಷ ಭೂಷಣದಲ್ಲೂ ಯಾವಾಗಲೂ ಕಲರ್‌ಫುಲ್ ಆಗಿಯೇ ಮಿಂಚುತ್ತಿರುತ್ತಾರೆ. ಕಪ್ಪು ಗಡ್ಡದ ಮಧ್ಯೆ ಕೊಂಚ ಬಿಳಿಗಡ್ಡ ಅವರ ವಿಶಿಷ್ಟ ಗೆಟಪ್. ಹೀಗಿರುವ ಛಲವಾದಿ ಅವರನ್ನು ಒಮ್ಮೆ ಯಾವುದಾದರೂ ಸಿನೆಮಾಗೆ ಹೀರೋ ಮಾಡಿಬಿಟ್ಟರೆ ಹೇಗೆ?
ಇತ್ತೀಚಿನ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಮಯದಲ್ಲಿ ಸದನದಲ್ಲೇ ಇಂತಹದ್ದೊಂದು ಸಲಹೆ ಕೊಟ್ಟವರು ಬೇರೆ ಯಾರೂ ಅಲ್ಲ. ಖುದ್ದು ಸಭಾಪತಿ ಬಸವರಾಜ ಹೊರಟ್ಟಿ ಸಾಹೇಬ್ರು.
ನಡೆದಿದ್ದು ಇಷ್ಟೇ. ಕಲಾವಿದೆ ಹಾಗೂ ಪರಿಷತ್ ಸದಸ್ಯೆಯೂ ಆಗಿರುವ ಉಮಾಶ್ರೀ ಅವರಿಗೆ 2019ನೇ ಸಾಲಿನ ಡಾ.ರಾಜ್‌ಕುಮಾರ್ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಇಡೀ ಸದನ ದಶಕಗಳ ಕಾಲ ಅವರ ರಂಗಭೂಮಿ, ಹಿರಿತೆರೆ ಹಾಗೂ ರಾಜಕೀಯ ಸೇವೆಯ ಗುಣಗಾನ ಮಾಡಿತು. ಬಹುತೇಕ ಸದಸ್ಯರು ಉಮಾಶ್ರೀ ಅವರು ರಾಜಕೀಯಕ್ಕೆ ಬಂದರೂ ತಾವು ಸಾಗಿ ಬಂದ ಕಲಾವಿದೆಯ ವೃತ್ತಿ ಮಾತ್ರ ಎಂದೂ ಮರೆಯಲಿಲ್ಲ ಎಂದು ಗುಣಗಾನ ಮಾಡಿದರು.
ಈ ವೇಳೆ, ಛಲವಾದಿ ನಾರಾಯಣ ಸ್ವಾಮಿ ಕೂಡ ಉಮಾಶ್ರೀ ಅಕ್ಕನ ನಟನೆ, ಕಲಾಸೇವೆಯನ್ನು ಇಡೀ ರಾಜ್ಯದ ಜನ ಒಪ್ಪಿದ್ದಾರೆ ಎಂದು ಆರಂಭಿಸಿ ಸುದೀರ್ಘ ಗುಣಗಾನ ಮಾಡಲಾರಂಭಿಸಿದರು. ಛಲವಾದಿ ಅವರ ಭಾಷಣದ ವೈಖರಿ, ಉತ್ಸಾಹ ನೋಡಿದ ಹೊರಟ್ಟಿ ಅವರು, ಉಮಾಶ್ರೀ ಅವರೇ, ಈ ಛಲವಾದಿ ಅವರನ್ನು ಕರೆದುಕೊಂಡು ಹೋಗಿ ಯಾವುದಾದರೂ ಒಂದು ಸಿನೆಮಾಗೆ ಹೀರೋ ಮಾಡಿಬಿಡಿ ಅಂದು ಬಿಟ್ಟರು.
ಸಭಾಪತಿಗಳಿಂದ ಬಂದ ಈ ಮಾತನ್ನು ನಗುತ್ತಲೇ ಸ್ವೀಕರಿಸಿದ ಛಲವಾದಿ ನಾರಾಯಣಸ್ವಾಮಿ ಅವರು, ಏನೂ ಬೇಡ ಸಭಾಪತಿಗಳೇ... ನನ್ನದು ಎಲ್ಲಾ ಮುಗಿದಿದೆ. ಈ ವಯಸ್ಸಿನಲ್ಲಿ ಏಕೆ ಈ ಹೀರೋ, ಗೀರೋ ಎಂದಾಗ ಸದನದಲ್ಲಿ ನಗುವಿನ ಅಲೆ ಮೂಡಿತು.
-ಸೋಮರಡ್ಡಿ ಅಳವಂಡಿ
-ಲಿಂಗರಾಜು ಕೋರಾ