18ನೇ ಆವೃತ್ತಿ ಐಪಿಎಲ್‌ಗೆ ಕೌಂಟ್‌ಡೌನ್‌ ಶುರು : ಜಿದ್ದಾಜಿದ್ದಿಗೆ 10 ಸೈನ್ಯಗಳು ಸಜ್ಜು

KannadaprabhaNewsNetwork | Updated : Mar 18 2025, 04:05 AM IST

ಸಾರಾಂಶ

ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ, ಇನ್ನು ಕೆಲ ದಿನಗಳಲ್ಲೇ ಬಹುನಿರೀಕ್ಷಿತ 18ನೇ ಆವೃತ್ತಿ ಐಪಿಎಲ್‌ಗೆ ಸಜ್ಜಾಗಲಿದೆ. ಈಗಾಗಲೇ ಟೂರ್ನಿಗಾಗಿ 10 ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಸಜ್ಜುಗೊಳಿಸಿ, ಟೂರ್ನಿಯಲ್ಲಿ ಕಣಕ್ಕಿಳಿಯಲು ಕಾತರದಿಂದ ಕಾಯುತ್ತಿದೆ. 

*ಇಂದಿನ ವಿಶೇಷ: ‘ಬಿ’ ಗುಂಪಿನ ತಂಡಗಳ ಪರಿಚಯ*

ಮುಂಬೈ ಇಂಡಿಯನ್ಸ್‌ತಂಡದಲ್ಲಿರುವ ಆಟಗಾರರು: 23ಕಳೆದ ವರ್ಷದ ಸಾಧನೆ: ಅಂಕಪಟ್ಟಿಯಲ್ಲಿ ಕೊನೆ ಸ್ಥಾನತಂಡದ ಒಟ್ಟು ಸಾಧನೆ: 5 ಬಾರಿ ಚಾಂಪಿಯನ್‌

ಬಲಾಬಲ: ದೇಸಿ ಯುವ ಪ್ರತಿಭೆಗಳನ್ನು ಇಟ್ಟುಕೊಂಡು ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್‌ ಈ ಬಾರಿಯೂ ಭಾರತೀಯರ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿ ಟೂರ್ನಿಗೆ ಕಾಲಿಡಲಿದೆ. 5 ಬಾರಿ ಚಾಂಪಿಯನ್‌ ಆದ ಹೊರತಾಗಿಯೂ ಕಳೆದ ಬಾರಿ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ತಂಡ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ, ನಾಯಕ ಹಾರ್ದಿಕ್‌ ಪಾಂಡ್ಯ ತಮ್ಮ ನಾಯಕತ್ವಕ್ಕೂ ಅಗ್ನಿಪರೀಕ್ಷೆ ಎದುರಾಗಲಿದೆ.

ಈ ಬಾರಿ ತಂಡದಲ್ಲಿರುವ ವಿದೇಶಿಗರ ಪೈಕಿ ಟ್ರೆಂಟ್‌ ಬೌಲ್ಟ್‌ ಮತ್ತು ಮಿಚೆಲ್‌ ಸ್ಯಾಂಟ್ನರ್‌ ಮಾತ್ರ ಹೆಚ್ಚಿನ ಅನುಭವಿಗಳು. ಉಳಿದಂತೆ ವಿಲ್‌ ಜ್ಯಾಕ್ಸ್‌, ರೀಸ್‌ ಟಾಪ್ಲಿ, ಕಾರ್ಬಿನ್‌ ಬಾಶ್‌, ಮುಜೀಬ್‌ ಉರ್‌ ರಹ್ಮಾನ್‌, ಬೆವನ್ ಜೇಕಬ್ಸ್‌, ರ್‍ಯಾನ್‌ ರಿಕೆಲ್ಟನ್‌ ಕೂಡಾ ತಂಡದಲ್ಲಿದ್ದಾರೆ. ಆದರೆ ಭಾರತೀಯ ಆಟಗಾರರೇ ತಂಡದ ಟ್ರಂಪ್‌ಕಾರ್ಡ್‌.

ರೋಹಿತ್‌ ಶರ್ಮಾ, ತಿಲಕ್‌ ವರ್ಮಾ, ಸೂರ್ಯಕುಮಾರ್ ಯಾದವ್‌ ಮತ್ತೆ ಅಬ್ಬರಿಸಲು ಕಾಯುತ್ತಿದ್ದಾರೆ. ಜಸ್‌ಪ್ರೀತ್‌ ಬೂಮ್ರಾ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾದರೂ, ಟ್ರೋಫಿ ಗೆಲ್ಲಬೇಕಿದ್ದರೆ ಅವರ ಪ್ರದರ್ಶನ ನಿರ್ಣಾಯಕ. ದೀಪಕ್‌ ಚಹರ್‌, ನಮನ್‌ ಧೀರ್‌ ಮೇಲೂ ನಿರೀಕ್ಷೆ ಇಡಲಾಗಿದೆ. ಅತ್ಯುತ್ತಮ 12 ಆಯ್ಕೆ (ಇಂಪ್ಯಾಕ್ಟ್‌ ಆಟಗಾರ ಸೇರಿ): ರೋಹಿತ್‌, ರಿಕೆಲ್ಟನ್‌, ತಿಲಕ್‌ ವರ್ಮಾ, ಸೂರ್ಯಕುಮಾರ್‌, ವಿಲ್‌ ಜ್ಯಾಕ್ಸ್‌, ಹಾರ್ದಿಕ್‌ ಪಾಂಡ್ಯ, ನಮನ್‌ಧೀರ್‌/ರಾಬಿನ್ ಮಿನ್ಜ್‌, ದೀಪಕ್‌ ಚಹರ್‌, ಮುಜೀಬ್‌/ಸ್ಯಾಂಟ್ನರ್‌, ಕರ್ಣ್‌ ಶರ್ಮಾ, ಬೂಮ್ರಾ, ಟ್ರೆಂಟ್‌ ಬೌಲ್ಟ್‌.

ಸನ್‌ರೈಸರ್ಸ್‌ ಹೈದರಾಬಾದ್

ತಂಡದಲ್ಲಿರುವ ಆಟಗಾರರು: 20ಕಳೆದ ವರ್ಷದ ಸಾಧನೆ: ರನ್ನರ್‌-ಅಪ್‌ತಂಡದ ಒಟ್ಟು ಸಾಧನೆ: 1 ಬಾರಿ ಚಾಂಪಿಯನ್‌

ಬಲಾಬಲ: ಕಳೆದ ಬಾರಿ ಐಪಿಎಲ್‌ನಲ್ಲಿ ಹೆಚ್ಚು ಸದ್ದು ಮಾಡಿದ ತಂಡ ಸನ್‌ರೈಸರ್ಸ್‌ ಹೈದರಾಬಾದ್‌. ತನ್ನ ಆಕ್ರಮಣಕಾರಿ ಆಟದ ಮೂಲಕ ರನ್‌ ಮಳೆಯನ್ನೇ ಹರಿಸಿದ್ದ ತಂಡ, ಕಳೆದ 6 ವರ್ಷಗಳಲ್ಲೇ ಮೊದಲ ಬಾರಿ ಪ್ಲೇ-ಆಫ್‌ ಪ್ರವೇಶಿಸಿತ್ತು. 3 ಬಾರಿ 250+ ರನ್‌ ಕಲೆಹಾಕಿದ್ದ ತಂಡ, ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ 287 ರನ್‌ ಗಳಿಸಿ ಐಪಿಎಲ್‌ ಇತಿಹಾಸದಲ್ಲೇ ಗರಿಷ್ಠ ರನ್‌ ದಾಖಲೆ ಬರೆದಿತ್ತು. ಹೀಗಾಗಿ ಈ ಬಾರಿಯೂ ತಂಡ ಸ್ಫೋಟಕ ಆಡಿ, 300 ರನ್‌ ಗಡಿ ದಾಟಿದರೂ ಅಚ್ಚರಿಯಿಲ್ಲ.

ಯಾವುದೇ ಬೌಲಿಂಗ್‌ ಪಡೆಯನ್ನು ಚೆಂಡಾಡಬಲ್ಲ ಬ್ಯಾಟರ್‌ಗಳನ್ನು ತಂಡ ಹೊಂದಿದೆ. ಈ ಬ್ಯಾಟರ್‌ಗಳ ಹೆಸರು ಕೇಳಿದರೆ ಸಾಕು, ಬೌಲರ್‌ಗಳ ಎದೆಯಲ್ಲಿ ನಡುಕ ಶುರುವಾಗಬಹುದು. ಟ್ರ್ಯಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ, ಹೈನ್ರಿಚ್‌ ಕ್ಲಾಸೆನ್‌, ಇಶಾನ್‌ ಕಿಶನ್‌, ನಿತೀಶ್‌ ಕುಮಾರ್‌ ರೆಡ್ಡಿ, ಅಭಿನವ್‌ ಮನೋಹರ್‌. ಈ ಎಲ್ಲರೂ ಒಟ್ಟಾಗಿ ದಂಡೆತ್ತಿ ಬಂದರೆ ಬೌಲರ್‌ಗಳ ಗತಿ ಏನಾಗಬೇಡ. ತಂಡದೊಳಗಿನ ಅಭ್ಯಾಸ ಪಂದ್ಯದಲ್ಲಿ 16 ಎಸೆತಗಳಲ್ಲಿ 46 ರನ್‌ ಸಿಡಿಸಿದ್ದ ಅನಿಕೇತ್‌ ವರ್ಮಾ ಮೇಲೂ ಭಾರೀ ನಿರೀಕ್ಷೆ ಇಡಲಾಗಿದೆ.

ಇನ್ನು ಬೌಲಿಂಗ್‌ ವಿಭಾಗ ಕೂಡಾ ಕಳೆದ ಬಾರಿಗಿಂತ ಕೊಂಚ ಬಲಿಷ್ಠವಾದಂತಿದೆ. ಮೊಹಮ್ಮದ್‌ ಶಮಿ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ಪ್ಯಾಟ್‌ ಕಮಿನ್ಸ್‌, ಹರ್ಷಲ್‌ ಪಟೇಲ್‌ ಹಾಗೂ ರಾಹುಲ್‌ ಚಹರ್‌ ಜೊತೆ ಆಸ್ಟ್ರೇಲಿಯಾ ಸ್ಪಿನ್ನರ್‌ ಆ್ಯಡಂ ಝಂಪಾ ತಂಡದಲ್ಲಿದ್ದಾರೆ.

ಅತ್ಯುತ್ತಮ 12 ಆಯ್ಕೆ (ಇಂಪ್ಯಾಕ್ಟ್‌ ಆಟಗಾರ ಸೇರಿ): ಟ್ರ್ಯಾವಿಸ್‌ ಹೆಡ್‌, ಅಭಿಷೇಕ್‌, ಇಶಾನ್‌ ಕಿಶನ್‌, ನಿತೀಶ್‌ ಕುಮಾರ್‌, ಕ್ಲಾಸೆನ್‌, ಅನಿಕೇತ್‌ ವರ್ಮಾ, ಅಭಿನವ್‌ ಮನೋಹರ್‌, ಪ್ಯಾಟ್‌ ಕಮಿನ್ಸ್‌, ಹರ್ಷಲ್‌ ಪಟೇಲ್‌, ರಾಹುಲ್‌ ಚಹರ್‌, ಮೊಹಮ್ಮದ್ ಶಮಿ, ಆ್ಯಡಂ ಝಂಪಾ. 

ಗುಜರಾತ್‌ ಟೈಟಾನ್ಸ್‌

ತಂಡದಲ್ಲಿರುವ ಆಟಗಾರರು: 25ಕಳೆದ ವರ್ಷದ ಸಾಧನೆ: ಅಂಕಪಟ್ಟಿಯಲ್ಲಿ 8ನೇ ಸ್ಥಾನತಂಡದ ಒಟ್ಟು ಸಾಧನೆ: 1 ಬಾರಿ ಚಾಂಪಿಯನ್‌

ಬಲಾಬಲ: ಕಳೆದ ಬಾರಿ ಹರಾಜಿನಲ್ಲಿ ಮೂವರು ಸ್ಟಾರ್‌ ಕ್ರಿಕೆಟಿಗರಾದ ಜೋಸ್‌ ಬಟ್ಲರ್‌, ಕಗಿಸೊ ರಬಾಡ ಹಾಗೂ ಮೊಹಮ್ಮದ್‌ ಸಿರಾಜ್‌ರನ್ನು ಖರೀದಿಸಿರುವ ಗುಜರಾತ್‌ ಟೈಟಾನ್ಸ್‌, ಬಲಿಷ್ಠ ತಂಡವನ್ನು ಕಟ್ಟಿದೆ. ಕಳೆದ ಬಾರಿ ತೀರಾ ಸಾಧಾರಣ ಪ್ರದರ್ಶನ ನೀಡಿದ್ದ ತಂಡ ಈ ಬಾರಿ ಮತ್ತೆ ಪ್ಲೇ-ಆಫ್‌ ಮೇಲೆ ಕಣ್ಣಿಟ್ಟಿದೆ.

ಶುಭ್‌ಮನ್‌ ಗಿಲ್‌ ನಾಯಕತ್ವದ ತಂಡದಲ್ಲಿ ಆರಂಭಿಕ ಬ್ಯಾಟರ್‌ಗಳೇ ನಿರ್ಣಾಯಕ. ಬಟ್ಲರ್‌, ಸಾಯಿ ಸುದರ್ಶನ್‌ ಜೊತೆಗೆ ಗ್ಲೆನ್‌ ಫಿಲಿಪ್ಸ್‌ ಸೇರ್ಪಡೆ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಮ್ಯಾಚ್‌ ವಿನ್ನರ್‌ಗಳಿದ್ದರೂ, ನಿರ್ಣಾಯಕ ಘಟ್ಟದಲ್ಲಿ ಕೈಕೊಟ್ಟ ಉದಾಹರಣೆಯೇ ಜಾಸ್ತಿ. ಈ ಸಮಸ್ಯೆಗೆ ರಾಹುಲ್‌ ತೆವಾಟಿಯಾ, ಶಾರುಖ್‌ ಖಾನ್‌ ಹಾಗೂ ರಶೀದ್‌ ಖಾನ್‌ ಪರಿಹಾರ ಕಂಡುಕೊಳ್ಳಬೇಕಿದೆ.

ರಬಾಡ, ಸಿರಾಜ್‌ ಜೊತೆ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ವೇಗದ ಬೌಲಿಂಗ್‌ನ ಟ್ರಂಪ್‌ಕಾರ್ಡ್ಸ್‌. ಟಿ20ಯ ಶ್ರೇಷ್ಠ ಕ್ರಿಕೆಟಿರಲ್ಲಿ ಒಬ್ಬರಾಗಿರುವ ರಶೀದ್‌ ಖಾನ್‌ರ ದಾಳಿ ತಂಡಕ್ಕೆ ನಿರ್ಣಾಯಕ.

ಅತ್ಯುತ್ತಮ 12 ಆಯ್ಕೆ (ಇಂಪ್ಯಾಕ್ಟ್‌ ಆಟಗಾರ ಸೇರಿ): ಬಟ್ಲರ್‌, ಶುಭ್‌ಮನ್‌ ಗಿಲ್‌, ಸಾಯಿ ಸುದರ್ಶನ್‌, ವಾಷಿಂಗ್ಟನ್‌ ಸುಂದರ್‌, ರುಥರ್‌ಫೋರ್ಡ್‌/ಗ್ಲೆನ್ ಫಿಲಿಪ್ಸ್‌, ರಾಹುಲ್‌ ತೆವಾಟಿಯಾ, ಶಾರುಖ್‌ ಖಾನ್‌, ರಶೀದ್ ಖಾನ್‌, ಅರ್ಶದ್‌ ಖಾನ್‌/ಸಾಯಿ ಕಿಶೋರ್‌/ಮಹಿಪಾಲ್‌ ಲೊಮ್ರೊರ್‌, ರಬಾಡ, ಸಿರಾಜ್‌, ಪ್ರಸಿದ್ಧ್‌.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿರುವ ಆಟಗಾರರು : 23ಕಳೆದ ವರ್ಷದ ಸಾಧನೆ: ಅಂಕಪಟ್ಟಿಯಲ್ಲಿ 6ನೇ ಸ್ಥಾನತಂಡದ ಒಟ್ಟು ಸಾಧನೆ: 1 ಬಾರಿ ರನ್ನರ್‌-ಅಪ್‌

ಬಲಾಬಲ: ನಾಯಕತ್ವದ ಒತ್ತಡವಿಲ್ಲದಿರುವುದರಿಂದ ಈ ಬಾರಿ ಕರ್ನಾಟಕದ ಕೆ.ಎಲ್‌.ರಾಹುಲ್‌ರ ಬ್ಯಾಟಿಂಗ್‌ ಡೆಲ್ಲಿಗೆ ಎಷ್ಟರ ಮಟ್ಟಿಗೆ ಬಲ ಒದಗಿಸಲಿದೆ ಎಂಬುದು ಸದ್ಯದ ಕುತೂಹಲ. ಡೆಲ್ಲಿ ಈ ಬಾರಿ ಸಮತೋಲಿತವಾಗಿದ್ದು, ಎಲ್ಲಾ ವಿಭಾಗದಲ್ಲೂ ಕೊಂಚ ಬಲಿಷ್ಠವಾಗಿ ತೋರುತ್ತಿದೆ. ರಾಹುಲ್‌ ಆರಂಭಿಕನಾಗಿ ಕಣಕ್ಕಿಳಿದರೆ ಅವರ ಜೊತೆಗೆ ಫಾಫ್‌ ಡು ಪ್ಲೆಸಿ ಅಥವಾ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ ಇನ್ನಿಂಗ್ಸ್ ಆರಂಭಿಸಬೇಕಾಗುತ್ತದೆ.

ಅಭಿಷೇಕ್‌ ಪೊರೆಲ್‌, ಟ್ರಿಸ್ಟನ್‌ ಸ್ಟಬ್ಸ್‌, ಅಶುತೋಷ್‌ ಶರ್ಮಾ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ನೂತನ ನಾಯಕ ಅಕ್ಷರ್‌ ಪಟೇಲ್‌ ತಮ್ಮ ಪ್ರದರ್ಶನದ ಮೇಲೆ ನಾಯಕತ್ವದ ಒತ್ತಡ ಬೀಳದಂತೆ ಎಚ್ಚರಿಕೆ ವಹಿಸಬೇಕಿದೆ. ಸಮೀರ್‌ ರಿಜ್ವಿ ಕೂಡಾ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಕಾತರದಲ್ಲಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ತಂಡ ಈ ಬಾರಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು ಬೌಲಿಂಗ್‌ ವಿಭಾಗದ ಮೇಲೆ. ಮಿಚೆಲ್‌ ಸ್ಟಾರ್ಕ್‌ ಜೊತೆ ಟಿ.ನಟರಾಜನ್‌, ಮುಕೇಶ್‌ ಕುಮಾರ್‌, ಸ್ಪಿನ್‌ ವಿಭಾಗದಲ್ಲಿ ಕುಲ್ದೀಪ್‌ ಯಾದವ್‌ ಎಷ್ಟರ ಮಟ್ಟಿಗೆ ಎದುರಾಳಿಗಳನ್ನು ಕಟ್ಟಿಹಾಕಲಿದ್ದಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಅತ್ಯುತ್ತಮ 12 ಆಯ್ಕೆ (ಇಂಪ್ಯಾಕ್ಟ್‌ ಆಟಗಾರ ಸೇರಿ): ಕೆ.ಎಲ್‌.ರಾಹುಲ್‌, ಡು ಪ್ಲೆಸಿ, ಜೇಕ್‌ ಫ್ರೇಸರ್‌, ಅಭಿಷೇಕ್‌ ಪೊರೆಲ್‌, ಟ್ರಿಸ್ಟನ್‌ ಸ್ಟಬ್ಸ್‌, ಅಕ್ಷರ್‌ ಪಟೇಲ್‌, ಅಶುತೋಷ್‌ ಶರ್ಮಾ, ಸಮೀರ್‌ ರಿಜ್ವಿ, ಕುಲ್ದೀಪ್‌ ಯಾದವ್‌, ಮಿಚೆಲ್‌ ಸ್ಟಾರ್ಕ್‌, ನಟರಾಜನ್‌, ಮುಕೇಶ್‌ ಕುಮಾರ್‌.

ಲಖನೌ ಸೂಪರ್‌ ಜೈಂಟ್ಸ್‌ತಂಡ ದಲ್ಲಿರುವ ಆಟಗಾರರು: 24ಕಳೆದ ವರ್ಷದ ಸಾಧನೆ: ಅಂಕಪಟ್ಟಿಯಲ್ಲಿ 7ನೇ ಸ್ಥಾನತಂಡದ ಒಟ್ಟು ಸಾಧನೆ: 2 ಬಾರಿ ಪ್ಲೇ-ಆಫ್‌ ಪ್ರವೇಶ

ಬಲಾಬಲ: ರಿಷಭ್‌ ಪಂತ್‌ಗೆ ಬರೋಬ್ಬರಿ ₹27 ಕೋಟಿ ನೀಡಿ ಖರೀದಿಸಿರುವ ಲಖನೌ ಸೂಪರ್‌ ಜೈಂಟ್ಸ್‌, ತಜ್ಞ ಭಾರತೀಯ ಬ್ಯಾಟರ್‌ಗಳಿಗೆ ಮಣೆ ಹಾಕಿಲ್ಲ. ಆದರೆ ಟಿ20 ತಜ್ಞ ಬ್ಯಾಟರ್‌ಗಳಿಗೇನೂ ಕೊರತೆಯಿಲ್ಲ. ಭಾರತದ ಯುವ ಬೌಲರ್‌ಗಳು ಕೂಡಾ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತಜ್ಞ ಆರಂಭಿಕರ ಕೊರತೆಯಿಂದಾಗಿ ಈ ಬಾರಿ ತಂಡ ಮಿಚೆಲ್‌ ಮಾರ್ಷ್‌ ಹಾಗೂ ಏಡನ್ ಮಾರ್ಕ್‌ರಮ್‌ರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ನಿಕೋಲಸ್‌ ಪೂರನ್‌, ಡೇವಿಡ್‌ ಮಿಲ್ಲರ್‌ ಸ್ಫೋಟಕ ಆಟ ತಂಡದ ಆಧಾರಸ್ತಂಭ. ಆದರೆ ಹೊಸ ತಂಡದಲ್ಲಿ ರಿಷಭ್‌ ಪಂತ್ ತಮ್ಮ ನಾಯಕತ್ವವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬ ಕೌತುಕವಿದೆ. ಯುವ ತಾರೆ ಆಯುಶ್‌ ಬದೋನಿ, ಆಲ್ರೌಂಡರ್‌ಗಳಾದ ಶಾಬಾಜ್‌ ಅಹ್ಮದ್‌, ಅಬ್ದುಲ್‌ ಸಮದ್‌ ಮೇಲೆ ತಂಡಕ್ಕೆ ಹೆಚ್ಚಿನ ಭರವಸೆಯಿದೆ.

ಇನ್ನು ಬೌಲಿಂಗ್‌ ವಿಭಾಗದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಪ್ರಚಂಡ ವೇಗಿ ಮಯಾಂಕ್‌ ಯಾದವ್‌ರ ಫಿಟ್ನೆಸ್‌ ತಂಡಕ್ಕೆ ಹೆಚ್ಚಿನ ತಲೆನೋವು ತಂದಿಟ್ಟಿದೆ. ರವಿ ಬಿಷ್ಣೋಯ್‌ ಟ್ರಂಪ್‌ ಆಗಬಲ್ಲ ಸ್ಪಿನ್ನರ್‌. ಅವರ ಜೊತೆಗೆ ಯುವ ವೇಗಿಗಳಾದ ಮೊಹ್ಸಿನ್ ಖಾನ್‌, ಆವೇಶ್‌ ಖಾನ್‌ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದ್ದಾರೆ ಕಾದುನೋಡಬೇಕಿದೆ.

ಅತ್ಯುತ್ತಮ 12 ಆಯ್ಕೆ (ಇಂಪ್ಯಾಕ್ಟ್‌ ಆಟಗಾರ ಸೇರಿ): ಮಿಚೆಲ್‌ ಮಾರ್ಷ್‌, ಮಾರ್ಕ್‌ರಮ್‌, ರಿಷಭ್‌ ಪಂತ್‌, ನಿಕೋಲಸ್‌ ಪೂರನ್‌, ಆಯುಶ್‌ ಬದೋನಿ, ಮಿಲ್ಲರ್‌, ಶಾಬಾಜ್‌ ಅಹ್ಮದ್‌, ಅಬ್ದುಲ್‌ ಸಮದ್, ರವಿ ಬಿಷ್ಣೋಯ್‌, ಆವೇಶ್‌ ಖಾನ್‌, ಮೊಹ್ಸಿನ್‌ ಖಾನ್‌, ಮಯಾಂಕ್‌ ಯಾದವ್‌.

Share this article