ಬೆಂಗಳೂರು : ರಾಜಧಾನಿಯಲ್ಲಿ ಶನಿವಾರ ಸರ್ವರ್ ಸಮಸ್ಯೆ, ತರಬೇತಿ ಇಲ್ಲದ ಗಣತಿದಾರರ ನಿಯೋಜನೆ, ಗಣತಿ ಕಿಟ್, ಐಡಿ ಕಾರ್ಡ್‌ಗಾಗಿ ಪರದಾಟ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಮೊದಲ ದಿನ 22,141 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ.
ರಾಜ್ಯಾದ್ಯಂತ ಸಮೀಕ್ಷೆ ಆರಂಭಗೊಂಡ 11 ದಿನದ ಬಳಿಕ ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭಿಸಲಾಗಿದೆ. ಆ್ಯಂಡ್ರಾಯ್ಡ್ ಮೊಬೈಲ್‌ಗಳಿಗೆ ಮಾತ್ರ ಸಮೀಕ್ಷಾ ಆ್ಯಪ್ ಸಿದ್ಧಪಡಿಸಿ ನೀಡಲಾಗಿತ್ತು. ಶನಿವಾರ ಮಧ್ಯಾಹ್ನದ ನಂತರ ಐ-ಫೋನ್‌ಗಳಿಗೆ ತಂತ್ರಾಂಶವನ್ನು ನೀಡಲಾಗಿದೆ. ಈ ಕಾರಣದಿಂದ ಮೊದಲ ದಿನ ಸಮೀಕ್ಷೆ ನಿಗದಿತ ಗುರಿ ಸಾಧ್ಯವಾಗಿಲ್ಲ. ಕೆಲವು ಗಣತಿದಾರರು, ಸಮೀಕ್ಷೆ ಆ್ಯಪ್ ಸಮಸ್ಯೆ ಪರಿಹಾರವಾಗದೇ, ಕನಿಷ್ಠ ಸಂಖ್ಯೆಯ ಮನೆಗಳನ್ನೂ ಸಮೀಕ್ಷೆ ಪೂರ್ಣಗೊಳಿಸಿದೇ ವಾಪಾಸ್ ಆಗಬೇಕಾಯಿತು. ಉಳಿದಂತೆ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಗಣತಿದಾರರು, ವರದಿ ಮಾಡಿಕೊಂಡು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಆಯ್ಕೆ ಸ್ಥಳ ಬಿಟ್ಟು ಬೇರೆಡೆಗೆ ನಿಯೋಜನೆ:
ಸಮೀಕ್ಷಾ ಕಾರ್ಯದಲ್ಲಿ ಭಾಗಹಿಸುವ ಅಧಿಕಾರಿ ಸಿಬ್ಬಂದಿಗೆ ತರಬೇತಿ ನೀಡಿದ ದಿನ ತಾವು ಯಾವ ಪ್ರದೇಶದಲ್ಲಿ ಸಮೀಕ್ಷೆ ನಡೆಸುತ್ತೀರಿ ಎಂದು 10 ವಾರ್ಡ್‌ಗಳ ಆಯ್ಕೆ ನೀಡಲಾಗಿತ್ತು. ಆದರೆ, ಬಹುತೇಕ ಮಂದಿಗೆ ಆಯ್ಕೆ ಮಾಡಿದ ವಾರ್ಡ್ ಬಿಟ್ಟು ಅಲ್ಲಿಂದ ಸುಮಾರು 15 ರಿಂದ 20 ಕಿ.ಮೀ ದೂರ ಇರುವ ವಾರ್ಡ್‌ಗಳಿಗೆ ನಿಯೋಜಿಸಲಾಗಿದೆ. ಈ ಬಗ್ಗೆ ಶುಕ್ರವಾರ ತಡರಾತ್ರಿ ಗಣತಿದಾರರಿಗೆ ಮಾಹಿತಿ ನೀಡಲಾಗಿದ್ದು, ಶನಿವಾರ ಬೆಳಗ್ಗೆ ಕಂಗಾಲ ಆಗಿದ್ದಾರೆ.
ಮಲ್ಲೇಶ್ವರದ ಐಪಿಪಿ ಕಚೇರಿಯಲ್ಲಿ ಆಕ್ರೋಶ:
ಸಮೀಕ್ಷೆಯ ಎಲ್ಲ ಕಾರ್ಯಗಳನ್ನು ಮಲ್ಲೇಶ್ವರದ ಐಪಿಪಿ ಕಚೇರಿಯಲ್ಲಿ ಮಾಡಲಾಗುತ್ತಿದ್ದು, ಆರೋಗ್ಯ ಸಮಸ್ಯೆ ಇರುವವರು ಮನವಿ ಪರಿಗಣಿಸದೇ ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆ. ಅಲ್ಲದೇ, ಆಯ್ಕೆ ಮಾಡಿಕೊಂಡ ಸ್ಥಳ ಬಿಟ್ಟು ದೂರದ ಪ್ರದೇಶದಲ್ಲಿ ಸಮೀಕ್ಷೆ ನಿಯೋಜನೆ ಮಾಡಲಾಗಿದೆ ಎಂದು ಐಪಿಪಿ ಕಚೇರಿ ಬಳಿ ಸಾವಿರಾರು ಗಣತಿದಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಹೀಗಾಗಿ, ವಾರ್ಡ್ ಆಯ್ಕೆಗೆ ಮತ್ತೊಂದು ಅವಕಾಶ ನೀಡಲು ಗಣತಿದಾರರ ಮೊಬೈಲ್‌ಗೆ ಲಿಂಕ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿ ನೀಡುವುದಕ್ಕೆ ಹಿಂದೇಟು:
ಸಮೀಕ್ಷೆಗೆ ತೆರಳಿದ ಗಣತಿದಾರರಿಗೆ ಕೆಲವು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಮತ್ತೆ ಕೆಲವರು, ತಾವು ಮಾಹಿತಿ ನೀಡುವುದಿಲ್ಲ ಎಂದು ಹೇಳಿದ ಘಟನೆ ಸಹ ನಡೆದಿದೆ. ಇನ್ನಷ್ಟು ಕಡೆ ಅತ್ಯಧಿಕ ಪ್ರಶ್ನೆ, ಅನಗತ್ಯ ಪ್ರಶ್ನೆಗಳಿಗೆ ಉತ್ತರ ನೀಡಲು ಹಿಂದೇಟು ಹಾಕಿದ ಪ್ರಸಂಗ ನಡೆದಿವೆ.
ಅನಾರೋಗ್ಯವಿದ್ದರೂ ನಿಯೋಜನೆ:ಕ್ಯಾನ್ಸರ್, ಕಿಡ್ನಿ ವೈಫಲ್ಯ, ಅಫಘಾತ ಸೇರಿದಂತೆ ಅನಾರೋಗ್ಯ ಸಮಸ್ಯೆ, ಅಂಗವಿಕಲತೆ, ಬಾಣಂತಿ, ಗರ್ಭೀಣಿ ಮೊದಲಾದ ಅಂಶಗಳನ್ನು ಪರಿಗಣಿಸದೇ ಸಮೀಕ್ಷೆಗೆ ನೌಕರರನ್ನು ನಿಯೋಜಿಸಲಾಗಿದೆ. ಜತೆಗೆ, ಹಿರಿಯ ಅಧಿಕಾರಿಗಳಿಗೆ ಬೇಕಾದ ಅಧಿಕಾರಿ ಸಿಬ್ಬಂದಿಯನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸದೇ ವಿನಾಯಿತಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಆ್ಯಂಬುಲೆನ್ಸ್‌ನಲ್ಲಿ ಬಂದು ಗಣತಿ ನಡೆಸಿ:
ಅಪಘಾತಕ್ಕೆ ಒಳಗಾಗಿ ಹಾಸಿಗೆ ಹಿಡಿದಿರುವ ನೌಕರರೊಬ್ಬರನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅಪಘಾತಕ್ಕೆ ಒಳಗಾಗಿರುವ ನೌಕರರ ವರದಿ ಮಾಡಿಕೊಳ್ಳಬೇಕಾದ ಅಧಿಕಾರಿಗೆ ಫೋನ್ ಮಾಡಿ ಸಮಸ್ಯೆ ಹೇಳಿಕೊಂಡಾಗ, ಆ್ಯಂಬುಲೆನ್ಸ್‌ನಲ್ಲಿ ಬಂದಾದರೂ ಸಮೀಕ್ಷೆಯಲ್ಲಿ ಭಾಗಹಿಸಬೇಕೆಂದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ, ನೌಕರರ, ವೀಲ್‌ಚೇರ್‌ನಲ್ಲಿ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಅಷ್ಟೇ ಅಲ್ಲದೇ ನಡೆಯುವುದಕ್ಕೆ ಸಾಧ್ಯವಿಲ್ಲದ, ಕಣ್ಣು ಕಾಣದಿರುವ ನೌಕರರನ್ನೂ ಸಮೀಕ್ಷೆಗೆ ನಿಯೋಜಿಸಲಾಗಿದೆ.
₹500 ಕೂಲಿ ನಿಗದಿ:
ನಗರದಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆ ಆಗಿರುವ ಕೆಲವು ಅಧಿಕಾರಿಗಳು, ಸಮೀಕ್ಷೆ ನಡೆಸಲು ಯುವಕರು ಬೇಕೆಂದು ಹುಡುಕಾಟ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗೆ ನಿಯೋಜಿಸಲಾದ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ದಿನಕ್ಕೆ 500 ರು. ಹಣ ನೀಡುವುದಾಗಿ ಹೇಳುತ್ತಿದ್ದಾರೆ. ಕೆಲವು ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ಸಿಬ್ಬಂದಿಯನ್ನು ಸಮೀಕ್ಷೆ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಆನ್‌ಲೈನ್‌ನಲ್ಲಿಯೂ ದಾಖಲಿಸಬಹುದು:
ಸಾರ್ವಜನಿಕರು ಸ್ವತಃ ಆನ್‌ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ವೆಬ್ ಸೈಟ್ ಲಿಂಕ್ https://kscbcselfdeclaration.karnataka.gov.in/ ನಲ್ಲಿ ಸಮೀಕ್ಷೆಯ ಪ್ರಶ್ನಾವಳಿಗೆ ಉತ್ತರ ನೀಡಬಹುದಾಗಿದೆ.
ಮೊದಲ ದಿನ ಸಮೀಕ್ಷ ಪೂರ್ಣಗೊಂಡ ವಿವರ
ನಗರ ಪಾಲಿಕೆಕುಟುಂಬ ಸಂಖ್ಯೆ
ಬೆಂ.ಕೇಂದ್ರ2,822
ಬೆಂ.ಪೂರ್ವ3,105
ಬೆಂ.ಉತ್ತರ5,987
ಬೆಂ.ದಕ್ಷಿಣ3,145
ಬೆಂ.ಪಶ್ಚಿಮ7,082
ಒಟ್ಟು22,141