ಪಟೇಲ್ ಮತ್ತು ಬೋಸ್ : ತತ್ವ ಭೇದಗಳಲ್ಲಡಗಿದ ರಾಷ್ಟ್ರಚಿಂತನೆ

Published : Oct 31, 2025, 12:02 PM IST
Sardar Vallabhbhai Patel, Subhash Chandra Bose

ಸಾರಾಂಶ

ಸರ್ಧಾರ್ ವಲ್ಲಭಬಾಯಿ ಪಟೇಲ್ ಮತ್ತು ಸುಭಾಸ ಚಂದ್ರ ಬೋಸ್ ಇಬ್ಬರೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು, ಅಪ್ರತಿಮ ದೇಶಭಕ್ತರು. ಇಬ್ಬರೂ ಸ್ವಾತಂತ್ರ್ಯವನ್ನು ಸಾಧಿಸಲು ವಿಭಿನ್ನ ಮಾರ್ಗಗಳನ್ನು ಅನುಸರಿಸಿದರು.  

 -ಬೋಸ್ ಕ್ರಾಂತಿಕಾರಿ, ಯುದ್ಧಮಾರ್ಗದ ಮೂಲಕ ಸ್ವಾತಂತ್ರ್ಯವನ್ನು ಬಯಸಿದರೆ, ಪಟೇಲ್ ಸಂವಿಧಾನಬದ್ಧ ಮಾರ್ಗದ ಪ್ರತಿಪಾದಕರಾಗಿದ್ದರು

ನಾರಾಯಣ ಯಾಜಿ

ಸರ್ಧಾರ್ ವಲ್ಲಭಬಾಯಿ ಪಟೇಲ್ ಮತ್ತು ಸುಭಾಸ ಚಂದ್ರ ಬೋಸ್ ಇಬ್ಬರೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು, ಅಪ್ರತಿಮ ದೇಶಭಕ್ತರು. ಇಬ್ಬರೂ ಸ್ವಾತಂತ್ರ್ಯವನ್ನು ಸಾಧಿಸಲು ವಿಭಿನ್ನ ಮಾರ್ಗಗಳನ್ನು ಅನುಸರಿಸಿದರು. ಬೋಸ್ ಕ್ರಾಂತಿಕಾರಿ, ಎಡಪಂಥೀಯ ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನ ಹೊಂದಿದ್ದರೆ, ಪಟೇಲರದ್ದು ಶಿಸ್ತು, ವಾಸ್ತವವಾದ ಮತ್ತು ಸಂಘಟನಾತ್ಮಕ ಶಕ್ತಿ ಮೂಲಕ ರಾಷ್ಟ್ರವನ್ನುಳಿಸಿದವರು. ಇವರಿಬ್ಬರ ಸಂಬಂಧವು ಪರಸ್ಪರ ಗೌರವಪೂರ್ಣವಾಗಿದ್ದರೂ, ತಾತ್ವಿಕವಾಗಿ ಅಭಿಪ್ರಾಯಬೇಧಗಳು ತೀವ್ರವಾಗಿದ್ದವು. 

ಇವರಿಬ್ಬರ ಕೌಟುಂಬಿಕ ಹಿನ್ನೆಲೆಯೂ ಸಹ ಭಿನ್ನವಾಗಿತ್ತು. ಸುಭಾಸರು ಕುಲೀನ ಮನೆತನದಿಂದ ಬಂದರೆ ಪಟೇಲ್ ಮೇಲ್ಮದ್ಯಮ ವರ್ಗದ ರೈತಾಪಿ ಹಿನ್ನೆಲೆಯವರಾಗಿದ್ದರು. ಪಟೇಲರು 1917 ರಲ್ಲಿ ಗಾಂಧೀಜಿಯವರ ಸಂಪರ್ಕಕ್ಕೆ ಬಂದರೆ ಸುಭಾಸ್ ಪ್ರತಿಷ್ಠಿತ ICS ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಪಾಸಾದರೂ ಟಿಳಕರ ಕರೆಗೆ ಓಗೊಟ್ಟು ಅದನ್ನು ತ್ಯಜಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಾಗವಹಿಸಲು ಭಾರತಕ್ಕೆ ಬಂದಿದ್ದರು. ಪಟೇಲರಿಗೆ ಗಾಂಧೀಜಿಯ ಭೇಟಿಯಾಗುವ ಮೊದಲು ಅವರ ಕುರಿತು ಅಸಹನೆ ಇತ್ತು. ಆದರೆ ನಂತರ ಗಾಂಧೀಜಿಯ ಅಪ್ಪಟ ಶಿಷ್ಯರಾದರು. ತಮ್ಮ ಗುರುವಿನ ಇಚ್ಛೆಗನುಗುಣವಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿದ್ದರು. ಬೋಸರಿಗೆ ಇಂಗ್ಲೆಂಡಿನಿಂದ ಹಿಂದಿರುಗಿ ಬರಲು ಪ್ರೇರಣೆ “ದೇಶಕ್ಕಾಗಿ ಅಧಿಕಾರ ಬಿಡಿ” ಎನ್ನುವ ಬಾಲಗಂಗಾಧರ ಟಿಳಕರ ಭಾಷಣ.

ಗಾಂಧಿ ಜತೆಗಿನ ನಂಟು

ಗಾಂಧಿಜಿಯೊಡನೆ ಸುಭಾಸರ ಮೊದಲ ಭೇಟಿ ನಿರಾಶಾದಾಯಕವಾಗಿತ್ತು. ಅವರ ಆತ್ಮ ಚರಿತ್ರೆಯಲ್ಲಿ ಅವರು ಅದನ್ನು ಪ್ರಸ್ತಾಪಿಸಿದ್ದಾರೆ. ಅದು ಬೆಳೆಯುತ್ತಲೇ ಹೋಯಿತು. ಗಾಂಧೀಜಿಯ ಮೇಲೆ ಅಪಾರ ಗೌರವವನ್ನು ವ್ಯಕ್ತಪಡಿಸುತ್ತಲೇ ಗಾಂಧೀವಾದಿಗಳಿಂದ ತಮ್ಮಿಬ್ಬರ ನಡುವೆ ಅಭಿಪ್ರಾಯಬೇಧ ಬರಲು ಕಾರಣ ಎಂದು ಸುಭಾಸರು ಬರೆದಿದ್ದಾರೆ. 1917-18ರ ಗುಜರಾತಿನ ಖೇಡ್ ಸತ್ಯಾಗ್ರಹದ ಯಶಸ್ಸು ಪಟೇಲರ ಮತ್ತು ಮಹಾತ್ಮಾಗಾಂಧೀಜಿಯವರ ನಡುವೆ ಇನ್ನಷ್ಟು ಬಾಂಧವ್ಯವನ್ನು ಗಟ್ಟಿಯಾಗಿಸಿತು. ಖೇಡ್ ಹೋರಾಟದಿಂದ ಸರ್ದಾರ್ ಎನ್ನುವ ಬಿರುದೂ ಅವರಿಗೆ ಬಂದಿತ್ತು.

ಬೋಸ್ ಮತ್ತು ಪಟೇಲ್ ಅವರ ಮಧ್ಯದ ಮೂಲಭೂತ ವ್ಯತ್ಯಾಸಗಳು ಅವರ ತತ್ವಚಿಂತನೆಯಲ್ಲಿದೆ. ಬೋಸ್ ಎಡಪಂಥೀಯ, ಕ್ರಾಂತಿಕಾರಿ ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನ ಹೊಂದಿದ್ದರು. ಅವರ ಆತ್ಮಕಥೆ ’An Indian Pilgri” ಮತ್ತು ’The Indian Struggl” ಕೃತಿಗಳಲ್ಲಿ ಅವರು ಸೋವಿಯೆಟ್ ಮಾದರಿಯ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಮೆಚ್ಚಿದ್ದಾರೆ. ಕೇಂದ್ರಿತ ಸಮಾಜವಾದಿ ರಾಜ್ಯದ ಮೂಲಕ ಭಾರತದ ಪುನರುತ್ಥಾನ ಸಾಧ್ಯವೆಂದು ಬೋಸ್ ನಂಬಿದ್ದರು. ಇದಕ್ಕೆ ವಿರುದ್ದವಾಗಿ ಪಟೇಲರು ಗಾಂಧೀ ತತ್ತ್ವಗಳಾದ ಅಹಿಂಸೆ, ಸ್ವಾವಲಂಬನೆ ಮತ್ತು ಗ್ರಾಮಾಧರಿತ ಆಡಳಿತದ ಮಹತ್ವವನ್ನು ಒತ್ತಿ ಹೇಳುತ್ತಿದ್ದರು. ಬೋಸ್ರ authoritarian ಸಿದ್ಧಾಂತವು ಅಹಿಂಸಾಮಾರ್ಗಕ್ಕೆ ಅಪಾಯಕಾರಿ ಎಂದು ಪಟೇಲರು ಪರಿಗಣಿಸಿದರು. ಅವರ ದೃಷ್ಟಿಕೋನದಲ್ಲಿ ಸ್ವಾತಂತ್ರ್ಯ ಹೋರಾಟವು ಕೇವಲ ಬ್ರಿಟಿಷರ ವಿರುದ್ಧದ ಹೋರಾಟವಲ್ಲ, ದೇಶದ ನೈತಿಕ ಪುನರುತ್ಥಾನವೂ ಆಗಿತ್ತು.

ಸ್ವರಾಜ್‌ ಪಕ್ಷದ ಉದಯ

ಇದರ ಸ್ಪಷ್ಟವಾದ ದಾಖಲೆ ಸಿಗಬೇಕಾದರೆ ವಲ್ಲಭಬಾಯಿ ಪಟೇಲರ ಅಣ್ಣ ವಿಠಲಬಾಯಿ ಪಟೇಲರ ’ವಿಲ್’ ಕುರಿತಾದ ಕಾನೂನು ಹೋರಾಟವನ್ನು ಗಮನಿಸಬೇಕು. ವಿಠಲಬಾಯಿ ಪಟೇಲರು ಸಹ ತನ್ನ ತಮ್ಮನಂತೆ ಇಂಗ್ಲೆಂಡಿನಲ್ಲಿ ಬ್ಯಾರಿಷ್ಟರ್ ಪದವಿಯನ್ನು ಪಡೆದಿದ್ದರು. 1912ರಲ್ಲಿಯೇ ಅವರು ಕಾಂಗ್ರೆಸ್ಸಿಗೆ ಸೇರಿ ಸ್ವಾತಂತ್ರ್ಯ ಹೋರಾಟದ ಮಂಚೂಣಿಯಲ್ಲಿದ್ದರು. ಟಿಳಕರ ಪ್ರಭಾವ ಅವರಮೇಲಿತ್ತು. 1922 ರಲ್ಲಿ ಚೌರಿಚೌರಾ ದುರಂತದ ನಂತರ ಮಹಾತ್ಮಾ ಗಾಂಧೀಜಿಯವರು ಸತ್ಯಾಗ್ರಹವನ್ನು ಸ್ಥಗಿತಗೊಳಿಸಿದಾಗ ಚಿತ್ತರಂಜನ್ ದಾಸ್ ನೇತೃತ್ವದಲ್ಲಿ, ಮೋತಿಲಾಲ್ ನೆಹರು, ವಿಠಲ್ಬಾಯಿ ಪಟೇಲ, ಹಸ್ರತ್ ಮೋಹಾನಿ, ಮದನ್ಮೋಹನ್ ಮಾಳವೀಯ, ಸುಭಾಷ್ಚಂದ್ರ ಬೋಸ್ ಮೊದಲಾದವರು ಸಿಡಿದು ’ಸ್ವರಾಜ್ ಪಕ್ಷ’ ವನ್ನು ಸ್ಥಾಪಿಸಿದರು. ಇಲ್ಲಿಂದ ಸುಭಾಸ್ ಮತ್ತು ವಿಠಲಬಾಯಿ ಅವರ ಸ್ನೇಹ ಗಾಢವಾಗುತ್ತಾ ಹೋಯಿತು. 1923ರ ಚುನಾವಣೆಯಲ್ಲಿ ಸ್ವರಾಜ್ ಪಕ್ಷವು ವಿಶೇಷವಾಗಿ ಬಂಗಾಳ ಮತ್ತು ಮಧ್ಯಪ್ರಾಂತ್ಯಗಳಲ್ಲಿ.ಹಲವಾರು ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ವಿಠಲಭಾಯಿ ಪಟೇಲ್ ಅವರು ಕೇಂದ್ರ ಶಾಸನಸಭೆಯ (Central Legislative Assembly) ಮೊದಲ ಭಾರತೀಯ ಸ್ಪೀಕರ್ ಆಗಿ ಆಯ್ಕೆಯಾದರು. ಇದು ಸ್ವರಾಜ್ ಪಕ್ಷದ ದೊಡ್ಡ ಸಾಧನೆಯಾಗಿತ್ತು.ಭಾರತದ ಸ್ವಾತಂತ್ರ್ಯ ಚಳವಳಿಯು ಮರೆತ ಇತಿಹಾಸದಲ್ಲಿ ’ವಿಠಲ್ಭಾಯಿ ಪಟೇಲ್ ಸೇರುತ್ತಾರೆ.

ವಿಠಲಭಾಯಿ ಪಟೇಲರು ಸುಭಾಸರ ಘನಿಷ್ಠ ಮಿತ್ರರಾಗಿದ್ದರು. ಈ ಇಬ್ಬರೂ ಗಾಂಧೀಜಿಯವರ ಕಟು ಟೀಕಾಕಾರರೂ ಆಗಿದ್ದರು. ಅವರಿಬ್ಬರೂ ಯುರೋಪನಲ್ಲಿ ಭಾರತದ ಸ್ವಾತಂತ್ರ್ಯದ ಬೆಂಬಲಕ್ಕಾಗಿ ಪ್ರಯಾಣಿಸುತ್ತಿರುವಾಗ ಅಕ್ಟೋಬರ್ 22, 1933ರಂದು ಜಿನೇವಾದಲ್ಲಿ ವಿಠಲಬಾಯಿ ಪಟೇಲರು ನಿಧನರಾದರು. ಅವರ ಅಂತಿಮ ಆಸೆಯಂತೆ ವಿಟ್ಟೂಬಾಯಿಯವರ ಪಾರ್ಥಿವಶರೀರವನ್ನು ಸಂರಕ್ಷಿಸಿ, ಎಸ್ಎಸ್ ನಾರ್ಕುಂಡಾ ಹಡಗಿನಲ್ಲಿ ಮುಂಬೈಗೆ ತರಲಾಯಿತು. ತಂದು, ನವೆಂಬರ್ 10ರಂದು ಮುಂಬೈನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದರು. ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಬೋಸ್‌, ಪಟೇಲ್‌ ನಡುವೆ ವಿಲ್‌ ಜಟಾಪಟಿ

ಸಾಯುವ ಮುನ್ನ ವಿಟ್ಟೂಬಾಯಿ ಅವರು ತಮ್ಮ ಸಂಪತ್ತಿನ ಮುಕ್ಕಾಲುಭಾಗವನ್ನುಸುಭಾಸರಿಗೆ ಮೃತ್ಯುಪತ್ರವನ್ನು ಬರೆದುಕೊಟ್ಟಿದ್ದರು. ಬೋಸ್ ಅವರು ಆ ಹಣವನ್ನು “ಭಾರತದ ರಾಜಕೀಯ ಪ್ರಗತಿಗಾಗಿ, ವಿಶೇಷವಾಗಿ ಭಾರತದ ಪರ ಪ್ರಚಾರ ಕಾರ್ಯಕ್ಕಾಗಿ ವಿದೇಶಗಳಲ್ಲಿ ಬಳಸಬೇಕು” ಎಂದು ಸೂಚಿಸಲಾಗಿತ್ತು. ಇದು ಆ ಕಾಲದ ರಾಜಕೀಯ ದೃಷ್ಟಿಯಿಂದ ದೊಡ್ಡ ಸುದ್ದಿಯಾಯಿತು. ತಮ್ಮ ರಾಜಕೀಯ ವಿರೋಧಿಯೊಟ್ಟಿಗೆ ಆದ ಈ ಘಟನೆಯಿಂದ ವಲ್ಲಭಬಾಯಿ ಪಟೇಲರು ಕ್ರುದ್ಧರಾದದ್ದಷ್ಟೇ ಅಲ್ಲ, ಆ ಮರಣಪತ್ರದಲ್ಲಿ ಆ ಸಂದರ್ಭದಲ್ಲಿ ಅಲ್ಲಿದ್ದ ವೈದ್ಯರ ಸಾಕ್ಷಿ ಇಲ್ಲದ್ದರ ಸಮೇತ ಕೆಲವೊಂದು ನ್ಯೂನ್ಯತೆಗಳನ್ನು ಗುರುತಿಸಿ ಬೋಸರನ್ನು ಕೋರ್ಟಿಗೆಳೆದರು. ಕೋರ್ಟಲ್ಲಿ ಸುಭಾಸರ ವಿರುದ್ಧ ಗೆದ್ದ ವಲ್ಲಭಬಾಯಿ ಪಟೇಲರು ಆ ಹಣವನ್ನು ಅಣ್ಣ “ವಿಠಲಬಾಯಿ ಸ್ಮಾರಕ ಟ್ರಸ್ಟ್” ಸ್ಥಾಪಿಸಿ ರಾಷ್ಟ್ರಸೇವೆಗೆ ವಿನಿಯೋಗಿಸಿದರು. ಈ ಘಟನೆಯು ಕೇವಲ ಸಹೋದರರ ನಡುವಣ ಕಾನೂನು ವ್ಯಾಜ್ಯವಲ್ಲ; ಅದು ಸ್ವಾತಂತ್ರ್ಯ ಚಳುವಳಿಯೊಳಗಿನ ನೈತಿಕ ಹಾಗೂ ರಾಜಕೀಯ ಮೌಲ್ಯಗಳ ಸಂಘರ್ಷದ ಪ್ರತಿಬಿಂಬವೂ ಆಗಿತ್ತು.

ಫಾರ್ವರ್ಡ್‌ ಬ್ಲಾಕ್‌ ಸ್ಥಾಪನೆ

1939ರ ತ್ರಿಪುರಿ ಅಧಿವೇಶನವು ಬೋಸ್ ಮತ್ತು ಪಟೇಲ್ ನಡುವಿನ ಘರ್ಷಣೆಯ ಶೃಂಗವನ್ನು ತಲುಪಿತು. ಬೋಸ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆಬಯಸಿದರು. ಗಾಂಧೀಜಿ ಪಟ್ಟಾಭಿ ಸೀತಾರಾಮಯ್ಯರನ್ನು ಬೆಂಬಲಿಸಿದರೂ, ಬೋಸ್ ಗೆದ್ದರು. ಅವರ ಎಡಪಂಥೀಯ ನೀತಿಗಳು ಮತ್ತು ಬ್ರಿಟಿಷರ ವಿರುದ್ಧ ಉಗ್ರ ಹೋರಾಟದ ಹಾದಿಯು ಅಪಾಯಕಾರಿ ಎಂದ ಪಟೇಲ ಮತ್ತಿತರ ಗಾಂಧಿಜಿಯವರ ಬೆಂಬಲಿಗರು ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದರು. ಇದರಿಂದ ಬೋಸ್ ಪಕ್ಷದಲ್ಲಿ ಏಕಾಂಗಿಯಾಗಿದ್ದು, ನಂತರ Forward Bloc ಸ್ಥಾಪಿಸಲು ಕಾರಣವಾಯಿತು. ಬಹುಶಃ ಪಟೇಲರ ಬೆಂಬಲವಿಲ್ಲದಿದ್ದರೆ ಕಾಂಗ್ರೇಸ್ಸಿನಲ್ಲಿ ಸುಭಾಸರನ್ನು ತಡೆಯುವವರೇ ಇದ್ದಿರಲಿಲ್ಲ. ಸುಭಾಸರ ಸಹೋದರ ಶರತ್ ಬೋಸ್ ಗಾಂಧೀಜಿಯವರಿಗೆ ಪತ್ರವೊಂದನ್ನು ಬರೆದು “ಸುಭಾಸರ ಗೆಲುವು ನಿಮ್ಮ ಸೋಲಲ್ಲ, ಕಾಂಗ್ರೇಸ್ಸಿನ ಹೈಕಮಾಂಡ್ ನಲ್ಲಿ ರಾರಾಜಿಸುತ್ತಿರುವ ಸರ್ದಾರ ಪಟೇಲರ ಸೋಲಾಗಿತ್ತು” ಎಂದು ಮೂದಲಿಸುತ್ತಾರೆ. ಆ ಪತ್ರಕ್ಕೆ ಪಟೇಲರು ಕಾಂಗ್ರೇಸ್ಸಿನ ಹೆಸರು ಹಾಳಾಯಿತೆಂದು ತುಂಬಾ ಕ್ಲೇಶಪಟ್ಟುಕೊಳ್ಳುತ್ತಾರೆ. ಅದನ್ನು ಕೆದಕಿ ಮುಂದುವರೆಸಿದರೆ ಪಕ್ಷದ ಪ್ರತಿಷ್ಠೆ ಹಾಳಾಗಬಹುದು ಎನ್ನುವ ಕಾರಣಕ್ಕೆ ಅದಕ್ಕೆ ಉತ್ತರಿಸಲಿಲ್ಲ.

ಘರ್ಷಣೆಯ ನಡುವೆಯೂ, ಇಬ್ಬರೂ ಪರಸ್ಪರ ಗೌರವವನ್ನು ಕಾಪಾಡಿಕೊಂಡರು. ಪಟೇಲ್ ಬೋಸ್ ಅವರ ಧೈರ್ಯ ಮತ್ತು ತ್ಯಾಗವನ್ನು ಮೆಚ್ಚಿದರು; ಬೋಸ್ ಪಟೇಲ್ ಅವರ ಆಡಳಿತ ಪ್ರತಿಭೆ ಮತ್ತು ರಾಷ್ಟ್ರಸೇವೆಗೆ ನಿಷ್ಠೆಯನ್ನು ಮೆಚ್ಚಿದರು. 1945ರಲ್ಲಿ ವಿಮಾನಪಘಾಗಾತದಲ್ಲಿ ಬೋಸ್ ಕಾಣೆಯಾದಾಗ ಸರ್ಧಾರ್ ಪಟೇಲರಿಗೂ ಆಘಾತವಾಗಿತ್ತು. ಸುಭಾಸರ ಕೊಡುಗೆಯನ್ನು ಮನಃಪೂರ್ವಕವಾಗಿ ಗೌರವಿಸಿ. ಭಾರತೀಯ ರಾಷ್ಟ್ರೀಯ ಸೈನ್ಯದ (INA) ಮೂಲಕ ಬೋಸ್ ಹುಟ್ಟಿಸಿದ ದೇಶಭಕ್ತಿಯ ಭಾವನೆಯನ್ನು ಕೊಂಡಾಡಿದ್ದರು.

ವಿಭಿನ್ನ ದಿಕ್ಕಾದರೂ ಗುರಿ ಒಂದೇ

ಬೋಸ್ ಮತ್ತು ಪಟೇಲ್ ಅವರ ತತ್ವಭೇದವು ಭಾರತದ ಸ್ವಾತಂತ್ರ್ಯ ಚಳವಳಿಯ ಎರಡು ವಿಭಿನ್ನ ದಿಕ್ಕುಗಳನ್ನು ಪ್ರತಿನಿಧಿಸುತ್ತದೆ. ಬೋಸ್ ಕ್ರಾಂತಿಕಾರಿ, ಯುದ್ಧಮಾರ್ಗದ ಮೂಲಕ ಸ್ವಾತಂತ್ರ್ಯವನ್ನು ಬಯಸಿದರೆ, ಪಟೇಲ್ ಸಂವಿಧಾನಬದ್ಧ ಮತ್ತು ವಾಸ್ತವಮಾರ್ಗದ ಮೂಲಕ ಏಕತೆಯನ್ನು ಬಲಪಡಿಸಿದರು. ಆದರೂ ಅವರ ಗುರಿ ಒಂದೇ: ಸ್ವತಂತ್ರ, ಬಲಿಷ್ಠ ಮತ್ತು ಆತ್ಮನಿರ್ಭರ ಭಾರತ. ಸ್ವಾತಂತ್ರ್ಯಾನಂತರ, ಪಟೇಲ್ ದೇಶವನ್ನು ಏಕೀಕೃತ ರಾಷ್ಟ್ರವನ್ನಾಗಿ ರೂಪಿಸಿದರು. ಅವರು 560ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಂದೇ ರಾಷ್ಟ್ರದಡಿ ಸೇರಿಸಲು ಯಶಸ್ವಿಯಾದರು. ಬೋಸ್ ದೇಶಭಕ್ತಿಯ, ಧೈರ್ಯ ಮತ್ತು ಬಲಿದಾನದ ಪ್ರತೀಕವಾಗಿತ್ತು. ಇವವರಿಬ್ಬರ ಆಕರ್ಷಕವ್ಯಕ್ತಿತ್ವ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಿ ಉಳಿಯಿತು.

ಸುಭಾಷ್ ಚಂದ್ರ ಬೋಸ್ ಮತ್ತು ಸರ್ದಾರ್ ಪಟೇಲ್ ವೈಚಾರಿಕವಾಗಿ ವಿಭಿನ್ನರಾದರೂ ಭಾರತಮಾತೆಯ ಸ್ವಾತಂತ್ರ್ಯಕ್ಕಾಗಿ ತ್ಯಾಗಶೀಲತೆಗೆ ಹೆಸರಾಗಿದ್ದಾರೆ. ಪಟೇಲ್ ಶಿಸ್ತು, ವ್ಯವಸ್ಥೆ ಮತ್ತು ವಾಸ್ತವವಾದದ ಸಂಕೇತವಾಗಿದ್ದರೆ, ಬೋಸ್ ಕ್ರಾಂತಿಕಾರಿ ಶಕ್ತಿ ಮತ್ತು ದೇಶಾಭಿಮಾನಕ್ಕೆ ಮಾದರಿಯಾಗಿದ್ದಾರೆ. ಇತಿಹಾಸವು ಇವರಿಬ್ಬರನ್ನೂ ಪರಸ್ಪರ ಪೂರಕ ಶಕ್ತಿಗಳಾಗಿ ಸ್ಮರಿಸುತ್ತದೆ, ಏಕೆಂದರೆ ಅವರಿಬ್ಬರ ಉದ್ದೇಶ ಒಂದೇ: ಭಾರತದ ಸ್ವಾತಂತ್ರ್ಯ ಮತ್ತು ಪುನರುತ್ಥಾನ.

PREV
Read more Articles on

Recommended Stories

ರಾಷ್ಟ್ರೀಯ ಐಕ್ಯತೆ ಸಾರುತ್ತಿದೆ ಸರ್ದಾರ್‌ ‘ಮೂರ್ತಿ’!
70 ಮಂದಿಗೆ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ