ನವಭಾರತ ಜನನಿಯ ತನುಜಾತೆ; ಗಮನ ಸೆಳೆಯುವ ಶಿಶಿರ ಅವರ ಕವಿತೆಗಳು

KannadaprabhaNewsNetwork | Updated : Feb 29 2024, 03:21 PM IST

ಸಾರಾಂಶ

ಯುವ ಕವಿ ಎಸ್. ಶಿಶಿರಂಜನ್ ಅವರ ನವಭಾರತ ಜನನಿಯ ತನುಜಾತೆ- ಮತ್ತೊಂದು ಕವನ ಸಂಕಲನ ಪ್ರಕಟವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಯುವ ಕವಿ ಎಸ್. ಶಿಶಿರಂಜನ್ ಅವರ ನವಭಾರತ ಜನನಿಯ ತನುಜಾತೆ- ಮತ್ತೊಂದು ಕವನ ಸಂಕಲನ ಪ್ರಕಟವಾಗಿದೆ. 

ಶಿಶಿರ ಎಂಬ ಕಾವ್ಯನಾಮದಿಂದಲೇ ಬರೆಯುವ ಮೈಸೂರು ತಾಲೂಕು ದೊಡ್ಡಮಾರಗೌಡನ ಹಳ್ಳಿಯ ಶಿಶಿರಂಜನ್ ಅವರು ಈಗಾಗಲೇ ಸಂವೇದನೆ, ಋಣ ಸಂದಾಯವಾಗಲಿ ಒಂದಿಷ್ಟು- ಕವಿತೆಗಳು, ಲಂಕೇಶನ ತಲೆಗಳು- ಖಂಡಕಾವ್ಯ, ಅವ್ವ- ಹನಿಗವಿತೆಗಳು, ಇದೆಂಥಾ ದೇಶಪ್ರೇಮ ರೀ!?- ನಾಟಕ ಕೃತಿಗಳನ್ನು ಪ್ರಕಟಿಸಿದ್ದಾರೆ. 

ಸಂವೇದನೆ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2012-13ನೇ ಸಾಲಿನ ಕೆ.ವಿ. ರತ್ನಮ್ಮ ದತ್ತಿ ಪ್ರಶಸ್ತಿ ದೊರೆತಿದೆ.

43 ಪದ್ಯಗಳಿರುವ ನವಭಾರತ ಜನನಿಯ ತನುಜಾತೆ- ಕವನ ಸಂಕಲನದ ಶೀರ್ಷಿಕೆ ರಾಷ್ಟ್ರಕವಿ ಕುವೆಂಪು ಅವರ ಜಯಭಾರತ ಜನನಿಯ ತನುಜಾತೆ.. ಎಂಬ ಕಾವ್ಯವನ್ನು ಧ್ವನಿಸಿದರೂ ಶಿಶಿರ ಅವರು ವಿಭಿನ್ನ ಧ್ವನಿಯ ಕವಿತೆಗಳನ್ನು ರಚಿಸುವ ಮೂಲಕ ಗಮನ ಸೆಳೆದಿದ್ದಾರೆ. ಹೇಳುವುದನ್ನು ಸಾದಾಸೀದಾ, ಸರಳ- ಸುಂದರ ಶೈಲಿಯಲ್ಲಿ ನಿವೇದಿಸುವುದು ಇವರ ಗುಟ್ಟು.

ಪದ್ಯವೆಂದರೇ

ಅಮ್ಮ ಮಾಡುವ ಅಡುಗೆಯ ಹಾಗೇ...!
ಉಪ್ಪು ಹುಳಿ ಖಾರ
ಹದವಾಗಿ ಬೆರೆತು ಬೆಂದು
ಹಸಿ ಕಮಟ ಕೊಂದು
ಒಗ್ಗರಣೆಯಲಿ ಮಿಂದು
ರುಚಿಕಟ್ಟಾಗಬೇಕು..
ಎನ್ನುತ್ತಾರೆ.

ಗೋರಿಯೊಳಗಿನ ದನಿಗಳು ಕವಿತೆ ನಗರೀಕರಣದ ಅಪಾಯದ ಗಂಟೆ ಮೊಳಗಿಸಿದೆ. ಅದೇ ರೀತಿ ಬಡತನ ಎಂಬ ಕವಿತೆ ಕೂಡ ಗಮನ ಸೆಳೆಯುತ್ತದೆ.

ವಿಶ್ವದಲ್ಲಿ ಹಲವಾರು ಮಹಾಯುದ್ಧಗಳು ನಡೆದಿವೆ. ಈ ಆಧುನಿಕ ಪ್ರಪಂಚದಲ್ಲಿಯೂ ಯುದ್ಧೋನ್ಮಾದ ಇದ್ದೇ ಇದೆ. ಇದಕ್ಕೆ ತೀರಾ ಇತ್ತೀಚಿನ ನಿರ್ದಶನ ಎಂದರೇ ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ. ಶಿಶಿರ ಯುದ್ಧ ಕುರಿತು ರಚಿಸಿರುವ ಈ ಕವನದ ಸಾಲು ಗಮನಿಸಿ,

ಬೇಲಿಗಳ ಹಾಕಿದರು
ಹುಟ್ಟಿತು ಯುದ್ಧ
ಬೇಲಿಗಳ ದಾಟಿದರು
ಸಿಕ್ಕನು ಬುದ್ಧ.

ಅಬ್ಬಾ! ಎಷ್ಟೊಂದು ಅರ್ಥಗರ್ಭಿತವಾಗಿದೆ ಅಲ್ಲವೇ?. ಪ್ರತಿಯೊಬ್ಬರೂ ಕೂಡ ಈ ರೀತಿ ತಮ್ಮ ಮನಸ್ಸುಗಳಿಗೆ ಬೇಲಿ ಹಾಕುವುದನ್ನು ಬಿಟ್ಟು ಹೃದಯ ವೈಶಾಲ್ಯತೆಯಿಂದ ವರ್ತಿಸಿದರೆ ಶಾಂತಿ, ಸಾಮರಸ್ಯ, ಸಹಬಾಳ್ವೆ, ಸಮನ್ವಯತೆ ಸಾಧ್ಯ ಅಲ್ಲವೇ?.

ಅವರ ರಾಮರಾಜ್ಯ ಕವನ
ಯುದ್ಧ ಮಾಡಿಯೇ
ನಿರ್ಮಿಸಬೇಕೆಂದಾದರೇ
ಆ ರಾಮರಾಜ್ಯವೇ ಬೇಕಿಲ್ಲ
ಎಂಬುದನ್ನು ಧ್ವನಿಸುತ್ತದೆ.
ಪ್ರಜಾಪ್ರಭುತ್ವದಲ್ಲಿ
ಬೆಲೆ ಇರುವುದು
ಪ್ರಜೆಗಳ ಮತಕಷ್ಟೇ
ಅಭಿಮತಕ್ಕಲ್ಲ..

ಎಂಬ ಚುಟುಕು ಪ್ರಸ್ತುತ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಚುರುಕು ಮುಟ್ಟಿಸುತ್ತದೆ.

ಸಖೀ,
ನೀ
ನನ್ನೊಳಗಿನ
ರಾಮನಿಗಾಗಿ ಹುಡುಕಾಟ
ಮಾಡಿದೆ
ನಾ
ನಿನ್ನೊಳಗಿನ
ರಾಧೆಗಾಗಿ
ಹುಡುಗಾಟ
ಆಡಿದೆ...

ಈ ರೀತಿಯ ಪ್ರೇಮಕವನಗಳು ಕೂಡ ಇಲ್ಲಿವೆ.

ಶ್ರೀಮತಿಯ
ಶ್ರೀಮುಡಿಯ
ಸೆರಗ
ಸೆಳೆದವನ
ಗುಂಡಿಗೆಯ
ನೆತ್ತರಲಿ ತೋಯಿಸಿದ
ಭೀಮ- ಕಾಯ
ಶ್ರೀ ಸಾಮನ್ಯನ
ಶ್ರೀಮಂತರೆದುರಲಿ
ತಲೆಯೆತ್ತಿ
ನಿಲುವಂಥ
ಹೆಮ್ಮೆಯ ಸಂವಿಧಾನವ
ತೋರಿಸಿದ
ಭೀಮ- ರಾಯ ಎಂಬ
ಕವನ ಕೂಡ ಗಮನ ಸೆಳೆಯುತ್ತದೆ.

ನವಭಾರತ ಜನನಿಯ ತನುಜಾತೆ ಕವನ ಸಂಕಲನವನ್ನು ಭಾಗೀರಥ ಪ್ರಕಾಶನ ಪ್ರಕಟಿಸಿದೆ. ಮುನ್ನುಡಿ ಬರೆದಿರುವ ಡಾ.ಎಚ್.ಎಸ್.ಸತ್ಯನಾರಾಯಣ ಅವರು ಸ್ವೋಪಜ್ಞ ದಾರಿಯ ಪಯಣಿಗ, ಬೆನ್ನುಡಿ ಬರೆದಿರುವ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಮಾಗಿದ ಕವಿತೆಗಳು, ನಾ. ದಿವಾಕರ ಅವರು ಶಿಶಿರ ಕುಂಚದಿಂದ ಬಂದ ಅಕ್ಷರಗುಚ್ಚ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಆಸಕ್ತರು ಎಸ್. ಶಿಶಿರಂಜನ್, ಮೊ. 95358 02512 ಸಂಪರ್ಕಿಸಬಹುದು.

Share this article