;Resize=(412,232))
ನವದೆಹಲಿ : ಬರೀ ಧೂಳಿನಿಂದ ಆವೃತ್ತವಾಗಿದೆ ಎಂದು ನಂಬಲಾಗಿರುವ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಮೇಲ್ಮೈ ಅಸಲಿಗೆ 2 ಪದರದ ಕೇಕ್ ಇದ್ದಂತಿದೆ ಎಂಬ ಅಚ್ಚರಿಯ ಮಾಹಿತಿಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಂಗಳವಾರ ಬಿಚ್ಚಿಟ್ಟಿದೆ.
2023ರ ಸೆ.2ರಂದು ಕೈಗೊಳ್ಳಲಾಗಿದ್ದ ಚಂದ್ರಯಾನ-3 ಯೋಜನೆಯ ವೇಳೆ ಚಂದ್ರನಂಗಳಕ್ಕೆ ಕಳಿಸಲಾಗಿದ್ದ ವಿಕ್ರಂ ಲ್ಯಾಂಡರ್ ಜಿಗಿಯಬೇಕಾಗಿ ಬಂದಾಗ, ಅದರ ಎಂಜಿನ್‌ಗಳು ರಭಸವಾದ ಗಾಳಿಯನ್ನು ಹೊರಬಿಟ್ಟಿದ್ದವು. ಈ ವೇಳೆ ಚಂದ್ರನ ಮೇಲ್ಮೈಯ್ಯನ್ನು ಆವರಿಸಿದ್ದ 3 ಸೆಂ.ಮೀ.ನಷ್ಟು ಧೂಳು ಹಾರಿದ್ದು, ಅದರಡಿಯಿದ್ದ ಗಟ್ಟಿಯಾದ ಪದರವು ಗೋಚರಿಸಿತ್ತು ಎಂದು ಇಸ್ರೋ ತಿಳಿಸಿದೆ.
ಜತೆಗೆ ಈ ಸಂಶೋಧನೆಯು, ನೆಲೆ ನಿರ್ಮಾಣದಂತಹ ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಹಮ್ಮಿಕೊಳ್ಳಲಾಗುವ ಯೋಜನೆಗಳಿಗೆ ಸಹಕಾರಿಯಾಗಿದೆ ಎಂದೂ ಅದು ಹೇಳಿದೆ.
ರಾಷ್ಟ್ರೀಯ ಸಂಶೋಧನಾ ಸಂಸ್ಥೆಯಾದ ಭೌತ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿಗಳು ಚಂದ್ರನ ಪದರಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅದರಿಂದ, ಚಂದ್ರನ ಗಟ್ಟಿಯಾದ ಹೊರಪದರಕ್ಕೆ ಸಣ್ಣ ಉಲ್ಕಾಶಿಲೆಗಳು ನಿರಂತರವಾಗಿ ಅಪ್ಪಳಿಸಿದ್ದರಿಂದ ಅದು ಪುಡಿಯಾಗಿದ್ದು, ಅದರಿಂದಾಗಿ ಸೃಷ್ಟಿಯಾದ ಧೂಳು ಹೊಸ ಪದರವನ್ನು ರಚಿಸಿದೆ ಎಂದು ತಿಳಿದುಬಂದಿದೆ.
ಜತೆಗೆ, ಮೇಲೆ ಹಗುರವಾದ ಧೂಳಿದ್ದರೂ, ಕೇವಲ 6.5 ಸೆಂ.ಮೀ. ಕೆಳಗೆ ಅವು ಇನ್ನಷ್ಟು ಗಟ್ಟಿಯಾಗಿವೆ ಎಂದೂ ಪತ್ತೆಯಾಗಿದೆ. ಆದ್ದರಿಂದಲೇ ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿಟ್ಟಾಗ ಧೂಳಷ್ಟೇ ಅನುಭವಕ್ಕೆ ಬರುತ್ತದಾದರೂ ಅಡಿಯಲ್ಲಿ ಮಣ್ಣಿರುವಂತೆ ಭಾಸವಾಗುತ್ತದೆ ಎನ್ನಲಾಗಿದೆ.