ವರ್ಷದಲ್ಲಿ 17 ಪರೀಕ್ಷೆ, ಫಲಿತಾಂಶ ಪ್ರಕಟಣೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದಾಖಲೆ

KannadaprabhaNewsNetwork | Updated : Dec 31 2024, 04:38 AM IST

ಸಾರಾಂಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024ನೇ ಸಾಲಿನಲ್ಲಿ ಎರಡು ಪಿಎಸ್‌ಐ, ಕೆ-ಸೆಟ್‌ ಸೇರಿ ಒಟ್ಟು 17 ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, 6,052 ಮಂದಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.

 ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024ನೇ ಸಾಲಿನಲ್ಲಿ ಎರಡು ಪಿಎಸ್‌ಐ, ಕೆ-ಸೆಟ್‌ ಸೇರಿ ಒಟ್ಟು 17 ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, 6,052 ಮಂದಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.

ವರ್ಷದ ಸಾಧನೆ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಾಧಿಕಾರವು ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ, ಸೀಟು ಹಂಚಿಕೆ, ಪ್ರವೇಶ ಪ್ರಕ್ರಿಯೆ ಜತೆಗೆ ಸರ್ಕಾರದ ನಾನಾ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ಕೂಡ ನಿಭಾಯಿಸಲಾಗುತ್ತಿದೆ. ಈ ಮೂಲಕ ಕಳೆದೊಂದು ವರ್ಷದಲ್ಲಿ 20 ಲಕ್ಷಕ್ಕೂ ಅರ್ಜಿಗಳನ್ನು ನಿರ್ವಹಿಸಲಾಗಿದೆ. ಪ್ರಾಧಿಕಾರದ ಮೂರು ದಶಕಗಳಿಗೂ ಹೆಚ್ಚಿನ ಇತಿಹಾಸದಲ್ಲಿ ಇದೊಂದು ದಾಖಲೆ ಎಂದಿದ್ದಾರೆ.

2024 ಮಾತ್ರವಲ್ಲದೆ 2022 ಮತ್ತು 2023ರಲ್ಲಿ ಅಧಿಸೂಚನೆ ಹೊರಡಿಸಿದ್ದ ಪರೀಕ್ಷೆಗಳನ್ನೂ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ಈ ವರ್ಷದಲ್ಲಿ ಪೂರ್ಣಗೊಳಿಸಿದ ತೃಪ್ತಿ ಇದೆ. ಈ ಮೂಲಕ ಕೆಇಎ ಮುಂದಿದ್ದ ಇಷ್ಟು ದೊಡ್ಡ ಸಂಖ್ಯೆಯ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಒಂದೇ ವರ್ಷದಲ್ಲಿ ಮಗಿಸಿದ್ದು ಒಂದು ರೀತಿ ದಾಖಲೆ ಎಂದು ಹೇಳಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ 947 ಹುದ್ದೆಗಳ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯನ್ನು ಎರಡು ಹಂತದಲ್ಲಿ (ಒಮ್ಮೆ 545, ಮತ್ತೊಮ್ಮೆ 402 ಹುದ್ದೆ) ಮಾಡಲಾಯಿತು. ಬ್ಲೂ ಟೂತ್‌ ಸೇರಿದಂತೆ ಇತರ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ, ಪರೀಕ್ಷಾ ಅಕ್ರಮ ಎಸಗಲು ಪ್ರಯತ್ನಿಸುವ ಸುಳಿವು ಅರಿತು, ಕ್ಯಾಮರಾ ಕಣ್ಗಾವಲು, ಕೇಂದ್ರ ಕಚೇರಿಯಲ್ಲಿ ವೆಬ್‌ಕಾಸ್ಟಿಂಗ್‌ ಮೂಲಕ ಎಲ್ಲ ಕೇಂದ್ರಗಳ ಮೇಲೆ ನಿಗಾ ವಹಿಸಿದ್ದ ಈ ವರ್ಷದ ವಿಶೇಷ ಎಂದು ಅವರು ವಿವರಿಸಿದ್ದಾರೆ.

17 ಪರೀಕ್ಷೆ ಯಾವ್ಯಾವು: ಪದವಿ ಕಾಲೇಜುಗಳ ಪ್ರಾಂಶುಪಾಲರು (300 ಹುದ್ದೆ), ಎಂಎಸ್‌ಐಎಲ್‌ (72), ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (386), ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (186) ಮತ್ತು ಕಿಯೋನಿಕ್ಸ್‌ (26) ಸಂಸ್ಥೆಗಳ ನೇಮಕಾತಿ, ಪಿಎಸ್‌ಐ (545), ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಮಂಡಳಿ (14), ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (41), ಕರ್ನಾಟಕ ವಿದ್ಯುತ್‌ ನಿಗಮ (394) ಹುದ್ದೆಗಳು, ಬಿಎಂಟಿಸಿಯ 2,500 ನಿರ್ವಾಹಕರು, 402 ಪಿಎಸ್‌ಐ, 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಪರೀಕ್ಷೆ ಮಾಡಲಾಗಿದೆ. ಇವುಗಳಲ್ಲದೆ 2023 ಮತ್ತು 2024ನೇ ಸಾಲಿನ ಕೆ-ಸೆಟ್‌ ಪರೀಕ್ಷೆಗಳನ್ನು ಕೂಡ ಯಶಸ್ವಿಯಾಗಿ ನಡೆಸಲಾಗಿದೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳು ಕ್ರಮವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಐಎಎಸ್/ಕೆಎಎಸ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೊಡುತ್ತಿದೆ. ಇದಕ್ಕೆ ಆಸಕ್ತ ಮತ್ತು ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೂಡ ಕೆಇಎ ಪರೀಕ್ಷೆ ನಡೆಸಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

Share this article