ಭಾರತೀಯ ಕಥಾ ಸಾಮ್ರಾಜ್ಯ ಅಪಾರವಾಗಿದ್ದು, ಸರ್ವಕಾಲಕ್ಕೂ ಸಲ್ಲುವ ಅವುಗಳನ್ನು ಸಾಮಾನ್ಯ ಭಾಷೆಗೆ ತಂದು ಓದುಗರ ಮನಮುಟ್ಟಿಸುವ ಕೆಲಸ ಆಗಬೇಕಿದೆ
ಬೆಂಗಳೂರು : ಭಾರತೀಯ ಕಥಾ ಸಾಮ್ರಾಜ್ಯ ಅಪಾರವಾಗಿದ್ದು, ಸರ್ವಕಾಲಕ್ಕೂ ಸಲ್ಲುವ ಅವುಗಳನ್ನು ಸಾಮಾನ್ಯ ಭಾಷೆಗೆ ತಂದು ಓದುಗರ ಮನಮುಟ್ಟಿಸುವ ಕೆಲಸ ಆಗಬೇಕಿದೆ ಎಂದು ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ ಹೇಳಿದ್ದಾರೆ.
ಸದಾತನ ಬೆಂಗಳೂರು ಸಂಸ್ಥೆ ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅನುವಾದಿಸಿರುವ ‘ಪಂಚತಂತ್ರ’ ಹಾಗೂ ‘ಹಿತೋಪದೇಶ’ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿ, ಕ್ಲಿಷ್ಟವಾದ ವಿಚಾರಗಳನ್ನು ಸರಳವಾಗಿ ಹೇಳಿರುವ ಪಂಚತಂತ್ರದ ವಿಚಾರ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಚೀನಾ, ಜರ್ಮನಿ, ಅರೇಬಿಕ್ ಕತೆಗಳಿಗೆ ಹೋಲಿಸಿದರೆ ಎಲ್ಲ ಕಾಲಕ್ಕೂ ಒಪ್ಪುವಂತಹ ಕತೆಗಳು ಭಾರತದಲ್ಲಿ ಮಾತ್ರ ಇವೆ. ಬೇರೆ ಬೇರೆ ವಯಸ್ಸಿನವರಿಗೆ ಬೇರೆ ಬೇರೆ ರೀತಿಯಲ್ಲಿ ತಿಳಿಹೇಳುವ ಕತೆಗಳು ನಮ್ಮಲ್ಲಿವೆ ಎಂದರು.
ರಾಮಾಯಣ, ಮಹಾಭಾರತ, ಕಥಾಸರಿತ್ ಸಾಗರಗಳು ಸಾವಿರಾರು ಕತೆಗಳನ್ನು ಒಳಗೊಂಡಿವೆ. ಓದುವ ಬುದ್ಧಿ, ಹೇಳುವ ಭಾಷೆ, ತಿಳಿದುಕೊಳ್ಳುವ ಮನಸ್ಥಿತಿಗಳ ಅನುಸಂಧಾನ ಆಗಿದ್ದಲ್ಲಿ ಮಾತ್ರ ಅದರ ಲಾಭ ಪಡೆಯಬಹುದು. ಲೇಖಕರು ತಮ್ಮ ಎಷ್ಟು ಕೃತಿಗಳು ಮಾರಾಟವಾಗಿದೆ ಎಂಬುದಕ್ಕಿಂತ ಎಷ್ಟು ಜನರ ಮನ ತಲುಪಿದೆ ಎಂಬುದೇ ನಿಜವಾದ ಗೌರವಧನ ಎಂದುಕೊಳ್ಳಬೇಕು ಎಂದು ಹೇಳಿದರು.
ಇನ್ನು ಪಂಚತಂತ್ರ ಬರೆದ ಕಾಲಘಟ್ಟದಲ್ಲಿ ಸ್ತ್ರೀಯರನ್ನು ಕೆಲ ವೇಳೆ ಹೀನಾಯವಾಗಿ ಕಂಡ ಬಗ್ಗೆ ವೈಯಕ್ತಿಕ ಆಕ್ಷೇಪವಿದೆ. ಸ್ತ್ರೀಯನ್ನು ನಂಬಬಾರದು, ಮೋಸ ಮಾಡುತ್ತಾರೆ ಎಂಬ ವಿಚಾರ ಒಪ್ಪಲು ಸಾಧ್ಯವಿಲ್ಲ. ಮಕ್ಕಳಿಗೆ ಪಂಚತಂತ್ರ ಕೊಡುವಾಗ ಅದರಲ್ಲಿನ ಒಳ್ಳೆ ಅಂಶಗಳನ್ನು ಮಾತ್ರ ತಿಳಿಸಬೇಕು. ಆರಂಭದಲ್ಲೇ ಅವಕ್ಕೆ ಮಹಿಳೆ ಬಗ್ಗೆ ತಪ್ಪು ಭಾವನೆ ಬಾರದಂತೆ ಎಚ್ಚರವಹಿಸಬೇಕು ಎಂದು ಸುಧಾಮೂರ್ತಿ ಹೇಳಿದರು.
ವಿದ್ವಾನ್ ಜಗದೀಶ್ ಶರ್ಮ ಸಂಪ ಮಾತನಾಡಿ, ದೇಹದ ಕಾಯಿಲೆಗೆ ಚಿಕಿತ್ಸೆ ಸುಲಭ, ಕಣ್ಣಿಗೆ ಕಾಣದ ಮನಸ್ಸಿನ ಬಾಧೆ ಚಿಕಿತ್ಸೆಗೆ ಕತೆಗಳು ನೆರವಾಗಬಲ್ಲವು ಎಂಬುದನ್ನು ತುಂಬ ಹಿಂದೆ ಭಾರತೀಯರು ಕಂಡುಕೊಂಡಿದ್ದರು. ನಮ್ಮ ಇತಿಹಾಸ, ಗದ್ಯ, ಪದ್ಯಗಳು, ರಾಮಾಯಣ, ಮಹಾಭಾರತ ಕತೆಗಳ ಗುಚ್ಛವಾಗಿದ್ದವು. ವಿವಿಧ ಕಲಾ ಮಾಧ್ಯಮಗಳಾದ ನೃತ್ಯ, ಗೀತ, ದೃಶ್ಯಗಳು ಕತೆಯನ್ನು ಒಳಗೊಂಡಿದ್ದವು ಎಂದರು.
ಕೃತಿಯ ಅನುವಾದ ಎಂದರೆ ಅದರ ಆಶಯವನ್ನು ಪ್ರಧಾನವಾಗಿ ತಲುಪಿಸುವಂತ ಕೆಲಸವೇ ಹೊರತು ಕೇವಲ ಶಬ್ದ ಅನುವಾದವಲ್ಲ. ಯಾರದ್ದಾದರೂ ಬದುಕು ಬದಲಿಸಬೇಕು ಎಂದಾದರೆ ಅವರಿಗೆ ಅರ್ಥವಾಗುವ ರೀತಿಯ ಭಾಷೆಯಲ್ಲಿ ಅದನ್ನು ಪ್ರಸ್ತುತ ಪಡಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ಲೋಕ ಸಹಿತವಾಗಿ ಅನುವಾದಗೊಂಡ ಪಂಚತಂತ್ರ, ಹಿತೋಪದೇಶ ಕೃತಿಗಳು ಉತ್ತಮ ಮಾದರಿ ಎಂದರು.
ಕೃತಿ ಲೇಖಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮಾತನಾಡಿದರು. ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ.ಭೀಮಶಾ ಆರ್ಯ ಇದ್ದರು.