ಕನ್ನಡಪ್ರಭವಾರ್ತೆ ಬೆಂಗಳೂರು
ಕೌಶಲ್ಯ ಯೋಜನೆಯಲ್ಲಿ ಇದುವರೆಗೆ 23,000ಕ್ಕೂ ಹೆಚ್ಚು ಯುವಜನತೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ಈ ತರಬೇತಿ ಮುಗಿಸಿದ 5,000ಕ್ಕೂ ಹೆಚ್ಚು ಪದವೀಧರರಿಗೆ ನೂರಕ್ಕೆ ನೂರರಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲಾಗಿದ್ದು, ಇದರಲ್ಲಿ 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳು ಸೇರಿವೆ. ಅತ್ಯಾಧುನಿಕ ಉತ್ಪಾದನೆ, ಆಟೊಮೇಷನ್ ಹಾಗೂ ಉದಯೋನ್ಮುಖ ಸಾರಿಗೆ ತಂತ್ರಜ್ಞಾನಗಳಲ್ಲಿ ಭವಿಷ್ಯಕ್ಕೆ ಪೂರಕವಾದ ಕೌಶಲಗಳನ್ನು ಯುವಜನತೆಗೆ ಕಲಿಸಲಾಗುತ್ತಿದ್ದು, ಇದು ಉದ್ಯಮ ರಂಗದಲ್ಲಿ ನುರಿತ ಉದ್ಯೋಗಿಗಳಿಗೆ ಇರುವ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಪ್ರಮುಖವಾಗಿ ನೆರವಾಗುತ್ತಿದೆ.
ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ಉತ್ಪಾದನಾ ವಲಯದಲ್ಲಿ ಇದುವರೆಗೆ ಪ್ರಾತಿನಿಧ್ಯ ಸಿಗದ ಸಮುದಾಯಗಳಿಗೂ ಕೌಶಲ್ಯ ಯೋಜನೆಯು ಹೊಸ ಹಾದಿಗಳನ್ನು ಮುಕ್ತಗೊಳಿಸುತ್ತಿದೆ. ಈ ತರಬೇತಿಯಲ್ಲಿ ಪಾಲ್ಗೊಂಡವರಲ್ಲಿ ಶೇಕಡಾ 21 ರಷ್ಟು ಮಹಿಳೆಯರಿದ್ದರೆ, ಶೇಕಡಾ 25 ರಷ್ಟು ಮಂದಿ ಸಮಾಜದ ಹಿಂದುಳಿದ ಹಾಗೂ ಉದ್ಯೋಗದ ಸೌಲಭ್ಯ ವಂಚಿತ ವರ್ಗಗಳಿಗೆ ಸೇರಿದವರಾಗಿದ್ದಾರೆ. ಇದು ಭವಿಷ್ಯದ ಭಾರತಕ್ಕಾಗಿ ವೈವಿಧ್ಯಮಯ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಾನ ಅವಕಾಶಗಳುಳ್ಳ ಉದ್ಯೋಗಿಗಳನ್ನು ಸಜ್ಜುಗೊಳಿಸುವ ಟಾಟಾ ಮೋಟಾರ್ಸ್ ನ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.ಈ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೀತಾರಾಮ್ ಕಂಡಿ ಅವರು, ‘ಭಾರತದ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆ ಮತ್ತು ಸಾರಿಗೆ ಕ್ಷೇತ್ರದ ಸಾಧನೆಗಳು ಇಲ್ಲಿನ ಉದ್ಯೋಗಿಗಳ ಸಾಮರ್ಥ್ಯದ ಮೇಲೆ ನಿರ್ಧಾರವಾಗಲಿವೆ. ಕೌಶಲ್ಯ ಯೋಜನೆಯ ಮೂಲಕ ನಾವು ತಾಂತ್ರಿಕ ಶಿಕ್ಷಣ, ಉದ್ಯಮ ರಂಗದ ಪರಿಚಯ ಮತ್ತು ನೈಜ ಕಾರ್ಯಾನುಭವವನ್ನು ಒಟ್ಟುಗೂಡಿಸಿ, ಮುಂದಿನ ಪೀಳಿಗೆಯ ನುರಿತ ವೃತ್ತಿಪರರನ್ನು ರೂಪಿಸಲು ಹೂಡಿಕೆ ಮಾಡುತ್ತಿದ್ದೇವೆ. ತಂತ್ರಜ್ಞಾನ ಆಧಾರಿತವಾಗಿ ವೇಗವಾಗಿ ಮುನ್ನಡೆಯುತ್ತಿರುವ ಆಟೊಮೊಬೈಲ್ ಉದ್ಯಮಕ್ಕೆ ಅಗತ್ಯವಿರುವ ನುರಿತ ಪ್ರತಿಭೆಗಳನ್ನು ಒದಗಿಸುವ ಜೊತೆಗೆ, ಯುವಕರು ಅರ್ಥಪೂರ್ಣ ವೃತ್ತಿಜೀವನವನ್ನು ಕಂಡುಕೊಳ್ಳಲು ಈ ಯೋಜನೆ ನೆರವಾಗುತ್ತಿದೆ’ ಎಂದರು.
ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಟಾಟಾ ಮೋಟಾರ್ಸ್ ನ ವಿಸ್ತಾರವಾದ ಜಾಲದ ವ್ಯಾಪ್ತಿಯಲ್ಲಿರುವ ಡೀಲರ್ ಶಿಪ್ ಗಳು, ಪ್ರಮುಖ ಬಿಡಿಭಾಗ ಪೂರೈಕೆದಾರರು, ವೆಂಡರ್ ಗಳು, ಟಾಟಾ ಗ್ರೂಪ್ ನ ಇತರ ಕಂಪನಿಗಳು, ವಿವಿಧ ಆಟೊಮೊಬೈಲ್ ಸಂಸ್ಥೆಗಳು ಹಾಗೂ ಅಂತರರಾಷ್ಟ್ರೀಯ ಕಂಪನಿಗಳಲ್ಲಿ ವ್ಯವಸ್ಥಿತ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಪ್ರಸ್ತುತ ಈ ಯೋಜನೆಯ ಹಳೆಯ ವಿದ್ಯಾರ್ಥಿಗಳು ಟಾಟಾ ಸ್ಟೀಲ್ ಡೌನ್ ಸ್ಟ್ರೀಮ್ ಪ್ರಾಡಕ್ಟ್ಸ್ ಲಿಮಿಟೆಡ್, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್, ಜೈಡಸ್, ಜೆಎಸ್‌ಡಬ್ಲ್ಯೂ ಗ್ರೀಂಟೆಕ್, ಸುಬ್ರೋಸ್, ಸ್ಪಿನ್ನಿ, ವಿಪ್ರೋ ಸೇರಿದಂತೆ ದೇಶದ ಪ್ರಖ್ಯಾತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ, ಈ ಕಾರ್ಯಕ್ರಮವು ಜಾಗತಿಕ ಮಟ್ಟದಲ್ಲೂ ವೃತ್ತಿಜೀವನ ರೂಪಿಸಿಕೊಳ್ಳಲು ನೆರವಾಗಿದ್ದು, ಇಲ್ಲಿ ತರಬೇತಿ ಪಡೆದ 50 ಪದವೀಧರರು ಸ್ಲೋವಾಕಿಯಾದ ನಿಟ್ರಾದಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ನ ಉತ್ಪಾದನಾ ಘಟಕದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅದೇ ರೀತಿ, ಆಟೋಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಡಿಪ್ಲೊಮಾ ತರಬೇತಿ ಪಡೆದು ಪ್ರಸ್ತುತ ಟಾಟಾ ಮೋಟಾರ್ಸ್ ಕಸ್ಟಮರ್ ಸಪೋರ್ಟ್ ನಲ್ಲಿ ಉದ್ಯೋಗದಲ್ಲಿರುವ ಸೋಹಮ್ ರವೀಂದ್ರ ಮನ್ಮೋಡೆ ಮಾತನಾಡಿ , ‘ಸಣ್ಣ ಪಟ್ಟಣದ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ನನಗೆ ಆಟೊಮೊಬೈಲ್ ರಂಗದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳುವುದು ಒಂದು ದೂರದ ಕನಸಾಗಿತ್ತು. ಆದರೆ ಕೌಶಲ್ಯ ಯೋಜನೆಯು ಒಂದೇ ಸಮಯದಲ್ಲಿ ಕಲಿಯಲು, ಗಳಿಸಲು ಮತ್ತು ನೈಜ ಉದ್ಯಮದ ಅನುಭವವನ್ನು ಪಡೆಯಲು ನೆರವಾಗುವ ಮೂಲಕ ನನ್ನ ಬದುಕನ್ನೇ ಬದಲಾಯಿಸಿತು’ ಎಂದರು.