ಜಾಗತಿಕ ನಗರಿ, ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಬ್ರ್ಯಾಂಡ್ ಬೆಂಗಳೂರು ಎಂಬೆಲ್ಲಾ ಹೆಗ್ಗಳಿಕೆ ಹೊತ್ತಿರುವ ಬೆಂಗಳೂರು ಈಗ ‘ಗ್ರೇಟರ್’ ಬೆಂಗಳೂರು ಕೂಡ ಆಗಿದೆ. ರಾಜಧಾನಿ ಸಮಸ್ಯೆಗಳೂ ಅಷ್ಟೇ ದೊಡ್ಡದಾಗಿ ಬೆಳೆಯುತ್ತಿವೆ. ಬಿಬಿಎಂಪಿಯ ಮಳೆಗಾಲದ ಸಿದ್ಧತೆಯ ವಾಸ್ತವವನ್ನು ಮೇ ತಿಂಗಳ ಬೇಸಿಗೆ ಕಾಲದ ಮಳೆಯೇ ಬಟಾ ಬಯಲು ಮಾಡಿದೆ. ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಜಲಸಾರಿಗೆ ಶುರುವಾಗಿದ್ದು, ಪ್ರಾಣಾಪಾಯ ನಷ್ಟ-ಕಷ್ಟಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಗ್ರೇಟರ್ ಬೆಂಗಳೂರಿನಲ್ಲಿ ಟ್ರೋಲ್ ಆಗುವಷ್ಟು ಸಮಸ್ಯೆ ಉಂಟಾಗಲು ಹೊರ ರಾಜ್ಯದವರ ಹೊರೆಯೇ ಕಾರಣ ಎಂಬ ಚರ್ಚೆ ಜತೆಗೆ ರಾಜ್ಯ ಸರ್ಕಾರ, ಬಿಬಿಎಂಪಿ ವೈಫಲ್ಯದ ಬಗ್ಗೆಯೂ ಟೀಕೆಗಳೂ ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಪ್ರವಾಹ ಸಮಸ್ಯೆಗೆ ಕಾರಣ, ಮಳೆಗಾಲದ ಸಿದ್ಧತೆ ಜತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ವಿವಿಧ ಪಾಲಿಕೆಗಳಾಗಿ ಬಿಬಿಎಂಪಿ ಇಬ್ಭಾಗ ಮಾಡುವ ಪ್ರಕ್ರಿಯೆ ಸೇರಿ ಹಲವು ಮಹತ್ವದ ವಿಷಯಗಳ ಬಗ್ಗೆ 3 ವರ್ಷ ಬಿಬಿಎಂಪಿ ಆಯುಕ್ತರಾಗಿದ್ದು ಈಗ ಆಡಳಿತಾಧಿಕಾರಿ ಹುದ್ದೆಯ ಚುಕ್ಕಾಣಿ ಹಿಡಿದಿರುವ ತುಷಾರ್ ಗಿರಿನಾಥ್ ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.
ಮೇ ತಿಂಗಳ ಮಳೆಗೆ ಬೆಂಗಳೂರು ತತ್ತರಿಸಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಸಮಸ್ಯೆಗೆ ಕಾರಣವೇನು?
ಮಳೆಯಿಂದ ಸಮಸ್ಯೆಯಾಗಿರುವುದು ನಿಜ. ಆದರೆ ಕಳೆದ 10 ವರ್ಷಕ್ಕೆ ಹೋಲಿಸಿದರೆ ಮಳೆಯಿಂದ ಸಮಸ್ಯೆ ಉಂಟಾಗುವ ಸ್ಥಳಗಳ ಸಂಖ್ಯೆ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯ ಹಾಗೂ ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬಿದ್ದಾಗ ಸಮಸ್ಯೆ ಆಗುತ್ತಿದೆ. ಅದೂ ಸಹ ಕೆಲವೇ ಭಾಗದಲ್ಲಿ ಮಾತ್ರ. ಉಳಿದಂತೆ ಶೇ.95 ರಷ್ಟು ಭಾಗದಲ್ಲಿ ಯಾವುದೇ ಸಮಸ್ಯೆ ಆಗುತ್ತಿಲ್ಲ.
ಹಾಗಾದರೆ ಸಮಸ್ಯೆಗೆ ಸಿದ್ಧತಾಲೋಪ ಕಾರಣ ಅಲ್ಲವೇ?
ಮಳೆಗಾಲ ಸಮಸ್ಯೆ ಎದುರಿಸಲು ಅಗತ್ಯ ಸಿದ್ಧತೆ ಮಾಡಲಾಗಿತ್ತು. ಯಾವುದೇ ಪ್ರಮಾಣದ ಮಳೆ ಬಿದ್ದರೂ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕು. ಆದರೆ, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರವಾಹ ರೀತಿಯ ಪರಿಸ್ಥಿತಿ ತಡೆಗೆ ಏನೆಲ್ಲಾ ಕ್ರಮ ಕೈಗೊಳ್ಳುತ್ತಿದ್ದೀರಿ?
ನಗರದಲ್ಲಿ ಎಷ್ಟೇ ಮಳೆ ಬಂದರೂ ಯಾವುದೇ ತೊಂದರೆ ಆಗಬಾರದು ಎಂದು ಜನ ಬಯಸುತ್ತಾರೆ. ಅದಕ್ಕಾಗಿ ನಗರದಲ್ಲಿ ರಸ್ತೆ, ಚರಂಡಿ, ಪಾದಚಾರಿ ಮಾರ್ಗ ಹೇಗಿರಬೇಕು ಎಂಬ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿ ವಿಪತ್ತು ನಿರ್ವಹಣೆ ಕೈಪಿಡಿ ರಚಿಸಲಾಗಿದೆ. ಜತೆಗೆ, ರಾಜಕಾಲುವೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುವಂತೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 491 ಕಿ.ಮೀ. ರಾಜಕಾಲುವೆ ತಡೆಗೋಡೆ ನಿರ್ಮಾಣ ಪೂರ್ಣಗೊಂಡಿದ್ದು, 2026ರ ಫೆಬ್ರವರಿ ವೇಳೆಗೆ 194 ಕಿ.ಮೀ. ತಡೆಗೋಡೆ ನಿರ್ಮಾಣ ಪೂರ್ಣ ಮಾಡುತ್ತೇವೆ. ಇದೀಗ ವಿಶ್ವ ಬ್ಯಾಂಕ್‌ನಿಂದ 2 ಸಾವಿರ ಕೋಟಿ ರು. ಸಾಲ ಪಡೆದು 173 ಕಿ.ಮೀ. ರಾಜಕಾಲುವೆ ತಡೆಗೋಡೆ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ.
ಇಷ್ಟಾದರೆ ಬೆಂಗಳೂರಿನಲ್ಲಿ ಮಳೆ ಸಮಸ್ಯೆ ಬಗೆಹರಿಯುತ್ತದೆಯೇ?
ರಾಜಕಾಲುವೆ ನಿರ್ಮಾಣ ಮಾಡಿದರೆ ಸಾಕಾಗುವುದಿಲ್ಲ. ಮಳೆ ನೀರು ಕಾಲುವೆಗಳಿಗೂ ಹೆಚ್ಚಿನ ಗಮನ ನೀಡಬೇಕು. ಈ ಮಳೆ ನೀರು ಕಾಲುವೆಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕಿದೆ. ಆದರೆ, ನಗರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಂದ ಮಳೆ ನೀರಿನೊಂದಿಗೆ ಕಟ್ಟಡ ತ್ಯಾಜ್ಯ ಹಾಗೂ ಕಸ ಬಂದು ತುಂಬಿಕೊಳ್ಳುತ್ತಿದೆ. ಇದು ಸಹ ನೀರು ನಿಂತುಕೊಂಡು ಪ್ರವಾಹ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗುತ್ತಿದೆ.
ಮರಗಳು ಬಿದ್ದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಸಂಚಾರವೇ ಅಸುರಕ್ಷಿತ ಎಂಬಂತಾಗಿದೆ?
ನಗರದಲ್ಲಿ ಕಾಂಕ್ರೀಟೀಕರಣದಿಂದ ಮರದ ಬೇರುಗಳು ಒಣಗುತ್ತಿರುವುದರಿಂದ ಮರಗಳು ಸಾಯುತ್ತಿವೆ. ಪ್ರತಿ ವರ್ಷ ಸಾವಿರಾರು ಸಂಖ್ಯೆಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಅದಕ್ಕಾಗಿ 33 ತಂಡಗಳನ್ನು ಇಟ್ಟುಕೊಂಡಿದ್ದೇವೆ. ಜತೆಗೆ, 10 ರಿಂದ 12 ರ್‍ಯಾಪಿಂಡ್ ತಂಡಗಳನ್ನು ಹೊಂದಿದ್ದೇವೆ. ಕ್ರೈನ್, ಹೆಚ್ಚುವರಿ ಮರ ಕತ್ತರಿಸುವ ಪರಿಣಿತರ ನಿಯೋಜನೆಗೂ ದರ ನಿಗದಿ ಪಡಿಸಲಾಗಿದೆ. ಆದರೂ, ದುರಾದೃಷ್ಟವಶಾತ್ ಮರ ಹಾಗೂ ಮರದ ರೆಂಬೆ ಕೊಂಬೆ ಬಿದ್ದು ಪ್ರಾಣ ಹಾನಿ ಉಂಟಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದು ಬೃಹತ್ ಯೋಜನೆ ಅನುಷ್ಠಾನ ಆಗಲಿಲ್ಲ. ಜನರ ಕಣ್ಣು ಮುಚ್ಚಿಸಲು ಬಿ-ಸ್ಮೈಲ್ ಕಂಪನಿ ಸ್ಥಾಪನೆಯೇ?
ಸರ್ಕಾರ ಹಾಗೂ ಬಿಬಿಎಂಪಿಯಿಂದ ಯಾವುದೇ ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದರೆ ಸಾಕಷ್ಟು ನೀತಿ-ನಿಯಮ ಪಾಲಿಸಬೇಕಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ತ್ವರಿಯವಾಗಿ ಯೋಜನೆ ಅನುಷ್ಠಾನ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ, ಸರ್ಕಾರವು ವಿಶೇಷ ಉದ್ದೇಶ ಘಟಕ (ಎಸ್‌ಪಿವಿ) ರಚನೆಗೆ ಸೂಚಿಸಿತ್ತು. ಅದರಂತೆ ಬಿ-ಸ್ಮೈಲ್ ಕಂಪನಿ ಸ್ಥಾಪಿಸಲಾಗಿದೆ.
ಈ ಕಂಪನಿಯಿಂದ ನಗರಕ್ಕೆ ಹಾಗೂ ಅದರ ಜನತೆಗೆ ಆಗುವ ಏನು ಲಾಭ ಆದರೂ ಏನು?
ನಗರದಲ್ಲಿ ಒಂದೆರಡು ಮೇಲ್ಸೇತುವೆ, ಕೆಳಸೇತುವೆ ಮಾಡಿದರೆ ಸಾಕಾಗುವುದಿಲ್ಲ. ನಗರದ ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿ ಮಾಡಬೇಕಾಗಿದೆ. ಅದಕ್ಕೆ ಬೇಕಾದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ತಾಂತ್ರಿಕತೆ ಹೊಂದಿರುವ ಮಾನವ ಸಂಪನ್ಮೂಲ ಬಿಬಿಎಂಪಿಯಲ್ಲಿ ಇಲ್ಲ. ಪ್ರತಿ ಬಾರಿಯೂ ಖಾಸಗಿ ಸಂಸ್ಥೆ, ತಂತ್ರಜ್ಞರ ಮೊರೆ ಹೋಗಬೇಕು. ಕಂಪನಿ ಸ್ಥಾಪನೆಯಾದರೆ, ಸರ್ಕಾರದ ಬೇರೆ ಬೇರೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಜ್ಞರನ್ನು ಎರವಲು ಸೇವೆ, ಹೊಸ ನೇಮಕಾತಿ ಮೇಲೆ ಪಡೆದುಕೊಳ್ಳಬಹುದಾಗಿದೆ. ಕಡಿಮೆ ಸಮಯದಲ್ಲಿ ಯೋಜನೆ ಅನುಷ್ಠಾನಗೊಳಿಸಬಹುದಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಈ ಸುರಂಗ ರಸ್ತೆಯಿಂದ ಟ್ರಾಫಿಕ್ ಸಮಸ್ಯೆ ಪರಿಹಾರವೇ?
ನಗರದಲ್ಲಿ ಕೇವಲ ಸುರಂಗ ರಸ್ತೆ ನಿರ್ಮಾಣಕ್ಕೆ ಮಾತ್ರ ಕ್ರಮ ಕೈಗೊಂಡಿಲ್ಲ. ಅದರೊಂದಿಗೆ ಸಾಕಷ್ಟು ಫ್ಲೈಓವರ್, ಅಂಡರ್ ಪಾಸ್, ರಸ್ತೆ ಅಗಲೀಕರಣ ಸೇರಿ ಸಮಗ್ರವಾಗಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಎಲ್ಲವೂ ಆರಂಭಿಸಲಾಗುತ್ತಿದೆ. ಪೂರ್ಣಗೊಂಡರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ನಗರದ ಸಮಸ್ಯೆ ಪರಿಹರಿಸಲು ಸಾರ್ವಜನಿಕರ ಪಾತ್ರ ಮುಖ್ಯ. ಅವರ ಸಹಕಾರ ಪಡೆಯಲು ಏನು ಮಾಡುತ್ತಿದ್ದೀರಿ?
ಪ್ರಮುಖವಾಗಿ ಸಾರ್ವಜನಿಕರು ಕಟ್ಟಡ ತ್ಯಾಜ್ಯ ಹಾಗೂ ಕಸವನ್ನು ಮಳೆ ನೀರುಗಾಲುವೆ ಮತ್ತು ರಾಜಕಾಲುವೆಗೆ ಹಾಕುವುದು ನಿಲ್ಲಿಸಬೇಕು. ಪ್ರತಿಯೊಬ್ಬ ಕಟ್ಟಡ ಮಾಲೀಕರು ಮಳೆ ನೀರು ಕೊಯ್ಲು ಪದ್ಧತಿ ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಬೇಕು. ಮನೆ ಮುಂದೆ ಮಳೆ ನೀರು ಕಾಲುವೆ ಇಲ್ಲವಾದರೆ ಅಥವಾ ಹೂಳಿನಿಂದ ತುಂಬಿಕೊಂಡಿದ್ದರೆ ಮಳೆ ನೀರನ್ನು ರಸ್ತೆಗೆ ಹರಿಸಬಹುದು. ಇದರಿಂದ ಹೆಚ್ಚಿನ ತೊಂದರೆ ಉಂಟಾಗುವುದಿಲ್ಲ. ಆದರೆ, ಯಾವುದೇ ಕಾರಣಕ್ಕೂ ಬಿದ್ದ ಮಳೆ ನೀರನ್ನು ಜಲಮಂಡಳಿಯ ಒಳಚರಂಡಿ ಮಾರ್ಗಕ್ಕೆ ಹರಿಸಬಾರದು. ಹರಿಸಿದರೆ ಮ್ಯಾನ್‌ಹೋಲ್ ಗಳಲ್ಲಿ ಕೊಳಚೆ ನೀರು ಉಕ್ಕಲಿದೆ. ಜತೆಗೆ, ರಸ್ತೆಯಲ್ಲಿ ಬಿದ್ದ ಮಳೆ ನೀರಿನೊಂದಿಗೆ ಸೇರಿಕೊಂಡು ತಗ್ಗು ಪ್ರದೇಶದಲ್ಲಿ ಇರುವ ಮನೆಗಳಿಗೆ ನುಗ್ಗಲಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ.
ಸ್ಕೈಡೆಕ್, ಟನಲ್‌ನಂಥ ದೊಡ್ಡ ಯೋಜನೆಗಿಂತ ಕಸ, ಧೂಳು, ರಸ್ತೆ ಗುಂಡಿ ಬಗ್ಗೆ ಯಾಕೆ ಗಮನ ನೀಡುತ್ತಿಲ್ಲ?
ಬಿಬಿಎಂಪಿಯು ಸ್ಕೈಡೆಕ್, ಟನಲ್ ರಸ್ತೆ ಮಾತ್ರವಲ್ಲದೆ, ಹೊರ ವರ್ತುಲ, ಒಳವರ್ತುಲ ರಸ್ತೆಯಿಂದ ಮತ್ತು ನಗರದ ಕೇಂದ್ರ ಭಾಗದಿಂದ ಹೈಡೆನ್ಸಿಟಿ ಕಾರಿಡಾರ್‌ಗಳ ಮಾರ್ಗವಾಗಿ ನಗರದ ಒಳ ಮತ್ತು ಹೊರಗೆ ಹೋಗುವುದಕ್ಕೆ ಪ್ರತ್ಯೇಕ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. 9 ಸಾವಿರ ಕೋಟಿ ರು. ವೆಚ್ಚದಲ್ಲಿ 40 ಕಿ.ಮೀ. ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ, ರಾಜಕಾಲುವೆಯ ಬಫರ್‌ನಲ್ಲಿ 3 ಸಾವಿರ ಕೋಟಿ ರು. ವೆಚ್ಚದಲ್ಲಿ 300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಹಾಗೂ 6 ಸಾವಿರ ಕೋಟಿ ರು. ವೆಚ್ಚದಲ್ಲಿ ನಗರದ ಪ್ರಮುಖ ರಸ್ತೆಗಳನ್ನು ವೈಟ್‌ಟ್ಯಾಪಿಂಗ್ ಮಾಡಲಾಗುತ್ತಿದೆ. ಬೆಂಗಳೂರಿನ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸುವುದು, ಸಂಪರ್ಕ, ಸುರಕ್ಷತೆ ಮತ್ತು ಸುಸ್ತಿರತೆ ಹೆಚ್ಚಿಸುವ ಉದ್ದೇಶದಿಂದ ನಗರದ 118 ರಸ್ತೆಗಳನ್ನು ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಬಜೆಟ್‌ನಲ್ಲಿ 694 ಕೋಟಿ ರು. ಮೀಸಲಿಡಲಾಗಿದೆ. ಜತೆಗೆ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ, ಕಸ ವಿಲೇವಾರಿಗೆ ಗುತ್ತಿಗೆ ಆಹ್ವಾನಿಸುವುದಕ್ಕೆ ಸಂಪುಟ ಅನುಮೋದನೆ ನೀಡಿದೆ. ಹೊಸದಾಗಿ ಟೆಂಡರ್ ಆಹ್ವಾನಿಸಲಾಗುತ್ತಿದೆ. ಹೀಗೆ, ಬೆಂಗಳೂರಿನ ನಾಗರಿಕರಿಗೆ ಅತ್ಯಗತ್ಯವಾಗಿರುವ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಗ್ರೇಟರ್ ಬೆಂಗಳೂರಿನಿಂದ ಯಾರಿಗೆ ಲಾಭ?
ಸದ್ಯ ಬಿಬಿಎಂಪಿಯಲ್ಲಿ 225 ವಾರ್ಡ್‌ಗಳಿವೆ. ಪ್ರತಿ ವಾರ್ಡ್‌ನ ಸಮಸ್ಯೆಯನ್ನು ಪಾಲಿಕೆಯ ಮಾಸಿಕ ಸಭೆಯಲ್ಲಿ ಸದಸ್ಯರು ಚರ್ಚಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಸಾಕಷ್ಟು ಜನ ಹೇಳಿದ್ದಾರೆ. ಗ್ರೇಟರ್ ಬೆಂಗಳೂರು ಅಧಿನಿಯಮದಡಿ ಸಣ್ಣ ಸಣ್ಣ ಪಾಲಿಕೆ ರಚನೆ ಮಾಡಲಾಗುವುದು. ಪ್ರತಿ ಪಾಲಿಕೆಯಲ್ಲಿ 100 ರಿಂದ 150 ವಾರ್ಡ್ ಬರಲಿವೆ. ವಾರ್ಡ್ ವ್ಯಾಪ್ತಿಯೂ ಕಡಿಮೆಯಾಗಲಿದೆ. ಆ ವಾರ್ಡ್‌ನ ಸದಸ್ಯರು ತಮ್ಮ ವಾರ್ಡ್‌ನ ಸಮಸ್ಯೆ ಕುರಿತು ಚರ್ಚೆ ನಡೆಸಿ ಪರಿಹಾರ ಮಾಡಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ.
ಬಿಬಿಎಂಪಿ ವಿಭಜಿಸಿದರೆ ‘ಬೆಂಗಳೂರು ಬ್ರ್ಯಾಂಡ್’ಗೆ ಧಕ್ಕೆ ಆಗಲ್ಲವೇ?
ಅಂತಾರಾಷ್ಟ್ರೀಯಮಟ್ಟದಲ್ಲಿ ಬೆಂಗಳೂರಿನ ಬ್ರ್ಯಾಂಡ್ ಮೌಲ್ಯ ಕಡಿಮೆ ಆಗಬಾರದು ಎಂಬ ಉದ್ದೇಶದಿಂದಲೇ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲಾಗಿದೆ. ಈ ಪ್ರಾಧಿಕಾರದ ಮೂಲಕ ನಗರದ ಪಾಲಿಕೆಗಳು, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಸಿಎಲ್, ಬಿಎಂಟಿಸಿ, ಬಿಡಿಎ, ಪೊಲೀಸ್, ಬೆಸ್ಕಾಂ ಸೇರಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲಾಗುವುದು. ಇದರಿಂದ ಮೂಲ ಸೌಕರ್ಯ ಸೇರಿ ಸಾಕಷ್ಟು ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವುದಕ್ಕೆ ಸಹಕಾರಿಯಾಗಲಿದೆ. ಆಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಬ್ರ್ಯಾಂಡ್ ಇನ್ನಷ್ಟು ಹೆಚ್ಚಾಗಲಿದೆ.
ರಾಜಧಾನಿಯ ರಸ್ತೆ ಗುಂಡಿ ಸಮಸ್ಯೆಗೆ ಯಾವಾಗ ಮುಕ್ತಿ?
ನಗರದ ಬಹುತೇಕ ಮುಖ್ಯ ರಸ್ತೆಗಳಿಗೆ ಹಲವು ವರ್ಷದಿಂದ ಅಭಿವೃದ್ಧಿ ಮಾಡಿಲ್ಲ. ಈ ವರ್ಷ ಹಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದೇವೆ. ಅಲ್ಲದೆ 1700 ಕೋಟಿ ರು. ವೆಚ್ಚದಲ್ಲಿ 150 ಕಿ.ಮೀ ಉದ್ದದ 97 ರಸ್ತೆಯನ್ನು ವೈಟ್‌ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿ ಪಡೆಸಲಾಗುತ್ತಿದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಮುಂದಿನ 30 ವರ್ಷ ಈ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ಇರುವುದಿಲ್ಲ. ಮುಂದಿನ ಹಂತದಲ್ಲಿ 450 ಕಿ.ಮೀ. ಉದ್ದದ ರಸ್ತೆಯನ್ನು ವೈಟ್ ಟ್ಯಾಪಿಂಗ್ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಆಗ ರಸ್ತೆಯಲ್ಲಿ ಗುಂಡಿ ಸಮಸ್ಯೆ ಇರುವುದಿಲ್ಲ.