ಒಂಬತ್ತರ ಬೆಂಬತ್ತಿನ ವೈಎನ್ಕೆ - ಇಂದು ವೈಎನ್ಕೆ ಪುಣ್ಯಸ್ಮರಣೆ

Published : Oct 16, 2026, 12:34 PM IST
YNK

ಸಾರಾಂಶ

ವೈಎನ್ಕೆ ಅಮೆರಿಕ ಪ್ರವಾಸದಿಂದ ಮರಳುವಾಗ ಅಂತರಿಕ್ಷದಲ್ಲೇ ಬದುಕಿಗೆ ಬೈ ಬೈ ಹೇಳಿ ಸಾವಿನಲ್ಲೂ ‘ವಂಡರ್’ ತೋರಿದವರು. ವೈಎನ್ಕೆ ಗತಿಸಿ ಈಗ 27 ವರ್ಷ. 2+7=9! ಅವರು ಅಸುನೀಗಿದ ದಿನಾಂಕ 16-10-1999. ಸಾಲಾಗಿ ಈ ಸಂಖ್ಯೆಗಳನ್ನು ಕೂಡುತ್ತ ಬಂದರೆ ಬರುವ ಮೊತ್ತ ಒಂಬತ್ತೇ! ಅಂತೂ ವೈಎನ್ಕೆ ಬೆಂಬೆತ್ತಿದ ಒಂಬತ್ತರ ಕಥೆ ಸ್ವಾರಸ್ಯಕರ.

 ನಾರಾಯಣ್ ರಾಯಚೂರ್, ಸಾಹಿತಿ 

ಅ.16 ವೈಎನ್ಕೆ ನಮ್ಮನ್ನಗಲಿದ ದಿನ. ವರ್ಷ 1999. ಮೂರು ಒಂಬತ್ತುಗಳು ಒಂದರ ಹಿಂದೊಂದರಂತೆ ಸಾಲುಗಟ್ಟಿವೆ. ಈ 999 ಯಾವುದೋ ಸಿ.ಐ.ಡಿ.ಯ ನಂಬರ್, ಗೋವಾದಲ್ಲಿ ಸಿ.ಐ.ಡಿ 999 ತರಹ ಇದೆ ಅಲ್ಲವೇ?! ವೈಎನ್ಕೆ ಅವರಿಗೂ ‘ವರ್ಷ 1999’ ಒಂದು ರೀತಿಯಲ್ಲಿ ನಿಗೂಢದಂತೆಯೇ ಇತ್ತು. ಅದನ್ನವರು ನನ್ನೊಂದಿಗೆ ಹಂಚಿಕೊಂಡಿದ್ದರು ಕೂಡ.

‘ನೋಡಿ, ಈ ವರ್ಷ 1999. ಇದರಲ್ಲಿ ಮೂರು 999. ಮುಂದಿನ ವರ್ಷ ಎರಡು ಸಾವಿರದ ವರ್ಷ. ‘ವೈ-2k’ ಎಂದರೆ ‘ಇಯರ್ ಟೂ ಥೌಸಂಡ್’- 2000ರ ವರ್ಷ. 1999ರ ಬಳಿಕ ಕಂಪ್ಯೂಟರ್‌ನಲ್ಲಿ ಬರುವ ಕೊನೆಯ ‘00’ ಸಂಭವಿಸುವ ಗೊಂದಲ ಸರ್ವವ್ಯಾಪಿ. ಈ ‘ವೈ-ಟು-ಕೆ’ ಸಮಸ್ಯೆ ಎಲ್ಲರ ತಲೆ ಕೊರೆಯುತ್ತಿದೆ’ ಎನ್ನುತ್ತಿದ್ದರು. ಮುಂದುವರಿದು, 9 ಅಕ್ಷಯ ಸಂಖ್ಯೆ. 9,9,9 ಸೇರಿದರೆ 27. ಅದನ್ನು ಕೂಡಿದರೆ ಮೊತ್ತ 9, ಅಕ್ಷಯ ನಿಧಿ!!

ಸಂಖ್ಯಾಶಾಸ್ತ್ರದಲ್ಲಿ ನಂಬಿಕೆಯುಳ್ಳವರು, ಕುದುರೆ ರೇಸ್ ಪ್ರಿಯರಂತೂ ಈ ಸಂಖ್ಯೆಗಳ ಮೇಲೆ ಪಕ್ಕಾ ಗಮನ ಕೊಡುವುದುಂಟು. 3ನೇ ರೇಸಿನಲ್ಲಿ 3ನೇ ಕುದುರೆ ಓಡುವ ಸಂಖ್ಯೆ 3 ಆದಾಗ ಅದರ ಮೇಲೆ ಬೆಟ್ ಕಟ್ಟಿದರೆ ಗೆದ್ದೇ ಗುಲ್ಲುತ್ತದೆ ಎಂಬ ನಂಬಿಕೆ ಅವರದು. ಒಮ್ಮೆ ಅದು ನಿಜವಾದರೂ ಸಾಕು. ಅನೇಕ ಸಾರಿ ಹಾಗಾಗದಿರುವುದನ್ನೂ ಅವರು ನಂಬರು! 4ನೇ ಪಂದ್ಯದ 4ನೇ ಕುದುರೆ ಮೇಲೆ 444 ರುಪಾಯಿ ಕಟ್ಟಿದಾಗ ಆ ಕುದುರೆ 4ನೆಯದಾಗಿ ಬಂತೆಂಬ ಜೋಕ್ ನಿಜ ಇರಲಿ ಇಲ್ಲದಿರಲಿ, ಅದನ್ನು ನಂಬುವವರು ಮಾತ್ರ ಲೋಕದಲ್ಲಿ ಇದ್ದೇ ಇರುತ್ತಾರೆ!!

ಕುದುರೆಯ ರೇಸಿನಲ್ಲಿ ಡಿವಿಡೆಂಡ್ ಎಂಬ ಶೀರ್ಷಿಕೆಯಲ್ಲಿ ಈ ನಂಬರ್ ಕುದುರೆಗೆ ಇಷ್ಟು ಹಣ ಬರುವ ಸಂಭವ ಇರುತ್ತದೆ ಎಂದು ಕಂಪ್ಯೂಟರ್ ಮೇಲೆ ಅಂಕಗಳು ಮೂಡಿದಾಗ ಒಂದು ಸಂಖ್ಯೆಯ ಕುದುರೆಗೆ 999 ಎಂದಿರುತ್ತದೆ. ಕಾರಣ ಕುದುರೆ 999ಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ಗೆದ್ದರೆ 10 ರುಪಾಯಿ ಟಿಕೆಟ್‌ಗೆ ಬರುವ ಲಾಭ 999ಕ್ಕಿಂತ ಹೆಚ್ಚಿರುತ್ತದೆ. ಅದು 1000. 2000. 3000 ಎಷ್ಟು ಬೇಕಾದರೂ ಆದೀತು’ -ಹೀಗೆ ಸಾಗುತ್ತಿತ್ತು ವೈಎನ್ಕೆ ಮಾತಿನ ಓಟ.

ವೈಎನ್ಕೆ ಮಾತುಗಳಲ್ಲಿ ಜೀವನಪಾಠ:

ಹಿರಿಯ ಗೆಳೆಯ ಬಾ.ಕಿ.ನ. ಅವರ ಲಿಪಿ ಮುದ್ರಣಾಲಯದಲ್ಲಿ ವೈಎನ್ಕೆ ಸಾರಥ್ಯ/ಮಾರ್ಗದರ್ಶನದಲ್ಲಿ ಬರುತ್ತಿದ್ದ ಗಾಂಧಿ ಬಜಾರ್ ಪತ್ರಿಕೆಯ ಕೊಠಡಿಯಲ್ಲಿ ಹರಟುತ್ತಿದ್ದಾಗ - ‘ಅಲ್ಲ ವೈಎನ್ಕೆ? ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಿರುವ ನರ್ವಸ್ - ನೈನ್ಟಿ ಸಿಂಡ್ರೋಮ್‌ನಂತೆ ನಿಮಗೇಕೆ ವರಿ?’ ಎಂದರೆ, ‘999 ಎಂದಾಗ ನೆನಪಿಗೆ ಬರುವುದು ಕೈಲಾಸಂ ನುಡಿ. ಜೀವನದ ಎಲ್ಲ ಕ್ಷೇತ್ರಗಳಲ್ಲಿ ಚುರುಕಾಗಿ ಮುನ್ನಡೆಯುವವರಿಗೆ ಒಂದು ಎಚ್ಚರಿಕೆಯಂತೆ. 999 ಹಾವು ಹಿಡಿದ ಮೇಲೂ 1000ನೇ ಹಾವು ಹಿಡಿಯುವಾಗ ಎಚ್ಚರಿಕೆಯಿಂದಿರಬೇಕು. ನಿನ್ನೆ ಚೆನ್ನಾಗಿ ಹಾಡಿದ್ದು, ಅಭಿನಯಿಸಿದ್ದು ಮುಖ್ಯವಲ್ಲ. ಇಂದೂ ಚೆನ್ನಾಗಿ ಹಾಡಬೇಕು, ಅಭಿನಯಿಸಬೇಕು. ಸದಾ ಜಾಗೃತನಾಗಿರಬೇಕು. ಇಲ್ಲವೇ ಸಾವಿರದ ಹಾವು ಕಚ್ಚಿದರೆ ನಿಮಗೆ ಸಾವೇ ಗತಿ. ಅದಕ್ಕೆ ಹಾವು ಹಿಡಿಯುವ ಅನೇಕರಿಗೆ ಹಾವೇ ಸಾವು.’

 ಸಾವಿನಲ್ಲೂ ‘ವಂಡರ್‌’ ತೋರಿದ ವೈಎನ್ಕೆ 

ಹೀಗೆ ಸಾವಿನ ಬಗ್ಗೆ ಪುಂಖಾನುಪುಂಖ ವಿವರ ನೀಡುತ್ತಿದ್ದ ವೈಎನ್ಕೆ ಅವರಿಗೆ 1999ನೇ ವರ್ಷವೇ ಅವರ ಜೀವಿತದ ಕೊನೆಯ ವರ್ಷ ಎಂಬ ಅಳುಕಿತ್ತೇನೋ ಎಂಬ ಅನುಮಾನ ಈಗ ಕಾಡುವುದು ಸಹಜ. ಅವರು ಅಮೆರಿಕ ಪ್ರವಾಸದಿಂದ ಮರಳುವಾಗ ಅಂತರಿಕ್ಷದಲ್ಲೇ, ವಿಮಾನದಲ್ಲೇ ಬದುಕಿಗೆ ಬೈ ಬೈ ಹೇಳಿ ಸಾವಿನಲ್ಲೂ ‘ವಂಡರ್’ ತೋರಿದವರು. ಅಂದ ಹಾಗೆ ವೈಎನ್ಕೆ ಗತಿಸಿ ಈಗ 27 ವರ್ಷ. 2 ಪ್ಲಸ್ 7ರ ಮೊತ್ತ ಮತ್ತೆ 9! ಇನ್ನೂ ಒಂದು ಸೋಜಿಗ ಎಂದರೆ ವೈಎನ್ಕೆ ಆಕಾಶದಲ್ಲಿ ಅಸುನೀಗಿದ ದಿನಾಂಕ 16-10-1999. ಸಾಲಾಗಿ ಈ ಸಂಖ್ಯೆಗಳನ್ನು ಕೂಡುತ್ತ ಬಂದರೆ ಬರುವ ಮೊತ್ತ ಒಂಬತ್ತೇ! ಅಂತೂ ಬೆಂಬೆತ್ತಿದ ಒಂಬತ್ತು ಚೆನ್ನಾಗಿದೆ. ಇದೇ, ಸಿನೆಮಾ ಟೈಟಲ್ಲೊ, ನಾಟಕದ ಶೀರ್ಷಿಕೆಯೊ, ಟೀವಿ ಧಾರಾವಾಹಿಯೊ ಆಗಿ ಮೂಡಿಬಂದುಬಿಡಬಹುದು. ಹಾಗೆಯೇ ಈ ಒಂಬತ್ತು - ‘ನೈನ್’. ನೈನ್ ವಂಡರ್ಸ್! ಫೈನ್ ವಂಡರ್ಸ್!!

ಡಿವೈನ್ ವಂಡರ್ಸ್ !!!

‘ಯಾರಿಗೆ ಗೊತ್ತು? ನಾಳೆ ಏನೋ? ಹೇಗೋ? ನಾಳೆ ಬದುಕಿರುತ್ತೇವೆ ಎನ್ನುವುದಕ್ಕೇನು ಗ್ಯಾರಂಟಿ? ಒಟ್ಟಾರೆ, ಬದುಕಿನ ಬಗ್ಗೆ ಕಾಳಜಿ ಏಕೆಂದರೆ, ಅದರ ನಶ್ವರತೆ! ಲೈಫ್ ಐಸ್ ಆ ಬ್ರೀಫ್ ಕ್ಯಾಂಡಲ್. ಬದುಕು ಕ್ಷಣ ಹೊತ್ತು ಉರಿಯುವ ಕ್ಯಾಂಡಲ್ ಎಂದಿಲ್ಲವೇ ಶೇಕ್ಸಪಿಯರ್?

ಮುಂದೆಸೆಯ ಬಾಗಿಲಿನ ಬೀಗಕ್ಕೆ ಕೈ ಇಲ್ಲ

ಪಿಂದೆಸೆಯ ತೆರೆ ಎತ್ತಿ ನೋಡಲಳವಲ್ಲ

ಈ ದೆಸೆಯಲ್ಲೆರಡು ದಿನ ನಾವು ನೀವೆಂಬ ನುಡಿ

ಆಡುವೆವು ಬಳಿಕಿಲ್ಲ ನಾವು ನೀವುಗಳು’ ಎಂದು ಉಮರನನ್ನು ಉದ್ಧರಿಸುತ್ತಿದ್ದರು.

‘ಬಾಳಿಗೇನು ಅರ್ಥ? ಲೈಫ್ ಐಸ್ ಎ ಟೇಲ್ ಟೋಲ್ಡ್ ಬೈ ಆನ್ ಈಡಿಯಟ್ ಫುಲ್ ಆಫ್ ಸೌಂಡ್ ಅಂಡ್ ಫ್ಯೂರಿ ಸಿಗ್ನಿಫಾಯಿಂಗ್‌ ನಥಿಂಗ್. ಬಲು ಸದ್ದು ಗದ್ದಲದಿಂದ ಕೂಡಿದ ಗಾಂಪ ಹೇಳಿದ ಕತೆ. ಅದಕ್ಕೆ ಏನೂ ಅರ್ಥವೇ ಇಲ್ಲ ಎಂದಿಲ್ಲವ ಷೇಕ್ಸಪಿಯರ್?’ ಎಂದು ನಮ್ಮನ್ನೇ ಕೇಳುತ್ತಿದ್ದರು.

ಅಂದೇ ಹೇಳಿದ್ದರು ನ್ಯೂಮೆರಾಲಜಿ ಭವಿಷ್ಯ!:

ಅಂತೂ ನಂಬರ್ ಗೇಮ್, ನ್ಯೂಮೆರಾಲಜಿಗಳ ಮೂಲಕ ವೈಎನ್ಕೆ ಸ್ಮರಣೆಯ ಈ ಬರಹಕ್ಕೆ ವೈಎನ್ಕೆ ಮಾತುಗಳಿಂದಲೇ ಮುಕ್ತಾಯ ಹೇಳಬಹುದು. ‘ಈಗ ಕಂಪ್ಯೂಟರ್ ಯುಗದಲ್ಲಿ ಎಲ್ಲ ಅಕ್ಷರಗಳೂ ಅಂಕಿಗಳಾಗಿರುವಾಗ ಪ್ರತಿ ವ್ಯಕ್ತಿಯನ್ನು ಇನ್ನು ಮೇಲೆ ಅಂಕಿಗಳಿಂದಲೇ ಗುರುತಿಸಬೇಕಾಗಿ ಬರಬಹುದು. ‘ಫೋರ್ ಟ್ವೆಂಟಿ’ ಎಂದರೆ ಅಂಥವನನ್ನು ಜನ ಗುರುತಿಸುವಾಗ ಅಂಕಿಯೇ ಹೆಸರಾಗುತ್ತದೆ. ಈ ಪದ್ಧತಿಯೇ ಮುಂದೆ ಜಾರಿಗೆ ಬರಬಹುದು. ಆಗ ಹೆಸರುಗಳ ಬದಲು ಅಂಕಿಗಳೇ ಉದುರಬಹುದು.’

1997ರಷ್ಟು ಹಿಂದೆಯೇ ವೈಎನ್ಕೆ ಹೀಗೆ ಹೇಳಿದ ಈ ಮಾತುಗಳು ಈಗ ನೂರಕ್ಕೆ ಇನ್ನೂರರಷ್ಟು ನಿಜ. ಈಗ ಎಲ್ಲಿ ಹೋದರೂ ‘ನಿಮ್ಮ ಮೊಬೈಲ್ ನಂಬರ್ ಹೇಳಿ’, ‘ಆಧಾರ್ ನಂಬರ್ ಹೇಳಿ’, ‘ಪ್ಯಾನ್ ಕೋಡ್ ಹೇಳಿ’ ಎನ್ನುತ್ತಾರೆ. ಹೆಸರಿಗೆ ಬೆಲೆಯೇ ಇಲ್ಲ, ಎಲ್ಲ ‘ಅಂಕಿ’ತ ನಾಮ! ಮಕ್ಕಳನ್ನೂ ಅಂಕಗಳ ಹಿಂದೆಯೇ ಓದ/ಡಲು ಬಿಟ್ಟಿದ್ದೇವೆ- 90%, 95%, 99.99%!

PREV
Read more Articles on

Recommended Stories

ವನವೈಭವ : ವನ್ಯಜೀವಿ ಕಳ್ಳಸಾಗಣೆ ವಿರುದ್ಧ ಅರಣ್ಯ ಇಲಾಖೆ ಜಂಟಿ ಸಮರ
ವಾಟ್ಸಾಪ್ ಚಾಟ್‌ಗಳನ್ನೇ ನೇರ ಮಾರಾಟವನ್ನಾಗಿ ಪರಿವರ್ತಿಸಲು ಸಲಹೆ