ವಿಶ್ವದ ಪಾರಂಪರಿಕ ತಾಣ ಪಶ್ಚಿಮಘಟ್ಟದ ಭದ್ರಾ ಹಿನ್ನೀರಿನ ದೋಣಿ ಸಫಾರಿಯಲ್ಲಿ ''ರಿವರ್ ಟರ್ನ್'' ಕಲರವ !

ಸಾರಾಂಶ

ಪಶ್ಚಿಮಘಟ್ಟದ ಕಾಡುಗಳು ವಿಶ್ವದ ಪಾರಂಪರಿಕ ತಾಣಗಳಲ್ಲಿ ಒಂದು. ಗುಜರಾತಿನಿಂದ ಕೇರಳದವರೆಗೆ ಹಬ್ಬಿರುವ ಈ ನಿತ್ಯಹರಿದ್ವರ್ಣದ ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ನಾಡಿನ ಹೆಮ್ಮೆಯ ಭದ್ರಾ ಹುಲಿ ಅಭಯಾರಣ್ಯ ನೆಲೆನಿಂತಿದೆ.

 ಡಾ. ಸತ್ಯಪ್ರಕಾಶ್ ಎಂ. ಆರ್

ಪ್ರಾಧ್ಯಾಪಕರು

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಕುವೆಂಪು ವಿವಿ

ಫೋನ್ ನಂ: + 91 9886836660 

ಪಶ್ಚಿಮಘಟ್ಟದ ಕಾಡುಗಳು ವಿಶ್ವದ ಪಾರಂಪರಿಕ ತಾಣಗಳಲ್ಲಿ ಒಂದು. ಗುಜರಾತಿನಿಂದ ಕೇರಳದವರೆಗೆ ಹಬ್ಬಿರುವ ಈ ನಿತ್ಯಹರಿದ್ವರ್ಣದ ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ನಾಡಿನ ಹೆಮ್ಮೆಯ ಭದ್ರಾ ಹುಲಿ ಅಭಯಾರಣ್ಯ ನೆಲೆನಿಂತಿದೆ. ಚಿಕ್ಕಮಗಳೂರು ಜಿಲ್ಲೆಯ ದಕ್ಷಿಣದ ಮುತ್ತೋಡಿಯಿಂದ ಉತ್ತರದ ಲಕ್ಕವಳ್ಳಿಯವರೆಗೆ ಸುಮಾರು ೫,೦೦೦ ಚದುರ ಕಿಲೋಮೀಟರ್‌ವರೆಗೆ ವಿಸ್ತರಿಸಿರುವ ಈ ಕಾಡಿನ ಹೃದಯ ಭಾಗದಲ್ಲಿ ಹರಿವ ಭದ್ರೆ, ವಿವಿಧ ಬಗೆಯ ಪ್ರಾಣಿ ಪಕ್ಷಿಗಳಿಗೆ ಜೀವನದಿಯಾಗಿದ್ದಾಳೆ. ಕುದುರೆಮುಖದ ಗಂಗಾಮೂಲದಲ್ಲಿ ಹುಟ್ಟಿ, ಕಳಸ, ಹೊರನಾಡು, ಬಾಳೆಹೊನ್ನೂರು, ಎನ್. ಆರ್. ಪುರವನ್ನು ಹಾದು ಭದ್ರಾ ಅಣೆಕಟ್ಟೆಯನ್ನು ತಲುಪುವ ಮುನ್ನ ಸಹಸ್ರಾರು ವನ್ಯಜೀವಿಗಳಿಗೆ ನೀರುಣಿಸುತ್ತಾಳೆ.

ಭದ್ರಾ ಅಣೆಕಟ್ಟೆ ಒಂದೆಡೆ ಇಲ್ಲಿನ ಜನಜೀವನವನ್ನು, ಅವರ ಸಂಸ್ಕೃತಿಯನ್ನು ನದಿಯ ಒಡಲಾಳದಲ್ಲಿ ಮುಳುಗಿಸಿರುವುದು ಎಷ್ಟು ಸತ್ಯವೋ, ಅಣೆಕಟ್ಟಿನ ವಿಶಾಲವಾದ ಹಿನ್ನೀರು ಅಲ್ಲಲ್ಲಿ ಸೃಷ್ಟಿಸಿರುವ ಕಿರುದ್ವೀಪಗಳು ಶ್ರೀಮಂತ ಜೀವವೈವಿಧ್ಯತೆಯ ತಾಣವಾಗಿರುವುದೂ ಅಷ್ಟೇ ಸತ್ಯ! ಭದ್ರೆಯ ಕಾಡಿನಲ್ಲಿ ಅಂದಾಜು ೪೩ ಹುಲಿಗಳು, ೧೫೦ಕ್ಕೂ ಹೆಚ್ಚು ಆನೆಗಳು, ೨೦ಕ್ಕೂ ಹೆಚ್ಚು ಚಿರತೆಗಳು, ಬೈಸನ್‌ಗಳು, ಇಂಡಿಯನ್ ಗೋರ್, ಕಾಡುಹಂದಿಗಳು, ನೀಲ್‌ಗಾಯ್, ಚಿತಾಲ್‌ಗಳು, ಸಾರಂಗ, ಜಿಂಕೆಗಳು, ವಿವಿಧ ಬಗೆಯ ಸರೀಸೃಪಗಳು ಮತ್ತು ೨೫೦ಕ್ಕೂ ಹೆಚ್ಚು ಪ್ರಬೇಧಗಳ ಪಕ್ಷಿಗಳು ವಾಸಿಸುತ್ತಿವೆ.

ಈ ವಿಶಾಲವಾದ ಹಿನ್ನೀರಿನ ಕಿರು ದ್ವೀಪಗಳಿಗೆ ಸಂತಾನೋತ್ಪತ್ತಿಗೆAದು ಪ್ರತಿ ವರ್ಷ ದೂರದ ಇರಾನ್, ಥಾಯ್ಲೆಂಡ್, ಮತ್ತು ಉತ್ತರ ಭಾರತದ ಜಾರ್ಖಂಡ್‌ನಿAದ ವಲಸೆ ಬರುವ ಹಕ್ಕಿಗಳೇ ರಿವರ್ ಟರ್ನ್ಗಳು! ಭದ್ರಾ ಹಿನ್ನೀರಿನ ಗುಡ್ಡದ ಮೇಲೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಜಂಗಲ್ ಲಾಡ್ಜಸ್ ನಡೆಸುವ ರೆಸಾರ್ಟ್ಗೆ ''ರಿವರ್ ಟರ್ನ್'' ಎಂದೇ ಹೆಸರಿಡಲಾಗಿದೆ.

ದೋಣಿ ಸಫಾರಿ

ಅಂದು ಭಾನುವಾರ ಶರತ್ಕಾಲ ಮುಗಿದು ವಸಂತ ಕಾಲಿಡುವ ಮುನ್ನ ಬಿಸಿಲಿನ ತೀವ್ರತೆ ತರುವ ಆಲಸ್ಯಕೆ ಬೆದರದೆ ಭದ್ರಾ ನದಿಯ ಹಿನ್ನೀರಿನಲ್ಲಿ ದೋಣಿಯ ಸಫಾರಿಗೆ ಹೊರಟಾಗ ಅಷ್ಟೇನೂ ನಿರೀಕ್ಷೆಗಳಿರಲಿಲ್ಲ! ರಜಾ ದಿನವನ್ನು ಮಗಳ ಜೊತೆ ಕಳೆಯುವ ಇರಾದೆಯಷ್ಟೇ ಇತ್ತು. ಆದರೆ, ಅದೇ ದೋಣಿ ವಿಹಾರ ನನ್ನನ್ನು ಬೇರೆಯದೇ ಒಂದು ಲೋಕಕ್ಕೆ ಕರೆದೊಯ್ಯಬಹುದೆಂದು ನಾನು ಊಹಿಸಿರಲಿಲ್ಲ!

ಬೇಸಿಗೆ ಕಾಲಿಟ್ಟಿದ್ದರೂ, ಭದ್ರೆಯ ಹಿನ್ನೀರಿನ ಅಂದಿನ ಮುಂಜಾನೆ, ಚಳಿಗಾಲವನ್ನು ಇನ್ನೂ ಹೊದ್ದುಕೊಂಡು ಮಂಜಿನ ಹನಿಗಳನು ಸೋಕಿ ಬರುತ್ತಿದ್ದ ತೆಳುಗಾಳಿಗೆ ಹಾಯೆನಿಸುತಿತ್ತು! ಕೆಲವೇ ಗಾವುದ ದೂರ ಕ್ರಮಿಸುವಷ್ಟರಲ್ಲಿ ಆರಂಭದ ಅಮಿತೋತ್ಸಾಹ ಹಗುರವಾಗಿತ್ತು, ಏಕಾಂತ ಆವರಿಸಿಕೊಳ್ಳತೊಡಗಿತು.

ಹೌದು, ಅದು ಅಂಬಿಗನು ಹುಟ್ಟು ಹಾಕುವ ತೆಪ್ಪವಲ್ಲ, ಮೋಟಾರ್ ಬೋಟು! ಪ್ರಕೃತಿ ಪ್ರಿಯರಿಗಾಗಿ ಭದ್ರಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಅರಣ್ಯ ಇಲಾಖೆ ಒದಗಿಸಿರುವ ಸಾರೋಟು! ಬೇಸಿಗೆ ಬಂತೆAದರೆ ಹಿನ್ನೀರ ಮೇಲಿನ ಸಫಾರಿಗೆ ಹೊರಟವರಿಗೆ ಭದ್ರೆಯ ಒಡಲಲ್ಲಿ ಮುಳುಗಡೆಯಾದ ಊರುಗಳ ಅವಶೇಷಗಳು, ಗುಡ್ಡಗಳು, ಸಣ್ಣ ಪುಟ್ಟ ದ್ವಿಪಗಳು ಗೋಚರಿಸುವುದು ಸಾಮಾನ್ಯ.

ಒಂದೊಮ್ಮೆ ಮುಂಗಾರು ಕೈಕೊಟ್ಟು ಮಳೆ ಕಡಿಮೆಯಾದರೆ ನೀರ ಬಸಿವ ನೆಲ ಬರಗಾಲದ ಸಂಕೇತ ಮೂಡಿಸುವ ಹಾಗೆ ಸಮೀಪದ ನರಸಿಂಹರಾಜ ಪುರದ ಹಳೆಯ ರೈಲು ಹಳಿಗಳು ಕಂಡರೂ ಕಾಣಬಹುದು. ಬೇಸಿಗೆಯೆಂದರೆ ಭದ್ರೆಯ ಕಾಡಿನಲ್ಲಿ ವನ್ಯಜೀವಿಗಳಿಗೆ ಜೀವನ್ಮರಣದ ಪ್ರಶ್ನೆ! ಕಾಡಿನ ನಡುವೆ ಹಳ್ಳಕೊಳ್ಳಗಳಲ್ಲಿ ನಿಂತ ನೀರೇ ಇವುಗಳಿಗೆ ಅಮೃತ. ಒಣಗಿದ ಮರಗಳ ರೆಂಬೆ ಕೊಂಬೆಗಳೇ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರ. ಇನ್ನು ಮಾಂಸಾಹಾರಿ ಪ್ರಾಣಿಗಳಿಗೆ ಆಹಾರದ ಬೇಟೆಯೇ ಒಂದು ಸಂಘರ್ಷ!

ರಿವರ್ ಟರ್ನ್ಗಳ ಕಲರವ

ಈ ಬೇಸಿಗೆ, ಸ್ಥಳೀಯ ವನ್ಯಜೀವಿಗಳು ಮುಂಗಾರು ಮಳೆಗಾಗಿ ಕಾಯತ್ತಾ ಹಾಗೋ ಹೀಗೋ ಕಾಲ ಕಳೆಯುವ ಸಮಯವಾದರೆ, ಸಾವಿರಾರು ಮೈಲುಗಳಾಚೆಯಿಂದ ವಲಸೆ ಬರುವ ರಿವರ್ ಟರ್ನ್ಗಳಿಗೆ ಇದು ಹೊಸ ಜೀವ ಸೃಷ್ಟಿಸುವ ಪರ್ವಕಾಲ! ಡಿಸೆಂಬರ್ ಅಥವಾ ಜನವರಿ ತಿಂಗಳ ಆರಂಭದಲ್ಲಿ ಈ ಕಿರು ದ್ವೀಪಗಳನ್ನು ತಲುಪುವ ರಿವರ್ ಟರ್ನ್ ಹಕ್ಕಿಗಳ ಹಿಂಡು, ಜೂನ್ ತಿಂಗಳವರೆಗೆ ಇಲ್ಲೇ ಬೀಡುಬಿಟ್ಟು, ಸಂತಾನೋತ್ಪತ್ತಿಯ ಚಕ್ರ ಮುಗಿಸಿ, ಬೆಳೆದ ಮರಿಹಕ್ಕಿಗಳೊಂದಿಗೆ ತಮ್ಮ ಮೂಲ ಆವಾಸ ಸ್ಥಾನಗಳಿಗೆ ಹಿಂದಿರುಗುವುದೇ ಒಂದು ಮಹಾ ಸೋಜಿಗ!

ದೋಣಿ ಸಾಗುತ್ತಾ ನದಿಯ ಅಂಚನು ತಲುಪಿದಾಗಲೆಲ್ಲಾ ಹುಲಿ, ಚಿರತೆ, ಆನೆಗಳನ್ನು ಹತ್ತಿರದಿಂದ ನೋಡುವ ತವಕದಲ್ಲಿದ್ದ ನಮಗೆ ಕಂಡಿದ್ದು, ವಿಶಾಲವಾದ ಹುಲ್ಲುಗಾವಲಿನಲ್ಲಿ ಬಿಸಿಲಿಗೆ ಮೈಯೊಡ್ಡಿ ಮೇಯುತ್ತಿದ್ದ ಜಿಂಕೆಗಳ ಹಿಂಡು, ಇನ್ನೊಂದು ಬದಿಯಲಿ ಸರತಿ ಸಾಲಿನಲ್ಲಿ ಓಡುತ್ತಿದ್ದ ಕಾಡು ಹಂದಿಗಳು, ಮರಗಳ ಮರೆಯಲ್ಲಿ ನಿರ್ಲಿಪ್ತವಾಗಿ ನಿಂತಿದ್ದ ಒಂದೆರಡು ಬೈಸನ್‌ಗಳು, ನಮ್ಮೆಡೆಗೆ ಒಮ್ಮೆ ದೃಷ್ಟಿ ಹಾಯಿಸಿ ಮತ್ತೆ ತನ್ನ ದಾರಿ ಹಿಡಿದು ಹೊರಟ ಸಾಂಬಾರ್ ಜಿಂಕೆಗಳು, ಇವೆಲ್ಲವುಗಳನ್ನು ಕಂಡು ಪುಳಕಿತರಾಗಿದ್ದ ನಮಗೆ, ದೋಣಿಯು ದ್ವೀಪವೊಂದರ ಸಮೀಪ ಬಂದಾಗಲೇ ಅಲ್ಲಿ ಸಾವಿರಾರು ರಿವರ್ ಟರ್ನ್ಗಳು ಬೀಡುಬಿಟ್ಟಿರುವುದರ ಅರಿವಾಗಿದ್ದು!

ಭದ್ರೆಯ ಸಿಹಿ ನೀರನು ಅರಸಿ ವಲಸೆ ಬರುವ ಈ ಹಕ್ಕಿಗಳು, ಬೇಸಿಗೆಯ ತಾಪಕ್ಕೆ ನೀರಿನ ಮಟ್ಟ ಕಡಿಮೆಯಾದಾಗ ಸಣ್ಣ ಕಲ್ಲುಗಳ ನಡುವೆ ಗೂಡು ಕಟ್ಟಿ, ಮೊಟ್ಟೆಗಳನು ಅಡಗಿಸಿಟ್ಟು, ಹದ್ದು-ಗಿಡುಗಗಳಿಂದ ಸಂರಕ್ಷಿಸಿ ಮರಿ ಮಾಡುತ್ತವೆ. ಬಹುತೇಕ ಮನುಷ್ಯರ ಭೌತಿಕ ಸಂಪರ್ಕವಿಲ್ಲದ ಹಿನ್ನೀರಿನ ಈ ಎರಡು ಕಿರು ದ್ವೀಪಗಳ ತುಂಬೆಲ್ಲಾ ಸಾವಿರಾರು ರಿವರ್ ಟರ್ನ್ಗಳ ಪ್ರಣಯ, ಸೃಷ್ಟಿಕ್ರಿಯೆ, ಮೊಟ್ಟೆಗಳು ಮರಿಯಾಗಿ ಬದಲಾಗುವ ಅಚ್ಚರಿ ಸುಮಾರು ಆರು ತಿಂಗಳವರೆಗೆ ನಡೆಯುತ್ತಲೇ ಇರುತ್ತದೆ.

ರಿವರ್ ಟರ್ನ್ಗಳ ಕುರಿತು ಸಂಶೋಧನೆ ಕೈಗೊಂಡಿರುವ ಕುವೆಂಪು ವಿವಿ ವನ್ಯಜೀವಿ ನಿರ್ವಹಣಾ ವಿಭಾಗದ ಪ್ರೊ. ವಿಜಯಕುಮಾರ ಮತ್ತು ಸಂಶೋಧಕ ಕಾರ್ತಿಕ್ ಎನ್. ಜೆ, "ಸುಮಾರು ೧೭.೬ ಎಕರೆಯಷ್ಟು ವಿಸ್ತರಿಸಿರುವ ಈ ಎರಡು ಕಿರು ದ್ವೀಪಗಳು ವಿವಿಧ ಪ್ರಬೇಧಗಳ ರಿವರ್ ಟರ್ನ್ಗಳ ಆವಾಸ ಸ್ಥಾನವಾಗಿದೆ. ೨೦೨೩ರಲ್ಲಿ ಸರಿಸುಮಾರು ೧೦,೦೦೦ ರಿವರ್ ಟರ್ನ್ಗಳು ಇಲ್ಲಿಗೆ ವಲಸೆ ಬಂದಿದ್ದವು" ಎಂದು ಗುರುತಿಸಿದ್ದಾರೆ.

ರಿವರ್ ಟರ್ನ್ಗಳ ಮಹಾವಲಸೆಯ ಬಗ್ಗೆ ಮೆಲುಕು ಹಾಕುತ್ತಾ ಹಿಂದಿರುಗುತ್ತಿದ್ದ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು! ಅನತಿ ದೂರದ ಕಾಡಿನ ಮರಗಳ ಮರೆಯಿಂದ ಚಿರತೆಯ ಮರಿಯೊಂದು ಮೋಟಾರ್ ಬೋಟಿನ ಕಡೆ ಇಣುಕುತ್ತಿರುವುದನ್ನು ಗಮನಿಸಿದ ಡ್ರೈವರ್, ಇಂಜಿನ್ ಆಫ್ ಮಾಡಿ ಕೆಲ ನಿಮಿಷ ನಿಶ್ಯಬ್ದವಾಗಿ ನಿಲ್ಲಿಸಿದ. ಆ ಮರಿ ಚಿರತೆ ತನ್ನ ತಾಯಿಯ ಬಳಿ ಓಡಿದಾಗ ಮೂರು ಚಿರತೆಗಳ ಕುಟುಂಬವನ್ನು ನೋಡುವ ಅಪರೂಪದ ಕ್ಷಣ ನಮ್ಮದಾಯಿತು. ಒಂದೆರೆಡು ಘಳಿಗೆ ನಮ್ಮನ್ನು ದಿಟ್ಟಿಸಿ ನೋಡಿದ ಚಿರತೆಗಳು ಅನೂಹ್ಯ ಕಾಡಿನೊಳಗೆ ಮರೆಯಾದವು!

ಶತಮಾನಗಳಿಂದ ಜೀವವೈವಿಧ್ಯತೆಯನು ಪೋಷಿಸುತ್ತಾ ಬಂದಿರುವ ಭದ್ರಾ ನದಿಯ ಹಿನ್ನೀರಿನ ಏರಿಳಿತದ ದೋಣಿ ಸಫಾರಿ ನನ್ನ ಪಾಲಿಗೆ ಬರಿಯ ಮೋಜಿನ ವಿಹಾರವಾಗಿರಲಿಲ್ಲ, ಅಗಾಧವಾದ ನಿಸರ್ಗದಲ್ಲಿರುವ ಅಸಂಖ್ಯಾತ ಜೀವಸಂಕುಲಗಳ ಎದುರು ಮನುಷ್ಯ ತೀರ ಕುಬ್ಜ ಮತ್ತು ನಗಣ್ಯ ಎಂಬುದರ ಅರಿವಿನ ಪಯಣವಾಗಿತ್ತು.

ದೋಣಿ ಹಿಂದಿರುಗುವಾಗ ನನ್ನ ಒಳಗಣ್ಣು ಕಂಡಿದ್ದು, ಒಮ್ಮೆ ಹರಿವ ನೀರು, ಇನ್ನೊಮ್ಮೆ ನಿಂತ ನೀರು, ಮತ್ತೊಮ್ಮೆ ತೆಳುಗಾಳಿಗೆ ನಿಡುಸುಯ್ಯುವ ನೀರು, ನದಿಯ ಒಡಲೊಳಗೆ ನಿಂತ ಒಂಟಿ ಮರ, ಅದರ ನಿರ್ಜೀವ ಟೊಂಗೆಯ ಮೇಲೆ ಧ್ಯಾನಿಸುತ್ತಾ ಕುಂತ ಹಾರ್ನ್ಬಿಲ್, ಜೀವಸೆಲೆಯಾಗಿ ಗಿಜಿಗುಡುವ ರಿವರ್ ಟರ್ನ್ಗಳ ಹಿಂಡು, ದಿಗಂತದ ಕಡೆಗೆ ಹಾರುತ್ತಿರುವ ಹಿಂಡನಗಲಿದ ಒಂಟಿಹಕ್ಕಿ, ಬ್ರಹ್ಮಾಂಡವನೇ ಹೊತ್ತ ನೀಲಿಯಾಕಾಶವನು ಕೆಂಪಾಗಿಸಿದ ಸೂರ್ಯೋದಯ... ನನ್ನ ಬದುಕಿನಲ್ಲಿ ಅಚ್ಚಳಿಯದ ಸ್ಮೃತಿಯನ್ನು ಸೃಷ್ಟಿಸಿದ ಆ ಕ್ಷಣ, ಪ್ರಕೃತಿಯ ಧ್ಯಾನದ ಕ್ಷಣವೂ ಆಗಿತ್ತು!

Share this article