ಬೆಂಗಳೂರು ನಗರದಲ್ಲಿ ವಿಜಯದಶಮಿ ಅದ್ಧೂರಿ ಆಚರಣೆ

KannadaprabhaNewsNetwork |  
Published : Oct 03, 2025, 02:00 AM ISTUpdated : Oct 03, 2025, 03:27 AM IST
Vijayadashami

ಸಾರಾಂಶ

ನವರಾತ್ರಿಯ ಕೊನೆ ದಿನ ವಿಜಯದಶಮಿಯನ್ನು ಸಿಲಿಕಾನ್‌ ಸಿಟಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಬನ್ನಿ ವಿನಿಮಯ, ಅದ್ಧೂರಿ ದುರ್ಗಾದೇವಿ ವಿಸರ್ಜನಾ ಮೆರವಣಿಗೆ ಮೂಲಕ ದಸರಾ ಸಂಪನ್ನಗೊಂಡಿತು.

 ಬೆಂಗಳೂರು :  ನವರಾತ್ರಿಯ ಕೊನೆ ದಿನ ವಿಜಯದಶಮಿಯನ್ನು ಸಿಲಿಕಾನ್‌ ಸಿಟಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಬನ್ನಿ ವಿನಿಮಯ, ಅದ್ಧೂರಿ ದುರ್ಗಾದೇವಿ ವಿಸರ್ಜನಾ ಮೆರವಣಿಗೆ ಮೂಲಕ ದಸರಾ ಸಂಪನ್ನಗೊಂಡಿತು.

ಮೆಜೆಸ್ಟಿಕ್‌ನ ಅಣ್ಣಮ್ಮ ದೇವಿ ದೇವಸ್ಥಾನ, ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಸ್ಥಾನ, ಮತ್ತಿಕೆರೆಯ ಚೌಡೇಶ್ವರಿ ದೇವಾಲಯ, ಗಂಗಮ್ಮ ದೇವಾಲಯ, ಶೇಷಾದ್ರಿಪುರದ ಮಹಾಲಕ್ಷ್ಮೀ ದೇವಾಲಯ, ಬಂಡಿಕಾಳಮ್ಮ ದೇವಸ್ಥಾನ, ಶಂಕರ ಮಠದ ಶಾರದಾ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದವು. ಲಲಿತಾ ಸಹಸ್ರನಾಮ, ಹೋಮ ಹವನಾದಿಗಳು, ಸಂಜೆ ಶಮೀ ಪೂಜೆ ಜರುಗಿದವು.

ಗುರುವಾರ ನಸುಕಿನಿಂದಲೇ ಎಲ್ಲ ದೇವಸ್ಥಾನಗಳಲ್ಲೂ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಹಣ್ಣುಕಾಯಿ ಫಲಾರ್ಪಣೆ ಮಾಡಿ ಪ್ರಾರ್ಥಿಸಿದ ಹಿರಿಯರು ದೇವಸ್ಥಾನದಿಂದ ಬನ್ನಿ ಪಡೆದು ಮನೆಗೊಯ್ದು ಪೂಜಿಸಿ ಕಿರಿಯರಿಗೆ ನೀಡಿ ಹಾರೈಸಿದರು.

ಬನಶಂಕರಿ ದೇವಸ್ಥಾನದಲ್ಲಿ ಬುಧವಾರ ದೇವಿಗೆ ಅಂಬಾರಿ ಅಲಂಕಾರ ಮಾಡಲಾಗಿತ್ತು. ನವಚಂಡಿಕಾ ಹೋಮ ನಡೆಯಿತು. ಶಾಕಾಂಬರಿ ಅಮ್ಮನವರಿಗೆ ರಾಜಬೀದಿ ಉತ್ಸವ ದೇವಾಲಯದ ಆವರಣದಲ್ಲಿ ಶಮೀ ಪೂಜೆ ನಡೆಯಿತು. ಚಂಡೆವಾದ್ಯ, ಡೊಳ್ಳು ಕುಣಿತ, ನಾದಸ್ವರದ ಸಮೇತ ಅದ್ಧೂರಿಯಾಗಿ ಮೆರವಣಿಗೆ ಜರುಗಿದವು.

ದಶಮಿ ಪ್ರಯುಕ್ತ ನಗರದ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದರು. ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಾಲಯದಲ್ಲೂ ಅಮ್ಮವರಿಗೆ ವಿಶೇಷ ಪೂಜೆಗಳು ನಡೆದವು.

ಅದರಂತೆ ವೈಟ್‌ಫೀಲ್ಡ್, ಎಚ್‌.ಎಸ್. ಆರ್.ಲೇಔಟ್, ಕೋರಮಂಗಲ, ಯಶವಂತಪುರ, ಜಯಮಹಲ್, ಜಾಲಹಳ್ಳಿ ಸೇರಿ ರಾಜಧಾನಿಯೆಲ್ಲೆಡೆ ಪ್ರತಿಷ್ಠಾಪಿಸಿದ್ದ ದುರ್ಗಾಮೂರ್ತಿಗಳ ವಿಸರ್ಜನೆ ನಡೆಯಿತು. ಹಲಸೂರು ಕೆರೆ ಸೇರಿ ಮತ್ತಿತರ ಕಡೆಗಳಲ್ಲಿ ದೇವಿಯನ್ನು ಭಕ್ತಿ ಪೂರ್ವಕವಾಗಿ ವಿಸರ್ಜಿಸಲಾಯಿತು.

ಜೆ.ಸಿ. ನಗರದಲ್ಲಿ ಕಳೆಗಟ್ಟಿದ ಉತ್ಸವ:

ಪ್ರತಿ ವರ್ಷದಂತೆ ಈ ಬಾರಿಯೂ ಜೆ.ಸಿ. ನಗರದಲ್ಲಿ ದಸರಾ ಉತ್ಸವ ಸಂಭ್ರಮ ಕಳೆಗಟ್ಟಿತ್ತು. ದಶಮಿಯ ಭರ್ಜರಿ ಮೆರವಣಿಗೆ ಮೂಲಕ ಒಂಬತ್ತು ದಿನಗಳ ಅದ್ಧೂರಿ ಕಾರ್ಯಕ್ರಮಕ್ಕೆ ತೆರೆಬಿದ್ದಿತು. ಮಾರಪ್ಪ ಬ್ಲಾಕ್, ಮುನಿರೆಡ್ಡಿ ಪಾಳ್ಯ, ತಿಮ್ಮಯ್ಯ ಗಾರ್ಡನ್, ಆರ್.ಟಿ. ನಗರ ಸೇರಿ ವಿವಿಧೆಡೆಯ ಯುವಕ ಸಂಘಗಳು ಪ್ರತಿಷ್ಠಾಪಿಸಿದ್ದ ದುರ್ಗೆ, ಭುವನೇಶ್ವರಿ ದೇವಿ, ಶ್ರೀರಾಮ, ಆಂಜನೇಯ, ಮಹಾಗಣಪತಿ ಮೆರವಣಿಗೆಗಳು ಅದ್ಧೂರಿಯಾಗಿ ನಡೆದವು. ರಾತ್ರಿ ಮುಖ್ಯ ರಸ್ತೆಯಲ್ಲಿ ನಡೆದ ಅದ್ಧೂರಿ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಪ್ರಸಾದ ವಿತರಣೆ ನಡೆಯಿತು.

PREV
Read more Articles on

Recommended Stories

ಬೆಂಗಳೂರು ನಗರದೆಲ್ಲೆಡೆ ಗಾಂಧೀಜಿ ಜಯಂತಿ ಆಚರಣೆ: ಅಹಿಂಸಾ ತತ್ವ ಮೆಲುಕು
ಬೆಂಗಳೂರು ನಗರದಲ್ಲಿ ನಾಳೆಯಿಂದ ಜಾತಿ ಗಣತಿ ಆರಂಭ