ಡಾ.ಅಮ್ಮಸಂದ್ರ ಸುರೇಶ್ ಅವರ ‘ಅಗ್ನಿಕುಂಡದಿಂದ ಬಂದ ಚೇತನ’ ಗಂಡನಿಂದಲೇ ಆಸಿಡ್ ದಾಳಿಗೆ ತುತ್ತಾದ ಮಹಿಳೆಯೊಬ್ಬರ ಕರುಣಾಜನಕ ಕಾದಂಬರಿ.
ಮೈಸೂರು : ಡಾ.ಅಮ್ಮಸಂದ್ರ ಸುರೇಶ್ ಅವರ ‘ಅಗ್ನಿಕುಂಡದಿಂದ ಬಂದ ಚೇತನ’ ಗಂಡನಿಂದಲೇ ಆಸಿಡ್ ದಾಳಿಗೆ ತುತ್ತಾದ ಮಹಿಳೆಯೊಬ್ಬರ ಕರುಣಾಜನಕ ಕಾದಂಬರಿ.
ಈ ಕಾದಂಬರಿಯ ನಾಯಕಿ ಚೇತನ ಸಾಮಾನ್ಯ ನೇಕಾರ ಕುಟುಂಬದಿಂದ ಬಂದವರು. ಎಸ್ಎಸ್ಎಲ್‌ಸಿ ಪಾಸಾದ ಆಕೆಗೆ ಮುಂದಕ್ಕೆ ಓದಬೇಕು ಎಂಬ ಮನಸ್ಸಿದ್ದರೂ ಮನೆಯಲ್ಲಿ ಹದಿನಾಲ್ಕು ಮಕ್ಕಳ ಪೈಕಿ ಬದುಕುಳಿದ ಎಂಟು ಮಕ್ಕಳ ತುಂಬು ಸಂಸಾರ, ಊರೂರ ಮೇಲೆ ಸೈಕಲ್‌ನಲ್ಲಿ ಸುತ್ತಿ ಸೀರೆ ಮಾರಾಟ ಮಾಡುವ ಅಪ್ಪ ಹನುಮಯ್ಯ. ಅವರ ಆರ್ಥಿಕ ಪರಿಸ್ಥಿತಿ ಕಂಡು ಮದುವೆಗೆ ಸಮ್ಮತಿಸುತ್ತಾಳೆ.
ಆಕೆಯನ್ನು ಅಳಿಯ ಉಗ್ರಯ್ಯನ ಮಾತಿಗೆ ಮಣಿದು ಅವರ ಚಿಕ್ಕಪ್ಪ ಲಕ್ಷ್ಮಯ್ಯ ಅವರ ಮಗ ಜಗದೀಶ್ ಎಂಬಾತನಿಗೆ ಮದುವೆ ಮಾಡಿಕೊಡಲಾಗುತ್ತದೆ. ಅತ್ತೆ- ಮಾವ ಒಳ್ಳೆಯವರು. ಆದರೆ ಕುಡುಕನಾದ ಜಗದೀಶ ಮೊದಲ ದಿನದಿಂದಲೂ ಆಕೆಯ ಬಗ್ಗೆ ಸಂಶಯಪಡುತ್ತಾ, ದೈಹಿಕವಾಗಿ ಹಿಂಸೆ ನೀಡುತ್ತಾ, ನೆಮ್ಮದಿಯಾಗಿರಲು ಬಿಡಲೇ ಇಲ್ಲ. ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ಆಕೆ ಹಿರಿಯರೊಬ್ಬರ ಮಾತಿನಿಂದ ಅದನ್ನು ಕೈಬಿಟ್ಟರು. ಮಕ್ಕಳ ಭವಿಷ್ಯಕ್ಕಾಗಿ ಎಷ್ಟೇ ಕಷ್ಟಗಳು ಬಂದರೂ ಸಹಿಸಿಕೊಂಡರು. ಗಂಡನ ಕಿರುಕುಳದಿಂದ ದೂರ ಇರಲು ಬೇರೆ ಬೇರೆ ಊರಿಗೆ ಸ್ಥಳಾಂತರವಾದರೂ ಆತ ಹಿಂದೆ ಹಿಂದೆ ಬರುವುದನ್ನು ಬಿಡಲೇ ಇಲ್ಲ. ಕೊನೆಗೆ ಆಕೆಗೆ ಆಸಿಡ್ ಹಾಕುತ್ತಾನೆ. ಆಕೆಯನ್ನು ತಂದೆ- ತಾಯಿ, ಅಣ್ಣ- ತಮ್ಮಂದಿರು ವೈದ್ಯರಾದ ಡಾ.ಸುರೇಶ್ ಅವರ ನೆರವಿನಿಂದ ಉಳಿಸಿಕೊಳ್ಳುತ್ತಾರೆ. ಗಂಡ ಜಗದೀಶ ಜೈಲು ಪಾಲಾಗುತ್ತಾನೆ.
ಮಗನ ಮದುವೆ ಕಾಲಕ್ಕೆ ಬಂದಿದ್ದ ಜಗದೀಶ್ ಇನ್ನೊಮ್ಮೆ ಕ್ಷಮಿಸಬಿಡು ಎಂದು ಪರಿಪರಿಯಾಗಿ ಕೇಳುತ್ತಾನೆ. ಆದರೆ ಜೀವನಪೂರ್ತಿ ಆತನಿಂದ ನೊಂದಿದ್ದ, ನಿಜಾರ್ಥದಲ್ಲಿ ಆಸಿಡ್ ದಾಳಿಯಿಂದ ಬೆಂದಿದ್ದ ಚೇತನ ಖಂಡತುಂಡವಾಗಿ ನಿರಾಕರಿಸುತ್ತಾಳೆ. ಜೇಲಿಗೆ ಹಿಂದಿರುಗವ ಆತ ಅನಾರೋಗ್ಯಪೀಡಿತನಾಗಿ ಕೊನೆಗೆ ಸಾಯುತ್ತಾನೆ.
ಚೇತನ ತನ್ನಂತೆ ನೊಂದವರ ಪಾಲಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ. ಮಹಿಳೆ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು? ಎಂಬುದಕ್ಕೆ ಚೇತನ ನಿದರ್ಶನವಾಗಿ ನಿಲ್ಲುತ್ತಾರೆ ಎಂಬಲ್ಲಿಗೆ ಕಾದಂಬರಿ ಸುಖಾಂತ್ಯವಾಗುತ್ತದೆ.
ಈವರೆಗೆ ಹಲವಾರು ಸೃಜನೇತರ ಕೃತಿಗಳನ್ನು ಬರೆದಿರುವ ಡಾ.ಅಮ್ಮಸಂದ್ರ ಸುರೇಶ್ ಅವರ ಮೊದಲ ಕಾದಂಬರಿ ಇದು. ತಮ್ಮೂರಿನ ಸುತ್ತಮುತ್ತಲಿನ ಪರಿಸರದಲ್ಲಿಯೇ ಘಟನೆ ನಡೆದಿದೆ ಏನೋ? ಎಂಬಂತೆ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ.
ಅದ್ರಿ ಪಬ್ಲಿಕೇಷನ್ಸ್ ಈ ಕಾದಂಬರಿಯನ್ನು ಪ್ರಕಟಿಸಿದ್ದು, ಪ್ರೊ.ಸಿ. ನಾಗಣ್ಣ ಅವರ ಮುನ್ನುಡಿ, ಡಾ.ಪ್ರಸನ್ನ ಸಂತೇಕಡೂರು ಅವರ ಬೆನ್ನುಡಿ ಇದೆ.
ಆಸಕ್ತರು ಡಾ.ಅಮ್ಮಸಂದ್ರ ಸುರೇಶ್, ಮೊ. 94484 02346 ಸಂಪರ್ಕಿಸಬಹುದು.