1 ಟ್ರೋಫಿ, 10 ಟೀಂ: ಇಂದಿನಿಂದ ಮೆಗಾ ಫೈಟ್‌ ಬಂದೇ ಬಿಡ್ತು ಬಹುನಿರೀಕ್ಷಿತ ಐಪಿಎಲ್‌

Published : Mar 22, 2025, 08:05 AM IST
IPL 2025 KKR vs RCB

ಸಾರಾಂಶ

 ಮಳೆ ಭೀತಿ ನಡುವೆ ಕೋಲ್ಕತಾದ ಈಡನ್‌ ಗಾರ್ಡನ್‌ನಲ್ಲಿ ಬಲಿಷ್ಠ ತಂಡಗಳಿಂದ ಪೈಪೋಟಿ2019ರ ಬಳಿಕ ಕೋಲ್ಕತಾದಲ್ಲಿ ಮೊದಲ ಗೆಲುವಿಗೆ ಕಾಯುತ್ತಿದೆ ಆರ್‌ಸಿಬಿ । ಚಾಂಪಿಯನ್‌ ಕೆಕೆಆರ್‌ಗೆ ಭರ್ಜರಿ ಶುಭಾರಂಭದ ತವಕ18ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿಂದು ಆರ್‌ಸಿಬಿ vs ಕೆಕೆಆರ್‌ ಸೆಣಸಾಟ

ಕೋಲ್ಕತಾ: ಅದು 2008ರ ಚೊಚ್ಚಲ ಆವೃತ್ತಿ ಐಪಿಎಲ್‌ನ ಉದ್ಘಾಟನಾ ಪಂದ್ಯ. ಬ್ರೆಂಡನ್‌ ಮೆಕಲಮ್‌ರ ಸ್ಫೋಟಕ 158 ರನ್‌ ನೆರವಿನಿಂದ ಆರ್‌ಸಿಬಿ ವಿರುದ್ಧ ಕೋಲ್ಕತಾ 140 ರನ್‌ ಭರ್ಜರಿ ಗೆಲುವು ಸಾಧಿಸಿತ್ತು. ಅದಾಗಿ 17 ವರ್ಷ ಕಳೆದಿದೆ. ಕೆಕೆಆರ್‌ 3 ಬಾರಿ ಚಾಂಪಿಯನ್‌ ಆಗಿದ್ದರೆ, ಆರ್‌ಸಿಬಿ ಇನ್ನೂ ಮೊದಲ ಕಪ್‌ಗಾಗಿ ಕನವರಿಸುತ್ತಿದೆ.

ಬರೋಬ್ಬರಿ 17 ವರ್ಷಗಳ ಬಳಿಕ ಮತ್ತೊಮ್ಮೆ ಆರ್‌ಸಿಬಿ ಹಾಗೂ ಕೆಕೆಆರ್‌ ತಂಡಗಳು ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 18ನೇ ಆವೃತ್ತಿ ಟೂರ್ನಿಯ ಮೊದಲ ಪಂದ್ಯ ಶನಿವಾರ ನಡೆಯಲಿದ್ದು, ಈಡನ್‌ ಗಾರ್ಡನ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಈ ಬಾರಿ ಟೂರ್ನಿಯಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್‌ ಎರಡೂ ಬಲಿಷ್ಠ ತಂಡಗಳು. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಕೆಕೆಆರ್‌ ತವರಿನ ಕ್ರೀಡಾಂಗಣದ ಲಾಭವೆತ್ತುವ ಜೊತೆಗೆ ಆರ್‌ಸಿಬಿ ವಿರುದ್ಧ ಗೆಲುವಿನ ದಾಖಲೆಯನ್ನು ಮತ್ತಷ್ಟು ಉತ್ತಮಗೊಳಿಸುವ ನಿರೀಕ್ಷೆಯಲ್ಲಿದೆ. ಅತ್ತ ಯುವ ಬ್ಯಾಟರ್‌ ರಜತ್‌ ಪಾಟೀದಾರ್‌ಗೆ ನಾಯಕತ್ವ ವಹಿಸಿರುವ ಆರ್‌ಸಿಬಿ, ಚೊಚ್ಚಲ ಕಪ್‌ ಗೆಲುವಿನ ವಿಶ್ವಾಸದಲ್ಲಿದೆ.

ಕೊಹ್ಲಿ ಮೇಲೆ ಕಣ್ಣು:

ಆರ್‌ಸಿಬಿ ಈ ಬಾರಿಯೂ ಹೆಚ್ಚಾಗಿ ನೆಚ್ಚಿಕೊಂಡಿದ್ದು ವಿರಾಟ್‌ ಕೊಹ್ಲಿಯನ್ನು. ಅವರು ಎಷ್ಟು ರನ್‌ ಕಲೆ ಹಾಕಲಿದ್ದಾರೊ ಅಷ್ಟು ಆರ್‌ಸಿಬಿಗೆ ಪ್ಲಸ್‌ಪಾಯಿಂಟ್‌. ಆದರೆ ಈ ಬಾರಿಯೂ ತಂಡ ಕೊಹ್ಲಿ ಒಬ್ಬರನ್ನೇ ನಂಬಿಕೂತರೆ ಕಪ್‌ ಸಿಗುವುದು ಅಸಾಧ್ಯದ ಮಾತು. ಇಂಗ್ಲೆಂಡ್‌ನ ಸ್ಫೋಟಕ ಆಟಗಾರ ಫಿಲ್‌ ಸಾಲ್ಟ್‌, ನೂತನ ನಾಯಕ ರಜತ್‌ ಪಾಟೀದಾರ್‌ ಬ್ಯಾಟಿಂಗ್‌ ಆಧಾರಸ್ತಂಭ. ಸಾಲ್ಟ್‌ ಕಳೆದ ಬಾರಿ ಕೆಕೆಆರ್‌ ಪರ 185ರ ಸ್ಟ್ರೈಕ್‌ರೇಟ್‌ನಲ್ಲಿ 435 ರನ್‌ ಕಲೆಹಾಕಿದ್ದರು. ಈ ಬಾರಿ ಕೆಕೆಆರ್‌ ವಿರುದ್ಧ ಅದೇ ರೀತಿ ಆಟವಾಡುವ ಕಾತರದಲ್ಲಿದ್ದಾರೆ.

ಅಬ್ಬರದ ಬ್ಯಾಟಿಂಗ್‌ ಹಾಗೂ ಉತ್ತಮ ದಾಳಿ ಮಾಡಬಲ್ಲ ಆಲ್ರೌಂಡರ್‌ಗಳಾದ ಲಿಯಾಮ್‌ ಲಿವಿಂಗ್‌ಸ್ಟೋನ್‌, ಜೇಕಬ್‌ ಬೆತ್‌ಹೆಲ್‌, ಟಿಮ್‌ ಡೇವಿಡ್‌ ಯಾವ ಕ್ಷಣದಲ್ಲೂ ಪಂದ್ಯವನ್ನು ಆರ್‌ಸಿಬಿ ಪರ ವಾಲುವಂತೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಇನ್ನು, ತಂಡದ ಬೌಲಿಂಗ್‌ ವಿಭಾಗ ಹಿಂದೆಂದಿಗಿಂತ ಹೆಚ್ಚು ಬಲಿಷ್ಠವಾಗಿದ್ದು, ಇದರಿಂದಲೇ ಟ್ರೋಫಿ ಗೆಲುವಿನ ಭರವಸೆ ಹೆಚ್ಚಾಗಿದೆ. ಅನುಭವಿ ವೇಗಿಗಳಾದ ಭುವನೇಶ್ವರ್‌ ಕುಮಾರ್‌, ಜೋಶ್‌ ಹೇಜಲ್‌ವುಡ್‌ ಜೊತೆಗೆ ಯುವ ವೇಗದ ಬೌಲರ್‌ಗಳಾದ ಯಶ್‌ ದಯಾಳ್‌, ರಸಿಕ್‌ ಸಲಾಂ, ಸ್ಪಿನ್ನರ್‌ಗಳಾದ ಸುಯಶ್‌ ಶರ್ಮಾ, ಕೃನಾಲ್‌ ಪಾಂಡ್ಯ ತಂಡಕ್ಕೆ ಬಲ ಒದಗಿಸಲಿದ್ದಾರೆ.

ಕೆಕೆಆರ್‌ಗೆ ತವರಿನ ಲಾಭ:

ಹಾಲಿ ಚಾಂಪಿಯನ್‌ ಕೆಕೆಆರ್‌ ಹೆಚ್ಚೂ ಕಡಿಮೆ ಕಳೆದ ಬಾರಿ ಇದ್ದ ತಂಡವನ್ನೇ ಈ ಬಾರಿಯೂ ಉಳಿಸಿಕೊಂಡಿದೆ. ಆದರೆ ಕಪ್‌ ಗೆಲ್ಲಿಸಿಕೊಟ್ಟ ಶ್ರೇಯಸ್‌ ಅಯ್ಯರ್‌ ತಂಡದಲ್ಲಿಲ್ಲ. ರಹಾನೆ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ತಂಡದಲ್ಲಿ ಟಿ20 ತಜ್ಞ ಆಟಗಾರರೇ ಹೆಚ್ಚಿದ್ದಾರೆ. ಸುನಿಲ್‌ ನರೈನ್‌, ಕ್ವಿಂಟನ್‌ ಡಿ ಕಾಕ್‌ ಸ್ಫೋಟಕ ಆರಂಭ ಒದಗಿಸಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ರಹಾನೆ, ಅಂಗ್‌ಕೃಷ್‌ ರಘುವಂಶಿ, ವೆಂಕಟೇಶ್‌ ಅಯ್ಯರ್‌, ರಿಂಕು ಸಿಂಗ್‌ರಂತಹ ಅಪಾಯಕಾರಿ ಬ್ಯಾಟರ್‌ಗಳಿದ್ದಾರೆ. ಯಾವ ಕ್ಷಣದಲ್ಲೂ ಪಂದ್ಯದ ಗತಿ ಬದಲಿಸಬಲ್ಲ ಆ್ಯಂಡ್ರೆ ರಸೆಲ್‌ ತಂಡದ ಪ್ಲಸ್‌ ಪಾಯಿಂಟ್‌.

ಭಾರತ ಟಿ20 ವಿಶ್ವಕಪ್‌ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ವರುಣ್‌ ಚಕ್ರವರ್ತಿ, ಯುವ ವೇಗಿ ಹರ್ಷಿತ್‌ ರಾಣಾ, ವೈಭವ್‌ ಅರೋರಾ ಜೊತೆ ಏನ್ರಿಚ್‌ ನೋಕಿಯಾ, ಸ್ಪೆನ್ಸರ್‌ ಜಾನ್ಸನ್‌ ತಂಡದಲ್ಲಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ.

ಒಟ್ಟು ಮುಖಾಮುಖಿ: 34

ಆರ್‌ಸಿಬಿ: 14

ಕೆಕೆಆರ್‌: 20

ಸಂಭಾವ್ಯ ಆಟಗಾರರು

ಆರ್‌ಸಿಬಿ: ಫಿಲ್ ಸಾಲ್ಟ್‌, ವಿರಾಟ್‌ ಕೊಹ್ಲಿ, ದೇವದತ್‌ ಪಡಿಕ್ಕಲ್‌, ರಜತ್‌ ಪಾಟೀದಾರ್‌(ನಾಯಕ), ಲಿವಿಂಗ್‌ಸ್ಟೋನ್‌, ಜಿತೇಶ್‌, ಡೇವಿಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌, ಹೇಜಲ್‌ವುಡ್‌, ದಯಾಳ್‌, ಸ್ವಪ್ನಿಲ್/ರಸಿಕ್‌.

ಕೆಕೆಆರ್: ನರೈನ್‌, ಡಿ ಕಾಕ್‌, ರಹಾನೆ(ನಾಯಕ, ರಘುವಂಶಿ, ವೆಂಟಕೇಶ್‌ ಅಯ್ಯರ್‌, ರಿಂಕು ಸಿಂಗ್‌, ಆ್ಯಂಡ್ರೆ ರಸೆಲ್‌, ರಮನ್‌ದೀಪ್‌, ಹರ್ಷಿತ್‌ ರಾಣಾ, ಚಕ್ರವರ್ತಿ, ಸ್ಪೆನ್ಸರ್‌/ನೋಕಿಯಾ, ವೈಭವ್‌.

ಪಂದ್ಯ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್

ಕೆಕೆಆರ್‌ ಸ್ಪಿನ್ನರ್ಸ್‌ vs

ಆರ್‌ಸಿಬಿ ಬ್ಯಾಟರ್‌ಗಳು

ಈ ಪಂದ್ಯದಲ್ಲಿ ಕೆಕೆಆರ್‌ ಸ್ಪಿನ್ನರ್ಸ್ ಹಾಗೂ ಆರ್‌ಸಿಬಿ ಬ್ಯಾಟರ್ಸ್‌ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ. ಕೆಕೆಆರ್‌ ವರುಣ್‌ ಚಕ್ರವರ್ತಿ, ಸುನಿಲ್‌ ನರೈನ್‌ರ ಸ್ಪಿನ್‌ ದಾಳಿಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಅವರ 8 ಓವರ್‌ಗಳೇ ಪಂದ್ಯವನ್ನು ನಿರ್ಧರಿಸಲಿದೆ. ಮತ್ತೊಂದೆಡೆ ಆರ್‌ಸಿಬಿಯಲ್ಲಿ ಕೊಹ್ಲಿ, ಸಾಲ್ಟ್‌, ರಜತ್‌, ಪಡಿಕ್ಕಲ್‌, ಲಿವಿಂಗ್‌ಸ್ಟೋನ್‌ ಸೇರಿದಂತೆ ಸ್ಫೋಟಕ ಬ್ಯಾಟರ್‌ಗಳಿದ್ದಾರೆ.

ಪಿಚ್‌ ರಿಪೋರ್ಟ್

ಈಡನ್‌ ಗಾರ್ಡನ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ಮಳೆ ಸಾಧ್ಯತೆ ಇರುವ ಕಾರಣಕ್ಕೆ ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಬಹುದು. ಮಳೆ ಇಲ್ಲದಿದ್ದರೂ ಮಂಜು ಬೀಳುವ ಕಾರಣಕ್ಕೆ ಇಲ್ಲಿ ಚೇಸಿಂಗ್‌ ಸುಲಭವಾಗಲಿದೆ. ಹೀಗಾಗಿ ಟಾಸ್‌ ನಿರ್ಣಾಯಕ.

ಮೊದಲ ಪಂದ್ಯಕ್ಕೇ

ಮಳೆ ಕಾಟ ಸಾಧ್ಯತೆ

ಈ ಬಾರಿ ಟೂರ್ನಿಯ ಆರಂಭಿಕ ಪಂದ್ಯಕ್ಕೇ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ. ಈಡನ್‌ ಗಾರ್ಡನ್‌ ಸುತ್ತಮುತ್ತ ಕೆಲ ದಿನಗಳಿಂದ ಮಳೆಯಾಗುತ್ತಿದೆ. ಕೆಕೆಆರ್‌ ಅಭ್ಯಾಸ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಶನಿವಾರವೂ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ತಲಾ 5 ಓವರ್ ಆಟವೂ ಸಾಧ್ಯವಾಗದೆ ಪಂದ್ಯ ರದ್ದುಗೊಂಡರೆ, ಇತ್ತಂಡಗಳೂ ತಲಾ 1 ಅಂಕ ಪಡೆದುಕೊಳ್ಳಲಿದೆ.

ಪಂದ್ಯಕ್ಕೆ ಮುನ್ನ ಅದ್ಧೂರಿ

ಉದ್ಘಾಟನಾ ಸಮಾರಂಭ

ಕೆಕೆಆರ್‌ ಹಾಗೂ ಆರ್‌ಸಿಬಿ ನಡುವಿನ ಪಂದ್ಯಕ್ಕೂ ಮುನ್ನ ಈಡನ್‌ ಗಾರ್ಡನ್‌ನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ನೆರವೇರಲಿದೆ. ಕ್ರಿಕೆಟ್‌ ರಂಗದ ದಿಗ್ಗಜರಲ್ಲದೆ ಮನರಂಜನಾ ಲೋಕದ ಖ್ಯಾತ ನಾಮ ತಾರೆಯರು ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಪ್ರಸಿದ್ಧ ಗಾಯಕಿ ಕರಣ್‌ ಔಜ್ಲಾ, ಶ್ರೇಯಾ ಘೋಷಲ್‌, ಬಾಲಿವುಡ್‌ ನಟಿ ದಿಶಾ ಪಠಾನಿ ಅವರ ಪ್ರದರ್ಶನ ಐಪಿಎಲ್‌ ಉದ್ಘಾಟನೆಯ ಮೆರುಗು ಹೆಚ್ಚಿಸಲಿದೆ. ಇನ್ನೂ ಕೆಲ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಜೆ 6 ಗಂಟೆಗೆ ಸಮಾರಂಭ ಆರಂಭಗೊಳ್ಳಲಿದೆ.

ಕೊನೆ 4 ಪಂದ್ಯದಲ್ಲೂ

ಆರ್‌ಸಿಬಿಗೆ ಸೋಲು

ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಕೊನೆ 4 ಪಂದ್ಯಗಳಲ್ಲೂ ಸೋಲನುಭವಿಸಿದೆ. 2022ರಲ್ಲಿ ಕೆಕೆಆರ್‌ ವಿರುದ್ಧ ಆರ್‌ಸಿಬಿ ಗೆದ್ದಿತ್ತು. ಆದರೆ 2023 ಹಾಗೂ 2024ರಲ್ಲಿ ನಡೆದ ಒಟ್ಟು 4 ಮುಖಾಮುಖಿಯಲ್ಲೂ ಕೆಕೆಆರ್‌ ಗೆದ್ದಿದೆ.

ಈಡನ್‌ ಗಾರ್ಡನ್‌ನಲ್ಲಿ

ಕೆಕೆಆರ್‌ಗೆ 52 ಗೆಲುವು!

ಈಡನ್‌ ಗಾರ್ಡನ್‌ ಕ್ರೀಡಾಂಗಣ ಕೆಕೆಆರ್‌ ತವರು ಹಾಗೂ ಭದ್ರಕೋಟೆ. ಇಲ್ಲಿ ಕೆಕೆಆರ್‌ 88 ಪಂದ್ಯಗಳನ್ನಾಡಿದ್ದು, 52ರಲ್ಲಿ ಗೆಲುವು ಸಾಧಿಸಿದೆ. ತಂಡ 36 ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನು, ಆರ್‌ಸಿಬಿ ತಂಡ ಈಡನ್‌ ಗಾರ್ಡನ್‌ನಲ್ಲಿ 13 ಪಂದ್ಯ ಆಡಿದ್ದು, 5ರಲ್ಲಿ ಗೆದ್ದು, 8ರಲ್ಲಿ ಸೋಲನುಭವಿಸಿದೆ. 2019ರ ಬಳಿಕ ಆರ್‌ಸಿಬಿ ಕೋಲ್ಕತಾದಲ್ಲಿ ಯಾವುದೇ ಪಂದ್ಯ ಗೆದ್ದಿಲ್ಲ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!