ಆರೋಗ್ಯದ ಹುಡುಕಾಟದಿಂದ ಹುಟ್ಟಿತು ‘ಮಾಡಿಕರ ಸ್ವಾಸ್ಥ್ಯ'

Published : Jul 21, 2025, 09:34 AM ISTUpdated : Jul 21, 2025, 03:47 PM IST
Madikara

ಸಾರಾಂಶ

ಸ್ವದೇಶಿ ಹೋರಾಟ - ರಾಸಾಯನ ಮುಕ್ತ ಎಣ್ಣೆ, ಅರಿಶಿನ, ಮಸಾಲೆ ಪದಾರ್ಥಗಳನ್ನು ಜನರಿಗೆ ಒದಗಿಸುತ್ತಿರುವ ಧಾರವಾಡದ ದಂಪತಿ ।

ರಾಜೀವ್‌ ದೀಕ್ಷಿತ್‌ರ ಸ್ವದೇಶಿ ಆಂದೋಲನದಿಂದ ಪ್ರೇರೇಪಿತಗೊಂಡು ಸ್ವಂತ ಉದ್ಯಮ

 ಸ್ವಾತಂತ್ರ್ಯಾ ನಂತರ ದೇಶದಲ್ಲಿ ಸ್ವದೇಶಿ ಆಂದೋಲನಕ್ಕೆ ದೊಡ್ಡ ಶಕ್ತಿ ತುಂಬಿದವರು ಆಜಾದಿ ಬಚಾವೋ ಆಂದೋಲನದ ನೇತಾರ ರಾಜೀವ್ ದೀಕ್ಷಿತ್. ಅವರ ಮಾತು ನಡೆಗಳಿಂದ ದೇಶದಲ್ಲಿ ಪ್ರೇರಿತರಾಗಿ ವಿದೇಶಿ ವಸ್ತುಗಳಿಗೆ ಗುಡ್ ಬೈ ಹೇಳಿದವರು ಅಸಂಖ್ಯ. ಆರೋಗ್ಯ ಆಹಾರದ ಹುಡುಕಾಟ ಹಾಗೂ ಸ್ವದೇಶಿ ಹೋರಾಟದೆಡೆ ಆಕರ್ಷಿತರಾದವರು ಧಾರವಾಡದ ಪುರುಷೋತ್ತಮ್ ಮಾಡಿಕರ.

ಧಾರವಾಡದಲ್ಲಿ ಜೀನ್ಸ್ ವಸ್ತ್ರಗಳಿಗೆ ಹೆಸರಾದ ಜೀನ್ಸ್ ಕಾರ್ನರ್‌ ಮಾಲೀಕರು ಇವರು. ರಾಜೀವ್ ದೀಕ್ಷಿತ್ ಮಾತುಗಳಿಂದ ಪ್ರೇರಿತರಾಗಿ 2008ರಲ್ಲಿ ಇವರು 8 ದಿನಗಳ ಕಾರ್ಯಾಗಾರದಲ್ಲೂ ಪಾಲ್ಗೊಂಡರು. ರಾಜೀವ್ ದೀಕ್ಷಿತ್ ಅವರು ನಡೆಸಿಕೊಟ್ಟ ಆ ಕಾರ್ಯಾಗಾರದಿಂದ ಹಿಂತಿರುಗಿದ ನಂತರ ಇವರು ಸಂಪೂರ್ಣ ಸ್ವದೇಶಿ ವಸ್ತುಗಳ ಮೇಲೆ ಅವಲಂಬಿತರಾದರು. ಅಡುಗೆ ಎಣ್ಣೆಗಾಗಿ ಮಹಾರಾಷ್ಟ್ರದ ಲಾತೂರ್ ಗಾಣದಿಂದ ಎಣ್ಣೆ ತರಿಸತೊಡಗಿದರು. 

ರಾಸಾಯನಿಕ ಮುಕ್ತ ಆಹಾರಕ್ಕಾಗಿ ಸಮಾನ ಮನಸ್ಕರ ಬಳಗ ಬೆಳೆಯತೊಡಗಿತು. 2020ರ ಯುಗಾದಿ ದಿನದಂದು ತಾವೇ ಗಾಣ ಹಾಕಿ ಶುದ್ಧ ಎಣ್ಣೆ ತಯಾರಿಸಲು ಪುರುಷೋತ್ತಮ ಮಾಡಿಕರ ಹಾಗೂ ಅವರ ಪತ್ನಿ ಶೈಲಜಾ ಮಾಡಿಕರ ಅವರು ಎರಡು ಗಾಣಗಳ ಎಣ್ಣೆ ಉತ್ಪನ್ನ ಘಟಕವನ್ನ ಧಾರವಾಡದಲ್ಲಿ ಆರಂಭಿಸಿದರು. ಹಬ್ಬ ಕಳೆದ ಎರಡೇ ದಿನದಲ್ಲಿ ಕೊರೋನಾ ಲಾಕ್ಡೌನ್ ಘೋಷಣೆಯಾಯಿತು. ಈ ಘಟಕ ತೆರೆಯಲು 12 ಲಕ್ಷ ರೂ ವೆಚ್ಚ ಮಾಡಿದ್ದರು. ಲಾಕ್ಡೌನ್‌ನಿಂದ ಏನು ಮಾಡಬೇಕು ಎಂದು ತಿಳಿಯದಾಗಿ ಉತ್ಪಾದಿಸಿದ್ದ ಎಣ್ಣೆಯನ್ನು ಪರಿಚಿತರಿಗೆ, ಸಂಬಂಧಿಕರಿಗೆ ನೀಡಿದರು. ಕೊರೋನಾ ಕಳೆದ ಮೇಲಷ್ಟೇ ಸರಿಯಾಗಿ ಗಾಣ ತಿರುಗತೊಡಗಿತು.

ತಮ್ಮ ಕುಟುಂಬದ ಸರ್ ನೇಮ್ ಮಾಡಿಕರ ಹೆಸರನ್ನೇ ಇವರ ತೈಲೋತ್ಪನ್ನಗಳಿಗೆ ಬ್ರ್ಯಾಂಡ್ ನೇಮ್ ಮಾಡಲು ತೀರ್ಮಾನಿಸಿದರು. ಶೇಂಗಾ, ಕುಸುಬಿ, ಕೊಬ್ಬರಿ, ಸಾಸಿವೆ, ಅಗಸೆ ಸೇರಿದಂತೆ 9 ಬಗೆಯ ಎಣ್ಣೆ ಇಲ್ಲಿ ತಯಾರಾಗಿ ಮಾಡಿಕರ ಸ್ವಾಸ್ಥ್ಯ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. 2021ರಲ್ಲಿ ಕರ್ನಾಟಕ ರಾಜ್ಯ ಆಹಾರ ಸಂಸ್ಕರಣೆ ಮತ್ತು ರಫ್ತು ನಿಗಮದಲ್ಲಿನ ಪಿಎಂಎಫ್ಎಂಇ ಯೋಜನೆ ಪರಿಚಯವಾಯಿತು. ಎರಡು ಗಾಣದಿಂದ ಶುರುವಾದ ಮಾಡಿಕರ ತೈಲ ಘಟಕದಲ್ಲೀಗ 16 ಗಾಣಗಳು ನಿರಂತರವಾಗಿ ತಿರುಗುತ್ತಾ ಎಣ್ಣೆ ಉತ್ಪಾದಿಸುತ್ತಿವೆ. ಹಂತ ಹಂತವಾಗಿ ಇವರ ಹೂಡಿಕೆ ಒಂದು ಕೋಟಿ ರೂಪಾಯಿ ದಾಟಿದೆ. 

ಪುರುಷೋತ್ತಮ್ ಮಾಡಿಕರ ಹಾಗೂ ಅವರ ಪತ್ನಿ ಶೈಲಜಾ ಮಾಡಿಕರ ಅವರು ಜೊತೆಯಾಗಿ ಈ ಉದ್ಯಮ ಮುನ್ನಡೆಸುತ್ತಿದ್ದಾರೆ. ಕಪೆಕ್‌ನಿಂದ 15 ಲಕ್ಷ ಸಬ್ಸಿಡಿ ಇವರಿಗೆ ಮಂಜೂರಾಗಿದೆ. ಇವರು ಆನ್‌ಲೈನ್ ಮತ್ತಿತರ ಆಧುನಿಕ ಮಾರ್ಕೆಟಿಂಗ್ ವಿಧಾನಕ್ಕೆ ಬದಲಾಗಿ ನೇರ ಔಟ್‌ಲೆಟ್‌ಗಳನ್ನೇ ತೆರೆದು ಎಣ್ಣೆ ಮಾರಲು ಆದ್ಯತೆ ಕೊಟ್ಟಿದ್ದಾರೆ. ಧಾರವಾಡ ಒಂದರಲ್ಲಿ 10 ಔಟ್‌ಲೆಟ್‌ಗಳನ್ನ ತೆರೆದಿರುವ ಪುರುಷೋತ್ತಮ ಮಾಡಿಕರ ಅವರ ಕುಟುಂಬ ಸದಸ್ಯರೆಲ್ಲ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಳಗಾವಿಯಲ್ಲೂ ಇವರ ಅಂಗಡಿಗಳನ್ನು ತೆರೆಯಲಾಗಿದೆ. ಹುಬ್ಬಳ್ಳಿಯಲ್ಲೂ 10 ಔಟ್‌ಲೆಟ್‌ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಸ್ವದೇಶಿ ಹೋರಾಟಗಾರರ ಬಳಗದ ಜಾಲವನ್ನೂ ಇದಕ್ಕೆ ಬಳಸಿಕೊಳ್ಳಲಾಗಿದೆ.

ಇವರ ಮಾಡಿಕರ ಸ್ವಾಸ್ಥ್ಯ ಔಟ್‌ಲೆಟ್‌ಗಳಲ್ಲಿ ಸಾವಯವ ಅರಿಶಿನ, ಮಸಾಲೆ ಪದಾರ್ಥಗಳು, ಬೆಲ್ಲ ಸೇರಿದಂತೆ ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳು ದೊರೆಯುತ್ತವೆ. ಎಲ್ಲೆಲ್ಲಿ ಉತ್ತಮ ಪದ್ಧತಿಗಳ ಮೂಲಕ ಆಹಾರ ಉತ್ಪನ ಬೆಳೆಯುತ್ತಾರೋ, ತಯಾರಿಸುತ್ತಾರೋ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ, ಖರೀದಿಸಿ ಗ್ರಾಹಕರಿಗೆ ನೀಡುತ್ತಿದ್ದೇವೆ. ‘ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದೇವೆ. ಪ್ರಸ್ತುತ ವಾರ್ಷಿಕ ಎರಡೂವರೆ ಕೋಟಿ ರೂಪಾಯಿ ವಹಿವಾಟು ಇದು. ಸದ್ಯದಲ್ಲೇ ಆನ್ಲೈನ್ ಮಾರ್ಕೆಟಿಂಗ್ ಶುರು ಮಾಡುವ ಆಲೋಚನೆಯಲ್ಲಿದ್ದೇವೆ. ವಿವಿಧ ಮಾಧ್ಯಮಗಳಲ್ಲಿ ನಮ್ಮ ಸುದ್ದಿ ನೋಡಿ ದೆಹಲಿ, ಲೂಧಿಯಾನ, ಗುಜರಾತ್ ಮತ್ತು ಬೆಂಗಳೂರಿನಲ್ಲೂ ನಮಗೆ ಗ್ರಾಹಕರಿದ್ದಾರೆ. ಅವರಿಗೆ ನೇರ ಮನೆಗೆ ಪಾರ್ಸೆಲ್ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ’ ಎನ್ನುತ್ತಾರೆ ಪುರುಷೋತ್ತಮ ಮಾಡಿಕರ. 

150 ಜನರಿಗೆ ಪ್ರೇರಣೆ:

ಮೊದಲಿಗೆ ಬಾಡಿಗೆ ಜಾಗದಲ್ಲಿ ಇವರ ಘಟಕ ಸ್ಥಾಪಿಸಲಾಗಿತ್ತು. ಧಾರವಾಡ-ನವಲಗುಂದ ರಸ್ತೆಯಲ್ಲಿರುವ ಹೆಬ್ಬಳ್ಳಿ ಅಗಸಿಯ ಸ್ವಂತ ಜಾಗದಲ್ಲಿ ತೈಲೋತ್ಪಾದನೆ ಹಾಗೂ ಬ್ರ್ಯಾಂಡಿಂಗ್ ಘಟಕ ಸ್ಥಾಪಿಸಿದ್ದಾರೆ. ‘150 ರೂಪಾಯಿಯ ಪ್ಯಾಕೆಟ್ ಎಣ್ಣೆ ಜೊತೆಗೆ 350 ರೂಪಾಯಿಯ ಶುದ್ಧ ಎಣ್ಣೆ ಹೋರಾಟ ನಡೆಸಬೇಕಿದೆ. ಶುದ್ಧತೆಯ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವುದೇ ಸವಾಲಿನ ಕೆಲಸ. ನಮ್ಮಲ್ಲಿ ಅವರೇ ಎಣ್ಣೆ ಕಾಳು ತಂದು ಎಣ್ಣೆ ಮಾಡಿಸಿಕೊಂಡು ಹೋಗಲೂ ಅವಕಾಶವಿದೆ’ ಎನ್ನುತ್ತಾರೆ ಪುರುಷೋತ್ತಮ್‌. 

ಮಾಡಿಕರ ಸ್ವಾಸ್ಥ್ಯ ಎಣ್ಣೆ ತಯಾರಿಕೆ ಜೊತೆಗೆ ಶುದ್ಧ, ಆರೋಗ್ಯಪೂರ್ಣ ಆಹಾರ ಮತ್ತು ತಯಾರಿಕೆ ಕುರಿತ ತರಬೇತಿ ಶಿಬಿರವನ್ನೂ ಪುರುಷೋತ್ತಮ್ ಶುರು ಮಾಡಿದರು. ಇವರಿಂದ ತರಬೇತಿ ಪಡೆದು 150ಕ್ಕೂ ಹೆಚ್ಚು ಮಂದಿ ಇದೇ ಉದ್ಯಮ ಆರಂಭಿಸಿದ್ದಾರೆ. ‘ನೇರವಾಗಿ ನಮ್ಮಲ್ಲಿ 50 ಜನರಿಗೆ ಉದ್ಯೋಗ ನೀಡಿದ್ದೇವೆ. ಖುಷಿ, ಆತ್ಮತೃಪ್ತಿಯ ಜೊತೆಗೆ ಆರೋಗ್ಯ ಪೂರ್ಣ ಆಹಾರ ಒದಗಿಸುತ್ತಿರುವ ನೆಮ್ಮದಿಯೂ ನಮ್ಮದಾಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ ಪುರುಷೋತ್ತಮ ಮಾಡಿಕರ ಮತ್ತು ಶೈಲಜಾ ಮಾಡಿಕರ.

ಮಾಡಿಕರ ಸ್ವಾಸ್ಥ್ಯ ತೈಲೋತ್ಪನ್ನಗಳಿಗಾಗಿ ಸಂಪರ್ಕಿಸಿ – 9341147679 ಅಥವಾ 7483862050 15 ಲಕ್ಷ ರೂ. ಸಬ್ಸಿಡಿ ಪಡೆಯಿರಿ

ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 - 22243082. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.

PREV
Read more Articles on

Latest Stories

‘ಸು’ಎಂಬ ಅನಂತ ಯಾತ್ರಿಕ: ಕಾದಂಬರಿ ಕುರಿತ ಅನಿಸಿಕೆಗಳ ಸಂಕಲನ
ಡಿಜಿಟಲ್ ಪೇಮೆಂಟ್ ಮಾಡೋದಾದ್ರೆ ಬರೋದೆ ಬೇಡ !
ಜ್ಞಾನೋದಯದ ಕ್ಷಣ - ಸುಳ್ಳು ಹೇಳಬಾರದು, ಆಸೆಪಡಬಾರದು