ಕೇಳಿದ್ನೆ ಕೇಳ್ತಾರೆ ಅಂತ ಮಾತನಾಡದೇ ಎಸ್ಕೇಪ್!

Published : May 11, 2026, 12:16 PM IST
Siddaramaiah

ಸಾರಾಂಶ

ಮಾಧ್ಯಮದವರು ‘ಸಾರ್‌, ಸಾರ್‌...’ ಎಂದು ಕೂಗಿಕೊಳ್ಳುತ್ತಿದ್ದರೂ ‘ರೆಡ್‌ ಸಿಗ್ನಲ್‌’ ತೋರಿಸಿ, ಕಾರನ್ನೇರಿ ತಮ್ಮ ಮೆಚ್ಚಿನ ಮೈಲಾರಿ ಹೋಟೆಲ್‌ಗೆ ತೆರಳಿ, ದೋಸೆ ಮೆಲ್ಲುತ್ತಿದ್ದರು!. ಬಹುಶಃ ಕೇಳಿದ್ನೆ ಕೇಳ್ತಾರೆ ಅಂತಿರಬೇಕು ಎಂದು ಮಾಧ್ಯಮದವರು ತಮ್ಮತಮ್ಮಲ್ಲೇ ಗುಸುಗುಸು ಮಾತನಾಡಿಕೊಂಡರು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿಗೆ ಬಂದಾಗಲೆಲ್ಲ ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ, ನಗರದಲ್ಲೇ ವಾಸ್ತವ್ಯ ಹೂಡಿದರೆ ಮರುದಿನ ಟಿ.ಕೆ.ಬಡಾವಣೆಯ ನಿವಾಸದೆದುರು ಮಾಧ್ಯಮದವರ ಜೊತೆ ಮಾತನಾಡುವುದು ಗ್ಯಾರಂಟಿ. ಅದೇ ರೀತಿ ಮೇ 6-7 ರಂದು ಮೈಸೂರಿಗೆ ಸಿದ್ದರಾಮಯ್ಯ ಅವರ ಪ್ರವಾಸ ಕಾರ್ಯಕ್ರಮ ಇತ್ತು.

 ಮೊದಲ ದಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಅಲ್ಲಿ ಕೂಡ ‘ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡು ಸ್ಥಾನ ಗೆದ್ದಿರುವುದರಿಂದ ನಾಯಕತ್ವ ಬದಲಾವಣೆಗೆ ಫುಲ್‌ಸ್ಟಾಪ್‌ ಬೀಳುತ್ತಾ?’, ‘ಡೆಲ್ಲಿಗೆ ಯಾವಾಗ ಹೋಗ್ತೀರಾ?’, ‘ರಾಹುಲ್‌ಗಾಂಧಿ ಭೇಟಿ ಮಾಡ್ತೀರಾ?’ ಇವೇ ಮೊದಲಾದ ಪ್ರಶ್ನೆಗಳು ಬಂದವು. ಎಲ್ಲಕ್ಕೂ ಸಾವಧಾನವಾಗಿ ಉತ್ತರಿಸಿದ ಸಿದ್ದರಾಮಯ್ಯ ಅವರು, ‘ಹೈಕಮಾಂಡ್‌ ಹೇಳ್ದಂಗೆ ಕೇಳ್ತೀನಿ’ ಅಂಥ ಹೇಳಿದ್ರು. ಮತ್ತೆ ‘ಸರ್ಕಾರಕ್ಕೆ ಮೂರು ವರ್ಷ ಆಯ್ತು. ಇನ್ನೂ ಎರ಼ಡು ವರ್ಷ ನೀವೇ ಇರ್ತೀರಾ?’ ಎಂಬ ಪ್ರಶ್ನೆ ಬರುತ್ತಿದ್ದಂತೆ ‘ಏಯ್‌, ಎಷ್ಚು ಸಾರಿ ಕೇಳಿದ್ನೆ ಕೇಳ್ತೀರಾ? ಹೈಕಮಾಂಡ್‌ ಹೇಳ್ದಂಗೆ ಕೇಳ್ತೀನಿ ಅಂದ್ರು ಮತ್ತೆ ಅದ್ನೇ ಕೇಳ್ತೀರಾ?’ ಎಂದು ಎಗರಾಡಿದ್ದರು.

ಮರುದಿನ ಸಿಎಂ ನಿವಾಸದ ಬಳಿ ರಾಕೇಶ್‌ ಸಿದ್ದರಾಮಯ್ಯ ಸ್ಮರಣಾರ್ಥ ಎರಡು ಆ್ಯಂಬುಲೆನ್ಸ್‌ಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಇತ್ತು. ಹೀಗಾಗಿ ‘ಮಾತಿಗೆ ಸಿಕ್ತಾರೆ. ಏನಾದ್ರೂ ಮಾತನಾಡಬಹುದು’ ಎಂದು ಮಾಧ್ಯಮದವರು ಹೋಗಿದ್ರು. ಆದರೆ ಮನೆಯಿಂದ ಹೊರಗೆ ಬಂದ ಸಿದ್ದರಾಮಯ್ಯ ಅವರು ಜನರಿಂದ ಅಹವಾಲು ಸ್ವೀಕರಿಸಿ, ತುರ್ತು ಚಿಕಿತ್ಸಾ ವಾಹನಗಳಿಗೆ ಹಸಿರು ಬಾವುಟ ತೋರಿಸಿ, ಚಾಲನೆ ನೀಡಿ, ಮಾಧ್ಯಮದವರು ‘ಸಾರ್‌, ಸಾರ್‌...’ ಎಂದು ಕೂಗಿಕೊಳ್ಳುತ್ತಿದ್ದರೂ ‘ರೆಡ್‌ ಸಿಗ್ನಲ್‌’ ತೋರಿಸಿ, ಕಾರನ್ನೇರಿ ತಮ್ಮ ಮೆಚ್ಚಿನ ಮೈಲಾರಿ ಹೋಟೆಲ್‌ಗೆ ತೆರಳಿ, ದೋಸೆ ಮೆಲ್ಲುತ್ತಿದ್ದರು!. ಬಹುಶಃ ಕೇಳಿದ್ನೆ ಕೇಳ್ತಾರೆ ಅಂತಿರಬೇಕು ಎಂದು ಮಾಧ್ಯಮದವರು ತಮ್ಮತಮ್ಮಲ್ಲೇ ಗುಸುಗುಸು ಮಾತನಾಡಿಕೊಂಡರು!

ಯಾಮಾರದ ಪೊಲೀಸಪ್ಪ

ಸಂಚಾರ ನಿಯಮ ಉಲ್ಲಂಘಿಸಿ ಒನ್‌ವೇನಲ್ಲಿ ವಾಹನ ಓಡಿಸುವಾಗ, ಹೆಲ್ಮೆಟ್‌ ಇಲ್ಲದಾಗ, ಡ್ರೈವಿಂಗ್‌ ಲೈಸೆನ್ಸ್‌ ಇರದಿದ್ದಾಗ ಸಂಚಾರಿ ಪೊಲೀಸರಿಗೆ ಸಿಕ್ಕಿ ಬೀಳುವ ಚಾಲಕರು ನೀಡುವ ಕಾರಣ ಸತ್ಯದ ತಲೆ ಮೇಲೆ ಹೊಡೆದಂತಿರುತ್ತದೆ. ಆಸ್ಪತ್ರೆಯಲ್ಲಿ ಯಾರನ್ನೋ ಅಡ್ಮಿಟ್‌ ಮಾಡಿದ್ದಾರೆ, ಬಸ್‌, ಟ್ರೈನ್‌ ತಪ್ಪಿ ಹೋಗುತ್ತದೆ, ಸರ್ಕಾರಿ ಕೆಲಸದಲ್ಲಿ ಇದ್ದೇನೆ ಎಂದೆಲ್ಲಾ ಸುಳ್ಳು ಹೇಳಿ ದಂಡದಿಂದ ತಪ್ಪಿಸಿಕೊಳ್ಳುವುದು ಮಾಮೂಲಿ ಬಿಡಿ.

ಇತ್ತೀಚೆಗೆ ಇದೇ ರೀತಿ ಒನ್‌ವೇನಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಚಾಲಕ ಅಮಾಯಕನಂತೆ ಸುಳ್ಳು ಹೇಳಿ ಸಂಚಾರಿ ಪೊಲೀಸ್‌ರಿಗೆ ಯಾಮಾರಿಸಲು ಹೋಗಿ ತಾನೇ ಯಾಮಾರಿದ ಪ್ರಸಂಗ ನಡೆಯಿತು.

ನಗರದ ಶಿವಾನಂದ ವೃತ್ತದ ಬಳಿ ಸಂಚಾರ ಪೊಲೀಸರು ಕರ್ತವ್ಯದಲ್ಲಿದ್ದರು. ಬೈಕ್‌ ಸವಾರ ಒನ್‌ವೇಯಲ್ಲಿ ಬಂದ ಬೈಕ್‌ ಸವಾರ ಪೊಲೀಸರನ್ನು ನೋಡುತ್ತಿದ್ದಂತೆ ಬೈಕ್‌ನಿಂದಿಳಿದು ತಳ್ಳಿಕೊಂಡು ಬಂದ. ದೂರದಿಂದಲೇ ಈತನನ್ನು ನೋಡಿದ್ದ ಪೊಲೀಸ್‌ ವಾಪಸ್‌ ಹೋಗುವಂತೆ ಹೇಳಿದ. ಆಗ ‘ಸಾರ್‌ ಗವರ್ನ್‌ಮೆಂಟ್‌ ಫೈಲ್‌ ಇದೆ, ಅದನ್ನು ಖನಿಜ ಭವನದಲ್ಲಿರುವ ಆಫೀಸ್‌ಗೆ ಸಬ್‌ಮಿಟ್‌ ಮಾಡಬೇಕು. ಬೈಕ್‌ನಲ್ಲಿ ಪೆಟ್ರೋಲ್‌ ಖಾಲಿಯಾಗಿದೆ. ಹಾಗಾಗಿ ತಳ್ಳಿಕೊಂಡು ಹೋಗುತ್ತಿದ್ದೇನೆ. ಪ್ಲೀಸ್‌ ಬಿಡಿ ಸಾರ್‌ ಎಂದು ಗೋಗೆರದ. ಆದರೆ ಇಂಥ ಆಟಗಳನ್ನು ಬೇಕಾದಷ್ಟು ನೋಡಿದ್ದ ಸಂಚಾರಿ ಪೊಲೀಸ್‌, ಅದೆಲ್ಲಾ ಆಗಲ್ಲ, ಒನ್‌ವೇನಲ್ಲಿ ಹೋಗಲು ಬಿಡಲ್ಲ ಎಂದು ಕಡ್ಡಿ ಮುರಿದ ಹಾಗೇ ಹೇಳಿದ. ಆದರೂ ಪಟ್ಟು ಬಿಡದ ಬೈಕ್‌ ಸವಾರ ಬಿಡುವಂತೆ ಕೇಳಿಕೊಂಡಾಗ, ಪೊಲೀಸ್‌ ತನ್ನ ಬಳಿ ಇದ್ದ ಬಾಟಲ್‌ನಲ್ಲಿ ಇದ್ದ ನೀರು ಕುಡಿದು, ಬಾಟಲ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಂಡು ಬಾ. ಬೈಕ್‌ ನಾನು ನೋಡಿಕೊಂಡು ಹೋಗುತ್ತೇನೆ ಎಂದರು.

ಸಂಚಾರಿ ಪೊಲೀಸ್‌ ಈ ಮಾತು ಹೇಳಿದ ಮೇಲೆ ಸವಾರ ಬೈಕ್‌ ತಿರುಗಿಸಿಕೊಂಡು ಸ್ವಲ್ಪ ದೂರ ತಳ್ಳಿಕೊಂಡು ಹೋಗಿ ನಂತರ ಬೈಕ್‌ ಸ್ಟಾರ್ಟ್‌ ಮಾಡಿಕೊಂಡು ಭರ್‌... ಅಂತ ಹೋದ. ದೂರದಿಂದಲೇ ಇದನ್ನೆಲ್ಲ ನೋಡುತ್ತಿದ್ದ ಸಂಚಾರಿ ಪೊಲೀಸ್‌ ಇಂತಹ ನಾಟಕಗಳೆಲ್ಲ ನಮ್ಮ ಮುಂದೆ ನಡೆಯಲ್ಲ ಅಂತ ನಗುತ್ತಾ ಪಕ್ಕದಲ್ಲಿದ್ದ ಮತ್ತೊಬ್ಬ ಪೊಲೀಸ್‌ಗೆ ಹೇಳುತ್ತಿದ್ದರು.

- ಅಂಶಿ ಪ್ರಸನ್ನಕುಮಾರ್‌

-ಸುರೇಶ್‌ ಪಿ.

PREV
Read more Articles on

Recommended Stories

ಬದುಕು ಒಮ್ಮೆ ಮಾತ್ರ; ಆರೋಗ್ಯದ ಬದುಕಿಗೆ ಅರಿವು ಮೂಡಿಸುವ ಲೇಖನಗಳ ಸಂಕಲನ
ಕರ್ನಾಟಕ ಅಷ್ಟೇ ಅಲ್ಲ, ದೇಶದ ಬಿಜೆಪಿ ಕಾರ್ಯಕರ್ತರಿಗೂ ಸ್ಪೂರ್ತಿ ಯಡಿಯೂರಪ್ಪ