ಮಹಾರಾಜ ಟ್ರೋಫಿ ಟಿ 20 ಹರಾಜು : ಬೆಂಗಳೂರು ತಂಡಕ್ಕೆ ಯುವ ಬ್ಯಾಟರ್‌ ಚೇತನ್‌ಗೆ ₹8.6 ಲಕ್ಷ

KannadaprabhaNewsNetwork |  
Published : Jul 26, 2024, 01:32 AM ISTUpdated : Jul 26, 2024, 04:19 AM IST
ಎಲ್‌.ಆರ್‌.ಚೇತನ್‌ | Kannada Prabha

ಸಾರಾಂಶ

ಬೆಂಗಳೂರು ತಂಡಕ್ಕೆ ಸ್ಫೋಟಕ ಬ್ಯಾಟರ್‌ ಚೇತನ್‌ ಸೇರ್ಪಡೆ. ಶ್ರೇಯಸ್‌ ಗೋಪಾಲ್‌, ಗೌತಮ್‌ ಸೇರಿ 84 ಆಟಗಾರರು 6 ತಂಡಗಳಿಗೆ ಬಿಕರಿ. ಆ.15ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿ ಶುರು.

 ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಆಟಗಾರರ ಹರಾಜಿನಲ್ಲಿ ರಾಜ್ಯದ ಯುವ ಬ್ಯಾಟರ್‌ ಎಲ್‌.ಆರ್‌.ಚೇತನ್‌ ಬೆಂಗಳೂರು ಬ್ಲಾಸ್ಟರ್ಸ್‌ ತಂಡಕ್ಕೆ ₹8.6 ಲಕ್ಷಕ್ಕೆ ಬಿಕರಿಯಾಗಿದ್ದಾರೆ. ಇದರೊಂದಿಗೆ ಈ ಬಾರಿ ಹರಾಜಿನ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಗುರುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ಹರಾಜಿಗೆ ನೋಂದಾಯಿಸಿದ್ದ 240 ಮಂದಿ ಪೈಕಿ ಒಟ್ಟು 84 ಆಟಗಾರರು 6 ತಂಡಗಳಿಗೆ ಬಿಕರಿಯಾದರು. 

ಪ್ರತಿ ತಂಡಗಳು ಹರಾಜಿಗೂ ಮುನ್ನ ತಲಾ 4 ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದವು. ಹರಾಜಿನಲ್ಲಿ ಎಲ್ಲಾ ತಂಡಗಳು ತಲಾ 14 ಆಟಗಾರರನ್ನು ಖರೀದಿಸಿದವು.ತಾರಾ ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌ ಮಂಗಳೂರು ಡ್ರ್ಯಾಗನ್ಸ್‌ ತಂಡಕ್ಕೆ ₹7.6 ಲಕ್ಷಕ್ಕೆ ಬಿಕರಿಯಾದರೆ, ಕೆ.ಗೌತಮ್‌ರನ್ನು ಮೈಸೂರು ವಾರಿಯರ್ಸ್‌ ತಂಡ 7.4 ಲಕ್ಷ ರು. ನೀಡಿ ಖರೀದಿಸಿತು. ಜೆ.ಸುಚಿತ್ ₹4.8 ಲಕ್ಷಕ್ಕೆ, ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿರುವ ವೇಗಿ ಪ್ರಸಿದ್ಧ್‌ ಕೃಷ್ಣ ₹1 ಲಕ್ಷಕ್ಕೆ ಮೈಸೂರು ತಂಡ ಸೇರ್ಪಡೆಗೊಂಡರು. ಹುಬ್ಬಳ್ಳಿ ಟೈಗರ್ಸ್‌ ತಂಡ ಕೆ.ಸಿ. ಕಾರ್ಯಪ್ಪ ಅವರನ್ನು ₹4.2 ಲಕ್ಷ ನೀಡಿ ಖರೀದಿಸಿದರೆ, ಗುಲ್ಬರ್ಗಾ ತಂಡ ಪ್ರವೀಣ್‌ ದುಬೆಯನ್ನು ₹6.8 ಲಕ್ಷ ನೀಡಿ ತನ್ನ ತೆಕ್ಕೆಗೆ ಪಡೆದುಕೊಂಡಿತು.

ಕಳೆದ ಬಾರಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಲುವ್‌ನೀತ್‌ ಸಿಸೋಡಿಯಾ(₹7.2 ಲಕ್ಷ) ಹಾಗೂ ಮೊಹಮದ್ ತಾಹಾ(₹6.6 ಲಕ್ಷ) ಕ್ರಮವಾಗಿ ಗುಲ್ಬರ್ಗಾ ಹಾಗೂ ಹುಬ್ಬಳ್ಳಿ ತಂಡ ಸೇರ್ಪಡೆಗೊಂಡರು. ಈ ಬಾರಿ ಟೂರ್ನಿ ಆ.15ರಿಂದ ಸೆ.1ರ ವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ದ್ರಾವಿಡ್‌ ಪುತ್ರ ಸಮಿತ್‌ ಮೈಸೂರು ತಂಡಕ್ಕೆ

ದಿಗ್ಗಜ ಕ್ರಿಕೆಟಿಗ, ಭಾರತ ತಂಡದ ಮಾಜಿ ನಾಯಕ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್‌ ಕೂಡಾ ಹರಾಜಿನಲ್ಲಿ ಪಾಲ್ಗೊಂಡರು. ಆಲ್ರೌಂಡರ್‌ ಆಗಿರುವ ಸಮಿತ್‌ರನ್ನು ಮೈಸೂರು ವಾರಿಯರ್ಸ್ ತಂಡ ಮೂಲಬೆಲೆ ₹50 ಸಾವಿರ ನೀಡಿ ಖರೀದಿಸಿತು. ಸಮಿತ್‌ ಈಗಾಗಲೇ ಕರ್ನಾಟಕ ಕಿರಿಯರ ತಂಡದಲ್ಲಿ ಆಡುತ್ತಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ನಲ್ಲಿ ಈ 10 ಆಟಗಾರರ ಮೇಲೆ ಕಣ್ಣಿಡಿ
ಈ ಐಪಿಎಲ್‌ನಲ್ಲಿ 7 ದಾಖಲೆ ಮೇಲೆ ಕೊಹ್ಲಿ ಕಣ್ಣು!