‘ಸಿಕ್ಕಿಂ ಗಡಿ’ ದೇಶದಲ್ಲೇ ಅತಿ ವಿಭಿನ್ನ ಪ್ರವಾಸೋದ್ಯಮ ತಾಣ

Published : Sep 19, 2026, 11:54 AM IST
sikkim

ಸಾರಾಂಶ

ವಿಶ್ವದ ಪ್ರವಾಸೋದ್ಯಮದಲ್ಲಿ ಕೃಷಿ, ಧಾರ್ಮಿಕ, ಆರೋಗ್ಯ, ಪರಿಸರ, ಕಡಲ ಪ್ರವಾಸೋದ್ಯಮ ಹೀಗೆ ಹಲವು ಪ್ರವಾಸೋದ್ಯಮ ಆಯ್ಕೆಗಳಿವೆ. ಆದರೆ, ಗಡಿಯನ್ನೇ ಪ್ರವಾಸದ ರೋಚಕ ಅನುಭವವನ್ನಾಗಿ ಉಣಬಡಿಸುವ ರಮಣೀಯ ಹಾಗೂ ರೋಮಾಂಚನ ಪ್ರವಾಸಿ ತಾಣಗಳು ವಿರಳ. ಅಂತಹ ಅಪರೂಪದ ಗಡಿ ಪ್ರವಾಸೋದ್ಯಮ ಸ್ಥಳವೇ ಸಿಕ್ಕಿಂನ ‘ನಾಥೂ ಲಾ ಪಾಸ್‌’.

ನಾಥೂ ಲಾ ಪಾಸ್ (ಸಿಕ್ಕಿಂ) : ವಿಶ್ವದ ಪ್ರವಾಸೋದ್ಯಮದಲ್ಲಿ ಕೃಷಿ, ಧಾರ್ಮಿಕ, ಆರೋಗ್ಯ, ಪರಿಸರ, ಕಡಲ ಪ್ರವಾಸೋದ್ಯಮ ಹೀಗೆ ಹಲವು ಪ್ರವಾಸೋದ್ಯಮ ಆಯ್ಕೆಗಳಿವೆ. ಆದರೆ, ಗಡಿಯನ್ನೇ ಪ್ರವಾಸದ ರೋಚಕ ಅನುಭವವನ್ನಾಗಿ ಉಣಬಡಿಸುವ ರಮಣೀಯ ಹಾಗೂ ರೋಮಾಂಚನ ಪ್ರವಾಸಿ ತಾಣಗಳು ವಿರಳ. ಅಂತಹ ಅಪರೂಪದ ಗಡಿ ಪ್ರವಾಸೋದ್ಯಮ ಸ್ಥಳವೇ ಸಿಕ್ಕಿಂನ ‘ನಾಥೂ ಲಾ ಪಾಸ್‌’.

ಸಮುದ್ರ ಮಟ್ಟದಿಂದ ಸುಮಾರು 14 ಸಾವಿರ ಅಡಿ ಎತ್ತರದಲ್ಲಿರುವ ನಾಥೂ ಲಾ ಕೇವಲ ಹಿಮಾಲಯದ ಸೌಂದರ್ಯ ಹೊದ್ದು ನಿಂತಿರುವ ಪ್ರವಾಸಿ ತಾಣವಲ್ಲ. ಇದು ಭಾರತದ ಗಡಿ ಭದ್ರತೆ, ಸೈನಿಕರ ಶೌರ್ಯ, ತ್ಯಾಗ, ಇತಿಹಾಸ ಮತ್ತು ರಾಜತಾಂತ್ರಿಕತೆಯನ್ನು ಒಂದೇ ಕಡೆ ಕಣ್ಣಿಗೆ ಕಟ್ಟಿದಂತೆ ತೋರಿಸುವ ಅದ್ಭುತ ತಾಣ, ಅದೊಂದು ರೋಚಕ ಅನುಭವ.

ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಈ ಪ್ರದೇಶ ಸದಾ ಬಿಗುವಿನ ವಾತಾವರಣದಿಂದ ಕೂಡಿರುವ ಸೂಕ್ಷ್ಮ ಗಡಿ. ಮೌನ, ಭಯ, ಅನಿಶ್ಚಿತತೆ, ಕ್ರೌರ್ಯ, ಸೇನಾ ಸಾಮರ್ಥ್ಯ, ಭದ್ರತೆ ಒದಗಿಸುವ ಸೈನಿಕರ ಶ್ರಮ, ಗಡಿ ಶಿಷ್ಟಾಚಾರ ಎಲ್ಲಾ ರೀತಿಯ ಗಡಿ ಪ್ರವಾಸೋದ್ಯಮ ಅರಿಯಲು ನಾಥೂ ಲಾ ಒಂದು ಆದರ್ಶ ಪಾಠ ಶಾಲೆ.

ಸಿಕ್ಕಿಂಗೆ ಪ್ರತಿ ವರ್ಷ 17 ಲಕ್ಷ ಮಂದಿ ಪ್ರವಾಸಿಗರು ಬಂದರೆ ಅದರಲ್ಲಿ ಸುಮಾರು 15 ಲಕ್ಷ ನಾಥೂ ಲಾ ಪಾಸ್‌ಗೆ ಭೇಟಿ ನೀಡುವುದು ಖಚಿತ. ಎದುರಲ್ಲೇ ಇರುವ ಚೀನಾ ಗಡಿ, ಅಲ್ಲಿನ ಗಡಿ ಭದ್ರತೆ, ಸೈನಿಕರ ಶ್ರಮ, ತ್ಯಾಗ, ವಿರೋಚಿತ ಕಥೆಗಳು, ಕಠಿಣ ಹವಾಮಾನ ಹಾಗೂ ಗಡಿನಲ್ಲಿನ ರಾಜತಾಂತ್ರಿಕ ಪ್ರಕ್ರಿಯೆ ಅರಿಯುವ ಸದವಕಾಶ ಇಲ್ಲಿದೆ.

ಈ ಪರ್ವತ ಪಾಸ್ ಟಿಬೆಟ್ ಮತ್ತು ಭಾರತ ಸಂಪರ್ಕಿಸುವ ಅತ್ಯಂತ ಹಳೆಯ ವ್ಯಾಪಾರ ಗಡಿ ಪೋಸ್ಟ್‌ಗಳಲ್ಲಿ ಒಂದು. ರೇಷ್ಮೆ ಮಾರ್ಗ, ಪ್ರಾಚೀನ ವ್ಯಾಪಾರ ಮಾರ್ಗವಿದು. ಇಲ್ಲಿ ನೋಡಲು ಪ್ರಕೃತಿ, ರಮಣೀಯ ದೃಶ್ಯಗಳ ಜತೆಗೆ ಮೂರ್ನಾಲ್ಕು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿವೆ.

ಬಾಬಾ ಹರ್ಭಜನ್ ಮಂದಿರ, ಅದೃಶ್ಯ ಆತ್ಮವಿಲ್ಲಿ ಯೋಧ!

ಬಾಬಾ ಹರ್ಭಜನ್‌ ಮಂದಿರ. ಇದು ಸಿಕ್ಕಿಂ ಅದರಲ್ಲೂ ನಾಥೂ ಲಾ ಪಾಸ್‌ನ ಅತ್ಯಂತ ನಂಬಿಕೆಯ ಬಾಬಾ ಮಂದಿರ. ಯೋಧರು ನಮಗೆಲ್ಲಾ ದೇವರಿದ್ದಂತೆ ಎಂದು ಸದಾ ನೆನೆಯುತ್ತೇವೆ. ಆದರೆ, ಇಲ್ಲಿ ನಿಜಾರ್ಥದಲ್ಲಿ ಯೋಧ ದೇವರಾಗಿದ್ದಾರೆ. ಆತ್ಮದ ರೂಪದಲ್ಲಿ ಇವರು ಎಲ್ಲರನ್ನೂ ಕಾಯುತ್ತಿದ್ದಾರಂತೆ ಎಂಬ ನಂಬಿಕೆ ಇಲ್ಲಿನ ಜನರದ್ದು, ಸೈನಿಕರದ್ದು ಮಾತ್ರವಲ್ಲ ಚೀನಾ ಸೈನಿಕರದ್ದೂ ಕೂಡ.

ಹರ್ಭಜನ್ ಬಾಬಾ ಮಂದಿರ ಸೈನಿಕರಿಗೆ ಒಂದು ಶಕ್ತಿಕೇಂದ್ರ. ಮೊದಲ ಬಾರಿಗೆ ಇಲ್ಲಿ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸೈನಿಕರು ಪ್ರಥಮವಾಗಿ ಬಾಬಾ ಮಂದಿರಕ್ಕೆ ಬಂದು ಪ್ರಾರ್ಥಿಸುವುದು ವಾಡಿಕೆ. ಇಷ್ಟಕ್ಕೂ ಇವರು ಬಾಬಾ ಅಲ್ಲ. ಇವರೂ ಕೂಡ ಯೋಧರಾಗಿದ್ದವರು. ಸೇವೆಯಲ್ಲಿದ್ದಾಗ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟಿದ್ದರು. ಬಳಿಕ ತನ್ನ ಸ್ನೇಹಿತ ಯೋಧನ ಕನಸಿಗೆ ಬಂದಿದ್ದ ಹರ್ಭಜನ್‌, ತನ್ನ ಮೃತದೇಹ ಇರುವ ಸ್ಥಳ ತಿಳಿಸಿದ್ದರು. ಹುಡುಕಿದಾಗ ಮೃತದೇಹ ಪತ್ತೆಯಾಗಿತ್ತು. ಮತ್ತೊಮ್ಮೆ `ನನ್ನ ದೇಹಾಂತ್ಯ ಆಗಿರಬಹುದು. ಆದರೆ, ಆತ್ಮ ಸದಾ ಕರ್ತವ್ಯದಲ್ಲಿರುತ್ತದೆ'''''''' ಎಂದು ಹೇಳಿದ್ದರಂತೆ. ಆರಂಭದಲ್ಲಿ ಇವೆಲ್ಲ ಭ್ರಮೆ ಎಂದು ಯಾರೂ ಈ ಕನಸಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ದಿನಕಳೆದಂತೆ ಯೋಧರಿಗೆ ಬೇರೆ ಬೇರೆ ಅನುಭವ ಆಗುವುದಕ್ಕೆ ಆರಂಭವಾಯಿತಂತೆ. ಭವಿಷ್ಯದಲ್ಲಿ ಏನಾದರೂ ಘಟನೆ, ಸಮಸ್ಯೆ ಸಂಭವಿಸುವುದಿದ್ದರೆ ಇದನ್ನು ಮುಂಚಿತವಾಗಿಯೇ ಹರ್ಭಜನ್ ಕನಸಿನ ರೂಪದಲ್ಲಿ ಬಂದು ಹೇಳುತ್ತಿದ್ದರಂತೆ.

ಈ ರೀತಿ ಗಾಢವಾಗುತ್ತಾ ಹೋದ ನಂಬಿಕೆ ಇದೀಗ ಅಲ್ಲಿನ ಸೈನಿಕರನ್ನು ಆತ್ಮರೂಪಿ ಯೋಧ, ಹರ್ಭಜನ್‌ ಬಾಬಾ ಅವರೇ ರಕ್ಷಿಸುತ್ತಿದ್ದಾರೆ ಎಂಬಂತೆ ಭಕ್ತಿ ರೂಪ ತಾಳಿದೆ. ಅವರಿಗಾಗಿ ಮಂದಿರ ನಿರ್ಮಿಸಿದ್ದಾರೆ. ಸೇನೆಯಲ್ಲಿ ಅವರು ಸೇವಾ ನಿರತರಾಗಿರುವಂತೆ ಬಂಕರ್‌ ನಿರ್ಮಿಸಿದ್ದು, ಇಲ್ಲಿ ಬಾಬಾರ ಸಮವಸ್ತ್ರ, ಶೂ, ಹಾಸಿಗೆ ಸೇರಿದಂತೆ ಅವರು ಬಳಸುತ್ತಿದ್ದ ವಸ್ತುಗಳನ್ನೆಲ್ಲಾ ತಂದಿಡಲಾಗಿದೆ. ಬಾಬಾ ಅವರ ಈ ಕಚೇರಿಗೆ ಜನರು, ಸೈನಿಕರು ತಮ್ಮ ಬೇಡಿಕೆ, ಪ್ರಾರ್ಥನೆಗಳನ್ನೂ ಸಲ್ಲಿಸುವುದುಂಟು.

ಕಾಲಕಾಲಕ್ಕೆ ಸಿಗುತ್ತಿತ್ತು ಹರ್ಭಜನ್‌ ಆತ್ಮಕ್ಕೆ ಬಡ್ತಿ:

ಹರ್ಭಜನ್‌ ಸಿಂಗ್‌ ಬದುಕಿರುವಂತೆ ಸೇನೆಯ ನಿಯಮದಂತೆ ಬಡ್ತಿ ಕೂಡಾ ನೀಡಲಾಗುತ್ತದೆ. ಅದರಂತೆ 2006ರಲ್ಲಿ ಹರ್ಭಜನ್ ಸಿಂಗ್ ಅವರನ್ನು ಸೇನೆಯಿಂದ ನಿವೃತ್ತಿಗೊಳಿಸಲಾಗಿತ್ತು. ಜೊತೆಗೆ, ಕರ್ತವ್ಯದಲ್ಲಿ ಇರುವ ತನಕ ಪ್ರತಿವರ್ಷ ಊರಿಗೆ ತೆರಳುವ ಎರಡು ತಿಂಗಳು ರಜೆ ಕೂಡಾ ಕೊಡಲಾಗುತ್ತಿತ್ತು. ಆಗ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ ಇವರ ಫೋಟೋವನ್ನು ಊರಿಗೆ ಸಂಭ್ರಮದಿಂದ ಕೊಂಡೊಯ್ಯಲಾಗುತ್ತಿತ್ತು. ಊರಿನ ಜನ ಕೂಡಾ ಈ ಫೋಟೋವನ್ನು ಭರ್ಜರಿಯಾಗಿ ಸ್ವಾಗತಿಸಿ ಹಬ್ಬ ಆಚರಿಸುತ್ತಿದ್ದರಂತೆ.

ಚೀನಾ-ಭಾರತ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಜಾಗ:

1967ರಲ್ಲಿ ಭಾರತೀಯ ಪಡೆಗಳು ಗಡಿಯಲ್ಲಿ ತಂತಿ ಬೇಲಿ ಹಾಕುತ್ತಿದ್ದಾಗ ಚೀನಾ ಪಡೆಗಳು ದಾಳಿ ನಡೆಸಿದ್ದರು. ಚೀನಿಯರು ಭೌಗೋಳಿಕ ಅನುಕೂಲ ಹೊಂದಿದ್ದರೂ ಸಹ ಭಾರತೀಯ ಸೇನೆಯು ಭೀಕರ ಪ್ರತಿ ದಾಳಿ ನಡೆಸಿ 400 ಸೈನಿಕರನ್ನು ಮಟ್ಟ ಹಾಕಿತ್ತು. ಈ ನಿರ್ಣಾಯಕ ವಿಜಯವು ಚೀನಾ ಆಕ್ರಮಣ ತಡೆಯಲು ಯಶಸ್ವಿಯಾಗಿತ್ತು.

ತ್ಸ್ಯಾಂಗೋ ಸರೋವರ:

ಇಲ್ಲಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ತ್ಸ್ಯಾಂಗೋ ಸರೋವರ ಕೂಡ ಒಂದು. ಈ ಶಾಂತಿಯುತ ಸರೋವರವು ಗ್ಯಾಂಗ್ಟಾಕ್-ನಾಥು ಲಾ ಹೆದ್ದಾರಿಯಲ್ಲಿ ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿದೆ. ಇದು ನಿರ್ಬಂಧಿತ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಅನುಮತಿ ಕಡ್ಡಾಯ. ಚಳಿಗಾಲದಲ್ಲಿ ಇದುಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ನೀಲಿ ಬಣ್ಣದ ಈ ಸರೋವರ ಪ್ರವಾಸಿಗರ ಪ್ರಮುಖ ಆಕರ್ಷಣೆ.

ತ್ಸ್ಯಾಂಗೋ ರೋಪ್‌ ವೇ:

14,000 ಅಡಿ ಎತ್ತರದಲ್ಲಿರುವ ಏಷ್ಯಾದ ಮೊದಲ ಕೇಬಲ್‌ ಕಾರ್‌ ಮಾರ್ಗ ಈ ತ್ಸ್ಯಾಂಗೋ ರೋಪ್ ವೇ. ರೋಪ್‌ವೇಯಲ್ಲಿ ಪ್ರಯಾಣಿಸುವಾಗ ಹಿಮದಿಂದ ಆವೃತವಾದ ಹಿಮಾಲಯದ ಪರ್ವತಗಳು, ಕಣಿವೆಗಳು ಮತ್ತು ಇಡೀ ತ್ಸ್ಯಾಂಗೋ ಸರೋವರದ ಅದ್ಭುತ ವೈಮಾನಿಕ ನೋಟ ಗಮನ ಸೆಳೆಯುತ್ತದೆ.

ರಾಜತಾಂತ್ರಿಕತೆಯ ಪ್ರಮುಖ ಕೇಂದ್ರ:

ನಾಥೂ ಲಾ ಪಾಸ್‌ ರಕ್ಷಣೆ ಮತ್ತು ರಾಜತಾಂತ್ರಿಕತೆಯ ಪ್ರಮುಖ ಕೇಂದ್ರ. ಉಭಯ ದೇಶಗಳ ನಡುವೆ ಶಾಂತಿ ಕಾಪಾಡಿಕೊಳ್ಳಲು ಭಾರತ ಮತ್ತು ಚೀನಾ ನಡುವೆ ವರ್ಷಕ್ಕೆ ಎಂಟು ಬಾರಿ ಗಡಿ ಸಿಬ್ಬಂದಿ ಸಭೆಗಳು ನಡೆಯುತ್ತವೆ. ಬೈಸಾಖಿ, ಗಣರಾಜ್ಯೋತ್ಸವ ಮತ್ತು ದೀಪಾವಳಿಯಂತಹ ಪ್ರಮುಖ ಸಂದರ್ಭಗಳಲ್ಲಿ ಭಾರತವು ಈ ಪೈಕಿ ಐದು ಸಭೆಗಳನ್ನು ಆಯೋಜಿಸಿದರೆ, ಚೀನಾ ತನ್ನ ಪಿಎಲ್ಎ ಸಂಸ್ಥಾಪನಾ ದಿನ ಸೇರಿದಂತೆ ಮೂರು ಸಭೆ ಆಯೋಜಿಸುತ್ತದೆ.

PREV
Read more Articles on

Recommended Stories

ಬೊಮ್ಮಾಯಿ ಲೇಖನ ಆತ್ಮನಿರ್ಭರತೆಯ ಮಾರ್ಗ ತೋರಿದ ವಿಶ್ವಗುರು ಮೋದಿ
ವ್ಯಾಪಾರಿಗಳೇ ಯುಪಿಐ ಸೇವೆಗೆ ಶುಲ್ಕ ಪಾವತಿಸಬೇಕು