ಸಿದ್ದರಾಮಯ್ಯ ಯಾವಾಗಲೂ ಮೇಜು ಕುಟ್ಟೋದೇಕೆ?! ಪ್ರತಿಪಕ್ಷಗಳ ನಾಯಕರು ಹೇಳಿದ್ದನ್ನಷ್ಟೇ ತೋರಿಸ್ತೀರಿ ಎನ್ನೋ ಸಿಎಂ

ಸಾರಾಂಶ

‘ನಾನು ಕುಟ್ತಾಲೇ ಇರ್ತೀನಿ. ಈಗಲೂ ಕುಟ್ತೀನಿ ನೋಡಿ, ಕುಟ್ತಾಲೇ ಇರೋದು ಅಭ್ಯಾಸ ಅಷ್ಟೇ....’

ಹೀಗೆಂದು ತಮ್ಮ ಮುಂದಿದ್ದ ಮೇಜನ್ನು ಮೂರು ಬಾರಿ ಜೋರಾಗಿ ಕುಟ್ಟಿದವರು ನಮ್ಮ ಖಡಕ್‌ ಮುಖ್ಯಮಂತ್ರಿ ಸಿದ್ದರಾಮಯ್ಯ.

‘ನಾನು ಕುಟ್ತಾಲೇ ಇರ್ತೀನಿ. ಈಗಲೂ ಕುಟ್ತೀನಿ ನೋಡಿ, ಕುಟ್ತಾಲೇ ಇರೋದು ಅಭ್ಯಾಸ ಅಷ್ಟೇ....’

ಹೀಗೆಂದು ತಮ್ಮ ಮುಂದಿದ್ದ ಮೇಜನ್ನು ಮೂರು ಬಾರಿ ಜೋರಾಗಿ ಕುಟ್ಟಿದವರು ನಮ್ಮ ಖಡಕ್‌ ಮುಖ್ಯಮಂತ್ರಿ ಸಿದ್ದರಾಮಯ್ಯ.

ಇಷ್ಟಕ್ಕೂ ಸಿದ್ದರಾಮಯ್ಯ ಮೇಜು ಕುಟ್ಟಿದ್ಯಾಕೆ, ಮೇಜು ಕುಟ್ಟಿದ್ದರಿಂದ ಯಾರಿಗೇನಾದರೂ ತೊಂದರೆಯಾಯಿತೇ. ಇಂತಹ ಸಮಜಾಯಿಷಿ ಕೊಡೋ ಪ್ರಸಂಗ ಸಿದ್ದರಾಮಯ್ಯ ಅವರಿಗೆ ಯಾಕೆ ಬಂತು ಎಂಬುದೇ ಸ್ವಾರಸ್ಯಕರ ಸಂಗತಿ.

ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಭರ್ಜರಿ ಜಯ ಗಳಿಸಿದ್ದ ಉತ್ಸಾಹದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಮಾಧ್ಯಮದವರು ಬರೀ ಅವರು (ಪ್ರತಿಪಕ್ಷಗಳು) ಹೇಳಿದ್ದನ್ನೆಲ್ಲಾ ತೋರಿಸ್ತೀರಿ. ಸತ್ಯ ತೋರಿಸಲ್ಲ ಎಂದು ತುಸು ಜೋರಾಗಿಯೇ ಮೇಜು ಕುಟ್ಟಿ ಬೇಸರ ತೋಡಿಕೊಂಡರು.

ಈ ವೇಳೆ ಪತ್ರಕರ್ತರೊಬ್ಬರಿಂದ ‘ಏನು ಸರ್‌ ಇತ್ತೀಚೆಗೆ ಮೀಡಿಯಾ ಅವರನ್ನು ಚಾರ್ಜ್‌ ಮಾಡುತ್ತಿದ್ದೀರಿ. ಬೈಯ್ಯುತ್ತೀರಿ, ಗದರುತ್ತಿದ್ದೀರಿ’ ಎಂಬ ಪ್ರಶ್ನೆ ತೂರಿ ಬಂತು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು, ‘ನಾನು ಗದರೂ ಇಲ್ಲ ಬೈದೂ ಇಲ್ಲ. ಕಾಂಗ್ರೆಸ್‌ ವಿಚಾರಗಳ ಬಗ್ಗೆ ಸುಳ್ಳು ಹೇಳಿದಾಗ ಕೇಳಿದ್ದೇನೆ ಅಷ್ಟೇ’ ಎಂದರು.

ಆದರೆ ಈ ಮಾತಿನಿಂದ ಸಮಾಧಾನಗೊಳ್ಳದ ಪತ್ರಕರ್ತರೊಬ್ಬರು, ಇಲ್ಲ ಸಾರ್‌, ಮೇಜು ಕುಟ್ಟಿ ಗದರಿದಿರಿ ಎನ್ನುತ್ತಿದ್ದಂತೆ, ‘ನಾನು ಟೇಬಲ್‌ ಯಾವಾಗಲೂ ಕುಟ್ತೀನಿ. ಈಗಲೂ ಕುಟ್ತೀನಿ ನೋಡಿ ಎಂದು ಮೂರು ಬಾರಿ ಕುಟ್ಟಿದರು. ಅಷ್ಟೇ ಯಾಕೆ ಅಸೆಂಬ್ಲಿಯಲ್ಲಿ ಕುಟ್ತಿರಿಲಲ್ಲವೇ? ಚುನಾವಣಾ ಭಾಷಣ ಮಾಡುವಾಗ ಕುಟ್ತಿರಲಿಲ್ಲವೇ? ನಾನು ಕುಟ್ತಾಲೇ ಇರ್ತೀನಿ, ಅದು ಅಭ್ಯಾಸ ಅಷ್ಟೇ’ ಎಂದು ಸಮಜಾಯಿಷಿ ನೀಡಿದರು. ಸಿದ್ದರಾಮಯ್ಯ ಅವರ ಕುಟ್ಟುವಿಕೆ ನೋಡಿ ಕೋಪದಿಂದ ಪ್ರಶ್ನೆ ಕೇಳಿದ ಪತ್ರಕರ್ತರಿಗೂ ನಗು ತಡೆಯಲಾಗಲಿಲ್ಲ.

ಎಕ್ಸಿಟ್‌ ಪೋಲ್‌... ಎಕ್ಸಾಕ್ಟ್‌ ಪೋಲ್‌..!

ಅದು ಬೈ ಎಲೆಕ್ಷನ್‌ ಆಗಿರ್ಲಿ, ಜನರಲ್‌ ಎಲೆಕ್ಷನ್‌ ಆಗಿರ್ಲಿ, ಎಲೆಕ್ಷನ್‌ ಬಂದಾಗೆಲ್ಲಾ ಎಕ್ಸಿಟ್‌ ಪೋಲ್‌ ಒಪಿನಿಯನ್‌ ಭಾರಿ ಸುದ್ದಿಗೆ ಗ್ರಾಸವಾಗೋದ್ರಲ್ಲಿ ದೂಸ್ರಾ ಮಾತಿಲ್ಲ.

ಒಂದರ್ಥದಲ್ಲಿ ಎಲೆಕ್ಷನ್‌ಗಳಿಗೆ ರಂಗು ತುಂಬೋದೇ ಈ ಎಕ್ಸಿಟ್‌ ಪೋಲ್‌ ಅನ್ನೋದು ಸುಳ್ಳಲ್ಲ. ಆದ್ರೆ ಅನೇಕ ಬಾರಿ ಈ ಚುನಾವಣೋತ್ತರ ಸಮೀಕ್ಷೆ ಫಲಿತಾಂಶಗಳನ್ನು ರಾಜಕೀಯ ಪಕ್ಷಗಳ ನೇತಾರರು ಅನುಕೂಲಸಿಂಧು ಎಂಬಂತೆ ತಮ್ಮ ಮೂಗಿನ ನೇರಕ್ಕೇ ವಿಶ್ಲೇಷಣೆ ಮಾಡ್ತಾರೆ,

ಹಂಗಾದಾಗ ಈ ಎಕ್ಸಿಟ್‌ ಪೋಲ್‌ಗಳದ್ದೇ ಭಾರಿ ಸದ್ದಾಗ್ತದೆ, ಈ ಚುನಾವಣಾ ಫಲಿತಾಂಶ ಮುಂದಿಟ್ಟುಕೊಂಡೇ ಆಡಳಿತ, ವಿರೋಧ ಪಕ್ಷಗಳವರೆಲ್ಲರೂ ಪರಸ್ಪರ ವಾಕ್ಸಮರಕ್ಕೂ ಇಳಿದು ತಮ್ಮ ಗೋಲ್‌ ತಲುಪೋ ಹವಣಿಕೆಯಲ್ಲಿರ್ತಾರೆ.

ಮೊನ್ನೆ ಬೈ ಎಲೆಕ್ಷನ್‌ ಫಲಿತಾಂಶಕ್ಕೂ ಮುನ್ನ ಕಲಬುರಗಿಗೆ ಬಂದಿದ್ದ ಮೇಲ್ಮನೆ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರು ರಾಜ್ಯದ ಮೂರು ಉಪ ಚುನಾವಣೆಯಲ್ಲಿ ಕಮಲ ಅರಳೋದು ಗ್ಯಾರಂಟಿ ಅಂದು ಬಿಟ್ರು.

ಅವ್ರ ಬಾಯಿಂದ್‌ ಈ ಹೇಳಿಕೆ ಹೊರಬೀಳ್ತಿದ್ಹಂಗೇ ಸುದ್ದಿಗಾರರೊಬ್ರು ಅಲ್ರಿ, ಎಕ್ಸಿಟ್‌ ಪೋಲ್‌ ಒಪಿನಿಯನ್‌ ಹೀಂಗದಲ್ರಿ ಅಂತ ಅವರ ಹೇಳಿಕೆಗೆ ವ್ಯತಿರಿಕ್ತವಾದಂತಹ ಅಭಿಮತ ಹೊರಹಾಕಿದ್ರು. ಮಹಾರಾಷ್ಟ್ರ ಎನ್‌ಡಿಎ ಪರ ಅಂತೀರಿ, ಹರಿಯಾಣಾದಾಗ ಆದ್ಹಂಗ ಹೈರಾಣ ಆದ್ರ ಏನ್ಮಾಡ್ತೀರಿ? ಅಂದಾಕ್ಷಣಕ್ಕೆ ನಾರಾಯಣಸ್ವಾಮಿಯವರು ಆ ಪ್ರಶ್ನೆಗೆ ಅಕ್ಷರಶಃ ತಬ್ಬಿಬಾದ್ರೂ ಅದನ್ನ ತೊರಗೋಡದೆ ತಮ್ಮ ಮಾತು ಹಂಗೇ ಮುಂದುವರಿಸಿದ್ರು.

ಅಲ್ರಿ, ನೀವು ಹೇಳೋದು ಎಕ್ಸಿಟ್‌ ಪೋಲ್‌ ಫಲಿತಾಂಶ, ಅಲ್ಲಿನ ಒಪಿನಿಯನ್‌ಗಳೇನೇ ಇರ್ಲಿ ಬಿಡ್ರಿ, ಎಕ್ಸಿಟ್‌ ಪೋಲ್‌ ಬೇರೆ, ಎಕ್ಸಾಕ್ಟ್‌ ಪೋಲ್‌ ಬೇರೆ. ನಾನು ಹೇಳ್ತಿರೋದು ಎಕ್ಸಾಕ್ಟ್‌ ಪೋಲ್‌, ಅಂದ್ರ ಮತ ಎಣಿಕೆ ದಿನದ ಫಲಿತಾಂಶ. ಅದೇ ಅಲ್ವೇ ಎಕ್ಸಾಕ್ಟ್‌ ಪೋಲ್‌. ಅದನ್ನು ನೋಡುವ್ರಿಂತೆ, ಆಗ ನನ್ನ ಈ ಹೇಳಿಕೆಗೆ ಏನಂತೀರೋ ನೋಡೋಣ.. ಎಂದು ಪೋಲ್‌ ಪ್ರಾಸ್ಪೆಕ್ಟಸ್‌ ಕುರಿತಾದ ಗರ್ಮಾಗರಂ ಚರ್ಚೆಗೆ ಹಾಗೂ ಹೀಗೂ ತೆರೆ ಎಳೆದರನ್ನಿ.

ಈಗ ಎಕ್ಸಾಕ್ಟ್‌ ಪೋಲ್‌ ಹೊರಬಿದ್ದಾಗಿದೆ, ಹಂಸಕ್ಷೀರ ನ್ಯಾಯದಂತೆ ಎಲ್ಲವೂ ನಿರ್ಧಾರವಾಗಿಬಿಟ್ಟಿದೆ.

ವಿಪಕ್ಷ ನಾಯಕ ನಾರಾಯಣಸ್ವಾಮಿಗಳ ಸುದ್ದಿಗೋಷ್ಠಿ ಅಟೆಂಡ್‌ ಮಾಡಿ ಹೆಡ್‌ಲೈನ್‌ ಸುದ್ದಿ ಮಾಡಿರೋ ಸುದ್ದಿಗಾರರಂತೂ ಛಲ ಬಿಡದಂತೆ ಎಕ್ಸಿಟ್‌ ಪೋಲ್‌, ಎಕ್ಸಾಕ್ಟ್‌ ಪೋಲ್‌ ಸುತ್ತಲೇ ಗಿರಕಿ ಹೊಡೆಯುತ್ತಿದ್ದಾರನ್ನಿ.

ನಮ್ಮ ನಾಯಕರೆಲ್ಲ ವೆಸ್ಟು ಕಣ್ರೀ, ಧೈರ್ಯ ಇಲ್ಲ..

ಬೆಂಗಳೂರಿನ ಪ್ರತಿಷ್ಠಿತ ಚರ್ಚ್‌ನಿಂದ ಹಿಂದಿನ ದಿನ ಪತ್ರಕರ್ತರಿಗೆ ಬುಲಾವ್ ಬಂದಿತ್ತು, ನಮ್ಮ ಭೂಮಿ ಕಬ್ಜಾ ಆಗಿದೆ. ದಾಖಲೆ ಸಮೇತ ಎಲ್ಲವನ್ನೂ ಬಿಚ್ಚಿಡ್ತೀವಿ, ಬನ್ನಿ ಎಂದಿದ್ದರು. ಉಪಚುನಾವಣೆ ಕಾವು ಬೇರೆ, ಒಂದು ಅಲ್ಪಸಂಖ್ಯಾತ ಸಮುದಾಯ ಇನ್ನೊಂದು ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಮಾಡುತ್ತಿರುವ ಆರೋಪವಿದು. ಸುದ್ದಿ ಜೋರಾಗೇ ಸದ್ದು ಮಾಡಲಿದೆ ಎಂದುಕೊಂಡು ಪತ್ರಕರ್ತರು ದಾಂಗುಡಿ ಇಟ್ಟಿದ್ದರು.

ಆದರೆ, ಆಗಿದ್ದೇ ಬೇರೆ/ ಅಲ್ಲಿಗೆ ಹೋಗುತ್ತಿದ್ದಂತೆ ಕಳೆಗುಂದಿದ ಮುಖ ಹೊತ್ತು ಸುದ್ದಿಗೋಷ್ಠಿ ಆಯೋಜಕರು ಕೂತಿದ್ದರು. ಕಾರಣವಿಷ್ಟೇ. ಎರಡೂ ಅಲ್ಪಸಂಖ್ಯಾತ ಸಮುದಾಯದ ಸಚಿವರು ತಮ್ಮ ದೂತರನ್ನು ಅಲ್ಲಿಗೆ ಕಳಿಸಿಕೊಟ್ಟಿದ್ದರು. ಈಗ ಉಪ ಚುನಾವಣೆ ಕಾವು ಜೋರಿದೆ. ಸಿಎಂ ಆಫೀಸಿಂದಲೂ ಹೇಳಿಸಿ ನಿಮ್ಮ ಸಮಸ್ಯೆ ಬಗೆಹರಿಸ್ತಿವಿ, ಸುದ್ದಿಗೋಷ್ಠಿ ಮುಂದೂಡಿ ಎಂದು ಅವರು ಸಂದೇಶ ಹೊತ್ತು ತಂದಿದ್ದರು.

ಸುದ್ದಿಗೋಷ್ಠಿ ನಡೆಸಲಿದ್ದಾತ ಬಂದು, ಹದಿನೈದು ದಿನ ತಡೆದುಕೊಳ್ಳಿ, ನಮ್ಮ ಸಮಸ್ಯೆ ಬಗೆಹರಿದಿದ್ದರೆ ನಿಮಗೆ ಹೇಳಿಕಳಿಸ್ತೀವಿ, ದಯವಿಟ್ಟು ಈಗ ಬೇಡ ಎನ್ನುತ್ತ ಪತ್ರಕರ್ತರೆದುರು ಸ್ಸಾರಿ ಎಂದು ಕೈಮುಗಿದ. ಅಲ್ಲಿಗೆ ಪತ್ರಕರ್ತರ ಸುದ್ದಿಯ ಆಸೆ ಕಮರಿತ್ತು. ಒಂದಿಬ್ಬರು ಸಮುದಾಯದ ಮುಖಂಡರು ಬಂದು, ಆಫ್‌ ದಿ ರೆಕಾರ್ಡ್‌ ಹೇಳ್ತಿವಿ, ನಮ್ಮ ನಾಯಕರೆಲ್ಲ ವೇಸ್ಟು ಕಣ್ರಿ, ಧೈರ್ಯವಿಲ್ಲ ಎಂದು ತಲೆಚಚ್ಚಿಕೊಂಡರು. ಟೈಂ ವೇಸ್ಟ್‌ ಆಯ್ತೆಂದು ಪತ್ರಕರ್ತರು ಬೈದುಕೊಂಡು ಬೇಡೆ ಸುದ್ದಿಯರಸಿ ಹೆಜ್ಜೆಕಿತ್ತರು.

ಉಪಕದನ ಮುಗಿದಿದೆ. ಕಾಂಗ್ರೆಸ್ಸಿಗರು ಮೀಸೆ ತಿರುವಿದ್ದಾರೆ. ಚುನಾವಣೆ ವೇಳೆ ಕಾಂಗ್ರೆಸ್ಸಿಗರಿಗೆ ಮಗ್ಗುಲ ಮುಳ್ಳಾಗಬಹುದು ಎಂದುಕೊಂಡಿದ್ದ ವಿಚಾರಗಳನ್ನೆಲ್ಲ ನಾಯಕರು ಬೆಣ್ಣೆಯಲ್ಲಿನ ಕೂದಲು ತೆಗೆದಂತೆ ನಿಭಾಯಿಸಿದ್ದಾರೆ.

-ಶ್ರೀಕಾಂತ್‌ ಎನ್‌. ಗೌಡಸಂದ್ರ

-ಶೇಷಮೂರ್ತಿ ಅವಧಾನಿ

-ಮಯೂರ್‌ ಹೆಗಡೆ

Share this article