‘ಸ್ಟಾಂಪ್‌’ ಟೆಕ್‌ ಚಾಲೆಂಜ್‌ ಸ್ಪರ್ಧೆ: ಗೆದ್ದವರಿಗೆ ₹86 ಲಕ್ಷ : ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ಪರಿಣಾಮಕಾರಿ ಜಾರಿಗಾಗಿ ಯೋಜನೆ

KannadaprabhaNewsNetwork | Updated : Apr 13 2025, 08:32 AM IST

ಸಾರಾಂಶ

  ಹಳದಿ ಮಾರ್ಗದ ಮೆಟ್ರೋವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವಂತಾಗಲು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ‘ಸ್ಟಾಂಪ್‌ ನಡ್ಜ್ ’ (ಸ್ಟೇಷನ್‌ ಆ್ಯಕ್ಸಿಸ್‌ ಆ್ಯಂಡ್‌ ಮೊಬಿಲಿಟಿ ಪ್ರೋಗ್ರಾಂ) ಟೆಕ್‌ ಚಾಲೆಂಜ್‌ ಸ್ಪರ್ಧೆ ಆಯೋಜಿಸಲಾಗಿದ್ದು, ಗೆಲ್ಲುವವರು 1 ಲಕ್ಷ ಡಾಲರ್‌ (₹86,15,000) ಪಡೆಯಲಿದ್ದಾರೆ.

 ಬೆಂಗಳೂರು : ಎಲೆಕ್ಟ್ರಾನಿಕ್‌ ಸಿಟಿ ಟೆಕ್‌ ಕಂಪನಿಗಳು ತಮ್ಮ ಉದ್ಯೋಗಿಗಳು ಶೀಘ್ರ ಆರಂಭವಾಗಲಿರುವ ಹಳದಿ ಮಾರ್ಗದ ಮೆಟ್ರೋವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವಂತಾಗಲು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ‘ಸ್ಟಾಂಪ್‌ ನಡ್ಜ್ ’ (ಸ್ಟೇಷನ್‌ ಆ್ಯಕ್ಸಿಸ್‌ ಆ್ಯಂಡ್‌ ಮೊಬಿಲಿಟಿ ಪ್ರೋಗ್ರಾಂ) ಟೆಕ್‌ ಚಾಲೆಂಜ್‌ ಸ್ಪರ್ಧೆ ಆಯೋಜಿಸಲಾಗಿದ್ದು, ಗೆಲ್ಲುವವರು 1 ಲಕ್ಷ ಡಾಲರ್‌ (₹86,15,000) ಪಡೆಯಲಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಹಾಗೂ ಬಿಎಂಟಿಸಿ ಸಹಯೋಗದಲ್ಲಿ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್‌ ಅಸೋಸಿಯೇಶನ್‌ (ಇಎಲ್‌ಸಿಐಎ) ಮತ್ತು ಡಬ್ಲ್ಯುಆರ್‌ಐ ಇಂಡಿಯಾ ಹಾಗೂ ಟೋಯೋಟಾ ಮೊಬಿಲಿಟಿ ಫೌಂಡೇಶನ್‌ಗಳು ಈ ಸ್ಪರ್ಧೆ ಆಯೋಜಿಸಿವೆ. ಸ್ಟಾರ್ಟ್‌ಅಪ್‌, ಸುಗಮ ಸಾರಿಗೆಗೆ ಶ್ರಮಿಸುವ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

ಮೆಟ್ರೋದ ಕೊನೆ ಮೈಲಿ ಸಂಪರ್ಕ ಸುಧಾರಣೆ ಅಂದರೆ ಮೆಟ್ರೋ ನಿಲ್ದಾಣದಿಂದ ಕಚೇರಿ ಹಾಗೂ ಮನೆಗೆ ಉದ್ಯೋಗಿಗಳು ಹೋಗಿಬರುವ ವ್ಯವಸ್ಥೆ ಸುಗಮಗೊಳಿಸುವುದು, ಐಟಿ, ಬಿಟಿ ಉದ್ಯೋಗಿಗಳು ತಮ್ಮ ಸ್ವಂತ ಕಾರು, ಬೈಕಿನ ಬದಲಾಗಿ ಮೆಟ್ರೋವನ್ನೆ ನಿರಂತರವಾಗಿ ಬಳಸಿ ಕಂಪನಿಗೆ ಬಂದು ಹೋಗುವಂತೆ ಮಾಡಲು ಪ್ರೋತ್ಸಾಹಿಸುವ ಬಗೆ, ಪರಿಸರ, ಸುರಕ್ಷತೆ, ಕೈಗೆಟಕುವ ದರ ಹೀಗೆ ಹಲವು ಮಾನದಂಡದಲ್ಲಿ ಯೋಜನೆ ರೂಪಿಸಲು ತಿಳಿಸಬೇಕಿದೆ. ವರ್ತನಾ ವಿಜ್ಞಾನ, ತಂತ್ರಜ್ಞಾನ ಬಳಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಬಿಎಂಅರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್‌ ರಾವ್, ಶೀಘ್ರ ಆರಂಭವಾಗಲಿರುವ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಆರ್‌.ವಿ.ರಸ್ತೆ - ಬೊಮ್ಮಸಂದ್ರ ಮಾರ್ಗದ ಮೆಟ್ರೋ ರೈಲು ಆರಂಭದಿಂದ ಸಾವಿರಾರು ಐಟಿ ಉದ್ಯೋಗಿಗಳಿಗೆ ಅನುಕೂಲ ಆಗಲಿದೆ. ಇದರಿಂದ ಸಂಚಾರ ದಟ್ಟಣೆ ನಿವಾರಣೆ ಆಗಲಿದೆ. ಈ ಸ್ಪರ್ಧೆಯಲ್ಲಿ ಹೆಚ್ಚಿನವರು ಪಾಲ್ಗೊಂಡು ಸುಸ್ಥಿರ ಸಾರಿಗೆಗೆ ತಮ್ಮ ಕೊಡುಗೆ ನೀಡಬಹುದು ಎಂದರು.

ಏಪ್ರಿಲ್‌ 12ರಿಂದ ಮೇ 2ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಬಯೋಕಾನ್‌, ಇನ್ಫೋಸಿಸ್‌, ವಿಪ್ರೋ, ಟಾಟಾ ಪವರ್‌, ಟೆಸ್ಸೊಲ್ವ್‌, ಟೈಟನ್‌ ಸೇರಿದಂತೆ ಇಎಲ್‌ಸಿಐಎ ಸದಸ್ಯತ್ವ ಹೊಂದಿರುವ 200 ಕಂಪನಿಗಳ ಉದ್ಯೋಗಿಗಳು ಅಥವಾ ಈ ಕಂಪನಿಗಳ ಜತೆಗಿನ ಸಹಯೋಗ ಹೊಂದಿರುವ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ಎಂದು ಡಬ್ಲೂಆರ್‌ಐ ಇಂಡಿಯಾದ ಶ್ರೀನಿನಿವಾಸ ಅಲವಿಲ್ಲಿ ತಿಳಿಸಿದರು.

ಬಿಎಂಟಿಸಿ ಮುಖ್ಯ ಸಂಚಾರಿ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ, ಟಯೋಟ ಕಿರ್ಲೋಸ್ಕರ್‌ ಮೋಟಾರ್‌ನ ವಿಕ್ರಂ ಗುಲಾಟಿ ಸೇರಿ ಇತರರಿದ್ದರು.

Share this article