ಪುಟ್ಟ ಪಟ್ಟಣಗಳ ಅಥವಾ ಗ್ರಾಮೀಣ ಭಾಗಗಳ ಅನೇಕ ಮಂದಿ ಯುವಕರು ಸಾಲ ತೆಗೆದುಕೊಂಡು, ಅದನ್ನು ಮರುಪಾವತಿ ಮಾಡುವ ವಿಚಾರದಲ್ಲಿ ಹಿಂದೆ ಬಿದ್ದಿದ್ದಾಗಿ ಅನೇಕ ವರದಿಗಳು ಹೇಳುತ್ತಿವೆ. ಈ ಕುರಿತ ಮಾಹಿತಿ ಇಲ್ಲಿದೆ.
ಈಗ ಸಾಲ ಪಡೆಯುವುದಕ್ಕೆ ನಾನಾ ಮಾರ್ಗಗಳಿವೆ. ಡಿಜಿಟಲ್ ಜಗತ್ತು ತೆರೆದುಕೊಂಡ ಮೇಲೆ ಡಿಜಿಟಲ್ ಮೂಲಕ ಹತ್ತಾರು ಮಂದಿ ಸಾಲ ಕೊಡುವವರು ಹುಟ್ಟಿಕೊಂಡಿದ್ದಾರೆ. ಜೊತೆಗೆ ಕ್ರೆಡಿಟ್ ಕಾರ್ಡ್‌ಗಳ ಜಮಾನ ಬೇರೆ. ಹಣದ ತುರ್ತು ಹೆಚ್ಚಿದ್ದರೆ ತಕ್ಷಣ ಸಣ್ಣ ಸಣ್ಣ ಪ್ರಮಾಣದ ಸಾಲ ಪಡೆಯುವುದು, ಕ್ರೆಡಿಟ್ ಕಾರ್ಡ್ ಉಜ್ಜುವುದು ಅಭ್ಯಾಸವಾಗಿದೆ.
ವಿಪರ್ಯಾಸವೆಂದರೆ ಹೀಗೆ ಸಾಲ ಮಾಡುತ್ತಿರುವವರಲ್ಲಿ ಮೂರನೇ ಹಂತದ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ 25 ಅಥವಾ ಅದಕ್ಕಿಂತ ಕಡಿಮೆ ವಯೋಮಿತಿಯ ತರುಣ, ತರುಣಿಯರು ಮುಂದಿದ್ದಾರೆ. ಜೊತೆಗೆ ಆ ಸಾಲ ಮರುಪಾವತಿಗೆ ಈ ಪೀಳಿಗೆ ವಿಳಂಬ ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. 10,000 ರು. ಅಥವಾ ಅದಕ್ಕಿಂತ ಕಡಿಮೆ ಲೋನ್ ಮೊತ್ತದ ಮರು ಪಾವತಿಯನ್ನೂ ಮಾಡಲಾಗುತ್ತಿಲ್ಲ. ಇದರಿಂದಾಗಿ ಆ ಭಾಗಗಳಲ್ಲಿ ಸಾಲ ನೀಡಿಕೆಯ ಕಾನೂನುಗಳನ್ನು ಬಿಗಿ ಪಡಿಸಲು ಬ್ಯಾಂಕ್‌ಗಳು ಮುಂದಾಗಿವೆ. ಅನೇಕ ವರದಿಗಳು ಸಾಲ ಪಾವತಿಯಲ್ಲಿ ಹಿಂದುಳಿದ ಲೆಕ್ಕಗಳನ್ನು ಹೇಳುತ್ತವೆ.
ಸಾಲ ಮರು ಪಾವತಿ ವಿಳಂಬದಿಂದ ಏನೆಲ್ಲ ಸಮಸ್ಯೆಗಳು
1. ಸಾಲ ಮರುಪಾವತಿ ಸರಿಯಾದ ಸಮಯಕ್ಕೆ ಆಗದ ಕೂಡಲೇ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತವೆ. ಇದರಿಂದ ಭವಿಷ್ಯದಲ್ಲಿ ಸಾಲ ಪಡೆಯಲು ಕಷ್ಟವಾಗುತ್ತದೆ. ಅನೇಕ ಹಣಕಾಸಿನ ಸೌಲಭ್ಯ ಪಡೆಯಲೂ ಇದು ತಡೆಗೋಡೆಯಾಗುತ್ತದೆ.
2. ಸಾಲ ತೀರಿಸುವುದು ತಡವಾದಾಗ ಬಡ್ಡಿ ಪ್ರಮಾಣ ಹೆಚ್ಚಾಗುತ್ತದೆ. ಜೊತೆಗೆ ದಂಡ ಶುಲ್ಕವೂ ಹೆಚ್ಚಾಗಿ ಸಾಲ ಶೂಲವಾಗಿ ಪರಿಣಮಿಸುತ್ತದೆ. ಇದು ಸಾಲ ಪಡೆದವರಿಗೆ ದೊಡ್ಡ ಹೊರೆಯಾಗುತ್ತದೆ.
3. ಸಾಲ ಪಾವತಿ ಮುಂದೂಡುತ್ತಲೇ ಹೋದರೆ ಕಾನೂನುಕ್ರಮ ಅನಿವಾರ್ಯವಾಗುತ್ತದೆ. ಸಾಲಕ್ಕೆ ಪ್ರತಿಯಾಗಿ ನೀಡಿದ ಆಸ್ತಿಯನ್ನು ಮುಟ್ಟುಗೋಲು ಹಾಕುವ ಮಟ್ಟಕ್ಕೂ ಇದು ಹೋಗಬಹುದು.
4. ಸಾಲ ಮರು ಪಾವತಿಸಲು ಮತ್ತೆ ಮತ್ತೆ ಸಾಲ ಮಾಡಬೇಕಾದ ಸ್ಥಿತಿ ಬಂದು ಸಾಲ ಪಡೆದವರ ಆರ್ಥಿಕ ಸ್ಥಿತಿ ಪಾತಾಳ ಕಾಣುವ ಅಪಾಯವಿದೆ. ಇದರಿಂದ ಒತ್ತಡ, ಉದ್ವಿಗ್ನತೆ, ಖಿನ್ನತೆ ಇತ್ಯಾದಿ ಆವರಿಸಿ ವ್ಯಕ್ತಿ ಮಾನಸಿಕವಾಗಿ ಸಮಸ್ಯೆ ಕಷ್ಟಕ್ಕೊಳಗಾಗಬಹುದು.
ಸಾಲ ಮರುಪಾವತಿಗೆ ಸುಲಭ ತಂತ್ರಗಳು
1. ವಯಸ್ಸಿನ್ನೂ ಚಿಕ್ಕದಿರುವ ಕಾರಣ ದೀರ್ಘ ಕಾಲದ ಮರು ಪಾವತಿ ಕಂತುಗಳನ್ನು ಆಯ್ಕೆ ಮಾಡಬಹುದು. ಇದರಿಂದ ತಿಂಗಳು ತಿಂಗಳು ಕಟ್ಟುವ ಸಾಲದ ಮೊತ್ತ ಕಡಿಮೆಯಾಗುತ್ತದೆ.
2. ಕ್ರೆಡಿಟ್ ಕಾರ್ಡ್ ಉಜ್ಜುವ ಮೊದಲು ನಿಮಗೆ ಅಷ್ಟು ಮೊತ್ತ ಮರು ಪಾವತಿಸುವ ಸಾಮರ್ಥ್ಯ ಇದೆಯಾ ಅಂತ ಚೆಕ್ ಮಾಡಿಕೊಳ್ಳಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿದರೆ ನೀವು ಸೇಫಾಗಿರ್ತೀರಿ.
3. ಲೋನ್ ಹಣ ಮರುಪಾವತಿಯನ್ನು ತಲೆಯಲ್ಲಿಟ್ಟುಕೊಂಡು ಅದಕ್ಕಾಗಿ ಹೆಚ್ಚೆಚ್ಚು ದುಡಿಯಿರಿ, ಅಧಿಕ ಗಳಿಕೆ ಮಾಡುವತ್ತ ಸ್ಮಾರ್ಟ್ ಆಗಿ ಚಿಂತಿಸಿ. ಓವರ್ ಟೈಮ್ ಮಾಡೋದು, ಎರಡು ಉದ್ಯೋಗಗಳನ್ನು ನಿರ್ವಹಿಸೋದು ಇತ್ಯಾದಿ ಮಾಡಬಹುದು.
4. ಆರ್ಥಿಕ ಶಿಸ್ತನ್ನು ಅಳವಡಿಸುವುದು ಮುಖ್ಯ. ತಿಂಗಳ ಆದಾಯ, ಉಳಿತಾಯ, ಖರ್ಚುಗಳ ಸರಿಯಾದ ನಿರ್ವಹಣೆಯತ್ತ ಗಮನ ಹರಿಸಿ.