ಕನ್ನಡಿಗರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ ಯಾರಿಗೆ ಕೊಟ್ಟರೆ ಸರಿ!

ಸಾರಾಂಶ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗುತ್ತಿದ್ದಂತೆ, ಅದರ ಸುತ್ತಲೂ ವಾಗ್ವಾದಗಳೂ ಆರಂಭವಾಗುತ್ತವೆ. ಸಾಹಿತ್ಯ ಸಮ್ಮೇಳನ ಸಾಹಿತಿಗಳ ಸಮ್ಮೇಳನ ಅಲ್ಲ ಎನ್ನುವ ಹೇಳಿಕೆಯ ಬಗ್ಗೆ ಕಳೆದ ವರ್ಷ ಚರ್ಚೆಗಳಾಗಿದ್ದವು. ಅದು ಕನ್ನಡಿಗರ ಸಮ್ಮೇಳನ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ವಾದಿಸಿದ್ದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗುತ್ತಿದ್ದಂತೆ, ಅದರ ಸುತ್ತಲೂ ವಾಗ್ವಾದಗಳೂ ಆರಂಭವಾಗುತ್ತವೆ. ಸಾಹಿತ್ಯ ಸಮ್ಮೇಳನ ಸಾಹಿತಿಗಳ ಸಮ್ಮೇಳನ ಅಲ್ಲ ಎನ್ನುವ ಹೇಳಿಕೆಯ ಬಗ್ಗೆ ಕಳೆದ ವರ್ಷ ಚರ್ಚೆಗಳಾಗಿದ್ದವು. ಅದು ಕನ್ನಡಿಗರ ಸಮ್ಮೇಳನ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ವಾದಿಸಿದ್ದರು.

ಈ ವರ್ಷ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಸಾಹಿತಿಗಳೇ ಏಕಾಗಬೇಕು? ಕನ್ನಡಕ್ಕೆ ಕೊಡುಗೆ ನೀಡಿದವರು ಬೇರೆ ಬೇರೆ ಕ್ಷೇತ್ರಗಳಲ್ಲೂ ಇದ್ದಾರೆ. ಅವರನ್ನು ಯಾಕೆ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬಾರದು ಎಂಬ ಪ್ರಸ್ತಾಪ ಮುಂದಿಟ್ಟರು.

ಇದೀಗ ಚರ್ಚೆಯ ವಸ್ತು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಾದರೂ ಸಾಹಿತಿಗಳಿಗೆ ಗೌರವ ಸಿಗಬೇಕು. ಅಲ್ಲಿ ಸಾಹಿತ್ಯಕ್ಕೇ ಮೊದಲ ಮಣೆ ಇರಬೇಕು. ಅಲ್ಲಿಯೂ ಬೇರೆಯವರು ಬಂದರೆ ಸಾಹಿತ್ಯ ಹಿನ್ನೆಲೆಗೆ ಸರಿಯುತ್ತದೆ ಎಂಬ ವಾದ ಸಾಹಿತ್ಯ ವಲಯದಿಂದ ಕೇಳಿಬರುತ್ತಿದೆ. ಅವರಲ್ಲೇ ಕೆಲವರು, ಹಾಗೇನೂ ಇಲ್ಲ, ಸಾಹಿತ್ಯೇತರಿಗೂ ಕೊಡಬಹುದು ಎಂಬ ವಾದವನ್ನೂ ಪುರಸ್ಕರಿಸುತ್ತಿದ್ದಾರೆ.

ಸಾಹಿತ್ಯ ಸಮ್ಮೇ‍ಳನಕ್ಕೆ ರಾಜಕಾರಣಿಗಳನ್ನು ಕರೆಯಬಾರದು. ಕರೆದರೂ ವೇದಿಕೆ ಏರಲು ಬಿಡಬಾರದು. ಅವರು ಕೆಳಗಿನ ಸಾಲಲ್ಲಿ ಕುಳಿತು ಭಾಷಣ ಕೇಳಿ ಹೋಗಬೇಕು ಅನ್ನುವ ನಿಷ್ಠುರತೆಯನ್ನು ಸಾಹಿತ್ಯ ಸಮ್ಮೇ‍ಳನ ಪ್ರದರ್ಶಿಸಿದ್ದೂ ಇದೆ. ಅದನ್ನು ಒಪ್ಪಿಕೊಂಡು ರಾಜಕಾರಣಿಗಳೂ ಸಾಹಿತ್ಯ ಸಮ್ಮೇಳನದಲ್ಲಿ ಪ್ರೇಕ್ಷಕರ ಸಾಲಲ್ಲಿ ಕುಳಿತು ಭಾಷಣ ಕೇಳಿ ಹೋದ ಉದಾಹರಣೆಗಳೂ ನಮ್ಮ ಕಣ್ಣಮುಂದಿವೆ. ಅದೇ ಸಾಹಿತ್ಯ ಸಮ್ಮೇಳನದಲ್ಲಿ ಈ ಪಕ್ಷಕ್ಕೆ ಮತ ಹಾಕಬೇಡಿ ಅಂತ ಘೋಷಿಸಿ ವಿವಾದಕ್ಕೀಡಾದ ಪರಿಷತ್ತಿನ ಅಧ್ಯಕ್ಷರೂ ಇದ್ದಾರೆ.

ಸಾಹಿತ್ಯ ಸಮ್ಮೇ‍ಳನಕ್ಕೆ ಜನರು ಬರುವುದು ಭಾಷಣ ಕೇಳುವುದಕ್ಕೆ ಎಂಬ ನಂಬಿಕೆ ಸಾಹಿತಿಗಳಲ್ಲಿದೆ. ಅದನ್ನು ಜನ ಸುಳ್ಳು ಮಾಡಿಲ್ಲ. ಗಂಭೀರವಾದ ಭಾಷಣಗಳಲ್ಲೂ, ನಾಡು, ನುಡಿ, ನೆಲ, ಜಲದ ಕುರಿತು ಸಾಹಿತಿಗಳ ವಾದಗಳನ್ನು, ಕನ್ನಡವೇ ಸತ್ಯ ಎಂಬ ಘೋಷಣೆಯನ್ನು ರೈತಾಪಿ ಮಂದಿ ಕಿವಿತುಂಬಿಸಿಕೊಂಡು ಜಯಘೋಷ ಕೂಗಿದ್ದಾರೆ. ತಮ್ಮ ಮೆಚ್ಚಿನ ಲೇಖಕರು ಬಂದಾಗ ಸಂತೋಷಪಟ್ಟಿದ್ದಾರೆ.

ಸಾಹಿತ್ಯಕ್ಕೂ ಜನಪ್ರಿಯತೆಗೂ ಸಂಬಂಧವಿಲ್ಲ ಅನ್ನುವುದು ಅನೇಕ ಸಲ ಸಾಬೀತಾಗಿದೆ. ಸಂಶೋಧಕರಾದ, ವಿದ್ವಾಂಸರಾದ ಡಿಎಲ್ಎನ್, ಎಎನ್ ಉಪಾಧ್ಯಾಯ, ಎಲ್ ಬಸವರಾಜು, ವಿಮರ್ಶಕರಾದ ಎಲ್ ಎಸ್ ಶೇಷಗಿರಿ ರಾವ್, ಕವಿಗಳೂ ಕಾದಂಬರಿಕಾರರಷ್ಟೇ ಸಮ್ಮೇಳನಕ್ಕೆ ಬಂದವರಿಗೆ ಪ್ರೀತಿಗೆ ಪಾತ್ರರಾಗಿದ್ದಾರೆ. ಮೈಸೂರಿನ ಸಾಹಿತಿ ಬೀದರಿನಲ್ಲಿ, ಕಲಬುರ್ಗಿಯ ಕವಿ ಮಂಗಳೂರಿನಲ್ಲಿ, ಹಾಸನದ ಲೇಖಕ ಕೋಲಾರದಲ್ಲಿ- ಹೀಗೆ ದೇಶಕಾಲಗಳನ್ನು ಮೀರಿ ಸಾಹಿತಿಗಳು ಗೌರವ ಪ್ರೀತಿ ಪಡೆದಿದ್ದಾರೆ.

ಸಾಹಿತ್ಯ ಸಮ್ಮೇಳನ ಸಾಹಿತಿಗಳ ಸಮ್ಮೇ‍ಳನ ಅಲ್ಲ, ಕನ್ನಡಿಗರ ಸಮ್ಮೇ‍ಳನ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಎಂಥಾ ಕನ್ನಡಿಗರ ಸಮ್ಮೇಳನ? ಓದು ಬರಹದಲ್ಲಿ ಆಸಕ್ತಿಯುಳ್ಳ, ಸಾಹಿತ್ಯ ಸಂಗೀತ ಕಲೆಗಳ ಬಗ್ಗೆ ಪ್ರೀತಿಯುಳ್ಳ, ಕನ್ನಡ ಜನಪದದ ಬಗ್ಗೆ, ನಾಡಿನ ಬಗ್ಗೆ, ನುಡಿಯ ಬಗ್ಗೆ ಮೋಹವುಳ್ಳ ಕನ್ನಡಿಗರ ಸಮ್ಮೇಳನ. ಅಂಥ ಕನ್ನಡಿಗರು ಯಾರ ಮಾತನ್ನು ಕೇಳಬಯಸುತ್ತಾರೆ? ತನ್ನ ಅರಿವನ್ನು ಹೆಚ್ಚಿಸುವ, ಭಾಷೆಯ ಅಭಿರುಚಿ ಬಲ್ಲ, ಸಮಾಜದ ತಲ್ಲಣಗಳಿಗೆ ಕನ್ನಡಿ ಹಿಡಿಯುವ, ನೊಂದವರಿಗೆ ದನಿಯಾಗುವ, ಅಸಮಾನತೆಯ ವಿರುದ್ಧ ಮಾತಾಡುವ, ಪ್ರಭುತ್ವದ ಸರ್ವಾಧಿಕಾರದ ಬಗ್ಗೆ ಸಿಟ್ಟಾಗುವ, ಕಂದಾಚಾರಗಳನ್ನು ಖಂಡಿಸುವ ಸಾಹಿತಿ ಮಾತ್ರ ಅಂಥ ಸಮೂಹವನ್ನು ಪ್ರತಿನಿಧಿಸಬಲ್ಲ.

ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶ ಏನು ಅನ್ನುವುದು ಸಾಹಿತ್ಯ ಪರಿಷತ್ತಿಗೆ ಚೆನ್ನಾಗಿ ಗೊತ್ತಿದೆ. ಅದು ಈಗಾಗಲೇ ಪರಿಷತ್ತಿನ ಕಡತದಲ್ಲೂ ದಾಖಲಾಗಿದೆ. ಅದನ್ನೇ ಇಲ್ಲಿ ಕೊಡುವುದಾದರೆ - ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ದಿನಾಂಕ 5-5-1915ರಲ್ಲಿ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ, ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತ ಎಂದು 1914ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಸಂಪದಭ್ಯುದಯ ಸಮಾಜ ತನ್ನ ವಾರ್ಷಿಕ ಅಧಿವೇಶನದಲ್ಲಿ ಕೈಗೊಂಡ ಮಹತ್ವದ ನಿರ್ಧಾರ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಕಾರಣವಾಯ್ತು.

ಇದು ಕನ್ನಡಿಗರ ಸಂಸ್ಥೆಯಷ್ಟೇ ಅಲ್ಲ, ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆ. ಕನ್ನಡ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ ಇರುವ ಸ್ವತಂತ್ರಾಧಿಕಾರವುಳ್ಳ ಪರಿಷತ್ತು.

ಇದನ್ನು ಗಮನದಲ್ಲಿಟ್ಟುಕೊಂಡು ಸಮ್ಮೇಳನದ ಅಧ್ಯಕ್ಷರು ಯಾರಾಗಬೇಕು ಅನ್ನುವುದನ್ನು ತೀರ್ಮಾನಿಸಬಹುದು.

Share this article